ಹುಡುಕಿ

ಜಗದ್ಗುರು ಲಿಯೋರವರು ಈ ಬೆಳಿಗ್ಗೆ "ಕಥೋಲಿಕ ವಿಸ್ತರಣಾ ಸಮಾಜ"ದ ಸದಸ್ಯರೊಂದಿಗೆ ಭೇಟಿಯಾದರು. ಜಗದ್ಗುರು ಲಿಯೋರವರು ಈ ಬೆಳಿಗ್ಗೆ "ಕಥೋಲಿಕ ವಿಸ್ತರಣಾ ಸಮಾಜ"ದ ಸದಸ್ಯರೊಂದಿಗೆ ಭೇಟಿಯಾದರು.  (@VATICAN MEDIA)

ಜಗದ್ಗುರು XIVನೇ ಲಿಯೋರವರು ದೂರದ ಸಮುದಾಯಗಳಿಗೆ ಕ್ರಿಸ್ತನ ಸಂದೇಶವನ್ನು ತಲುಪಿಸುತ್ತಿರುವ ಕಥೋಲಿಕ ಎಕ್ಸ್ಟೆನ್ಷನ್ ಸೊಸೈಟಿಯನ್ನು ಪ್ರಶಂಸಿಸಿದರು.

ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನಲ್ಲಿ ಕಥೋಲಿಕ ಎಕ್ಸ್ಟೆನ್ಷನ್ ಸೊಸೈಟಿಯ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನು ಸ್ವಾಗತಿಸಿ, ಅಮೆರಿಕ ಸಂಯುಕ್ತ ಸಂಸ್ಥಾನ, ಕ್ಯೂಬಾ ಮತ್ತು ಪ್ಯೂರ್ಟೋ ರಿಕೋದಲ್ಲಿನ ಬಡ ಕಥೋಲಿಕ ಸಮುದಾಯಗಳಿಗೆ ಶತಮಾನಕ್ಕಿಂತಲೂ ಹೆಚ್ಚು ಕಾಲ ಮಿಷನರಿ ಸೇವೆ ಸಲ್ಲಿಸಿರುವುದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸೋಮವಾರ  ಕಥೋಲಿಕ ಎಕ್ಸ್ಟೆನ್ಷನ್ ಸೊಸೈಟಿಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅವರ ಕುಟುಂಬಗಳನ್ನು ಭೇಟಿಯಾದರು. ಪವಿತ್ರಾತ್ಮರ ಮಹೋತ್ಸವದ ಪೂರ್ವಭಾವಿಯಾಗಿ ವ್ಯಾಟಿಕನ್‌ನಲ್ಲಿ ಅವರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಈ ಯಾತ್ರೆಯು ಅವರ ಪ್ರಾರ್ಥನಾ ಜೀವನವನ್ನು ಇನ್ನಷ್ಟು ಆಳಗೊಳಿಸಿ, ಪೇತ್ರನ ಉತ್ತರಾಧಿಕಾರಿಯೊಂದಿಗೆ ಹಾಗೂ ವಿಶ್ವವ್ಯಾಪಿ ಧರ್ಮ ಸಭೆಯೊಂದಿಗೆ ಅವರ ಐಕ್ಯತೆಯನ್ನು ಬಲಪಡಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

“ನೀವು ಒಂದು ಪಾಂಟಿಫಿಕಲ್ ಸೊಸೈಟಿಯಾಗಿರುವುದರಿಂದ, ಈ ಸಂದರ್ಭವು ನಿಮಗೆ ವಿಶೇಷ ಮಹತ್ವದ್ದಾಗಿದೆ,” ಎಂದು ಅವರು ಹೇಳಿದರು.

