ಹುಡುಕಿ

“ಕಳೆದ ವರ್ಷದ ನವೆಂಬರ್‌ನಲ್ಲಿ ಟರ್ಕಿಗೆ ನಡೆದ   ಪ್ರೇಷಿತರ ಪ್ರವಾಸದ ವೇಳೆ ಜಗದ್ಗುರು ಲಿಯೋ”ರವರು “ಕಳೆದ ವರ್ಷದ ನವೆಂಬರ್‌ನಲ್ಲಿ ಟರ್ಕಿಗೆ ನಡೆದ ಪ್ರೇಷಿತರ ಪ್ರವಾಸದ ವೇಳೆ ಜಗದ್ಗುರು ಲಿಯೋ”ರವರು  (AFP or licensors)

“ಜಗದ್ಗುರುಗಳ ಸ್ಪೇನ್‌ಗೆ ಪ್ರೇಷಿತರ ಪ್ರಯಾಣದ ವೇಳಾಪಟ್ಟಿ ಪ್ರಕಟಗೊಂಡಿದೆ.”

ಜಗದ್ಗುರು XIVನೇ ಲಿಯೋರವರ ಸ್ಪೇನ್ ಪ್ರವಾಸಕ್ಕೆ ಒಂದು ತಿಂಗಳ ಮುನ್ನ, ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಈ ಪ್ರಯಾಣದ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪ್ರವಾಸದಲ್ಲಿ ಅವರು ಮ್ಯಾಡ್ರಿಡ್, ಬಾರ್ಸಿಲೋನಾ ಹಾಗೂ ಕ್ಯಾನರಿ ದ್ವೀಪಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಸಾಗ್ರಾದ ಫಮಿಲಿಯಾ ಬಸಿಲಿಕಾದ ಅತಿ ಎತ್ತರದ ಗೋಪುರವನ್ನು ಆಶೀರ್ವದಿಸಲಿದ್ದಾರೆ.

ವ್ಯಾಟಿಕನ್ ವರದಿ

ಬುಧವಾರ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಜಗದ್ಗುರುಗಳ ಮುಂಬರುವ ಸ್ಪೇನಿನ ಪ್ರೇಷಿತರ ಪ್ರವಾಸದ ವೇಳಾಪಟ್ಟಿಯನ್ನು ದೃಢಪಡಿಸಿದೆ. ಈ ಪ್ರವಾಸದಲ್ಲಿ ಹನ್ನೆರಡು ಭಾಷಣಗಳು, ನಾಲ್ಕು ಪವಿತ್ರ ಬಲಿಪೂಜೆಗಳು ಮತ್ತು ರಾಜಕೀಯ, ಧರ್ಮ ಸಭೆ ಹಾಗೂ ನಾಗರಿಕ ನಾಯಕರು ಸುಮಾರು ಹತ್ತು ಭೇಟಿಗಳು ಇರಲಿವೆ.

ಈ ಪ್ರಯಾಣದಲ್ಲಿ ಮೂರು ಪ್ರಮುಖ ನಿಲ್ದಾಣಗಳಿವೆ: ಮ್ಯಾಡ್ರಿಡ್, ಬಾರ್ಸಿಲೋನಾ ಮತ್ತು ಕ್ಯಾನರಿ ದ್ವೀಪಗಳು.

ಜೂನ್ 6ರಂದು ಜಗದ್ಗುರು XIVನೇ ಲಿಯೋರವರು ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ಗೆ ಆಗಮಿಸಿ, ರಾಯಲ್ ಪ್ಯಾಲೇಸ್‌ನಲ್ಲಿ ರಾಜ VIನೇ ಫೆಲಿಪೆರವರಿಂದ ಸ್ವಾಗತ ಪಡೆಯಲಿದ್ದಾರೆ. ನಂತರ ಅವರು ಸರ್ಕಾರದ ಅಧಿಕಾರಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ರಾಜತಾಂತ್ರಿಕ ಬಳಗದವರನ್ನು ಭೇಟಿಯಾಗಲಿದ್ದಾರೆ. ಆ ಸಂಜೆ, ಮ್ಯಾಡ್ರಿಡ್‌ನ ಪ್ಲಾಜಾ ಡೆ ಲಿಮಾ ಕೇಂದ್ರದಲ್ಲಿ ಯುವಕರೊಂದಿಗೆ ಪ್ರಾರ್ಥನಾ ಜಾಗರಣೆಯನ್ನು ಮುನ್ನಡೆಸಲಿದ್ದಾರೆ.

