ಹುಡುಕಿ

ಜಗದ್ಗುರು XIVನೇ ಲಿಯೋರವರು ನೂತನ ಸಿನೋಡ್ ಸಭಾಂಗಣದಲ್ಲಿ ಧರ್ಮಸಭೆಯ ಚಳವಳಿಗಳು ಮತ್ತು ಲೌಕಿಕ ಸಂಘಟನೆಗಳ ನಾಯಕರನ್ನು ಭೇಟಿಯಾದರು. ಜಗದ್ಗುರು XIVನೇ ಲಿಯೋರವರು ನೂತನ ಸಿನೋಡ್ ಸಭಾಂಗಣದಲ್ಲಿ ಧರ್ಮಸಭೆಯ ಚಳವಳಿಗಳು ಮತ್ತು ಲೌಕಿಕ ಸಂಘಟನೆಗಳ ನಾಯಕರನ್ನು ಭೇಟಿಯಾದರು.  (ANSA)

“ಧಮ೯ಸಭೆಯ ಲೌಕಿಕ ನಾಯಕರು ಮುಕ್ತತೆ ಮತ್ತು ಐಕ್ಯತೆಯನ್ನು ಬೆಳೆಸಬೇಕು ಎಂದು ಜಗದ್ಗುರುಗಳು ಹೇಳಿದರು.”

ಜಗದ್ಗುರು XIVನೇ ಲಿಯೋರವರು ಧರ್ಮ ಸಭೆಯ ಚಳವಳಿಗಳು ಮತ್ತು ಲೌಕಿಕ ಸಂಘಟನೆಗಳ ನಾಯಕರಿಗೆ, ತಮ್ಮ ಆರೈಕೆಯಲ್ಲಿರುವವರನ್ನು ವಿವೇಕಬುದ್ಧಿ ಮತ್ತು ಪಾರದರ್ಶಕತೆಯೊಂದಿಗೆ ಮಾರ್ಗದರ್ಶನ ಮಾಡುವಂತೆ ಪ್ರೋತ್ಸಾಹಿಸಿದರು, ಹಾಗಾಗಿ ಅವರು ಜಗತ್ತಿನತ್ತ ಮುಕ್ತ ಮನಸ್ಸಿನಿಂದಿದ್ದು, ಐಕ್ಯತೆಯಲ್ಲಿ ದೃಢವಾಗಿ ನೆಲೆಸಿರಲಿ ಎಂದು ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಗುರುವಾರ ವಿಶ್ವಾಸಿಗಳ ಸಂಘಟನೆಗಳು, ಧರ್ಮ ಸಭೆಯ ಚಳವಳಿಗಳು ಮತ್ತು ಹೊಸ ಸಮುದಾಯಗಳ ಸಂಯೋಜಕರ ಸಭೆಯಲ್ಲಿ ಭಾಗವಹಿಸಿದವರನ್ನು ಭೇಟಿಯಾದರು. ಈ ಸಭೆಯನ್ನು ಕ್ರೈಸ್ತ ಪ್ರಜೆಗಳು, ಕುಟುಂಬ ಮತ್ತು ಜೀವನಕ್ಕಾಗಿ ಇರುವ ಡಿಕಾಸ್ಟರಿಯು ಆಯೋಜಿಸಿತ್ತು.

ತಮ್ಮ ಭಾಷಣದಲ್ಲಿ ಜಗದ್ಗುರುಗಳು ಧರ್ಮ ಸಭೆಯ ಆಡಳಿತದ ಮಹತ್ವದ ಕುರಿತು ಚಿಂತನೆ ನಡೆಸಿ, ಯಾವುದೇ ಸಂಘಟನೆಯ ಯಶಸ್ಸು ಮತ್ತು ದೀರ್ಘಕಾಲೀನ ಸ್ಥಿರತೆಗೆ ನಾಯಕತ್ವವು ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು. ಆಡಳಿತವೆಂದರೆ “ಸಮುದಾಯಕ್ಕೆ ಸರಿಯಾದ ದಿಕ್ಕನ್ನು ನೀಡುವುದು, ಹಾಗಾಗಿ ಅದು ಅದರ ಸದಸ್ಯರ ಬೆಳವಣಿಗೆಯ ಸ್ಥಳವಾಗಿರಬೇಕು” ಎಂದು ಅವರು ವಿವರಿಸಿದರು.

