ಜಗದ್ಗುರು XIVನೇ ಲಿಯೋರವರು ಪೊಂಪೇಯಿಯಲ್ಲಿ: ನಮ್ಮನ್ನು ಎಂದಿಗೂ ತಳ್ಳಿಹಾಕದ ಸ್ನೇಹಿತನಾದ ಯೇಸುವಿನ ಮೇಲೆ ಸದಾ ಭರವಸೆ ಇಡಿ ಎಂದು ಕರೆ ನೀಡಿದರು.
ವ್ಯಾಟಿಕನ್ ವರದಿ
“ಯೇಸುವಿನ ವಾಕ್ಯಗಳಿಂದ ಮತ್ತು ಅವರ ಮಾದರಿಯಿಂದ ಉಂಟಾಗುವ ಆನಂದವು ನಿಮ್ಮನ್ನು ಪ್ರೇರೇಪಿಸಲಿ ಮತ್ತು ಮುನ್ನಡೆಸಲಿ, ಆ ಸಂತೋಷವನ್ನು ಎಲ್ಲರಿಗೂ ಘೋಷಿಸಿರಿ.”
ಜಗದ್ಗುರು XIVನೇ ಲಿಯೋರವರು ಮೇ 8ರಂದು, ತಾವು ಜಗದ್ಗುರುಗಳಾಗಿ ಆಯ್ಕೆಯಾದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪೊಂಪೇಯಿ ಪುಣ್ಯಕ್ಷೇತ್ರದ “ದಾನಧರ್ಮದ ಮಂದಿರ”ಕ್ಕೆ ಭೇಟಿ ನೀಡಿದಾಗ ಈ ಆಹ್ವಾನವನ್ನು ನೀಡಿದರು.
ಪುಣ್ಯಕ್ಷೇತ್ರದ ದಾನಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರೊಂದಿಗೆ ನಡೆದ ಈ ಭೇಟಿ, ಜಗದ್ಗುರುಗಳ ಶುಕ್ರವಾರದ ಧಮ೯ಧ್ಯಕ್ಷೀಯ ಭೇಟಿಗಳ ಮೊದಲ ಕಾರ್ಯಕ್ರಮವಾಗಿತ್ತು. ನಂತರ ಅವರು ನೇಪಲ್ಸ್‌ಗೆ ಭೇಟಿ ನೀಡಿದರು.
ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸ್ವಯಂಸೇವಕರ ಉದಾರತೆ ಮತ್ತು ವಿಶ್ವಾಸಕ್ಕಾಗಿ ಜಗದ್ಗುರುಗಳಿಗೆ ಧನ್ಯವಾದ ಸಲ್ಲಿಸಿದರು. “ಕಳೆದ ವರ್ಷದ ಅಕ್ಟೋಬರ್ 19ರಂದು ನಾನು ಪವಿತ್ರರೆಂದು ಘೋಷಿಸಿದ ಸಂತ ಬಾರ್ತೊಲೊ ಲೊಂಗೊರವರ ಹೆಜ್ಜೆಗುರುತುಗಳನ್ನು ಅನುಸರಿಸಿ ಈ ಧರ್ಮಾಧ್ಯಕ್ಷೀಯ ಭೇಟಿಯನ್ನು ಆರಂಭಿಸುವುದು ನನಗೆ ಸಂತೋಷದ ಸಂಗತಿಯಾಗಿದೆ” ಎಂದು ಅವರು ಹೇಳಿದರು.
