ಹುಡುಕಿ

Il Papa da Napoli, non c'� pace senza giustizia

ಜಗದ್ಗುರು XIVನೇ ಲಿಯೋರವರು ನೇಪಲ್ಸ್ ಭೇಟಿಯ ಅಂತ್ಯದಲ್ಲಿ, ಆ ನಗರವು “ಶಾಂತಿಯ ಕಾರ್ಯಾಗಾರ”ವಾಗಬೇಕೆಂದು ಕರೆ ನೀಡಿದರು.

ತಮ್ಮ ಅಧಿಕಾರಾವಧಿಯ ಸೇವೆಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪೊಂಪೇಯಿ ಮತ್ತು ನೇಪಲ್ಸ್‌ಗೆ ನಡೆಸಿದ ಧರ್ಮಾಧ್ಯಕ್ಷೀಯ ಭೇಟಿಯ ಸಮಾಪ್ತಿಯಲ್ಲಿ, ಜಗದ್ಗುರು XIVನೇ ಲಿಯೋರವರು ನ್ಯಾಯ, ಐಕ್ಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯಲ್ಲಿ ಬೇರುಬಿಟ್ಟಿರುವ ಶಾಂತಿಯತ್ತ ನವೀಕೃತ ಬದ್ಧತೆಯನ್ನು ತೋರಿಸುವಂತೆ ಕರೆ ನೀಡಿದರು.

ವ್ಯಾಟಿಕನ್ ವರದಿ

ತಮ್ಮ ಅಧಿಕಾರ ಸೇವೆಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪೊಂಪೇಯಿ ಮತ್ತು ಸಮೀಪದ ನೇಪಲ್ಸ್ ನಗರಗಳಿಗೆ ನಡೆಸಿದ ದೀರ್ಘ ಧರ್ಮಾಧ್ಯಕ್ಷೀಯ ಭೇಟಿಯ ಅಂತ್ಯದಲ್ಲಿ, ಜಗದ್ಗುರು ಲಿಯೋರವರು ನೇಪಲ್ಸ್ ನಗರದ ಹೃದಯಭಾಗದಲ್ಲಿರುವ ಭವ್ಯವಾದ ಪಿಯಾಝಾ ಡೆಲ್ ಪ್ಲೆಬಿಸ್ಸಿಟೊ ಚೌಕದಲ್ಲಿ ಸೇರಿದ್ದ ಸುಮಾರು 50,000 ನಾಗರಿಕರನ್ನು ಭೇಟಿಯಾಗಿ ಅಭಿನಂದಿಸಿದರು.

ಸಾಂತಾ ಮರಿಯಾ ಅಸ್ಸುಂತಾ ಮಹಾಗಿರ್ಜೆಯಿಂದ ಐತಿಹಾಸಿಕ ಚೌಕಕ್ಕೆ ಆಗಮಿಸಿದ ಜಗದ್ಗುರುಗಳು, ನಾಗರಿಕ ಅಧಿಕಾರಿಗಳು, ನಗರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಡೊಮೆನಿಕೊ ಬಟಾಗ್ಲಿಯಾ ಹಾಗೂ ವಿಶ್ವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಅವರು ಸಾಮಾಜಿಕ ನವೀಕರಣ, ಐಕ್ಯತೆ ಮತ್ತು ನ್ಯಾಯದಲ್ಲಿ ಬೇರುಬಿಟ್ಟಿರುವ, ದೈನಂದಿನ ಜೀವನದಲ್ಲಿ ಅನುಭವಿಸಲ್ಪಡುವ ಶಾಂತಿಯತ್ತ ಹೊಸ ಬದ್ಧತೆಯನ್ನು ಕರೆ ನೀಡಿದರು.

ಅವರಿಗೆ ದೊರೆತ ಆತ್ಮೀಯ ಸ್ವಾಗತಕ್ಕಾಗಿ ಕೃತಜ್ಞತೆ ಸಲ್ಲಿಸಿದ ಜಗದ್ಗುರುಗಳು, ಅದನ್ನು ವ್ಯಾಟಿಕನ್‌ನ ಸಂತ ಪೇತ್ರರ ಚೌಕದಲ್ಲಿರುವ ಬೆರ್ನಿನಿಯ ತೂಣಮಂಟಪದ “ಅಪ್ಪುಗೆಯ” ಜೊತೆ ಹೋಲಿಸಿದರು. ನಂತರ ಅವರು ನಗರದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯತ್ತ ಗಮನ ಹರಿಸಿದರು.