ಮೊದಲ ಕ್ರೈಸ್ತರಿಂದ ಪ್ರೇರಣೆ

ಪ್ರೇಷಿತರ ಕೃತ್ಯಗಳನ್ನು ಸ್ಮರಿಸಿದ ಜಗದ್ಗುರು ಲಿಯೋರವರು, ಪವಿತ್ರಾತ್ಮನ ಬಲದಿಂದ ಶಕ್ತಿಗೊಂಡ ಶಿಷ್ಯರು “ಆಕಾಶದಡಿಯಲ್ಲಿ ಇರುವ ಪ್ರತಿಯೊಂದು ಜನಾಂಗಕ್ಕೂ” ಕ್ರಿಸ್ತನ ಸಂದೇಶವನ್ನು ಸಾರಲು ಆರಂಭಿಸಿದ ವಿಚಾರವನ್ನು ನೆನಪಿಸಿದರು. ಅವರು ಸಹೋದರತ್ವ, ಪ್ರಾರ್ಥನೆ ಮತ್ತು ಪವಿತ್ರ ಸಂಸ್ಕಾರ ಆಧಾರದ ಮೇಲೆ ಸಮುದಾಯಗಳನ್ನು ನಿರ್ಮಿಸಿದರು ಎಂದು ಹೇಳಿದರು.

ಅದೇ ಮಿಷನರಿ ಆತ್ಮವು 120ಕ್ಕೂ ಹೆಚ್ಚು ವರ್ಷಗಳ ಹಿಂದೆ ವಂ.ಸ್ವಾಮಿ ಫ್ರಾನ್ಸಿಸ್ ಕ್ಲೆಮೆಂಟ್ ಕೆಲ್ಲಿ ರವರನ್ನು ಪ್ರೇರೇಪಿಸಿತು ಎಂದು ಜಗದ್ಗುರುಗಳು ಹೇಳಿದರು. ಅಮೆರಿಕದಾದ್ಯಂತ ದೂರವಿರುವ ವಿಶ್ವಾಸ ಸಮುದಾಯಗಳಿಗೆ ಸಂಸ್ಕಾರಗಳು ಮತ್ತು ವಿಶಾಲ ಕಥೋಲಿಕ ಸಮುದಾಯದ ಬೆಂಬಲವನ್ನು ತಲುಪಿಸುವ ಉದ್ದೇಶದಿಂದ ಅವರು ಕಾರ್ಯಾರಂಭ ಮಾಡಿದರು.

1905ರಲ್ಲಿ ವೀಕ್.ಸ್ವಾಮಿ ಫ್ರಾನ್ಸಿಸ್ ಕ್ಲೆಮೆಂಟ್ ಕೆಲ್ಲಿಯವರಿಂದ ಸ್ಥಾಪಿತವಾದ ಕಥೋಲಿಕ ಎಕ್ಸ್ಟೆನ್ಷನ್ ಸೊಸೈಟಿಯನ್ನು, ಆರ್ಥಿಕವಾಗಿ ಹಿಂದುಳಿದ ಹಾಗೂ ದೂರದ ಪ್ರದೇಶಗಳಲ್ಲಿ ವಾಸಿಸುವ ಕಥೋಲಿಕ ಸಮುದಾಯಗಳಿಗೆ ಬೆಂಬಲ ನೀಡಲು ಆರಂಭಿಸಲಾಯಿತು. ದಶಕಗಳ ಕಾಲ ಈ ಸಂಸ್ಥೆ ಧರ್ಮ ಸಭೆಗಳು, ಗುರು ವಿಧ್ಯಾರ್ಥಿಮಂದಿರಗಳು, ಶಾಲೆಗಳು ಮತ್ತು ಧರ್ಮಾಧಿಕಾರಿಗಳು ಕಾರ್ಯಕ್ರಮಗಳಿಗೆ ಧನಸಹಾಯ ಒದಗಿಸಿತು. ಜೊತೆಗೆ ಕ್ಯೂಬಾ ಮತ್ತು ಪ್ಯೂರ್ಟೋ ರಿಕೋ ಮೊದಲಾದ ಪ್ರದೇಶಗಳಲ್ಲಿ ಮಿಷನರಿ ಸೇವೆಗೂ ಬೆಂಬಲ ನೀಡಿತು. ನಂತರ ಜಗದ್ಗುರುಗಳ ಸೊಸೈಟಿಯ ಸ್ಥಾನಮಾನ ಪಡೆದ ಈ ಸಂಸ್ಥೆ, ಸ್ಥಳೀಯ ಧರ್ಮ ಸಭೆಗಳನ್ನು ಬಲಪಡಿಸುವುದಕ್ಕೂ, ಸಂಪನ್ಮೂಲ ಹಾಗೂ ಧರ್ಮಾಧಿಕಾರಿಗಳ ಬೆಂಬಲದ ಕೊರತೆಯಲ್ಲಿರುವ ಸಮುದಾಯಗಳಿಗೆ ಜೊತೆಯಾಗಿರುವುದಕ್ಕೂ ತನ್ನ ಗಮನವನ್ನು ಮುಂದುವರಿಸಿದೆ.

