ಜಗದ್ಗುರುಗಳು: ಐಕ್ಯಚಳವಳಿಯ ಮೂಲಕ ನಾವು ಶಾಂತಿಯ ಹೊಸ ಜಗತ್ತಿಗೆ ಜೀವ ನೀಡಬಹುದು.
ವ್ಯಾಟಿಕನ್ ವರದಿ
ಐಕ್ಯ ಪ್ರಾರ್ಥನಾ ಕಾರ್ಯಕ್ರಮವಾದ “ಥೈ ಕಿಂಗ್‌ಡಮ್ ಕಮ್” ಆರಂಭವಾಗುವ ಮುನ್ನ, ಜಗದ್ಗುರು XIVನೇ ಲಿಯೋರವರು ಎಲ್ಲಾ ಭಾಗವಹಿಸುವವರಿಗೆ ವೀಡಿಯೊ ಸಂದೇಶ ಕಳುಹಿಸಿ, ತಮ್ಮ ಆತ್ಮೀಯ ಸಾನ್ನಿಧ್ಯವನ್ನು ಭರವಸೆ ನೀಡಿದರು.
ಮೇ 14ರಿಂದ 24ರವರೆಗೆ ನಡೆಯುವ ಈ ಕಾರ್ಯಕ್ರಮವು ಜಾಗತಿಕ ಪ್ರಾರ್ಥನಾ ಚಳವಳಿಯಾಗಿದ್ದು, ಯೇಸುಸ್ವಾಮಿಯನ್ನು ಹೆಚ್ಚು ಜನರು ಅರಿತುಕೊಳ್ಳುವಂತೆ ಮಾಡಲು, ಆರೋಹಣ ಗುರುವಾರದಿಂದ ಪವಿತ್ರಾತ್ಮರ ಹಬ್ಬದ ಭಾನುವಾರದವರೆಗೆ ವಿಶ್ವದ ಕ್ರೈಸ್ತರನ್ನು ಒಟ್ಟಾಗಿ ಪ್ರಾರ್ಥಿಸಲು ಆಹ್ವಾನಿಸುತ್ತದೆ.
“ಥೈ ಕಿಂಗ್‌ಡಮ್ ಕಮ್” (ಟಿಕೆಸಿ) 2016ರಲ್ಲಿ ಆರಂಭಗೊಂಡಿದ್ದು, ಇಂದು ಜಗತ್ತಿನ ಸುಮಾರು 90% ರಾಷ್ಟ್ರಗಳಲ್ಲಿ, 85 ವಿಭಿನ್ನ ಕ್ರೈಸ್ತ ಪಂಥಗಳು ಮತ್ತು ಪರಂಪರೆಗಳ ಮೂಲಕ, ಒಂದು ಮಿಲಿಯನ್‌ಗಿಂತ ಹೆಚ್ಚು ಕ್ರೈಸ್ತರನ್ನು ಒಳಗೊಂಡ ಚಳವಳಿಯಾಗಿ ಬೆಳೆದಿದೆ.
“ಬಾ, ಇಮ್ಮಾನುಯೇಲ”
ತಮ್ಮ ವೀಡಿಯೊ ಸಂದೇಶದಲ್ಲಿ ಜಗದ್ಗುರುಗಳು, ಆಗಮನಕಾಲದ ಪರಂಪರೆಯ ವಾಕ್ಯವಾದ “ಬಾ, ಇಮ್ಮಾನುಯೇಲ” ಎಂಬ ಪದಗಳನ್ನು ಕುರಿತು ಚಿಂತನೆ ನಡೆಸಿದರು. ಈ ಮೂಲಕ ಕ್ರೈಸ್ತರು ಯೆಶಾಯ ಪ್ರವಾದಿಯ ಭವಿಷ್ಯವಾಣಿಯ ಪೂರ್ಣತೆಯನ್ನು—ಅಂದರೆ “ದೇವರು ನಮ್ಮೊಂದಿಗಿದ್ದಾನೆ” ಎಂಬ ಅರ್ಥದ ಇಮ್ಮಾನುಯೇಲನ ಜನನವನ್ನು ಕಾತರದಿಂದ ನಿರೀಕ್ಷಿಸುತ್ತಾರೆ ಎಂದು ಅವರು ಹೇಳಿದರು.