ಅವರು ಈ ಸ್ಥಳವನ್ನು “ಅನುಗ್ರಹದ ಸ್ಥಳ”ವೆಂದು ಕರೆಯುತ್ತಾ, “ಜಪಮಾಲೆ ಮಾತೆ ಮತ್ತು ಸಂತ ಬಾರ್ತೊಲೊರವರು ಎಲ್ಲಾ ವಯಸ್ಸಿನ, ಎಲ್ಲಾ ಹಿನ್ನೆಲೆಯ ಮತ್ತು ಎಲ್ಲಾ ಪರಿಸ್ಥಿತಿಯ ಜನರನ್ನು ಒಂದಾಗಿ ಸೇರಿಸಿ, ಲೋಕಕ್ಕೆ ಶಾಂತಿ ಮತ್ತು ಸೌಹಾರ್ದತೆಯನ್ನು ನೀಡಬಲ್ಲ ವಿಶ್ವವ್ಯಾಪಿ ಪ್ರೀತಿಯ ಏಕೈಕ ಮೂಲವಾದ ದೇವರ ಕಡೆಗೆ ನಡೆಸುವ ಸ್ಥಳ” ಎಂದು ವಿವರಿಸಿದರು.
ಕ್ರಿಸ್ತನ ಪುನರುತ್ಥಾನದ ಶಕ್ತಿ ಪ್ರತಿದಿನ ಅನುಭವವಾಗುತ್ತದೆ
ಸಂತ ಬಾರ್ತೊಲೊರವರು ಪೊಂಪೇಯಿ ಕಣಿವೆಯನ್ನು “ಹೃದಯವನ್ನು ಉಷ್ಣಗೊಳಿಸುವ ಪ್ರೀತಿಯ ಸ್ಥಳ” ಮತ್ತು “ನಂಬಿಕೆ ಹಾಗೂ ದಾನಧರ್ಮದ ವಿಜಯ”ವೆಂದು ಕರೆಯುತ್ತಿದ್ದರು ಎಂದು ಜಗದ್ಗುರುಗಳು ನೆನಪಿಸಿದರು. ಆ ಆತ್ಮಸ್ಫೂರ್ತಿ ಇಂದಿಗೂ ಜೀವಂತವಾಗಿಯೇ ಕಾಣಿಸುತ್ತಿದೆ ಎಂದು ಅವರು ಹೇಳಿದರು.
“ಇಲ್ಲಿ, ಪುಣ್ಯಕ್ಷೇತ್ರದ ದಾನಧರ್ಮ ಕಾರ್ಯಗಳಲ್ಲಿ, ಕ್ರಿಸ್ತನ ಪುನರುತ್ಥಾನದ ಶಕ್ತಿ ಪ್ರತಿದಿನ ಅನುಭವವಾಗುತ್ತದೆ, ಅದು ಪ್ರೀತಿಯ ಮೂಲಕ ಹೃದಯಗಳನ್ನು ಪುನರುಜ್ಜೀವನಗೊಳಿಸಿ, ಸುವಾರ್ತೆಯ ಉತ್ತಮ ಜೀವನದತ್ತ ಕರೆದೊಯ್ಯುತ್ತದೆ” ಎಂದು ಅವರು ಹೇಳಿದರು.
“ದಾನಧರ್ಮದ ಮಂದಿರ” ಮತ್ತು “ನಂಬಿಕೆಯ ಮಂದಿರ” ಒಂದಕ್ಕೊಂದು ಆಧಾರವಾಗಿವೆ ಎಂದು ಜಗದ್ಗುರುಗಳು ಹೇಳಿದರು. ಪ್ರಾರ್ಥನೆಯು ಅನೇಕರ ಆತಿಥ್ಯ, ಪ್ರೀತಿ, ಸೇವೆ ಮತ್ತು ಉದಾರ ಬದ್ಧತೆಯನ್ನು ಪೋಷಿಸುತ್ತದೆ, ಇದು ಪ್ರೀತಿಯು ಎಲ್ಲಾ ನಿರೀಕ್ಷೆಗಳನ್ನು ಮೀರಿದ ಅದ್ಭುತಗಳನ್ನು ಸಾಧಿಸುತ್ತದೆ ಎಂದರು.
