ಜಗದ್ಗುರು XIVನೇ ಲಿಯೋರವರ 'ಮ್ಯಾಗ್ನಿಫಿಕಾ ಹ್ಯುಮಾನಿಟಾಸ್’: ಕೃತಕ ಬುದ್ಧಿಮತ್ತೆ ಮಾನವಕುಲಕ್ಕೆ ಸೇವೆ ಸಲ್ಲಿಸಬೇಕು, ಅಧಿಕಾರವನ್ನು ಕೇಂದ್ರೀಕರಿಸಬಾರದು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರ ಮೊದಲ ಎನ್ಸೈಕ್ಲಿಕಲ್ ‘'ಮ್ಯಾಗ್ನಿಫಿಕಾ ಹ್ಯುಮಾನಿಟಾಸ್' ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿತ್ವದ ರಕ್ಷಣೆ ಕುರಿತು ಮಹತ್ವದ ಸಂದೇಶವನ್ನು ನೀಡುತ್ತದೆ. “ದೇವರು ಸೃಷ್ಟಿಸಿದ ಮಹಿಮೆಯುತ ಮಾನವಕುಲವು ಇಂದು ಮಹತ್ವದ ಆಯ್ಕೆಯ ಎದುರು ನಿಂತಿದೆ ಹೊಸ ಬಾಬೆಲ್ ಗೋಪುರವನ್ನು ಕಟ್ಟಬೇಕೋ ಅಥವಾ ದೇವರು ಮತ್ತು ಮಾನವರು ಒಟ್ಟಾಗಿ ವಾಸಿಸುವ ನಗರವನ್ನು ನಿರ್ಮಿಸಬೇಕೋ” ಎಂಬ ಮಾತುಗಳೊಂದಿಗೆ ಈ ದಸ್ತಾವೇಜು ಆರಂಭವಾಗುತ್ತದೆ. ತಂತ್ರಜ್ಞಾನವು ಮಾನವಕುಲದ ಶತ್ರುವಲ್ಲ, ಆದರೆ ಅದು ಯಾರ ಕೈಯಲ್ಲಿ ಇರುತ್ತದೆ ಮತ್ತು ಹೇಗೆ ಬಳಸಲಾಗುತ್ತದೆ ಎಂಬುದರ ಮೇಲೆ ಅದರ ಪರಿಣಾಮ ಅವಲಂಬಿತವಾಗಿರುತ್ತದೆ ಎಂದು ಪೋಪ್ ಹೇಳಿದ್ದಾರೆ.
ಎನ್ಸೈಕ್ಲಿಕಲ್‌ನ ಮೊದಲ ಭಾಗದಲ್ಲಿ ಚರ್ಚಿನ ಸಾಮಾಜಿಕ ಬೋಧನೆಗಳ ಅಭಿವೃದ್ಧಿಯನ್ನು ವಿವರಿಸಲಾಗುತ್ತದೆ. ಜಗದ್ಗುರು XIIIನೇ ಲಿಯೋರವರ ರೆರಮ್ ನೊವರಮ್ ರಿಂದ ಆರಂಭವಾಗಿ ಇಂದಿನ ಕಾಲದವರೆಗೆ, ಮಾನವ ಗೌರವ, ಕಾರ್ಮಿಕರ ಮೌಲ್ಯ, ಸಾಮೂಹಿಕ ಹಿತ, ಸೌಹಾರ್ದತೆ ಮತ್ತು ಶಾಂತಿಯ ಮಹತ್ವವನ್ನು ಧರ್ಮ ಸಭೆಯು ನಿರಂತರವಾಗಿ ಒತ್ತಿಹೇಳಿದೆ ಎಂದು ಜಗದ್ಗುರುಗಳು ನೆನಪಿಸುತ್ತಾರೆ. ಇಂದಿನ ಡಿಜಿಟಲ್ ಯುಗದಲ್ಲಿಯೂ ಈ ಮೌಲ್ಯಗಳು ಮಾನವ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಅವರು ಹೇಳಿದ್ದಾರೆ.
ಜಗದ್ಗುರು XIVನೇ ಲಿಯೋರವರ ಪ್ರಕಾರ, ಪ್ರತಿಯೊಬ್ಬ ಮಾನವನ ಗೌರವ ದೇವರಿಂದ ಬಂದದ್ದು, ಅದು ವ್ಯಕ್ತಿಯ ಸಾಧನೆ ಅಥವಾ ಉತ್ಪಾದಕತೆಯಿಂದ ನಿರ್ಧಾರವಾಗುವುದಿಲ್ಲ. ಗರ್ಭಧಾರಣೆಯಿಂದ ಸಹಜ ಮರಣದವರೆಗೆ ಜೀವದ ಹಕ್ಕು ಅಲಂಘನೀಯ ಎಂದು ಅವರು ಪುನರುಚ್ಚರಿಸುತ್ತಾರೆ. ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಕಾನೂನು, ಶಿಕ್ಷಣ ಮತ್ತು ಸಾಮಾಜಿಕ ವ್ಯವಸ್ಥೆಗಳಲ್ಲಿ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ. ಜೊತೆಗೆ, ಒಂದು ರಾಷ್ಟ್ರವನ್ನು ದಮನಿಸುವುದು ಅಥವಾ ಅದರ ಗುರುತನ್ನು ಅಳಿಸುವ ಪ್ರಯತ್ನ “ಗಂಭೀರ ಅನೈತಿಕ ಕೃತ್ಯ” ಎಂದು ಅವರು ಹೇಳಿದ್ದಾರೆ.
