ಜಗದ್ಗುರುಗಳು ಸ್ವಿಸ್ ಗಾರ್ಡ್ ಸದಸ್ಯರಿಗೆ: ಸೇವೆಯು ವೈಯಕ್ತಿಕ ನಂಬಿಕೆಯ ಪಯಣವನ್ನು ಸಮೃದ್ಧಗೊಳಿಸುತ್ತದೆ.
ವ್ಯಾಟಿಕನ್ ವರದಿ
ಬುಧವಾರ ಸಂಜೆ 28 ಹೊಸ ಪಾಂಟಿಫಿಕಲ್ ಸ್ವಿಸ್ ಗಾರ್ಡ್ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ, ಜಗದ್ಗುರು XIVನೇ ಲಿಯೋರವರು ಗುರುವಾರ ಗಾರ್ಡ್ ಸದಸ್ಯರು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡಿದರು.
ಜಗದ್ಗುರುಗಳು ಸ್ವಿಟ್ಜರ್‌ಲ್ಯಾಂಡ್ ದೇಶಕ್ಕೆ ಕೃತಜ್ಞತೆ ಸಲ್ಲಿಸಿ, ಈ ದಳದಲ್ಲಿ ಸೇವೆ ಸಲ್ಲಿಸುವ ಸ್ವಿಸ್ ಯುವಕರು ತಮ್ಮ ದೇಶದ ಸಾಂಸ್ಕೃತಿಕ ಮತ್ತು ಆತ್ಮೀಯ ಮೌಲ್ಯಗಳನ್ನು ವ್ಯಾಟಿಕನ್‌ಗೆ ತಂದುಕೊಡುವ ಮೂಲಕ ಹೆಮ್ಮೆಯ ಕಾರಣರಾಗಿದ್ದಾರೆ ಎಂದು ಹೇಳಿದರು.
ಅವರು ಸ್ವಿಸ್ ಗಾರ್ಡ್ ಸದಸ್ಯರು ಮತ್ತು ಅವರ ಕುಟುಂಬಗಳಿಗೆ ಅವರ ವಿನಯಪೂರ್ವಕ ಮತ್ತು ಮೌನ ಸೇವೆಗಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ನೀವು ಒಟ್ಟಾಗಿ ಅನುಭವಿಸುವ ಸಂತೋಷಗಳು ಮತ್ತು ಕಷ್ಟಗಳು, ಹಾಗೆಯೇ ನಿಮ್ಮ ನಡುವೆ ನಿರ್ಮಾಣವಾಗುವ ಸ್ನೇಹದ ಬಲ,” ಎಂದು ಜಗದ್ಗುರುಗಳು ಹೇಳಿದರು, “ಪೇತ್ರನ ಉತ್ತರಾಧಿಕಾರಿಯ ಸೇವೆ ಮತ್ತು ರಕ್ಷಣೆಗೆ ನಿಮ್ಮ ಜೀವನವನ್ನು ಸಮರ್ಪಿಸುವ ಮೂಲಕ ವ್ಯಕ್ತವಾಗುವ ಗೌರವ ಮತ್ತು ಕರ್ತವ್ಯದ ಮನೋಭಾವದಲ್ಲಿ ನಿಮ್ಮ ಆತ್ಮಗಳನ್ನು ರೂಪಿಸುತ್ತವೆ”ಎಂದರು.
ಪ್ರೇಷಿತರ ಸಮಾಧಿಗಳ ಸಮೀಪ ಸೇವೆ ಸಲ್ಲಿಸುವ ನಿಮಗೆ ಪ್ರಾರ್ಥನೆ ಮಾಡಲು ಮತ್ತು ಶಾಶ್ವತ ನಗರದಾದ ರೋಮಿನ ಸೌಂದರ್ಯವನ್ನು ಧ್ಯಾನಿಸಲು ಅವಕಾಶ ಸಿಗುತ್ತದೆ, ಆ ಸೌಂದರ್ಯ ದೇವರಿಂದ ಬರುತ್ತದೆ ಮತ್ತು ದೇವರ ಕಡೆಗೆ ದಾರಿತೋರಿಸುತ್ತದೆ ಎಂದು ಅವರು ಹೇಳಿದರು.
ನಿಮ್ಮ ಕರ್ತವ್ಯ ಮುಖ್ಯವಾಗಿ ಸೈನಿಕ ಸೇವೆಯಾಗಿದ್ದರೂ, ಪ್ರತಿಯೊಬ್ಬ ದೀಕ್ಷಾಸ್ನಾನ ಪಡೆದವರಂತೆ ನೀವು ಸಹ ಪವಿತ್ರತೆಗೆ ಕರೆಯಲ್ಪಟ್ಟಿದ್ದೀರಿ ಎಂದು ಜಗದ್ಗುರುಗಳು ನೆನಪಿಸಿದರು.
“ಆದ್ದರಿಂದ, ಜಗದ್ಗುರುಗಳು ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದಲ್ಲಿ ಸೇವೆ ಸಲ್ಲಿಸಲು ನಿಮ್ಮ ಜೀವನದ ಕೆಲವು ವರ್ಷಗಳನ್ನು ಸಮರ್ಪಿಸುವ ನಿರ್ಧಾರವು ನಿಮ್ಮ ವೈಯಕ್ತಿಕ ನಂಬಿಕೆಯ ಪಯಣದ ಒಂದು ಭಾಗವಾಗಿದೆ ಎಂಬುದರಲ್ಲಿ ನನಗೆ ವಿಶ್ವಾಸವಿದೆ,” ಎಂದು ಅವರು ಹೇಳಿದರು.
