ಹುಡುಕಿ

1981ರ ಮೇ 13ರಂದು ಜಗದ್ಗುರು ದ್ವಿತೀಯ ಜಾನ್ ಪಾಲ್ ರವರ ಮೇಲೆ ನಡೆದ ದಾಳಿಯ ಸಂಗ್ರಹಿತ ಛಾಯಾಚಿತ್ರ. 1981ರ ಮೇ 13ರಂದು ಜಗದ್ಗುರು ದ್ವಿತೀಯ ಜಾನ್ ಪಾಲ್ ರವರ ಮೇಲೆ ನಡೆದ ದಾಳಿಯ ಸಂಗ್ರಹಿತ ಛಾಯಾಚಿತ್ರ.  (L'OSSERVATORE ROMANO)

1981ರ ಮೇ 13: ಜಗದ್ಗುರು ದ್ವಿತೀಯ ಜಾನ್ ಪಾಲ್ ರವರ ಮೇಲಿನ ಗುಂಡಿನ ದಾಳಿ ಜಗತ್ತನ್ನು ನಡುಗಿಸಿದ ದಿನ.

ಸಂತ ದ್ವಿತೀಯ ಜಾನ್ ಪಾಲ್ ರವರ ಮೇಲೆ ಸಂತ ಪೇತ್ರರ ಚೌಕದಲ್ಲಿ ನಡೆದ ಸಾರ್ವಜನಿಕ ಭೇಟಿಯ ವೇಳೆ ನಡೆದ ಹಲ್ಲೆಗೆ 45 ವರ್ಷಗಳು ಕಳೆದಿದ್ದರೂ, ಆ ಘಟನೆಯ ಸ್ಮರಣೆ ಇನ್ನೂ ಪ್ರಾರ್ಥನೆ, ಕ್ಷಮೆ ಮತ್ತು ದೇವರ ಮೇಲಿನ ನಂಬಿಕೆ ಎಂಬ ವಿಷಯಗಳೊಂದಿಗೆ ಆಳವಾಗಿ ಸಂಪರ್ಕಗೊಂಡಿದೆ. ಈ ಸಂದೇಶಗಳು ಜಗದ್ಗುರುಗಳ ಮಾತುಗಳಲ್ಲಿಯೂ ಹಾಗೂ ಅವರ ಉತ್ತರಾಧಿಕಾರಿಗಳ ಬೋಧನೆಗಳಲ್ಲಿಯೂ ಪ್ರತಿಫಲಿಸುತ್ತಿವೆ.

ವ್ಯಾಟಿಕನ್ ವರದಿ

1981ರ ಮೇ 13ರಂದು ಸಂತ ಪೇತ್ರರ ಚೌಕದಲ್ಲಿ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರ ಮೇಲೆ ನಡೆದ ಹಲ್ಲೆಗೆ ಇದೀಗ ನಲವತ್ತೈದು ವರ್ಷಗಳು ಕಳೆದಿವೆ. ಧರ್ಮ ಸಭೆಯ ಇತಿಹಾಸದಲ್ಲಿ ಮಹತ್ವದ ಗುರುತು ಮೂಡಿಸಿದ ಈ ಘಟನೆ, ಅಂತರರಾಷ್ಟ್ರೀಯ ಸಮುದಾಯದ ಗಮನವನ್ನೂ ತೀವ್ರವಾಗಿ ಸೆಳೆಯಿತು.

ಆ ದಿನದ ನೆನಪು ಕೇವಲ ಸಂತ ಪೇತ್ರರ ಚೌಕದ ದೃಶ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ,ಅದರ ನಂತರದ ವರ್ಷಗಳಲ್ಲಿ ಜಗದ್ಗುರುಗಳು ಹಾಗೂ ಅವರ ಉತ್ತರಾಧಿಕಾರಿಗಳು ಉಚ್ಚರಿಸಿದ ಪ್ರಾರ್ಥನೆ, ಕ್ಷಮೆ ಮತ್ತು ದೇವರ ಮೇಲಿನ ನಂಬಿಕೆಯ ಮಾತುಗಳಿಗೂ ಅದು ಆಳವಾಗಿ ಸಂಬಂಧಿಸಿದೆ.