ಎಮ್ಮಾವಿನ ಶಿಷ್ಯರ ಸುವಾರ್ತೆ ಘಟನೆಯನ್ನು ಉಲ್ಲೇಖಿಸಿದ ಜಗದ್ಗುರುಗಳು, ನೇಪಲ್ಸ್ ನಗರವನ್ನು ಅಪಾರ ಸೌಂದರ್ಯ ಮತ್ತು ಆಳವಾದ ಗಾಯಗಳಿಂದ ಗುರುತಿಸಲ್ಪಟ್ಟ ನಗರವೆಂದು ವಿವರಿಸಿದರು. ಈ ನಗರದಿಂದ ಕೇಳಿಬರುವ ಧ್ವನಿಗಳಲ್ಲಿ ಸೌಂದರ್ಯದ ಜೊತೆಗೆ ಬಡತನ, ಭಯ ಮತ್ತು ಗೊಂದಲದ ಧ್ವನಿಗಳೂ ಸೇರಿವೆ ಎಂದು ಅವರು ಹೇಳಿದರು. ಕ್ರಿಸ್ತನನ್ನು ದಾರಿಯಲ್ಲಿ ಭೇಟಿಯಾದ ದಣಿದ ಮತ್ತು ನಿರಾಶರಾದ ಎಮ್ಮಾವಿನ ಶಿಷ್ಯರಂತೆ ಈ ನಗರದ ಜನರೂ ಬದುಕಿನ ಅರ್ಥವನ್ನು ಹುಡುಕುತ್ತಿದ್ದಾರೆ ಎಂದು ಅವರು ಸೂಚಿಸಿದರು.

“ನಿಜವಾಗಿ ಮಹತ್ವವುಳ್ಳದ್ದು ಏನು?” ಎಂದು ಪ್ರಶ್ನಿಸಿದ ಜಗದ್ಗುರುಗಳು, ದಣಿವು, ನಿರಾಸಕ್ತಿ ಮತ್ತು ಸಾಮಾಜಿಕ ವಿಭಜನೆಗಳಿಂದ ಕುಗ್ಗುತ್ತಿರುವ ಪರಿಸ್ಥಿತಿಯಲ್ಲಿ ಜೀವನದ ಅರ್ಥವನ್ನು ಮರುಹುಡುಕುವಂತೆ ಜನರನ್ನು ಆಹ್ವಾನಿಸಿದರು. ಪ್ರವಾಸೋದ್ಯಮವು ಬೆಳೆಯುತ್ತಿದ್ದರೂ ಅದರ ಫಲ ಎಲ್ಲರಿಗೂ ತಲುಪುತ್ತಿಲ್ಲ, ನಿರುದ್ಯೋಗ, ಶಾಲೆ ಬಿಟ್ಟು ಹೋಗುವ ಮಕ್ಕಳ ಸಂಖ್ಯೆ, ಮೂಲಭೂತ ಸೇವೆಗಳ ಕೊರತೆ ಮತ್ತು ಸಂಘಟಿತ ಅಪರಾಧಗಳ ಪ್ರಭಾವವು ಅಸಮಾನತೆಯ ಭೌಗೋಳಿಕತೆಯನ್ನು ರೂಪಿಸಿದೆ ಎಂದು ಅವರು ಎಚ್ಚರಿಸಿದರು. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಂಸ್ಥೆಗಳ ಸಾನ್ನಿಧ್ಯವು ವಿಶ್ವಾಸ, ಭದ್ರತೆ ಮತ್ತು ಅವಕಾಶಗಳನ್ನು ಮರುಸ್ಥಾಪಿಸಲು ಅತ್ಯವಶ್ಯಕವೆಂದು ಹೇಳಿದರು.

ಇದೇ ವೇಳೆ, ನ್ಯಾಯ, ಸತ್ಯ ಮತ್ತು ಮಾನವ ಗೌರವಕ್ಕಾಗಿ ಮೌನವಾಗಿ ಸೇವೆ ಸಲ್ಲಿಸುತ್ತಿರುವ ನೇಪಲ್ಸ್‌ನ “ದೈನಂದಿನ ವೀರರನ್ನು” ಜಗದ್ಗುರುಗಳು ಪ್ರಶಂಸಿಸಿದರು. ಅವರ ಸೇವೆಗಳು ಪ್ರತ್ಯೇಕವಾಗಿರದೆ, ಸಮಗ್ರ ಸಮಾಜವನ್ನು ಬಲಪಡಿಸುವ “ಒಳ್ಳೆಯತನದ ಜಾಲ”ವಾಗಿ ಒಂದಾಗಬೇಕು ಎಂದು ಹೇಳಿದರು. ಸಭೆಯು ನಗರದಲ್ಲಿ ಐಕ್ಯತೆಯ ಬಾಂಧವ್ಯವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ ಅವರು, ನಾಗರಿಕ ಸಂಸ್ಥೆಗಳು, ಸಭೆ ಮತ್ತು ಸಮಾಜದ ಸಹಕಾರದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.