ಪ್ರತಿಯೊಬ್ಬರಲ್ಲೂ ಕ್ರಿಸ್ತನ ಮುಖವನ್ನು ಕಾಣಿರಿ
ಸಂತ ಬಾರ್ತೊಲೊರವರು ಮೊದಲ ಬಾರಿಗೆ ಪೊಂಪೇಯಿ ಕಣಿವೆಗೆ ಬಂದಾಗ ಅಲ್ಲಿ ದೊಡ್ಡ ಬಡತನವಿತ್ತು ಎಂದು ಜಗದ್ಗುರುಗಳು ನೆನಪಿಸಿದರು. ಕೆಲವೇ ಬಡ ರೈತರು ವಾಸಿಸುತ್ತಿದ್ದ ಆ ಪ್ರದೇಶದಲ್ಲಿ ಮಲೇರಿಯಾ ಮತ್ತು ದರೋಡೆಕೋರರ ಸಮಸ್ಯೆಯಿದ್ದರೂ, ಅವರು ಪ್ರತಿಯೊಬ್ಬರಲ್ಲೂ “ಕ್ರಿಸ್ತನ ಮುಖವನ್ನು” ಕಾಣಲು ಸಮರ್ಥರಾದರು ಎಂದು ಹೇಳಿದರು.
ಬಾರ್ತೊಲೊರವರ ಮೃದು ಹೃದಯದ ಮೂಲಕ, ವಿಶೇಷವಾಗಿ ಅನಾಥರು ಮತ್ತು ಕೈದಿಗಳ ಮಕ್ಕಳಲ್ಲಿ, ದೇವರ ಪ್ರೀತಿಯ ಹೃದಯವು ವ್ಯಕ್ತವಾಯಿತು ಎಂದು ಜಗದ್ಗುರುಗಳು ಹೇಳಿದರು.
ಪ್ರಾರ್ಥನೆಯೇ ಎಲ್ಲದರ ಅಡಿಪಾಯ
ನಂತರ ಈ ಸ್ಥಳವು ಕ್ರೈಸ್ತ ಜೀವನ ಮತ್ತು ಕನ್ಯಾ ಮರಿಯಮ್ಮನವರ ಭಕ್ತಿಯ ವಿಶ್ವಪ್ರಸಿದ್ಧ ಕೇಂದ್ರವಾಯಿತು ಎಂದು ಜಗದ್ಗುರುಗಳು ನೆನಪಿಸಿದರು.
“ಎಲ್ಲದರ ಅಡಿಪಾಯ ಪ್ರಾರ್ಥನೆ, ವಿಶೇಷವಾಗಿ ಪವಿತ್ರ ಜಪಸರ,” ಎಂದು ಜಗದ್ಗುರುಗಳು ಹೇಳಿದರು. ಇದೇ “ಎಲ್ಲವನ್ನೂ ಸಾಧ್ಯವಾಗಿಸುವ ಅಡಗಿದ ಶಕ್ತಿ” ಎಂದು ಅವರು ವಿವರಿಸಿದರು.
“ಈ ಪುರಾತನ ಮತ್ತು ಸುಂದರ ಭಕ್ತಿಯನ್ನು ಜೀವಂತವಾಗಿಡಿ ಮತ್ತು ಹರಡಿರಿ” ಎಂದು ಜಗದ್ಗುರುಗಳು ಮನವಿ ಮಾಡಿದರು. “ಮರಿಯಮ್ಮನವರ ಸರಳ ಮತ್ತು ತಾಯಿಯ ಕಣ್ಣುಗಳ ಮೂಲಕ ಯೇಸುವಿನ ಜೀವನದ ರಹಸ್ಯಗಳನ್ನು ಧ್ಯಾನಿಸುವಾಗ, ಅವರು ಸಾಧಿಸಿದ ಕಾರ್ಯವು ಹೃದಯಗಳನ್ನು ತಟ್ಟುತ್ತದೆ ಮತ್ತು ಜೀವನಗಳನ್ನು ಪರಿವರ್ತಿಸುತ್ತದೆ” ಎಂದರು.