1981ರ ಮೇ ತಿಂಗಳಲ್ಲಿ ಜಾಗತಿಕ ಸಾಮಾಜಿಕ ರಾಜಕೀಯ ಪರಿಸ್ಥಿತಿ ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳ ನಡುವಿನ ಹೊಸ ಉದ್ವಿಗ್ನತೆಯಿಂದ ಕೂಡಿತ್ತು. ಸೋವಿಯತ್ ಒಕ್ಕೂಟದ ಅಫ್ಘಾನಿಸ್ತಾನ ಆಕ್ರಮಣವು ಶೀತಯುದ್ಧದ ವಾತಾವರಣವನ್ನು ಮತ್ತಷ್ಟು ತೀವ್ರಗೊಳಿಸಿತ್ತು. ಇದೇ ವೇಳೆ, ಪೋಲ್ಯಾಂಡ್‌ನಲ್ಲಿ ಸ್ವತಂತ್ರ ಕಾರ್ಮಿಕ ಸಂಘಟನೆ “ಸೊಲಿಡಾರ್ನೊಶ್”  ಉದಯಿಸಿದ ಹಿನ್ನೆಲೆಯಲ್ಲಿ ಪೂರ್ವ ಯೂರೋಪಿನಲ್ಲಿ ಆತಂಕವೂ ಹೆಚ್ಚಾಗಿತ್ತು. ಇಟಲಿಯಲ್ಲಿ “ಅನ್ನಿ ದಿ ಪಿಯೊಂಬೊ”  ಎಂದು ಕರೆಯಲ್ಪಟ್ಟ ಭಯೋತ್ಪಾದನೆ ಮತ್ತು ಅತಿರೇಕಿ ರಾಜಕೀಯ ಹಿಂಸಾಚಾರದ ವರ್ಷಗಳು ಸಮಾಜವನ್ನು ಆಳವಾಗಿ ನಡುಗಿಸಿತ್ತು.

1981ರ ಮೇ 13ರ ಬುಧವಾರ, ವಾರದ ಸಾರ್ವಜನಿಕ ಭೇಟಿಗಾಗಿ ಸಂತ ಪೇತ್ರರ ಚೌಕದಲ್ಲಿ ಸಾವಿರಾರು ಯಾತ್ರಿಕರು ಸೇರಿದ್ದರು. ಚೌಕದ ಸುತ್ತಲೂ ಸಂಚರಿಸಲು ಬಳಸುತ್ತಿದ್ದ ಬಿಳಿ ಜೀಪಿನಲ್ಲಿ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಭಕ್ತರನ್ನು ಅಭಿನಂದಿಸುತ್ತಿದ್ದಾಗ, ಅತೀ ಸಮೀಪದಿಂದ ಗುಂಡಿನ ದಾಳಿ ನಡೆಯಿತು. ಜಗದ್ಗುರುಗಳು ಗಂಭೀರವಾಗಿ ಗಾಯಗೊಂಡು ತಕ್ಷಣವೇ ರೋಮಿನ ಜೆಮೆಲ್ಲಿ ಆಸ್ಪತ್ರೆಗೆ ಸಾಗಿಸಲ್ಪಟ್ಟರು.

ಈ ಘಟನೆಯನ್ನು ನೇರ ಪ್ರಸಾರದಲ್ಲಿ ವರದಿ ಮಾಡುತ್ತಿದ್ದವರಲ್ಲಿ ವ್ಯಾಟಿಕನ್ ರೇಡಿಯೋದ ಪತ್ರಕರ್ತ ಬೆನೆಡೆಟ್ಟೊ ನಾರ್ದಾಚ್ಚಿಯವರೂ ಒಬ್ಬರು. ಅವರ ಧ್ವನಿಯಲ್ಲಿ ದಾಳಿಯ ನಂತರ ಉಂಟಾದ ಗೊಂದಲ ಮತ್ತು ಮೌನ ಸ್ಪಷ್ಟವಾಗಿ ಪ್ರತಿಧ್ವನಿಸಿತು.