ತಮ್ಮ ಸಂದೇಶದ ಪ್ರಮುಖ ವಿಷಯವಾಗಿ ಜಗದ್ಗುರುಗಳು ಶಾಂತಿಯನ್ನು ಪ್ರಸ್ತಾಪಿಸಿದರು. ನೇಪಲ್ಸ್ ಕೇವಲ “ಚಿತ್ರಪಟದ ನಗರ”ವಾಗಿರದೆ, “ಶಾಂತಿಯ ಕಾರ್ಯಾಗಾರ”ವಾಗಬೇಕು ಎಂದು ಅವರು ಹೇಳಿದರು. ದೈನಂದಿನ ಸಂಬಂಧಗಳಲ್ಲಿ, ಪ್ರದೇಶಗಳಲ್ಲಿ, ನ್ಯಾಯ ಮತ್ತು ಶಿಕ್ಷಣದ ಕಾರ್ಯಗಳಲ್ಲಿ ಶಾಂತಿ ನಿರ್ಮಾಣವಾಗಬೇಕು ಎಂದರು. “ನ್ಯಾಯವಿಲ್ಲದೆ ಶಾಂತಿ ಇಲ್ಲ, ದಯೆಯಿಲ್ಲದೆ ನ್ಯಾಯ ಸಂಪೂರ್ಣವಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಶ್ರಯ ನೀಡುವ ಮನೆಗಳು ಮತ್ತು ಅಗತ್ಯವಿರುವವರಿಗೆ ನೆರವು ನೀಡುವ ಕೇಂದ್ರಗಳಂತಹ ಆಶಾದಾಯಕ ಕಾರ್ಯಗಳನ್ನು ಅವರು ಶ್ಲಾಘಿಸಿದರು. ಇವು ಶಾಂತಿಯ ಜೀವಂತ ಚಿಹ್ನೆಗಳಾಗಿದ್ದು, ಆತಿಥ್ಯ, ಕಾಳಜಿ ಮತ್ತು ಹೊಸ ಆರಂಭದ ಸಂಕೇತಗಳೆಂದು ಹೇಳಿದರು. ಸಂಸ್ಕೃತಿಗಳ ಮತ್ತು ಧರ್ಮಗಳ ನಡುವಿನ ಸಂವಾದಕ್ಕಾಗಿ ನೇಪಲ್ಸ್ ನಗರ ಕೈಗೊಂಡಿರುವ ಪ್ರಯತ್ನಗಳನ್ನು, ವಿಶೇಷವಾಗಿ ಯುದ್ಧಪೀಡಿತ ಪ್ರದೇಶಗಳ ಯುವಕರನ್ನು ಒಳಗೊಂಡ ಕಾರ್ಯಕ್ರಮಗಳನ್ನು ಅವರು ಮೆಚ್ಚಿದರು.

ವಲಸಿಗರು ಮತ್ತು ಶರಣಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ನಗರದ ಪರಂಪರೆಯನ್ನು ಸ್ಮರಿಸಿದ ಜಗದ್ಗುರುಗಳು, ಇದನ್ನು ಕೇವಲ ತುರ್ತು ಪರಿಸ್ಥಿತಿಯ ಪ್ರತಿಕ್ರಿಯೆಯಾಗಿ ಅಲ್ಲ, ಪರಸ್ಪರ ಭೇಟಿಯಾಗುವ ಮತ್ತು ಶ್ರೀಮಂತಗೊಳ್ಳುವ ಅವಕಾಶವಾಗಿ ನೋಡಬೇಕು ಎಂದು ಹೇಳಿದರು. ಯುವಜನರು ಕೇವಲ ಸಹಾಯ ಪಡೆಯುವವರು ಅಲ್ಲ, ನವೀಕರಣದ ಪ್ರಮುಖ ಪಾತ್ರಧಾರಿಗಳು ಎಂದು ಅವರು ಒತ್ತಿಹೇಳಿದರು. ಸಾಂಸ್ಕೃತಿಕ ಯೋಜನೆಗಳು, ಧರ್ಮ ಕೇಂದ್ರದ ಚಟುವಟಿಕೆಗಳು ಮತ್ತು ದಾನಧರ್ಮದ ಸೇವೆಗಳ ಮೂಲಕ ಯುವಕರು “ಹೊಸ ನಗರ ಮತ್ತು ಹೊಸ ಸಭೆಯ” ಸಂಕೇತಗಳನ್ನು ರೂಪಿಸುತ್ತಿದ್ದಾರೆ ಎಂದು ಹೇಳಿದರು.

ತಮ್ಮ ಭೇಟಿಯ ಅಂತ್ಯದಲ್ಲಿ, ಜಗದ್ಗುರುಗಳು ನೇಪಲ್ಸ್ ನಗರದ ಜನರನ್ನು ಪವಿತ್ರ ಕನ್ಯಾ ಮರಿಯಮ್ಮನವರ ಮಧ್ಯಸ್ಥಿಕೆಗೆ ಮತ್ತು ತಮ್ಮ ಪ್ರೀತಿಪಾತ್ರ ರಕ್ಷಕ ಸಂತ  ಜನುಯೇರಿಯಸ್ ರವರ ಆಶ್ರಯಕ್ಕೆ ಒಪ್ಪಿಸಿದರು. ಧೈರ್ಯ ಮತ್ತು ಭರವಸೆಯೊಂದಿಗೆ ಒಟ್ಟಾಗಿ ಮುಂದುವರಿಯುವಂತೆ ಅವರು ಎಲ್ಲರನ್ನು ಪ್ರೋತ್ಸಾಹಿಸಿದರು.

08 ಮೇ 2026, 19:30