ಮುಂದಿನ ದಿನ, ಕಾರ್ಪಸ್ ಕ್ರಿಸ್ತಿ ಮಹೋತ್ಸವದಂದು, ಜಗದ್ಗುರುಗಳು ಪ್ರಸಿದ್ಧ ಪ್ಲಾಜಾ ಡೆ ಸಿಬೆಲೆಸ್‌ನಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಲಿದ್ದಾರೆ. ನಂತರ ಅವರು ಸಂತ ಆಗಸ್ಟಿನ್ ಸಂಘದ ಸದಸ್ಯರನ್ನು ಖಾಸಗಿಯಾಗಿ ಭೇಟಿ ಮಾಡಿ, ಬಳಿಕ ಮ್ಯಾಡ್ರಿಡ್‌ನ ಮೊವಿಸ್ಟಾರ್ ಅರೇನಾದಲ್ಲಿ ಸಂಸ್ಕೃತಿ, ಕಲೆ, ವ್ಯವಹಾರ ಮತ್ತು ಕ್ರೀಡಾ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಜೂನ್ 8 ಸೋಮವಾರ ಬೆಳಿಗ್ಗೆ, ಜಗದ್ಗುರುಗಳು ಸ್ಪೇನಿನ ಪ್ರಧಾನಮಂತ್ರಿ ಪೆಡ್ರೋ ಸಾಂಚೆಝ್ ರವರನ್ನು ಭೇಟಿ ಮಾಡಿ, ನಂತರ ಸಂಸತ್ತಿನ ಸದಸ್ಯರನ್ನು ಕಾಂಗ್ರೆಸ್ ಆಫ್ ಡೆಪ್ಯೂಟೀಸ್‌ನಲ್ಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅವರು ಸ್ಪ್ಯಾನಿಷ್ ಬಿಷಪ್‌ಗಳ ಸಭೆಯ ಮುಖ್ಯ ಕಚೇರಿಯಲ್ಲಿ ಬಿಷಪ್‌ಗಳನ್ನು ಭೇಟಿ ಮಾಡಿ, ಸಂಜೆ ಬೆರ್ನಾಬೇವು ಕ್ರೀಡಾಂಗಣದಲ್ಲಿ ಸ್ಥಳೀಯ ಧರ್ಮಪ್ರಾಂತ್ಯ ಸಮುದಾಯದೊಂದಿಗೆ ಸೇರಿಕೊಳ್ಳಲಿದ್ದಾರೆ.

ಜೂನ್ 9ರಂದು ಜಗದ್ಗುರುಗಳು ಬಾರ್ಸಿಲೋನಾಗೆ ಪ್ರಯಾಣಿಸಿ, ಈ ಪ್ರವಾಸದ ಪ್ರಮುಖ ಕ್ಷಣಗಳಲ್ಲಿ ಒಂದಾದ ಸಾಗ್ರಾದ ಫಮಿಲಿಯಾ ಬಸಿಲಿಕಾದ ಯೇಸು ಕ್ರಿಸ್ತನ ಗೋಪುರದ ಉದ್ಘಾಟನೆ ಮತ್ತು ಆಶೀರ್ವಾದ ನೆರವೇರಿಸಲಿದ್ದಾರೆ. ಈ ಗೋಪುರವು ಬಸಿಲಿಕಾದ ಅತ್ಯುನ್ನತವಾಗಿದ್ದು, 16 ವರ್ಷಗಳ ಹಿಂದೆ ಜಗದ್ಗುರು XVIನೇ ಬೆನೆಡಿಕ್ಟ್ ರವರಿಂದ ಸಮರ್ಪಿಸಲಾದ ಈ ಐತಿಹಾಸಿಕ ದೇವಾಲಯದ ಮೆರಗು ಹೆಚ್ಚಿಸುತ್ತದೆ. ಪ್ರಸಿದ್ಧ ಕಟಲಾನ್ ವಾಸ್ತುಶಿಲ್ಪಿ ಆಂಟೋನಿ ಗೌಡಿ ವಿನ್ಯಾಸಗೊಳಿಸಿದ ಈ ದೇವಾಲಯವನ್ನು “ಕಲ್ಲಿನಲ್ಲಿನ ಬೈಬಲ್” ಎಂದು ಕರೆಯಲಾಗುತ್ತದೆ.

