ಸಂಘರ್ಷಗಳಿಂದ ಪೀಡಿತವಾಗಿರುವ ಜಗತ್ತಿನಲ್ಲಿ ಕ್ರೈಸ್ತರು ಏಕತೆಯ ಸಾಕ್ಷಿಯಾಗಬೇಕು ಎಂದು ಜಗದ್ಗುರುಗಳು ದ್ವಿತೀಯ ತವಾಡ್ರೋಸ್ ರವರಿಗೆ ಹೇಳಿದರು.
ವ್ಯಾಟಿಕನ್ ವರದಿ
ಜಗತ್ತಿನಾದ್ಯಂತ ನಡೆಯುತ್ತಿರುವ ಸಂಘರ್ಷಗಳು, ವಿಶೇಷವಾಗಿ ಮಧ್ಯಪ್ರಾಚ್ಯವನ್ನು ತಲ್ಲಣಗೊಳಿಸುತ್ತಿರುವ ಯುದ್ಧಗಳ ನಡುವೆ, ಕ್ರೈಸ್ತರ “ಸಂಪೂರ್ಣ ಐಕ್ಯತೆ” ಕೇವಲ ಭವಿಷ್ಯದ ಗುರಿಯಲ್ಲ, ಅದು ತುರ್ತು ಅಗತ್ಯವಾಗಿದೆ ಎಂದು ಜಗದ್ಗುರು ಲಿಯೋರವರು ಹೇಳಿದರು. ಕಾಪ್ಟಿಕ್-ಕಥೋಲಿಕ ಸ್ನೇಹ ದಿನದ ಅಂಗವಾಗಿ, ಅಲೆಕ್ಸಾಂಡ್ರಿಯಾದ ಕಾಪ್ಟಿಕ್ ಆರ್ಥಡಾಕ್ಸ್ ಜಗದ್ಗುರು ದ್ವಿತೀಯ ತವಾಡ್ರೋಸ್ ರವರೊಂದಿಗೆ ದೂರವಾಣಿ ಸಂಭಾಷಣೆ ಮತ್ತು ಪತ್ರದ ಮೂಲಕ ಅವರು ಈ ಸಂದೇಶವನ್ನು ಹಂಚಿಕೊಂಡರು.
ಜಗದ್ಗುರುಗಳ ಅಧಿಕಾರ ಸ್ಥಳದ ಮಾಧ್ಯಮ ಕಚೇರಿಯ ಪ್ರಕಾರ, ಈ ಸಂಭಾಷಣೆಯಲ್ಲಿ ಕಾಪ್ಟಿಕ್ ಮತ್ತು ಕಥೋಲಿಕ ಸಮುದಾಯಗಳ ನಡುವಿನ ಸ್ನೇಹ ದಿನಾಚರಣೆಗೆ ಹೊಸ ಚೈತನ್ಯ ನೀಡುವುದು ಹಾಗೂ ನಂಬಿಕೆ ಮತ್ತು ಪ್ರೀತಿಯ ಆಧಾರದ ಮೇಲೆ ನಡೆಯುವ ಸಂವಾದಕ್ಕೆ ಅಡ್ಡಿಯಾಗುವ ಅಡೆತಡೆಗಳನ್ನು ನಿವಾರಿಸುವ ವಿಷಯಕ್ಕೆ ಒತ್ತು ನೀಡಲಾಯಿತು. ಜೊತೆಗೆ, ಸುವಾರ್ತೆಯನ್ನು ಸಾರುವುದು ಮತ್ತು ಶಾಂತಿ ಹಾಗೂ ಸೌಹಾರ್ದತೆಯನ್ನು ಉತ್ತೇಜಿಸುವ ಹಂಚಿಕೊಂಡ ಜವಾಬ್ದಾರಿಯ ಅರಿವು ವಿಶೇಷವಾಗಿ ವ್ಯಕ್ತವಾಯಿತು.
ಈ ಸ್ನೇಹ ದಿನದ ಪರಂಪರೆಯನ್ನು ಮೊದಲು ಕಾಪ್ಟಿಕ್ ಪಿತಾಮಹರು ಆರಂಭಿಸಿದ್ದು, ನಂತರ ಜಗದ್ಗುರು ಫ್ರಾನ್ಸಿಸ್ ರವರು 2013ರಲ್ಲಿ ಅದನ್ನು ಸ್ವೀಕರಿಸಿ ಉತ್ತೇಜಿಸಿದರು. ಈ ಆಚರಣೆ 1973ರಲ್ಲಿ ಜಗದ್ಗುರು ಆರನೇ ಪಾಲ್ ಮತ್ತು ಮೂರನೇ ಶೆನೂದಾರವರ ಐತಿಹಾಸಿಕ ಭೇಟಿಯ ಸ್ಮರಣಾರ್ಥ ರೂಪುಗೊಂಡಿತ್ತು. 2023ರಲ್ಲಿ ದ್ವಿತೀಯ ತವಾಡ್ರೋಸ್ ರವರ ಮತ್ತು ಜಗದ್ಗುರು ಫ್ರಾನ್ಸಿಸ್ ರವರನ್ನು ಮತ್ತೆ ಭೇಟಿಯಾಗಿ, ಯುಕರಿಸ್ಟಿಕ್ ಐಕ್ಯತೆಯ ಭರವಸೆಯನ್ನು ಪುನರುಚ್ಚರಿಸಿದರು ಹಾಗೂ 2015ರಲ್ಲಿ ಐಸಿಸ್ ಉಗ್ರರಿಂದ ಹತ್ಯೆಯಾದ 21 ಕಾಪ್ಟಿಕ್ ಕ್ರೈಸ್ತರನ್ನು ಸ್ಮರಿಸಿದರು.