ಎನ್ಸೈಕ್ಲಿಕಲ್ ತಂತ್ರಜ್ಞಾನ ಮತ್ತು ಎಐ ಬಗ್ಗೆ ವಿಶೇಷ ಎಚ್ಚರಿಕೆಯನ್ನು ನೀಡುತ್ತದೆ. ಡೇಟಾ, ಅಲ್ಗೋರಿದಮ್‌ಗಳು ಮತ್ತು ಡಿಜಿಟಲ್ ವೇದಿಕೆಗಳು ಕೆಲವೇ ದೊಡ್ಡ ಕಂಪನಿಗಳ ಕೈಯಲ್ಲಿ ಕೇಂದ್ರೀಕೃತವಾಗಿರುವುದು ಹೊಸ ಅಸಮಾನತೆ ಮತ್ತು ಶೋಷಣೆಗೆ ಕಾರಣವಾಗಬಹುದು ಎಂದು ಜಗದ್ಗುರುಗಳು ಹೇಳಿದ್ದಾರೆ. ಎಐ ಅನ್ನು ನೈತಿಕ ನಿಯಮಗಳು, ಕಾನೂನು ನಿಯಂತ್ರಣ ಮತ್ತು ಸಾರ್ವಜನಿಕ ಮೇಲ್ವಿಚಾರಣೆಯ ಅಡಿಯಲ್ಲಿ ಇರಿಸಬೇಕು ಎಂದು ಅವರು ಒತ್ತಿಹೇಳುತ್ತಾರೆ. ಯಂತ್ರಗಳು ಮಾನವನನ್ನು ಅನುಕರಿಸಬಹುದು, ಆದರೆ ಅವುಗಳಿಗೆ ಮನಸ್ಸು, ಕರುಣೆ ಮತ್ತು ಆತ್ಮೀಯತೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ಕಾರ್ಮಿಕರ ಗೌರವ ಮತ್ತು ಮಾನವ ಸ್ವಾತಂತ್ರ್ಯದ ಕುರಿತಾಗಿ ಜಗದ್ಗುರುಗಳು ಗಂಭೀರ ಚಿಂತನೆ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನವು ಮಾನವನ ಸೇವೆಗೆ ಇರಬೇಕು, ಮಾನವನು ಯಂತ್ರಗಳ ವೇಗಕ್ಕೆ ಬಲಿಯಾಗಬಾರದು ಎಂದು ಅವರು ಹೇಳಿದ್ದಾರೆ. ಉದ್ಯೋಗವನ್ನು ಕೇವಲ ಲಾಭದ ದೃಷ್ಟಿಯಿಂದ ನೋಡುವ ಬದಲು, ಮಾನವ ಗೌರವ ಮತ್ತು ಸಾಮಾಜಿಕ ನ್ಯಾಯವನ್ನು ಕೇಂದ್ರವಾಗಿಡಬೇಕು ಎಂದು ಅವರು ಒತ್ತಿಹೇಳುತ್ತಾರೆ. ಡಿಜಿಟಲ್ ಮಾಧ್ಯಮಗಳು ಜನರ ಅಭಿಪ್ರಾಯವನ್ನು ನಿಯಂತ್ರಿಸುವ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತಾ, ಸತ್ಯಾಧಾರಿತ ಸಂವಹನ ಮತ್ತು ಜವಾಬ್ದಾರಿಯುತ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದ್ದಾರೆ.
ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಯುದ್ಧ, ಶಸ್ತ್ರಾಸ್ತ್ರ ಸ್ಪರ್ಧೆ ಮತ್ತು ಎಐ ಆಧಾರಿತ ಹಿಂಸಾಚಾರದ ವಿರುದ್ಧ ತೀವ್ರವಾಗಿ ಮಾತನಾಡುತ್ತಾರೆ. “ಯಾವ ಅಲ್ಗೋರಿದಮ್ ಕೂಡ ಯುದ್ಧವನ್ನು ನೈತಿಕವಾಗಿ ಸರಿಯೆಂದು ತೋರಿಸಲಾರದು” ಎಂದು ಅವರು ಹೇಳಿದ್ದಾರೆ. ಶಾಂತಿ, ಸಂವಾದ, ಸಹೋದರತ್ವ ಮತ್ತು ಧರ್ಮಾಂತರ ಸಂವಾದವೇ ಮಾನವಕುಲದ ಭವಿಷ್ಯವನ್ನು ರಕ್ಷಿಸುವ ದಾರಿ ಎಂದು ಅವರು ತಿಳಿಸುತ್ತಾರೆ. ಎಐ ಯುಗದಲ್ಲಿಯೂ “ಮಾನವೀಯತೆಯ ಮಹಿಮೆಯನ್ನು” ಸಾಕ್ಷೀಕರಿಸುವ ಜೀವನಕ್ಕೆ ಎಲ್ಲರನ್ನು ಅವರು ಆಹ್ವಾನಿಸುತ್ತಾರೆ.
