ಜಗದ್ಗುರುಗಳು ವ್ಯಾಟಿಕನ್ ಪ್ರಕಾಶನ ಸಂಸ್ಥೆಗೆ: “ಓದು ಮನಸ್ಸನ್ನು ಪೋಷಿಸುತ್ತದೆ.”
ವ್ಯಾಟಿಕನ್ ವರದಿ
ವ್ಯಾಟಿಕನ್ ಪ್ರಕಾಶನ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ನಡೆದ ಭೇಟಿಯಲ್ಲಿ ಜಗದ್ಗುರು XIVನೇ ಲಿಯೋರವರು, ಕಳೆದ ನೂರು ವರ್ಷಗಳಲ್ಲಿ ಈ ಸಂಸ್ಥೆ ಒಂಬತ್ತು ಜಗದ್ಗುರುಗಳ ಬೋಧನೆಯನ್ನು ಜಗತ್ತಿನಾದ್ಯಂತ ಹರಡುವ ಮೂಲಕ ಸುವಾರ್ತೆಯ ಪ್ರಸಾರಕ್ಕೆ ಮಹತ್ವದ ಸೇವೆ ಸಲ್ಲಿಸಿದೆ ಎಂದು ಕೃತಜ್ಞತೆಯಿಂದ ಸ್ಮರಿಸಿದರು. ಈ ಸಮಾರಂಭವನ್ನು ಅವರು “ಕುಟುಂಬದ ಹಬ್ಬ”ದಂತೆಯೇ ಎಂದು ವರ್ಣಿಸಿದರು. 1926ರಲ್ಲಿ ವ್ಯಾಟಿಕನ್ ಪ್ರಕಾಶನ ಸಂಸ್ಥೆ, 1587ರಲ್ಲಿ ಸ್ಥಾಪಿತವಾದ ವ್ಯಾಟಿಕನ್ ಮುದ್ರಣಾಲಯದಿಂದ ಸ್ವತಂತ್ರ ಸಂಸ್ಥೆಯಾಗಿ ರೂಪುಗೊಂಡಿತು ಎಂದು ಅವರು ನೆನಪಿಸಿದರು.
ಜಗದ್ಗುರುಗಳು ಪುಸ್ತಕಗಳ ಮಹತ್ವದ ಕುರಿತು ಮೂರು ಪ್ರಮುಖ ಚಿಂತನೆಗಳನ್ನು ಹಂಚಿಕೊಂಡರು. ಮೊದಲನೆಯದಾಗಿ, ಪುಸ್ತಕಗಳು ಆಲೋಚನೆ ಮತ್ತು ಮನನಕ್ಕೆ ಅವಕಾಶವನ್ನು ನೀಡುತ್ತವೆ ಎಂದರು. ಡಿಜಿಟಲ್ ಯುಗದಲ್ಲಿಯೂ ಪುಸ್ತಕದ ಭೌತಿಕ ರೂಪವು ಚಿಂತನೆ, ಅಧ್ಯಯನ ಮತ್ತು ಆಳವಾದ ಪರಾಮರ್ಶೆಯ ಮಹತ್ವವನ್ನು ನೆನಪಿಸುತ್ತದೆ ಎಂದು ಹೇಳಿದರು. “ಓದುವುದು ಮನಸ್ಸನ್ನು ಪೋಷಿಸುತ್ತದೆ” ಮತ್ತು “ಜಾಗೃತ ಹಾಗೂ ಸಮರ್ಪಕವಾಗಿ ರೂಪುಗೊಂಡ ವಿಮರ್ಶಾತ್ಮಕ ಮನೋಭಾವವನ್ನು ಬೆಳೆಸಲು ಸಹಕಾರಿಯಾಗುತ್ತದೆ” ಎಂದು ಜಗದ್ಗುರುಗಳು ಒತ್ತಿಹೇಳಿದರು.
ಅವರು ಮುಂದುವರಿದು, ಪುಸ್ತಕಗಳು ಮೂಲಭೂತವಾದ ಮತ್ತು ಸಿದ್ಧಾಂತಾಧಾರಿತ ಸುಲಭ ಮಾರ್ಗಗಳಿಂದ ರಕ್ಷಿಸುವ ಶಕ್ತಿಯನ್ನು ಹೊಂದಿವೆ ಎಂದು ಹೇಳಿದರು. ಮುಚ್ಚಿದ ಮನೋಭಾವ ಮತ್ತು ವಾಸ್ತವಿಕತೆಯನ್ನು ಸೀಮಿತ ದೃಷ್ಟಿಯಿಂದ ನೋಡುವ ಪ್ರವೃತ್ತಿಗೆ ಓದು ಒಂದು ಔಷಧಿಯಂತಿದೆ ಎಂದು ತಿಳಿಸಿ, ಎಲ್ಲರೂ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.