ಜಗದ್ಗುರು XIVನೇ ಲಿಯೋರವರು ತಮ್ಮ ಪೂರ್ವಾಧಿಕಾರಿ ಫ್ರಾನ್ಸಿಸ್ ರವರು ಆರಂಭಿಸಿದ ಈ “ಉದಾತ್ತ ಪರಂಪರೆಯನ್ನು” ಮುಂದುವರಿಸುತ್ತಿದ್ದಾರೆ. ಹಿಂದಿನ ವಿಭಜನೆಗಳು ಮತ್ತು ತಪ್ಪು ಅರ್ಥೈಸುವಿಕೆಗಳ ನಡುವೆಯೂ, ಹೊಸ ಸೌಹಾರ್ದತೆ ಮತ್ತು ಪರಸ್ಪರ ಸಮೀಪತೆಯ ಮೂಲಕ ಧರ್ಮ ಸಭೆಗಳ ಸಂಯುಕ್ತ ಪ್ರಯಾಣಕ್ಕೆ ಹೊಸ ಚೈತನ್ಯ ಸಿಗಬೇಕೆಂದು ಅವರು ಕರೆ ನೀಡಿದರು. “ಶಾಂತಿಯ ರಾಜಕುಮಾರನಾದ ಕ್ರಿಸ್ತನಿಗೆ ಒಟ್ಟಾಗಿ ಸಾಕ್ಷಿಯಾಗಲು ಕ್ರೈಸ್ತರು ಸಂಪೂರ್ಣ ಐಕ್ಯತೆಯತ್ತ ಪ್ರಯತ್ನಿಸಬೇಕು” ಎಂದು ಅವರು ಒತ್ತಿಹೇಳಿದರು.
ಮೇ 10ರಂದು ನಡೆದ ರೆಜಿನಾ ಚೇಲಿ ಪ್ರಾರ್ಥನೆಯ ಸಂದರ್ಭದಲ್ಲಿಯೇ ಜಗದ್ಗುರು ಲಿಯೋರವರು ದ್ವಿತೀಯ ತವಾಡ್ರೋಸ್ ರವರಿಗೆ ಸಹೋದರಭಾವದ ಶುಭಾಶಯಗಳನ್ನು ಕಳುಹಿಸಿದ್ದರು. ಇಬ್ಬರೂ ಇನ್ನೂ ವೈಯಕ್ತಿಕವಾಗಿ ಭೇಟಿಯಾಗದಿದ್ದರೂ, ಪರಸ್ಪರ ಪತ್ರ ವ್ಯವಹಾರ ಮತ್ತು ದೂರವಾಣಿ ಸಂಭಾಷಣೆಯ ಮೂಲಕ ಸ್ನೇಹವನ್ನು ಬೆಳೆಸುತ್ತಿದ್ದಾರೆ. “ನಮ್ಮ ಸ್ನೇಹದ ಪ್ರಯಾಣವು ಕ್ರಿಸ್ತನಲ್ಲಿ ಪರಿಪೂರ್ಣ ಐಕ್ಯತೆಯತ್ತ ನಮ್ಮನ್ನು ಕೊಂಡೊಯ್ಯಲಿ” ಎಂದು ಜಗದ್ಗುರುಗಳು ಪ್ರಾರ್ಥಿಸಿದರು.
ತಮ್ಮ ಪತ್ರದಲ್ಲಿ ಜಗದ್ಗುರು ಲಿಯೋರವರು, ಕ್ರೈಸ್ತರಿಗಾಗಿ ಸ್ನೇಹವು ಕೇವಲ ಭಾವನೆ ಅಲ್ಲ, ಅದು ನಂಬಿಕೆಯ ಹೃದಯಭಾಗವಾಗಿದೆ ಎಂದು ಹೇಳಿದರು. ಕಥೋಲಿಕ ಮತ್ತು ಪೂರ್ವದ ಆರ್ಥಡಾಕ್ಸ್ ಧರ್ಮ ಸಭೆಗಳ ನಡುವಿನ ತಾತ್ವಿಕ ಸಂವಾದ ಮುಂದುವರಿಯಬೇಕು ಹಾಗೂ “ಎಲ್ಲರೂ ಒಂದಾಗಿರಲಿ” ಎಂಬ ಕ್ರಿಸ್ತನ ಪ್ರಾರ್ಥನೆ ಸಾಕಾರಗೊಳ್ಳಬೇಕು ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಪವಿತ್ರಾತ್ಮರ ಹಬ್ಬದತ್ತ ದೃಷ್ಟಿ ನೆಟ್ಟ ಅವರು, “ಸತ್ಯ ಮತ್ತು ಪ್ರೀತಿಯ ಮೂಲಕ ಸಂಪೂರ್ಣ ಐಕ್ಯತೆಯತ್ತ ಸಾಗುವ ನಮ್ಮ ಸಾಮೂಹಿಕ ಯಾತ್ರೆಯಲ್ಲಿ ಪವಿತ್ರಾತ್ಮನು ಕಾಪ್ಟಿಕ್ ಮತ್ತು ಕಥೋಲಿಕ ಸಮುದಾಯಗಳನ್ನು ಮಾರ್ಗದರ್ಶನ ಮಾಡಲಿ” ಎಂದು ಪ್ರಾರ್ಥಿಸಿದರು.
