ಜಗದ್ಗುರು XIVನೇ ಲಿಯೋರವರು: ಕ್ರೈಸ್ತರು ಮತ್ತು ಮುಸ್ಲಿಮರು ಮಾನವತೆಯನ್ನು ಪುನರುಜ್ಜೀವನಗೊಳಿಸಲು ಒಟ್ಟಾಗಿ ಕಾರ್ಯನಿರ್ವಹಿಸಬೇಕು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಸೋಮವಾರ ಬೆಳಿಗ್ಗೆ ಜೋರ್ಡನ್‌ನ ರಾಯಲ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್-ಫೇತ್ ಸ್ಟಡೀಸ್ ಹಾಗೂ ಜಗದ್ಗುರು XIVನೇ ಲಿಯೋ ರವರು ಅಂತರಧರ್ಮೀಯ ಸಂವಾದ ವಿಭಾಗದ ಸದಸ್ಯರನ್ನು ಭೇಟಿಯಾದರು. ಜೋರ್ಡನ್‌ನ ರಾಜಕುಮಾರ ಹಸನ್ ಬಿನ್ ತಲಾಲ್ ರವರ ಆಶ್ರಯದಲ್ಲಿ ಸ್ಥಾಪಿತವಾದ ಈ ಸಂಸ್ಥೆಯ ಸದಸ್ಯರು ಆಧುನಿಕ ಕಾಲದಲ್ಲಿ ಮಾನವೀಯ ಕರುಣೆ ಮತ್ತು ಸಹಾನುಭೂತಿ ಎಂಬ ವಿಷಯದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ರೋಮಿಗೆ ಆಗಮಿಸಿದ್ದರು.
ತಮ್ಮ ಭಾಷಣದಲ್ಲಿ ಜಗದ್ಗುರುಗಳು, ಕರುಣೆ ಮತ್ತು ಸಹಾನುಭೂತಿ ಕ್ರೈಸ್ತ ಧರ್ಮ ಹಾಗೂ ಇಸ್ಲಾಂ ಧರ್ಮ ಎರಡರಲ್ಲಿಯೂ ಅತ್ಯಂತ ಅಗತ್ಯವಾದ ಮೌಲ್ಯಗಳೆಂದು ಹೇಳಿದರು. ಮುಸ್ಲಿಂ ಪರಂಪರೆಯಲ್ಲಿ ಕರುಣೆ ದೇವರಿಂದ ವಿಶ್ವಾಸಿಗಳ ಹೃದಯಗಳಲ್ಲಿ ನೀಡಲ್ಪಡುವ ದೈವಿಕ ವರವಾಗಿದೆ ಎಂದು ಅವರು ವಿವರಿಸಿದರು. ಅದೇ ರೀತಿ, ಕ್ರೈಸ್ತ ಪರಂಪರೆಯಲ್ಲಿ ದೇವರ ಕರುಣೆ ಯೇಸು ಕ್ರಿಸ್ತನ ವ್ಯಕ್ತಿತ್ವದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರು. ಮಾನವನ ದುಃಖವನ್ನು ಕೇವಲ ನೋಡುವುದಲ್ಲ, ದೇವರು ಮಾನವ ರೂಪ ತಾಳಿ ಅದನ್ನು ಸ್ವತಃ ಅನುಭವಿಸಿದನು ಎಂದು ಅವರು ಹೇಳಿದರು.