“ಆ ಮಿಷನರಿ ಉತ್ಸಾಹವು ಇಂದಿಗೂ ಅಗತ್ಯವಾಗಿದೆ,” ಎಂದು ಜಗದ್ಗುರು ಲಿಯೋರವರು ಹೇಳಿದರು. ಅಮೆರಿಕದಲ್ಲಿಯೂ ವಿದೇಶಗಳಲ್ಲಿಯೂ ಬಡ ಕಥೋಲಿಕ ಸಮುದಾಯಗಳಿಗಾಗಿ ಸಂಸ್ಥೆ ತೋರಿಸುತ್ತಿರುವ ನಿರಂತರ ಬದ್ಧತೆಗೆ ಅವರು ಕೃತಜ್ಞತೆ ಸಲ್ಲಿಸಿದರು.

ಕ್ಯೂಬಾ, ಪ್ಯೂರ್ಟೋ ರಿಕೋ ಮತ್ತು ವಲಸಿಗ ಕುಟುಂಬಗಳ ಸೇವೆ

ನಂತರ ಜಗದ್ಗುರುಗಳು, ಕ್ಯೂಬಾ ಮತ್ತು ಪ್ಯೂರ್ಟೋ ರಿಕೋದಲ್ಲಿ ಸಂಸ್ಥೆ ನಡೆಸುತ್ತಿರುವ ಸೇವೆಯನ್ನು ವಿಶೇಷವಾಗಿ ಪ್ರಶಂಸಿಸಿದರು. ಈ ಸಮುದಾಯಗಳಿಗೆ ನೀಡುತ್ತಿರುವ ಬೆಂಬಲವನ್ನು ಅವರು “ಧಮ೯ಸಭೆಯ ವಿಶ್ವವ್ಯಾಪಕತೆಯ ಸುಂದರ ಅಭಿವ್ಯಕ್ತಿ” ಎಂದು ವರ್ಣಿಸಿದರು.

ನಂತರ ಡೈಲೆಕ್ಸಿಟ್ ಸಂಖ್ಯೆಗಳನ್ನು ಉಲ್ಲೇಖಿಸಿದ ಜಗದ್ಗುರು ಲಿಯೋರವರು, “ಪರರ ಮೇಲಿನ ಪ್ರೀತಿ, ದೇವರ ಮೇಲಿನ ನಮ್ಮ ಪ್ರೀತಿಯ ನಿಜಸ್ವರೂಪಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ” ಎಂದು ನೆನಪಿಸಿದರು.

ಅಮೆರಿಕಾದಲ್ಲಿನ ಹಿಂದುಳಿದ ಜನರು ಮತ್ತು ವಲಸಿಗ ಕುಟುಂಬಗಳಿಗಾಗಿ ಸಂಸ್ಥೆ ನಡೆಸುತ್ತಿರುವ ಸೇವೆಯನ್ನೂ ಅವರು ಉತ್ತೇಜಿಸಿದರು. “ನಮ್ಮ ಸಹೋದರರು ಮತ್ತು ಸಹೋದರಿಯರು ಕ್ರಿಸ್ತನ ಸಾನ್ನಿಧ್ಯದಿಂದ ಗುರುತಿಸಲ್ಪಟ್ಟ ಸಮುದಾಯದ ಆತ್ಮೀಯತೆಯನ್ನು ಅನುಭವಿಸುವುದು ಅತ್ಯಾವಶ್ಯಕ,” ಎಂದು ಅವರು ಹೇಳಿದರು.