ಧರ್ಮ ಸಭೆಯಲ್ಲಿ ನಾಯಕತ್ವವು ಕೇವಲ ಕಾರ್ಯನಿರ್ವಹಣೆಯ ವಿಷಯಗಳನ್ನು ಸಮನ್ವಯಗೊಳಿಸುವುದಲ್ಲ, ಆದರೆ ಕ್ರಿಸ್ತನಲ್ಲಿ ದೇವರ ರಕ್ಷಣಾ ಚಿತ್ತದ ಅಭಿವ್ಯಕ್ತಿಯಾಗಿದೆ ಎಂದು ಜಗದ್ಗುರುಗಳು ತಿಳಿಸಿದರು. ಲೌಕಿಕ ಸಂಘಟನೆಗಳಲ್ಲಿ ನಾಯಕತ್ವವನ್ನು ಸಮುದಾಯದ ಸದಸ್ಯರು ಸ್ವತಂತ್ರವಾಗಿ ಆಯ್ಕೆಮಾಡಿದ ಲೌಕಿಕರಿಗೆ ಒಪ್ಪಿಸಲಾಗುತ್ತದೆ ಎಂದು ಅವರು ಹೇಳಿದರು.

ಪವಿತ್ರಾತ್ಮನ ಈ ವರವನ್ನು ಸ್ವೀಕರಿಸುವ ನಾಯಕತ್ವವು ಸಂಪೂರ್ಣ ಸಮುದಾಯದ ಹಿತಕ್ಕಾಗಿ ಇರಬೇಕು, ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ ಎಂದು ಜಗದ್ಗುರುಗಳು ಒತ್ತಿಹೇಳಿದರು. ಅದನ್ನು ಯಾರ ಮೇಲೂ ಬಲವಂತವಾಗಿ ಹೇರಬಾರದು, ಬದಲಿಗೆ ಅದು ಸ್ವತಂತ್ರವಾಗಿ ಗುರುತಿಸಲ್ಪಟ್ಟು ಅಂಗೀಕರಿಸಲ್ಪಡಬೇಕು ಎಂದರು. ಧರ್ಮ ಸಭೆಯಲ್ಲಿನ ನಾಯಕತ್ವವು ಒಂದು ವರದಾನ ಆಗಿದ್ದು, ಅದು ಬಿಷಪ್‌ಗಳ ವಿವೇಕಪೂರ್ಣ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

“ಆಡಳಿತದಲ್ಲಿ ಪರಸ್ಪರ ಆಲಿಸುವ ಮನೋಭಾವ, ಸಹಜವಾಬ್ದಾರಿ, ಪಾರದರ್ಶಕತೆ, ಸಹೋದರತ್ವದ ಸಮೀಪತೆ ಮತ್ತು ಸಮುದಾಯದ ವಿವೇಕಪೂರ್ಣ ಪರಿಶೀಲನೆ ಸದಾ ಇರಬೇಕು” ಎಂದು ಜಗದ್ಗುರುಗಳು ಹೇಳಿದರು. ಉತ್ತಮ ಆಡಳಿತವು ಎಲ್ಲ ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸುವುದಿಲ್ಲ,ಬದಲಾಗಿ ಪ್ರತಿಯೊಬ್ಬ ಸದಸ್ಯನ ಜವಾಬ್ದಾರಿಯುತ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ ಎಂದು ಅವರು ತಿಳಿಸಿದರು.

ನಂತರ ಜಗದ್ಗುರುಗಳು ಧರ್ಮ ಸಭೆಯಲ್ಲಿನ ಲೌಕಿಕ ನಾಯಕರ ಪ್ರವಾದಿತ್ವದ ಪಾತ್ರದ ಬಗ್ಗೆ ಮಾತನಾಡಿ, ಇಂದಿನ ಧರ್ಮಾಧ್ಯಕ್ಷೀಯ ಅಗತ್ಯಗಳನ್ನು ಆಲಿಸುವ ಮೂಲಕ ಹೊಸ ಸವಾಲುಗಳಿಗೆ ಸ್ಪಂದಿಸಬೇಕೆಂದು ಹೇಳಿದರು. ಗುಂಪಿನ ಒಳಗಿನ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ, ಕಾಲದ ಚಿಹ್ನೆಗಳನ್ನು ಗುರುತಿಸಿ, ಎಲ್ಲರತ್ತ ಮುಕ್ತ ಮನಸ್ಸಿನಿಂದ ತಲುಪುವಾಗಲೇ ನಿಜವಾದ ಮತ್ತು ಫಲಪ್ರದ ಸದಸ್ಯತ್ವ ಸಾಧ್ಯವಾಗುತ್ತದೆ ಎಂದು ಹೇಳಿದರು.