ಜಗದ್ಗುರು ಲಿಯೋರವರು, ಕರುಣೆ ಮತ್ತು ಸಹಾನುಭೂತಿ ಕ್ರೈಸ್ತರು ಮತ್ತು ಮುಸ್ಲಿಮರಿಗೆ ಆಯ್ಕೆಯ ವಿಷಯವಲ್ಲ, ಅದು ಅವರ ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದರು. ಈ ಮೌಲ್ಯಗಳು ಸಮಾಜದ ಮೇಲೂ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು. ವಿಶೇಷವಾಗಿ ಬಡವರ ಮೇಲಿನ ಪ್ರೀತಿ ಮತ್ತು ಅವರ ನೋವಿನಲ್ಲಿ ಪಾಲುಗೊಳ್ಳುವುದು ಕ್ರೈಸ್ತ ಜೀವನದ ಮೂಲಭೂತ ಅಂಶವಾಗಿದೆ ಎಂದು ಅವರು ಒತ್ತಿಹೇಳಿದರು. ಇದೇ ಸಂದರ್ಭದಲ್ಲಿ ಶರಣಾರ್ಥಿಗಳನ್ನು ಸ್ವಾಗತಿಸಲು ಜೋರ್ಡನ್ ದೇಶ ಮಾಡುತ್ತಿರುವ ಉದಾರ ಪ್ರಯತ್ನಗಳನ್ನು ಅವರು ಪ್ರಶಂಸಿಸಿದರು.
ತಮ್ಮ ಭಾಷಣದ ಮತ್ತೊಂದು ಭಾಗದಲ್ಲಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಕರುಣೆ ಮತ್ತು ಸಹಾನುಭೂತಿಯ ಮೇಲೆ ಅದರ ಪರಿಣಾಮದ ಕುರಿತು ಜಗದ್ಗುರುಗಳು ಚಿಂತನೆ ನಡೆಸಿದರು. “ನಾವು ಹಿಂದೆಂದಿಗಿಂತ ಹೆಚ್ಚು ಸಂಪರ್ಕ ಹೊಂದಿದ್ದರೂ, ಇತರರ ನೋವು ಮತ್ತು ಸಂಕಷ್ಟಗಳ ಚಿತ್ರಗಳು ಹಾಗೂ ವೀಡಿಯೊಗಳ ನಿರಂತರ ಪ್ರವಾಹವು ನಮ್ಮ ಹೃದಯಗಳನ್ನು ಸ್ಪಂದಿಸುವ ಬದಲು ಕಠಿಣಗೊಳಿಸಬಹುದು” ಎಂದು ಅವರು ಎಚ್ಚರಿಸಿದರು.
ಜಗದ್ಗುರು ಫ್ರಾನ್ಸಿಸ್ ರವರ ಆರಂಭಿಕ ಪ್ರವಚನವನ್ನು ಉಲ್ಲೇಖಿಸಿದ ಜಗದ್ಗುರು ಲಿಯೋರವರು, “ಇತರರ ನೋವಿಗೆ ನಾವು ಅಭ್ಯಾಸಗೊಂಡಿದ್ದೇವೆ, ಅದು ನನ್ನ ವಿಷಯವಲ್ಲ, ನನಗೆ ಸಂಬಂಧಪಟ್ಟದ್ದಲ್ಲ ಎಂದು ನಾವು ಭಾವಿಸುತ್ತೇವೆ” ಎಂದು ವಿಷಾದ ವ್ಯಕ್ತಪಡಿಸಿದರು.
ಕೊನೆಯಲ್ಲಿ, ಕ್ರೈಸ್ತರು ಮತ್ತು ಮುಸ್ಲಿಮರು ತಮ್ಮ ತಮ್ಮ ಧಾರ್ಮಿಕ ಪರಂಪರೆಯ ಶ್ರೀಮಂತಿಕೆಯನ್ನು ಆಧಾರವನ್ನಾಗಿ ಮಾಡಿಕೊಂಡು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದರು. “ಶೀತಗೊಂಡಿರುವ ಮಾನವತೆಯನ್ನು ಪುನರುಜ್ಜೀವನಗೊಳಿಸಲು, ನೋವು ಅನುಭವಿಸುವವರ ಪರವಾಗಿ ಧ್ವನಿಯಾಗಲು ಹಾಗೂ ಉದಾಸೀನತೆಯನ್ನು ಐಕ್ಯತೆಯಾಗಿ ಪರಿವರ್ತಿಸಲು” ಎಲ್ಲರೂ ಸಾಮೂಹಿಕ ಮಿಷನ್‌ನಲ್ಲಿ ಕೈಜೋಡಿಸಬೇಕು ಎಂದು ಅವರು ಹೇಳಿದರು.