ಲಿಟರ್ಜಿ ಹಾಗೂ ಅಧಿಕೃತ ಕಾರ್ಯಕ್ರಮಗಳ ಜೊತೆಗೆ, ಜಗದ್ಗುರುಗಳು ಸಮಾಜದ ಅಂಚಿನಲ್ಲಿರುವವರ ಬಗ್ಗೆ ತಮ್ಮ ಕಾಳಜಿಯನ್ನು ಮತ್ತೊಮ್ಮೆ ತೋರಿಸಲಿದ್ದಾರೆ. ಮ್ಯಾಡ್ರಿಡ್‌ನಲ್ಲಿ ಅವರು ಗೃಹರಹಿತರ ಆಶ್ರಯ ಕೇಂದ್ರವನ್ನು ಭೇಟಿ ಮಾಡಲಿದ್ದಾರೆ, ಬಾರ್ಸಿಲೋನಾದಲ್ಲಿ ಕಾರಾಗೃಹವೊಂದನ್ನು ಭೇಟಿ ಮಾಡಲಿದ್ದಾರೆ. ನಂತರ, ಪ್ರವಾಸದ ಕೊನೆಯ ಹಂತದಲ್ಲಿ ವಲಸೆ ಸಮಸ್ಯೆಗೆ ವಿಶೇಷ ಗಮನ ನೀಡಲಾಗುತ್ತದೆ.

ಜೂನ್ 11ರಂದು ಜಗದ್ಗುರುಗಳು ಕ್ಯಾನರಿ ದ್ವೀಪಗಳಿಗೆ ಪ್ರಯಾಣಿಸಲಿದ್ದಾರೆ. ಆಫ್ರಿಕಾದ ಉತ್ತರ ಪಶ್ಚಿಮ ಕರಾವಳಿಯ ಬಳಿ ಇರುವ ಈ ಜ್ವಾಲಾಮುಖಿ ದ್ವೀಪಗಳು ಯುರೋಪ್ ಕಡೆಗೆ ಸಾಗುವ ವಲಸಿಗರಿಗೆ ಪ್ರಮುಖ ಪ್ರವೇಶ ಬಿಂದುಗಳಾಗಿವೆ. ಲಾಸ್ ಪಾಲ್ಮಾಸ್ ಡೆ ಗ್ರಾನ್ ಕನಾರಿಯಾ ಮತ್ತು ಸಾಂತಾ ಕ್ರೂಸ್ ಡೆ ಟೆನೆರಿಫೆ ಎರಡೂ ಸ್ಥಳಗಳಲ್ಲಿ ಅವರು ಪವಿತ್ರ ಬಲಿಪೂಜೆಯನ್ನು ಆಚರಿಸಿ, ವಲಸಿಗರಿಗೆ ಸಹಾಯ ಮಾಡುವವರನ್ನು ಉತ್ತೇಜಿಸಲಿದ್ದಾರೆ.

ಜಗದ್ಗುರು XVIನೇ ಬೆನೆಡಿಕ್ಟ್ ರವರ ಭೇಟಿಯ ನಂತರ ಹದಿನೈದು ವರ್ಷಗಳ ಬಳಿಕ, ಸ್ಪೇನಿನ ಧರ್ಮ ಸಭೆ ಜಗದ್ಗುರು XIVನೇ ಲಿಯೋರವರ ಭೇಟಿ ಎದುರುನೋಡುತ್ತಿದೆ. ಫೆಬ್ರವರಿ ಕೊನೆಯಲ್ಲಿ ಈ ಪ್ರವಾಸ ಘೋಷಣೆಯಾಗುವಾಗ, ಸ್ಪ್ಯಾನಿಷ್ ಬಿಷಪ್‌ಗಳ ಸಭೆಯ ಅಧ್ಯಕ್ಷ ಆರ್ಚ್‌ಬಿಷಪ್ ಲೂಯಿಸ್ ಅರ್ಗುಯೆಲ್ಲೋ ರವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, ಭಕ್ತರನ್ನು “ಕಿವಿಗಳು ಮತ್ತು ಹೃದಯಗಳನ್ನು ತೆರೆಯಿರಿ” ಎಂದು ಆಹ್ವಾನಿಸಿದರು. ಈ ಭೇಟಿ ವಿಶ್ವಾಸದಲ್ಲಿ ಸಹೋದರ ಸಹೋದರಿಯರನ್ನು ದೃಢಪಡಿಸಲು ಮತ್ತು ನಮ್ಮ ಸಮುದಾಯಗಳ ಜೀವನದಲ್ಲಿ ಭರವಸೆಯ ಹಾಗೂ ಪ್ರೀತಿಯನ್ನು ಬೆಳೆಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

06 ಮೇ 2026, 18:43