ಯೇಸುವಿನ ಮೇಲೆ ಭರವಸೆ ಇಡಿ
ಜಗದ್ಗುರುಗಳು ಮಕ್ಕಳಿಗೆ, ಯುವಕರಿಗೆ ಮತ್ತು ವಯಸ್ಕರಿಗೆ ಪ್ರೋತ್ಸಾಹದ ಮಾತುಗಳನ್ನು ಹೇಳಿದರು. “ನಿಮ್ಮ ಬೆಳವಣಿಗೆಯನ್ನು ಪ್ರೀತಿಯಿಂದ ಕಾಳಜಿ ವಹಿಸುವವರ ಮೇಲೆ ವಿಶ್ವಾಸವಿಡಿ,” ಎಂದು ಹೇಳಿದ ಅವರು, “ಆದರೆ ನಿಮ್ಮ ಜೀವನದ ಎಲ್ಲಾ ದಿನಗಳಲ್ಲೂ ಶಿಲುಬೆಗೆ ಹಾಕಲ್ಪಟ್ಟು ಪುನರುತ್ಥಾನಗೊಂಡ ದೇವರ ಪುತ್ರನಾದ ಯೇಸುವಿನ ಮೇಲೆ ನಿಮ್ಮ ಭರವಸೆಯನ್ನು ಇಡಿ” ಎಂದು ಮನವಿ ಮಾಡಿದರು.
“ಯೇಸು ಎಂದಿಗೂ ನಮ್ಮನ್ನು ಬಿಟ್ಟುಹೋಗದ ಮತ್ತು ತಳ್ಳಿಹಾಕದ ಸ್ನೇಹಿತನು, ನಮ್ಮನ್ನು ಅರ್ಥಮಾಡಿಕೊಳ್ಳುವ ಮತ್ತು ಸದಾ ನಮ್ಮೊಂದಿಗೆ ನಡೆಯುವ ಸಹೋದರನು” ಎಂದು ಅವರು ಹೇಳಿದರು.
“ಮರಿಯಮ್ಮನವರ ಕೈಗಳ ಮೂಲಕ ಸಮಸ್ತ ಮಾನವಕುಲವನ್ನು ಯೇಸುವಿನ ಆರೈಕೆಗೆ ಒಪ್ಪಿಸುತ್ತಾ, ನಾವು ಅವರನ್ನೇ ಬಿಗಿಯಾಗಿ ಹಿಡಿದುಕೊಳ್ಳೋಣ,” ಎಂದು ಜಗದ್ಗುರುಗಳು ಹೇಳಿದರು. “ಅವರ ಅನುಗ್ರಹದ ಸಹಾಯದಿಂದ, ಒಳ್ಳೆಯದನ್ನು ಮಾಡಲು ಯಾವುದೂ ನಮ್ಮನ್ನು ತಡೆಯಲಾರದು, ಮತ್ತು ಇಲ್ಲಿ ಹಾಗೂ ಎಲ್ಲೆಡೆ ಶಾಂತಿಯ ಭವಿಷ್ಯದ ನಿರೀಕ್ಷೆ ನೆರವೇರುವುದು” ಎಂದರು.
ದಾನಧರ್ಮ ಕಾರ್ಯಕರ್ತರಿಗೆ ತಮ್ಮ ಪ್ರಾರ್ಥನೆಗಳ ಭರವಸೆ ನೀಡಿದ ಜಗದ್ಗುರುಗಳು , ಆಶೀರ್ವಾದ ನೀಡಿ ಹೀಗೆ ಪ್ರಾರ್ಥಿಸಿದರು: “ಪೊಂಪೇಯಿಯ ಪವಿತ್ರ ಜಪಮಾಲೆ ರಾಣಿ, ನಮಗಾಗಿ ಪ್ರಾರ್ಥಿಸಿರಿ! ಸಂತ ಬಾರ್ತೊಲೊರವರೇ, ನಮಗಾಗಿ ಪ್ರಾರ್ಥಿಸಿರಿ!”ಎಂದರು.