ಎರಡನೆಯದಾಗಿ, ಪುಸ್ತಕಗಳು ಇತರರನ್ನು ಭೇಟಿಯಾಗುವ ಅವಕಾಶವನ್ನೂ ಒದಗಿಸುತ್ತವೆ ಎಂದು ಜಗದ್ಗುರುಗಳು ವಿವರಿಸಿದರು.ನಾವು ಪುಸ್ತಕವನ್ನು ಕೈಯಲ್ಲಿ ಹಿಡಿದಾಗ ಅದರ ಲೇಖಕರನ್ನು ಭೇಟಿಯಾಗುತ್ತೇವೆ. ಜೊತೆಗೆ ಅದನ್ನು ಓದಿದವರನ್ನೂ, ಈಗ ಓದುತ್ತಿರುವವರನ್ನೂ, ಮುಂದೆಯೂ ಓದುವವರನ್ನೂ ಸಂಪರ್ಕಿಸುತ್ತೇವೆ ಎಂದು ಹೇಳಿದರು. ಪುಸ್ತಕಗಳು ಸಂವಾದ, ಪರಸ್ಪರ ಅರಿವು ಮತ್ತು ವಿಶಾಲ ದೃಷ್ಟಿಕೋನವನ್ನು ಬೆಳೆಸುವ ಸೇತುವೆಗಳಾಗಿವೆ ಎಂದು ಅವರು ತಿಳಿಸಿದರು.
ಕೊನೆಯಲ್ಲಿ, ಕ್ರೈಸ್ತರಿಗೆ ಪುಸ್ತಕಗಳು ಕ್ರಿಸ್ತನನ್ನು ಘೋಷಿಸುವ ಸಾಧನವೂ ಆಗಿವೆ ಎಂದು ಜಗದ್ಗುರು ಲಿಯೋರವರು ಹೇಳಿದರು. ಸಂತರ ಜೀವನಚರಿತ್ರೆಗಳು ಮತ್ತು ಆತ್ಮೀಯ ಚಿಂತನೆಗಳು ಹೃದಯವನ್ನು ಸ್ಪರ್ಶಿಸಬಲ್ಲವು ಎಂದು ಅವರು ನೆನಪಿಸಿದರು. ಕನ್ಯಾ ಮರಿಯಮ್ಮ, ಪಾದುವದ ಸಂತ ಅಂತೋಣಿಯವರು ಮತ್ತು ಸಂತ ಅಗಸ್ಟಿನ್ ರವರ ಚಿತ್ರಣಗಳನ್ನು ಉಲ್ಲೇಖಿಸಿ, ದೇವರ ವಾಕ್ಯ ಮತ್ತು ಸತ್ಯದೊಂದಿಗೆ ಸಂಬಂಧ ಹೊಂದಿದ ಜೀವನದ ಮಹತ್ವವನ್ನು ವಿವರಿಸಿದರು.
ಮರಿಯಮ್ಮನವರು ಮತ್ತು ಸಂತರ ಶಾಲೆಯಲ್ಲಿ ದೇವರ ವಾಕ್ಯದಿಂದ ನಮ್ಮನ್ನು ಪೋಷಿಸಿಕೊಳ್ಳೋಣ, ಅದು ನಮ್ಮ ಆಲೋಚನೆ ಮತ್ತು ನಡೆ-ನುಡಿಗಳನ್ನು ರೂಪಿಸಲಿ ಎಂದು ಜಗದ್ಗುರುಗಳು ಹೇಳಿದರು. ಕೊನೆಯಲ್ಲಿ, ಸಮರ್ಪಣೆ ಮತ್ತು ಉತ್ಸಾಹದಿಂದ ಸೇವೆ ಸಲ್ಲಿಸುತ್ತಿರುವ ವ್ಯಾಟಿಕನ್ ಪ್ರಕಾಶನ ಸಂಸ್ಥೆಯ ಸಿಬ್ಬಂದಿಗೆ ಧನ್ಯವಾದಗಳನ್ನು ಸಲ್ಲಿಸಿ, ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು.