ಚೌಕದಲ್ಲಿದ್ದ ಜನರನ್ನು ಗಮನಿಸಿದ ಅವರು, ಸುದ್ದಿಗಾಗಿ ಮೌನವಾಗಿ ಕಾಯುತ್ತಿದ್ದ ಜನರನ್ನು ವಿವರಿಸಿದರು. ಇದೇ ವೇಳೆ ಬಿಷಪ್‌ಗಳು ಮತ್ತು ಧರ್ಮಗುರುಗಳು ಜಗದ್ಗುರುಗಳ ಚೇತರಿಕೆಗೆ ಪ್ರಾರ್ಥಿಸಬೇಕೆಂದು ಭಕ್ತರನ್ನು ಆಹ್ವಾನಿಸಿದರು.

ನಂತರ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಜಗದ್ಗುರುಗಳ ಹೊಟ್ಟೆಗೆ ಗುಂಡು ತಗುಲಿದ್ದು, ಜೆಮೆಲ್ಲಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಲಾಯಿತು. ಅವರ ಸ್ಥಿತಿ ಗಂಭೀರವಾಗಿದ್ದರೂ “ಚೇತರಿಕೆಗೆ ಸಮಂಜಸವಾದ ನಿರೀಕ್ಷೆಗಳಿವೆ” ಎಂದು ಪ್ರಕಟಣೆ ತಿಳಿಸಿತು.

ನಾಲ್ಕು ದಿನಗಳ ಬಳಿಕ ಆಸ್ಪತ್ರೆಯಿಂದ ನೀಡಿದ ರೆಜಿನಾ ಚೇಲಿ ಸಂದೇಶದಲ್ಲಿ, ದ್ವಿತೀಯ ಜಾನ್ ಪಾಲ್ ರವರ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ದಾಳಿಗೆ ಕಾರಣನಾದ ಮೆಹ್ಮೆತ್ ಅಲಿ ಅಗ್ಜಾಗೆ ಸಾರ್ವಜನಿಕವಾಗಿ ಕ್ಷಮೆ ನೀಡಿದರು.

ಅವರು ದಾಳಿಕೋರನಿಗಾಗಿ ಪ್ರಾರ್ಥಿಸುತ್ತಿರುವುದಾಗಿ ಹೇಳಿ, "ಟೋಟಸ್ ಟುಯಸ್ ಅಹಂ ಸಮ್"ಎಂಬ ಪದಗಳ ಮೂಲಕ ಮತ್ತೊಮ್ಮೆ ತಮ್ಮನ್ನು ಕನ್ಯಾ ಮರಿಯಮ್ಮನವರಿಗೆ ಸಮರ್ಪಿಸಿಕೊಂಡರು.

ಪ್ರೀತಿಯಿಂದ ಪರಿವರ್ತಿತವಾದ ನೋವು

ಮುಂದಿನ ವರ್ಷಗಳಲ್ಲಿ, 1981ರ ಮೇ 13ರ ಘಟನೆ ಜಗದ್ಗುರುಗಳ ಫಾತಿಮಾ ಮಾತೆಯ ಮೇಲಿನ ಭಕ್ತಿಯೊಂದಿಗೆ ಆಳವಾಗಿ ಸಂಬಂಧಿಸಲ್ಪಟ್ಟಿತು. ತಮ್ಮ ಜೀವ ಉಳಿದದ್ದು ಮಾತೆಯ ಮಧ್ಯಸ್ಥಿಕೆಯಿಂದಲೇ ಎಂಬ ನಂಬಿಕೆಯನ್ನು ದ್ವಿತೀಯ ಜಾನ್ ಪಾಲ್ ರವರು ಪುನಃ ಪುನಃ ವ್ಯಕ್ತಪಡಿಸಿದರು.

2005ರ ಏಪ್ರಿಲ್ 8ರಂದು ದ್ವಿತೀಯ ಜಾನ್ ಪಾಲ್ ರವರ ಅಂತ್ಯಕ್ರಿಯೆಯ ಬಲಿಪೂಜೆಯಲ್ಲಿ, ಕಾರ್ಡಿನಲ್ ಜೋಸೆಫ್ ರಾಟ್ಸಿಂಗರ್ ರವರು ನಿಧನರಾದ ಜಗದ್ಗುರುಗಳ ನೋವು ಮತ್ತು ನಂಬಿಕೆಯ ಸಾಕ್ಷಿಯನ್ನು ಸ್ಮರಿಸಿದರು.ದ್ವಿತಿಯ ಜಾನ್ ಪಾಲ್ ರವರ ಅಂತಿಮ ಕೃತಿ ಸ್ಮರಣೆ ಮತ್ತು ಗುರುತು ಭಾಗಗಳನ್ನು ಉಲ್ಲೇಖಿಸಿದ ಅವರು, ಪ್ರೀತಿಯಿಂದ ಪರಿವರ್ತಿತಗೊಂಡು ಕ್ರಿಸ್ತನ ರಹಸ್ಯದೊಂದಿಗೆ ಒಂದಾದ ನೋವಿನ ಕುರಿತು ಮಾತನಾಡಿದರು.

