ಹುಡುಕಿ

Il Papa recita la supplica di Pompei, 'piet� per le nazioni traviate'

ಜಗದ್ಗುರು XIVನೇ ಲಿಯೋರವರು ಪೊಂಪೇಯಿಯಲ್ಲಿ: ಸಹೋದರರ ನಡುವಿನ ದ್ವೇಷವನ್ನು ದೇವರು ಶಮನಗೊಳಿಸಲಿ ಮತ್ತು ವಿಶ್ವ ನಾಯಕರಿಗೆ ಜ್ಞಾನಪ್ರಕಾಶ ನೀಡಲಿ ಎಂದು ಪ್ರಾರ್ಥಿಸಿದರು.

ಇಟಲಿಯ ಪೊಂಪೇಯಿ ನಗರದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸುತ್ತಿದ್ದ ವೇಳೆ, ಜಗದ್ಗುರು XIVನೇ ಲಿಯೋರವರು ಅನೇಕ ರಾಷ್ಟ್ರಗಳನ್ನು ಕಾಡುತ್ತಿರುವ ಯುದ್ಧಗಳನ್ನು ಸ್ಮರಿಸಿ, ದೇವರ ಅಪಾರ ಕರುಣೆಯು ನಮ್ಮ ಹೃದಯಗಳನ್ನೂ ಮತ್ತು ಜಗತ್ತನ್ನೂ ಶಾಂತಿಯಿಂದ ತುಂಬಿಸಲಿ ಎಂದು ಪ್ರಾರ್ಥಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ತಮ್ಮ ಜಗದ್ಗುರು ಸೇವೆಯ ಮೊದಲ ವಾರ್ಷಿಕೋತ್ಸವವನ್ನು ಮೇ 8 ಶುಕ್ರವಾರ ದಕ್ಷಿಣ ಇಟಲಿಯ ಪೊಂಪೇಯಿ ಮತ್ತು ನೇಪಲ್ಸ್ ನಗರಗಳಿಗೆ ಭೇಟಿ ನೀಡುವ ಮೂಲಕ ಆಚರಿಸಿದರು.

ಜಗದ್ಗುರುಗಳು , ಜಪಮಾಲೆ ಮಾತೆಯ ಪುಣ್ಯಕ್ಷೇತ್ರದ ಮುಂಭಾಗದ ಚೌಕದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ತಮ್ಮ ಪ್ರಭೋಧನೆಯಲ್ಲಿ, “ನಾನು ಪೊಂಪೇಯಿಯ ಜಪಮಾಲೆ ಮಾತೆಯ ಹಬ್ಬದ ದಿನವೇ ಜಗದ್ಗುರುಗಳಾಗಿ ಆಯ್ಕೆಯಾದೆ. ಆದ್ದರಿಂದ ನನ್ನ ಸೇವೆಯನ್ನು ಕನ್ಯಾ ಮರಿಯಮ್ಮನವರ ರಕ್ಷಣೆಗೆ ಒಪ್ಪಿಸಲು ಇಲ್ಲಿ ಬರಲೇಬೇಕಾಯಿತು” ಎಂದು ಹೇಳಿದರು. ಜೊತೆಗೆ, “ಲಿಯೋ” ಎಂಬ ಹೆಸರನ್ನು ಆರಿಸಿಕೊಂಡಿರುವುದರಿಂದ, ಪವಿತ್ರ ಜಪಮಾಲೆಯ ಕುರಿತು ವಿಶಾಲವಾದ ಬೋಧನೆಯನ್ನು ಅಭಿವೃದ್ಧಿಪಡಿಸಿದ XIIIನೇ ಲಿಯೋರವರ ಹೆಜ್ಜೆಗುರುತುಗಳನ್ನು ಅನುಸರಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಜಗದ್ಗುರು ಲಿಯೋರವರು, ಸಂತ ಬಾರ್ತೊಲೊ ಲೊಂಗೊ ಮತ್ತು ಅವರ ಪತ್ನಿ ಕೌಂಟೆಸ್ ಮರಿಯಾನ್ನಾ ಫಾರ್ನಾರೊ ಡೆ ಫುಸ್ಕೊ ರವರ ಪರಂಪರೆಯನ್ನು ಸ್ಮರಿಸಿದರು. ಕ್ರಿ.ಶ. 79ರಲ್ಲಿ ಜ್ವಾಲಾಮುಖಿ ಸ್ಫೋಟದಿಂದ ಮಹಾನ್ ನಾಗರಿಕತೆಯೊಂದು ಹೂಣಾಗಿದ್ದ ವೆಸುವಿಯಸ್ ಪರ್ವತದ ಪ್ರದೇಶದಲ್ಲಿ, ಇವರಿಬ್ಬರೂ ಸೇರಿ ಈ ಪುಣ್ಯಕ್ಷೇತ್ರದ ಅಡಿಪಾಯವನ್ನು ಹಾಕಿದ್ದರು ಎಂದು ಅವರು ಹೇಳಿದರು.