ಧರ್ಮ ಸಭೆಯ ಸುವಾರ್ತಾ ಗುರುತು

ಆದಿಮ ಧರ್ಮ ಸಭೆಯ ಸಾಕ್ಷಿಯನ್ನು ಮತ್ತೊಮ್ಮೆ ಸ್ಮರಿಸಿದ ಜಗದ್ಗುರು ಲಿಯೋರವರು, ನಿಜವಾದ ಕ್ರೈಸ್ತ ಸಮುದಾಯಗಳು ಸಹಜವಾಗಿಯೇ ನೋವು ಅನುಭವಿಸುವವರನ್ನೂ ಅತ್ಯಂತ ಅಗತ್ಯದಲ್ಲಿರುವವರನ್ನೂ ಕಾಳಜಿ ವಹಿಸುತ್ತವೆ ಎಂದು ಹೇಳಿದರು.

“ಬಡವರ ಮೇಲಿನ ಪ್ರೀತಿಯನ್ನು ದೇವರ ಹೃದಯಕ್ಕೆ ನಿಷ್ಠವಾಗಿರುವ ಧರ್ಮ ಸಭೆಯ ಸುವಾರ್ತಾ ಗುರುತು ಎಂದು ಅರ್ಥಮಾಡಿಕೊಳ್ಳಬಹುದು,” ಎಂದು ಅವರು ಹೇಳಿದರು.

ಇದರ ಜೊತೆಗೆ, ಕಥೋಲಿಕ ಎಕ್ಸ್ಟೆನ್ಷನ್ ಸಂಸ್ಥೆಯ ಗುರಿ ಕೇವಲ ಭೌತಿಕ ಕಷ್ಟಗಳಿಗೆ ಪ್ರತಿಕ್ರಿಯಿಸುವುದಕ್ಕಿಂತ ಹೆಚ್ಚಿನದು ಎಂದು ಅವರು ಒತ್ತಿಹೇಳಿದರು. ವಿಶ್ವಾಸಭರಿತ ಸಮುದಾಯಗಳನ್ನು ನಿರ್ಮಿಸುವ ಮೂಲಕ, ಜನರು ಜೀವನದ ಸವಾಲುಗಳನ್ನು ಆಶಾಭರವಿನಿಂದ ಎದುರಿಸಲು ಅಗತ್ಯವಾದ ಆತ್ಮೀಯ ಬಲ ಮತ್ತು ಬೆಂಬಲವನ್ನು ಈ ಸಂಸ್ಥೆ ಒದಗಿಸುತ್ತದೆ ಎಂದರು.

ಈ ಸಮುದಾಯಗಳು ಮುಂದಿನ ದಿನಗಳಲ್ಲಿ ಯಾಜಕತ್ವ ಮತ್ತು ಧಾರ್ಮಿಕ ಜೀವನದ ಕರೆಗಾಗಿ ಫಲವತ್ತಾದ ನೆಲವಾಗುತ್ತವೆ ಹಾಗೂ “ಮುಂದಿನ ವರ್ಷಗಳ ಕೊಯ್ಲಿಗೆ ಹೊಸ ಕಾರ್ಮಿಕರನ್ನು” ಬೆಳೆಸುತ್ತವೆ ಎಂದು ಜಗದ್ಗುರುಗಳು ಹೇಳಿದರು.

ಸಂತೋಷದಿಂದ ಪ್ರಭುವಿನ ಸೇವೆ ಮಾಡಿ

ತಮ್ಮ ಭಾಷಣದ ಕೊನೆಯಲ್ಲಿ, ದೇವರ ಮೇಲಿನ ಹಾಗೂ ಪರರ ಮೇಲಿನ ಪ್ರೀತಿಯಿಂದ ಪ್ರೇರಿತರಾಗಿ, “ಸಂತೋಷ ಮತ್ತು ಉದಾರತೆಯಿಂದ” ಪ್ರಭುವಿನ ಸೇವೆಯನ್ನು ಮುಂದುವರಿಸಬೇಕೆಂದು ಜಗದ್ಗುರು ಲಿಯೋರವರು ಹಾಜರಿದ್ದವರಿಗೆ ಉತ್ತೇಜನ ನೀಡಿದರು. “ಗುಪ್ತವಾಗಿ ನೋಡುವ ತಂದೆಯೇ ನಿಮಗೆ ಪ್ರತಿಫಲ ನೀಡುವನು” ಎಂಬ ವಿಶ್ವಾಸವನ್ನು ಅವರು ನೆನಪಿಸಿದರು.

18 ಮೇ 2026, 19:46