ಹುಡುಕಿ

Papa Leone arrivato in Basilica, celebra la messa di Pentecoste

ಪಂಚಶತ್ತಮ ಹಬ್ಬದಂದು ಜಗದ್ಗುರುಗಳು: ಪರಾಕ್ಲೀತನು ಮನಸ್ಸುಗಳನ್ನು ಪ್ರಕಾಶಗೊಳಿಸಿ ನಮ್ಮನ್ನು ರಕ್ಷಿಸುತ್ತಾರೆ.

ಪಂಚಶತ್ತಮ ಮಹೋತ್ಸವದ ಅಂಗವಾಗಿ ನಡೆದ ಪವಿತ್ರ ಬಲಿಪೂಜೆಯ ವೇಳೆ, ಜಗದ್ಗುರು XIVನೇ ಲಿಯೋರವರು ಪವಿತ್ರಾತ್ಮನು ನಮ್ಮ ಜೀವನಗಳಲ್ಲಿ ಹೇಗೆ ಅದ್ಭುತ ಕಾರ್ಯಗಳನ್ನು ಮುಂದುವರಿಸುತ್ತಾನೆ ಎಂಬುದರ ಕುರಿತು ಮನನ ಮಾಡಿದರು. ಮನಸ್ಸುಗಳನ್ನು ಪ್ರಕಾಶಗೊಳಿಸಿ, ನಮ್ಮ ಹೃದಯಗಳಲ್ಲಿ ಹೊಸ ಚೈತನ್ಯವನ್ನು ತುಂಬುವ ಪರಾಕ್ಲೀತನು “ಇತಿಹಾಸವನ್ನೇ ರೂಪಾಂತರಗೊಳಿಸಿ, ಪ್ರಭು ಪ್ರತಿಯೊಬ್ಬರಿಗೂ ಅರ್ಪಿಸುವ ರಕ್ಷಣೆಯ ವರದತ್ತ ಅದನ್ನು ತೆರೆದಿಡುತ್ತಾರೆ” ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

ಪಂಚಶತ್ತಮ ಮಹೋತ್ಸವದಂದು ಜಗದ್ಗುರು XIVನೇ ಲಿಯೋರವರು ಸಂತ ಪೇತ್ರರ ಬಸಿಲಿಕಾದಲ್ಲಿ ಪವಿತ್ರ ಬಲಿಪೂಜೆ ನೆರವೇರಿಸಿ, ಪವಿತ್ರಾತ್ಮನ ಕಾರ್ಯಗಳ ಕುರಿತು ಆಳವಾದ ಸಂದೇಶ ನೀಡಿದರು. ಪಾಸ್ಖ ಕಾಲದ ಪರಿಪೂರ್ಣತೆಯೇ ಪಂಚಶತ್ತಮ ಎಂದು ಅವರು ವಿವರಿಸಿದರು. ಭಯದಿಂದ ಮೇಲ್ಮಹಡಿಯಲ್ಲಿ ತಮಗೇ ತಾವೇ ಬಾಗಿಲು ಹಾಕಿಕೊಂಡಿದ್ದ ಪ್ರೇಷಿತರ ಮಧ್ಯೆ ಯೇಸು ಪ್ರತ್ಯಕ್ಷನಾಗಿ “ನಿಮಗೆ ಶಾಂತಿ ಇರಲಿ” ಎಂದು ಹೇಳಿ ಪವಿತ್ರಾತ್ಮನನ್ನು ಅವರಿಗೆ ಅನುಗ್ರಹಿಸಿದ ಘಟನೆಗೆ ಅವರು ಗಮನ ಸೆಳೆದರು.

ಜಗದ್ಗುರುಗಳು ಪವಿತ್ರಾತ್ಮನನ್ನು ಮೊದಲನೆಯದಾಗಿ “ಶಾಂತಿಯ ಆತ್ಮ” ಎಂದು ವಿವರಿಸಿದರು. ಯೇಸುವಿನ ಪಾಸ್ಕಾ ರಹಸ್ಯದ ಮೂಲಕ ದೇವರು ಮತ್ತು ಮಾನವರ ನಡುವೆ ಶಾಂತಿ ಮರುಸ್ಥಾಪನೆಯಾಯಿತು ಎಂದು ಅವರು ಹೇಳಿದರು. ಈ ಶಾಂತಿ ಕ್ಷಮೆಯಿಂದ ಹುಟ್ಟುತ್ತದೆ ಮತ್ತು ನಮ್ಮನ್ನೂ ಇತರರನ್ನು ಕ್ಷಮಿಸುವವರನ್ನಾಗಿ ಮಾಡುತ್ತದೆ. ದೇವರು ಎಲ್ಲರನ್ನೂ ಮರಣದಿಂದ ವಿಮೋಚಿಸಿದ ಕಾರಣ ಯಾರನ್ನೂ ತಳ್ಳಿಹಾಕುವುದಿಲ್ಲ ಎಂದು ಅವರು ನೆನಪಿಸಿದರು.