2021ರ ಮೇ 12ರಂದು, ದಾಳಿಯ ವಾರ್ಷಿಕೋತ್ಸವದ ಮುನ್ನಾದಿನ ನಡೆದ ಸಾರ್ವಜನಿಕ ಭೇಟಿಯಲ್ಲಿ ಜಗದ್ಗುರು ಫ್ರಾನ್ಸಿಸ್ ಕೂಡ ಈ ಘಟನೆಯನ್ನು ಸ್ಮರಿಸಿದರು. ದಾಳಿ ನಡೆದ ದಿನಾಂಕ ಮತ್ತು ಫಾತಿಮಾ ಮಾತೆಯ ಆರಾಧನಾ ಸ್ಮರಣೆಯ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ಅವರು, “ನಮ್ಮ ಜೀವನವೂ ಜಗತ್ತಿನ ಇತಿಹಾಸವೂ ದೇವರ ಕೈಯಲ್ಲಿದೆ” ಎಂಬುದನ್ನು ಈ ಘಟನೆ ಮಾನವಕುಲಕ್ಕೆ ನೆನಪಿಸುತ್ತದೆ ಎಂದು ಹೇಳಿದರು.

ಸಂತ ದ್ವಿತೀಯ ಜಾನ್ ಪಾಲ್ ರವರ ಸ್ಮರಣೆ ಧರ್ಮ ಸಭೆಯ ಜೀವನದಲ್ಲಿ ಇಂದಿಗೂ ಪ್ರತಿಧ್ವನಿಸುತ್ತಿದೆ. 2025ರ ಮೇ 11ರಂದು, ಪೇತ್ರನ ಸಿಂಹಾಸನಕ್ಕೆ ಆಯ್ಕೆಯಾದ ಕೆಲವೇ ದಿನಗಳ ಬಳಿಕ, ಜಗದ್ಗುರು XIVನೇ ಲಿಯೋರವರು ರೆಜಿನಾ ಚೇಲಿ ಪ್ರಾರ್ಥನೆಯ ವೇಳೆ ಯುವಕರನ್ನು ಉದ್ದೇಶಿಸಿ ಮಾತನಾಡಿದರು. ಅಂದು ಅವರು ಜಗದ್ಗುರು ವೊಯ್ಟಿಲಾರವರ ಅಧಿಕಾರವದಿಗೆ ಆಪ್ತವಾಗಿ ಸಂಬಂಧಿಸಿದ ಮಾತುಗಳನ್ನು ಪುನರಾವರ್ತಿಸಿದರು. “ಭಯಪಡಬೇಡಿ! ಧರ್ಮ ಸಭೆಯ ಮತ್ತು ಪ್ರಭುವಾದ ಕ್ರಿಸ್ತನ ಆಹ್ವಾನವನ್ನು ಸ್ವೀಕರಿಸಿ” ಎಂದರು.

ಒಂದು ವಾರದ ಬಳಿಕ, 2025ರ ಮೇ 18ರಂದು — ಕರೋಲ್ ವೊಯ್ಟಿಲಾರವರ ಜನ್ಮ ವಾರ್ಷಿಕೋತ್ಸವದ ದಿನ ಜಗದ್ಗುರು XIVನೇ ಲಿಯೋರವರು  ತಮ್ಮ ಪೇತ್ರೀಯ ಸೇವೆಯ ಆರಂಭವನ್ನು ಗುರುತಿಸುವ ಪವಿತ್ರ ಬಲಿಪೂಜೆಗೆ ಅಧ್ಯಕ್ಷತೆ ವಹಿಸಿದರು.

12 ಮೇ 2026, 10:55