2003ರಲ್ಲಿ ಜಪಸರ ವರ್ಷದ ಅಂತ್ಯದಲ್ಲಿ ಇದೇ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರ ಮಾತುಗಳನ್ನು ಜಗದ್ಗುರುಗಳು ನೆನಪಿಸಿಕೊಂಡರು. “ಪ್ರಾಚೀನ ಪೊಂಪೇಯಿಯ ಕಾಲದಂತೆ ಇಂದಿಗೂ, ಕ್ರೈಸ್ತ ಮೌಲ್ಯಗಳಿಂದ ದೂರವಾಗುತ್ತಿರುವ ಮತ್ತು ಅವುಗಳ ನೆನಪನ್ನೇ ಕಳೆದುಕೊಳ್ಳುತ್ತಿರುವ ಸಮಾಜಕ್ಕೆ ಕ್ರಿಸ್ತನನ್ನು ಘೋಷಿಸುವ ಅಗತ್ಯವಿದೆ” ಎಂದು ಅವರು ಹೇಳಿದರು.

ದೇವದೂತ ಗಬ್ರಿಯೇಲ್ ಮರಿಯಮ್ಮನವರಿಗೆ ನೀಡಿದ ಶುಭಸಂದೇಶದ ರಹಸ್ಯದ ಕುರಿತು ಚಿಂತನೆ ನಡೆಸಿದ ಜಗದ್ಗುರುಗಳು , “ನಮಸ್ಕಾರ ಮರಿಯೆ” ಎಂಬ ಪ್ರಾರ್ಥನೆ ಸಂತೋಷಕ್ಕೆ ಆಹ್ವಾನವಾಗಿದೆ ಎಂದರು. ಯಾಕೆಂದರೆ ಯೇಸುವಿನ ಮೂಲಕ ದೇವರ ಕರುಣೆಯ ಸ್ಪರ್ಶವು ಪಾಪದಿಂದ ಗಾಯಗೊಂಡಿರುವ ಲೋಕಕ್ಕೆ ಬಂದಿದೆ ಎಂದು ದೇವದೂತನ ಮಾತುಗಳು ಸಾರುತ್ತವೆ ಎಂದು ಹೇಳಿದರು.

ಕನ್ಯಾ ಮರಿಯಮ್ಮನವರ “ಇಗೋ ನಾನು ಇದ್ದೇನೆ” ಎಂಬ ಪ್ರತಿಕ್ರಿಯೆಯ ಮೂಲಕ ಯೇಸುವಿಗೂ ಧರ್ಮ ಸಭೆಗೂ ಜನ್ಮವಾಯಿತು ಎಂದು ಜಗದ್ಗುರುಗಳು ಹೇಳಿದರು. ಜಪಸರ ಪ್ರಾರ್ಥನೆ ರಕ್ಷಣೆಯ ಇತಿಹಾಸದಲ್ಲಿ ಆಳವಾಗಿ ಬೇರುಬಿಟ್ಟಿದೆ ಮತ್ತು ಅದು ಹೃದಯವನ್ನು ದೇವರ ಧ್ಯಾನದ ಎತ್ತರಕ್ಕೆ ಎತ್ತುತ್ತದೆ ಎಂದರು.