ಇದೇ ವೇಳೆ, ಲೌಕಿಕ ಸಂಘಟನೆಗಳು ಮತ್ತು ಧರ್ಮ ಸಭೆಯ ಚಳವಳಿಗಳು ಪರಸ್ಪರ ಹಾಗೂ ವಿಶ್ವವ್ಯಾಪಿ ಧರ್ಮ ಸಭೆಯೊಂದಿಗೆ ಐಕ್ಯತೆಯನ್ನು ಅಳವಡಿಸಿಕೊಳ್ಳಬೇಕೆಂದು ಜಗದ್ಗುರುಗಳು ಕರೆ ನೀಡಿದರು. ಕೆಲವು ಗುಂಪುಗಳು ತಮ್ಮದೇ ವರದಾನ ಏಕೈಕ ನಿಜವಾದದ್ದು ಎಂದು ಭಾವಿಸುವುದರ ಬಗ್ಗೆ ಎಚ್ಚರಿಕೆ ನೀಡಿದ ಅವರು, ಧರ್ಮ ಸಭೆಯ ಚಳವಳಿಗಳು ತಮ್ಮ ಸ್ಥಳೀಯ ಬಿಷಪ್ ಮತ್ತು ಸಂಪೂರ್ಣ ಧರ್ಮ ಸಭೆಯೊಂದಿಗೆ ಐಕ್ಯತೆಯಲ್ಲಿ ಬದುಕಬೇಕು, ಭಿನ್ನಾಭಿಪ್ರಾಯಗಳಿದ್ದರೂ ಸಹ ಎಂದು ಹೇಳಿದರು.

ವಿವಿಧ ಅಭಿಪ್ರಾಯಗಳು, ಸಾಂಸ್ಕೃತಿಕ ಹಿನ್ನೆಲೆಗಳು ಮತ್ತು ವ್ಯಕ್ತಿಗಳ ವೈಶಿಷ್ಟ್ಯಗಳನ್ನು ಆಲಿಸುತ್ತಾ, “ಐಕ್ಯತೆಯ ಉನ್ನತ ಹಿತ”ವನ್ನು ಕಾಪಾಡಬೇಕು ಎಂದು ಜಗದ್ಗುರುಗಳು ಹೇಳಿದರು. ಸೌಮ್ಯತೆ, ಆಸಕ್ತಿರಹಿತತೆ ಮತ್ತು ನಿಸ್ವಾರ್ಥ ಪ್ರೀತಿಯ ಮೂಲಕ ತಮ್ಮ ಚಳವಳಿಗಳ ಸ್ಥಾಪಕ  ಸಾಕ್ಷಿಯಾಗುವಂತೆ ಲೌಕಿಕ ನಾಯಕರನ್ನು ಅವರು ಆಹ್ವಾನಿಸಿದರು.

“ಪ್ರತಿಯೊಂದು ನಿಜವಾದ ವರದಾನದಲ್ಲಿಯೇ ಧರ್ಮ ಸಭೆಯತ್ತ ನಿಷ್ಠೆ ಮತ್ತು ಮುಕ್ತತೆ ಅಡಕವಾಗಿದೆ” ಎಂದು ಜಗದ್ಗುರುಗಳು ಹೇಳಿದರು. ಕೊನೆಯಲ್ಲಿ, ಲೌಕಿಕ ಸಂಘಟನೆಗಳು ಮತ್ತು ಧರ್ಮ ಸಭೆಯ ಚಳವಳಿಗಳ ಸೇವೆ ಮತ್ತು ಇತಿಹಾಸವನ್ನು ಕೊಂಡಾಡಿದ ಅವರು, ಅವುಗಳಿಂದ ಉತ್ತಮವಾಗಿ ರೂಪುಗೊಂಡ ಅನೇಕ ಜನರು ಮತ್ತು ಪರಿಣಾಮಕಾರಿ ಸುವಾರ್ತಾಪ್ರಚಾರಕರು ಹೊರಹೊಮ್ಮಿದ್ದಾರೆ ಎಂದು ಶ್ಲಾಘಿಸಿದರು.

“ಈ ಎಲ್ಲ ವರಗಳನ್ನು ಸಂರಕ್ಷಿಸಿ, ದೇವರ ಕೃಪೆಯಿಂದ ಅವು ಬೆಳೆಯಲು ಸಹಾಯಮಾಡಿರಿ!” ಎಂದು ಜಗದ್ಗುರುಗಳು ಸಮಾರೋಪದಲ್ಲಿ ಹೇಳಿದರು. “ಧಮ೯ಸಭೆ ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ನಿಮ್ಮೊಂದಿಗಿದೆ”ಎಂದರು.

21 ಮೇ 2026, 17:49