ಎರಡನೆಯದಾಗಿ, ಪವಿತ್ರಾತ್ಮನು “ಮಿಷನ್‌ನ ಆತ್ಮ” ಎಂದು ಜಗದ್ಗುರುಗಳು ಹೇಳಿದರು. ಪಂಚಶತ್ತಮ ದಿನವೇ ಪ್ರೇಷಿತರು ಪವಿತ್ರಾತ್ಮನ ಶಕ್ತಿಯಿಂದ ಯೇಸುವಿನ ಸುವಾರ್ತೆಯನ್ನು ಧೈರ್ಯದಿಂದ ಸಾರಲು ಆರಂಭಿಸಿದರು. ಇದೇ ಆತ್ಮ ಇಂದು ನಮ್ಮಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ವಿಶ್ವಾಸಿಯನ್ನೂ ಸುವಾರ್ತೆಯ ಸಹೋದ್ಯೋಗಿಯನ್ನಾಗಿ ಮಾಡುತ್ತದೆ ಎಂದು ಅವರು ತಿಳಿಸಿದರು. ನಮ್ಮ ಒಳ್ಳೆಯ ಕೃತಿಗಳು, ಕರುಣೆಯ ಕಾರ್ಯಗಳು ಮತ್ತು ಸತ್ಪ್ರವೃತ್ತಿಗಳಲ್ಲಿಯೇ ದೇವರ ಕಾರ್ಯ ವ್ಯಕ್ತವಾಗುತ್ತದೆ ಎಂದರು.

ಜಗದ್ಗುರುಗಳು ನಾವು ಲೋಕದ ಹೊಸತನ, ಭೂಮಿಯ ಉಪ್ಪು ಮತ್ತು ಬೆಳಕು ಎಂದು ಹೇಳಿದರು. ಇದು ನಮ್ಮ ಸ್ವಂತ ಯೋಗ್ಯತೆಯಿಂದಲ್ಲ, ಆದರೆ ಪಾಪಿಯನ್ನು ಪರಿಶುದ್ಧಗೊಳಿಸುವ ಮತ್ತು ದುರ್ಬಲನನ್ನು ಬಲಿಷ್ಠನನ್ನಾಗಿ ಮಾಡುವ ಪ್ರಭುವಿನ ಕೃಪೆಯಿಂದ ಸಾಧ್ಯವಾಗುತ್ತದೆ ಎಂದು ವಿವರಿಸಿದರು. ಲೋಕದಲ್ಲಿ ಹಿಂಸೆ ಮತ್ತು ತಪ್ಪುಗಳಿಂದ ತುಂಬಿದ ಬದಲಾವಣೆಗಳಿದ್ದರೂ, ಪವಿತ್ರಾತ್ಮನು ಮನಸ್ಸುಗಳನ್ನು ಪ್ರಕಾಶಗೊಳಿಸಿ ಹೃದಯಗಳಿಗೆ ಹೊಸ ಚೈತನ್ಯವನ್ನು ನೀಡುತ್ತಾನೆ ಎಂದರು.

ಮೂರನೆಯದಾಗಿ, ಪವಿತ್ರಾತ್ಮನು “ಸತ್ಯದ ಆತ್ಮ” ಎಂದು ಅವರು ವಿವರಿಸಿದರು. ಆತನು ವಿಭಜನೆ, ದ್ವಂದ್ವಾಚಾರ ಮತ್ತು ಸುವಾರ್ತೆಯ ಬೆಳಕನ್ನು ಮಸುಕುಗೊಳಿಸುವ ಪ್ರಪಂಚದ ಪ್ರವೃತ್ತಿಗಳಿಂದ ನಮ್ಮನ್ನು ರಕ್ಷಿಸುತ್ತಾನೆ. ದೇವರು ನೀಡುವ ಸತ್ಯವು ಎಲ್ಲ ಜನಾಂಗಗಳಿಗೂ ವಿಮೋಚನೆಯ ಸಂದೇಶವಾಗಿದ್ದು, ಪ್ರತಿಯೊಂದು ಸಂಸ್ಕೃತಿಯನ್ನು ಒಳಗಿನಿಂದಲೇ ಪರಿವರ್ತಿಸುತ್ತದೆ ಎಂದು ಅವರು ಹೇಳಿದರು. ಸತ್ಯ ಮತ್ತು ಏಕತೆಯಲ್ಲಿ ಜೀವಿಸುವಂತೆ ಪವಿತ್ರಾತ್ಮನು ಧರ್ಮ ಸಭೆಯನ್ನು ಮುನ್ನಡೆಸುತ್ತಾನೆ ಎಂದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಯುದ್ಧದ ದುಷ್ಟತೆಯಿಂದ ಮಾನವಕುಲವನ್ನು ರಕ್ಷಿಸಬೇಕೆಂದು ಪವಿತ್ರಾತ್ಮನಲ್ಲಿ ಪ್ರಾರ್ಥಿಸಿದರು. ಪ್ರೀತಿ ಮತ್ತು ಕರುಣೆಯ ಶಕ್ತಿಯೇ ನಿಜವಾದ ಶಾಂತಿಯನ್ನು ತರುತ್ತದೆ ಎಂದು ಅವರು ಒತ್ತಿಹೇಳಿದರು.ಪ್ರೇಷಿತರ ಧೈರ್ಯ ನೀಡಿದ ಅದೇ ಪವಿತ್ರಾತ್ಮನು ಇಂದಿಗೂ ವಿಶ್ವಾಸಿಗಳಿಗೆ ಶಕ್ತಿ ಮತ್ತು ಪರಿಶುದ್ಧತೆಯನ್ನು ನೀಡಲಿ ಎಂದು, ಧನ್ಯ ಮರಿಯಮ್ಮನವರ ಮಧ್ಯಸ್ಥಿಕೆಯಿಂದ ಅವರು ಪ್ರಾರ್ಥನೆ ಸಲ್ಲಿಸಿದರು.

24 ಮೇ 2026, 15:06