ಜಪಸರ ಪ್ರಾರ್ಥನೆ ದೇವರ ಮೇಲಿನ ನಮ್ಮ ಪ್ರೀತಿಯನ್ನು ನವೀಕರಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು. ಮರಿಯಮ್ಮನವರ ಮೇಲಿನ ಪ್ರೀತಿಯ ಪ್ರತಿಯೊಂದು ಕೃತ್ಯವೂ ನಮ್ಮನ್ನು ಮತ್ತೆ ಯೇಸುವಿನತ್ತ ಕರೆದೊಯ್ಯುತ್ತದೆ ಮತ್ತು ಕ್ರೈಸ್ತ ಜೀವನದ ಮೂಲ ಹಾಗೂ ಶಿಖರವಾದ ಪವಿತ್ರ ಯೂಕರಿಸ್ಟ್ ಕಡೆಗೆ ನಡೆಸುತ್ತದೆ ಎಂದು ವಿವರಿಸಿದರು. “ಜಪಸರವು ಮರಿಯಮ್ಮನವರ ರೂಪವನ್ನು ಹೊಂದಿದ್ದರೂ, ಅದರ ಹೃದಯ ಕ್ರಿಸ್ತಕೇಂದ್ರಿತ ಮತ್ತು ಯೂಕರಿಸ್ಟಿಕ್ ಆಗಿದೆ” ಎಂದು ಅವರು ಹೇಳಿದರು.

ಮುಂದೆ ಮಾತನಾಡಿದ ಜಗದ್ಗುರುಗಳು, ಜಪಸರ ಪ್ರಾರ್ಥನೆ ಜಗತ್ತಿನ ಅಗತ್ಯಗಳತ್ತ ನಮ್ಮ ಹೃದಯವನ್ನು ತಿರುಗಿಸುತ್ತದೆ ಎಂದರು. ವಿಶೇಷವಾಗಿ ಕುಟುಂಬದ ಮಹತ್ವ ಮತ್ತು ಶಾಂತಿಯ ಅಗತ್ಯವನ್ನು ಅವರು ಉಲ್ಲೇಖಿಸಿದರು. ಜಗತ್ತಿನಲ್ಲಿ ಇನ್ನೂ ನಡೆಯುತ್ತಿರುವ ಅನೇಕ ಯುದ್ಧಗಳನ್ನು ಸ್ಮರಿಸಿ, ರಾಜಕೀಯ, ಆರ್ಥಿಕ, ಆತ್ಮಿಕ ಮತ್ತು ಧಾರ್ಮಿಕ ಬದ್ಧತೆಯ ನವೀಕರಣ ಅಗತ್ಯವಿದೆ ಎಂದು ಹೇಳಿದರು.

“ಶಾಂತಿ ಮಾನವನ ಹೃದಯದಲ್ಲೇ ಹುಟ್ಟುತ್ತದೆ,” ಎಂದು ಜಗದ್ಗುರುಗಳು ಹೇಳಿದರು. “ಪ್ರತಿದಿನ ಸುದ್ದಿಗಳಲ್ಲಿ ಕಾಣುವ ಮರಣದ ದೃಶ್ಯಗಳಿಗೆ ನಾವು ಒಗ್ಗಿಕೊಂಡುಬಿಡಬಾರದು” ಎಂದು ಅವರು ಎಚ್ಚರಿಸಿದರು.

ಜಗತ್ತನ್ನು ದೇವರ ಪ್ರೀತಿಯ ಶಕ್ತಿಯು ರಕ್ಷಿಸಲಿ ಎಂಬ ಉದ್ದೇಶದಿಂದ ಎಲ್ಲರೂ ಶಾಂತಿಗಾಗಿ ಜಪಸರ ಪ್ರಾರ್ಥನೆ ಮಾಡಬೇಕೆಂದು ಜಗದ್ಗುರುಗಳು ಆಹ್ವಾನಿಸಿದರು. “ಮರಿಯಮ್ಮನ ಮಧ್ಯಸ್ಥಿಕೆಯ ಮೂಲಕ, ಶಾಂತಿಯ ದೇವರಿಂದ ಅಪಾರ ಕರುಣೆಯ ಸುರಿಮಳೆ ಹರಿದುಬಂದು, ಮಾನವರ ಹೃದಯಗಳನ್ನು ಸ್ಪರ್ಶಿಸಲಿ, ದ್ವೇಷ ಮತ್ತು ಸಹೋದರರ ನಡುವಿನ ವೈರವನ್ನು ಶಮನಗೊಳಿಸಲಿ, ಹಾಗೂ ಆಡಳಿತದ ಜವಾಬ್ದಾರಿ ಹೊತ್ತಿರುವ ವಿಶ್ವ ನಾಯಕರಿಗೆ ಜ್ಞಾನಪ್ರಕಾಶ ನೀಡಲಿ” ಎಂದು ಅವರು ಪ್ರಾರ್ಥಿಸಿದರು.

08 ಮೇ 2026, 16:36