ಪ್ರಾಂತ್ಯದ ಅಧಿಕಾರಿಗಳು, ಯಾತ್ರಿಕರು ಮತ್ತು ವ್ಯಾಟಿಕನ್‌ಗೆ ಬರುವ ಅತಿಥಿಗಳಿಗೆ ಸಹಾಯ ಮಾಡುವಾಗ, “ನನ್ನ ಈ ಅಲ್ಪ ಸಹೋದರರಲ್ಲಿ ಯಾರಿಗಾದರೂ ನೀವು ಮಾಡಿದದ್ದೇ ನನಗೆ ಮಾಡಿದಂತಾಗಿದೆ” ಎಂಬ ಯೇಸುವಿನ ಮಾತುಗಳನ್ನು ನೆನಪಿಡುವಂತೆ ಜಗದ್ಗುರುಗಳು ಗಾರ್ಡ್ ಸದಸ್ಯರಿಗೆ ಹೇಳಿದರು.
ವಿಶೇಷವಾಗಿ ರಾತ್ರಿ ಪಾಳಿಗಳು, ಓದು ಮತ್ತು ಧ್ಯಾನಕ್ಕೆ ಉತ್ತಮ ಅವಕಾಶವನ್ನು ನೀಡುತ್ತವೆ ಎಂದು ಹೇಳಿದ ಅವರು, ನಿಮ್ಮ ಪೋಷಕ ಸಂತ ನಿಕೋಲಸ್ ಆಫ್ ಫ್ಲ್ಯೂ ರವರ ಈ ಪ್ರಾರ್ಥನೆಯನ್ನು ಜಪಿಸಲು ಆಹ್ವಾನಿಸಿದರು. “ನನ್ನ ಪ್ರಭುವೇ ಮತ್ತು ನನ್ನ ದೇವರೇ, ನಿನ್ನ ಬಳಿಗೆ ಬರಲು ಅಡ್ಡಿಯಾಗುವುದನ್ನೆಲ್ಲ ನನ್ನಿಂದ ತೆಗೆದುಹಾಕು, ನಿನ್ನ ಕಡೆಗೆ ನನ್ನನ್ನು ನಡೆಸುವುದನ್ನೆಲ್ಲ ನನಗೆ ಅನುಗ್ರಹಿಸು, ನನ್ನನ್ನು ನನ್ನಿಂದ ತೆಗೆದು, ಸಂಪೂರ್ಣವಾಗಿ ನಿನಗೆ ಅರ್ಪಿಸು, ಹೀಗಾಗಿ ನಾನು ಸಂಪೂರ್ಣವಾಗಿ ನಿನ್ನವನಾಗಿರಲಿ.”
ಜಗದ್ಗುರು ಲಿಯೋರವರು, ಬ್ಯಾರಕ್ ಜೀವನವು ಪರೋಪಕಾರ, ಉದಾರತೆ ಮತ್ತು ವಿನಯ ಎಂಬ ಮಾನವೀಯ ಗುಣಗಳನ್ನು ಬೆಳೆಸಲು ವಿಶೇಷವಾದ ಸ್ಥಳವಾಗಿದೆ ಎಂದು ಹೇಳಿದರು.
“ನಿಮ್ಮ ಸಂಬಂಧಗಳಲ್ಲಿ ಕಾಣಿಸಿಕೊಳ್ಳುವ ಸಹೋದರತ್ವ ಮತ್ತು ಏಕತೆಯ ಮೂಲಕ, ನೀವು ಗಾರ್ಡ್ ದಳದೊಳಗೆ ಸೌಹಾರ್ದತೆ ಮತ್ತು ಸಂತೋಷದ ವಾತಾವರಣವನ್ನು ನಿರ್ಮಿಸುವಿರಿ. ಅದು ನಿಮ್ಮನ್ನು ಭೇಟಿಯಾಗುವ ಎಲ್ಲರ ಮೇಲೂ ಪ್ರತಿಫಲಿಸುತ್ತದೆ,” ಎಂದು ಅವರು ಹೇಳಿದರು. ಈ ದಾರಿ ಕೆಲವೊಮ್ಮೆ ಕಠಿಣವಾಗಿದ್ದರೂ, ಅದು ಫಲಪ್ರದವಾದದ್ದಾಗಿದೆ, ಆದ್ದರಿಂದ ಅದರಲ್ಲಿ ದೃಢವಾಗಿ ಮುಂದುವರಿಯಿರಿ ಎಂದು ಪ್ರೋತ್ಸಾಹಿಸಿದರು.
ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಪಾಂಟಿಫಿಕಲ್ ಸ್ವಿಸ್ ಗಾರ್ಡ್ ಸದಸ್ಯರಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿ, ಅವರನ್ನು ಧನ್ಯ ಕನ್ಯಾ ಮರಿಯಮ್ಮ ತಾಯಿಯ ರಕ್ಷಣೆಗೆ ಹಾಗೂ ಅವರ ಪೋಷಕ ಸಂತರಾದ ಸೇಂಟ್ ಮಾರ್ಟಿನ್ ಆಫ್ ಟೂರ್ಸ್, ಸೇಂಟ್ ಸೆಬಾಸ್ಟಿಯನ್ ಮತ್ತು ಸೇಂಟ್ ನಿಕೋಲಸ್ ಆಫ್ ಫ್ಲ್ಯೂರವರ ಮಧ್ಯಸ್ಥಿಕೆಗೆ ಒಪ್ಪಿಸಿದರು.