ಆ ನಿರೀಕ್ಷೆಯ ಸಮಯದಲ್ಲಿ, ನಮ್ಮ ಹಾಡುಗಳು ಮತ್ತು ಭಕ್ತಿಗೀತೆಗಳು ದೇವರು ನಮ್ಮೊಳಗೆ ಬಂದು ವಾಸಿಸಲಿ, ಪಾಪದಿಂದ ಮತ್ತು ನಮಗೆ ನೋವುಂಟುಮಾಡುವ ಎಲ್ಲದಿಂದ ನಮ್ಮನ್ನು ರಕ್ಷಿಸಲಿ ಎಂಬ ಬೇಡಿಕೆಯನ್ನು ಇನ್ನಷ್ಟು ತೀವ್ರಗೊಳಿಸುತ್ತವೆ ಎಂದು ಜಗದ್ಗುರುಗಳು ವಿವರಿಸಿದರು. ದೇವರು ನಮ್ಮೊಳಗಿನ ಮತ್ತು ಜಗತ್ತಿನಲ್ಲಿರುವ ಮುರಿತಗಳನ್ನು ಗುಣಪಡಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರು.
ದೇವರು ಸರ್ವಶಕ್ತನೂ ಅತೀತನೂ ಆಗಿದ್ದಾನೆ ಎಂಬುದನ್ನು ನಾವು ತಿಳಿದಿದ್ದರೂ, ಆತನು ನಮ್ಮಿಂದ ದೂರವಿರದೆ, ನಿಜವಾಗಿಯೂ ನಮ್ಮೊಂದಿಗೇ ಇರಲಿ ಎಂದು ನಾವು ಧೈರ್ಯದಿಂದ ಕೇಳುತ್ತೇವೆ ಎಂದು ಜಗದ್ಗುರುಗಳು ಹೇಳಿದರು.
ಆದರೆ ಕೆಲವೊಮ್ಮೆ ನಮಗೆ ದೇವರ ಅಗತ್ಯವಿದೆ ಎಂಬುದನ್ನೇ ನಾವು ಮರೆತುಬಿಡುತ್ತೇವೆ ಎಂದು ಅವರು ವಿಷಾದಿಸಿದರು. ನಮ್ಮ ಅಂತರಂಗದ ಅಶಾಂತಿ ಮತ್ತು ಆಳವಾದ ಹಂಬಲಗಳನ್ನು ತೃಪ್ತಿಪಡಿಸಬಲ್ಲವನು ದೇವರೊಬ್ಬನೇ ಎಂದು ಅವರು ನೆನಪಿಸಿದರು. ಯೇಸು ಕ್ರಿಸ್ತನ ವ್ಯಕ್ತಿತ್ವದಲ್ಲಿ ದೇವರು ಮಾನವ ರೂಪದಲ್ಲಿ ನಮ್ಮ ಬಳಿಗೆ ಬಂದನು,ಈಗ ಪವಿತ್ರಾತ್ಮನ ಮೂಲಕ ಆತನು ಸದಾ ನಮ್ಮೊಂದಿಗಿದ್ದಾನೆ ಎಂದು ಜಗದ್ಗುರುಗಳು ಹೇಳಿದರು.
ನಾವು ಅನಾಥರಾಗಿ ಬಿಡಲ್ಪಟ್ಟಿಲ್ಲ
ಈಸ್ಟರ್‌ನ ಐವತ್ತು ದಿನಗಳಲ್ಲಿ “ಅಲ್ಲೆಲೂಯ” ಎಂಬುದು ಪುನರುತ್ಥಾನದ ಸಂತೋಷದ ಹಾಡಾಗಿ ಮಾರ್ಪಡುತ್ತದೆ ಎಂದು ಜಗದ್ಗುರುಗಳು ಹೇಳಿದರು. ಯೇಸು ಪುನರುತ್ಥಾನವಾದ ನಂತರವೂ ಆತನು “ನಮ್ಮೊಂದಿಗಿರುವ ದೇವರೇ” ಎಂದು ಅವರು ಒತ್ತಿಹೇಳಿದರು. ಆದರೆ ಪುನರುತ್ಥಾನದ ನಂತರ ಯೇಸುವಿನ ಅತೀ ಹತ್ತಿರದ ಶಿಷ್ಯರೂ ಕೂಡ ಕೆಲವೊಮ್ಮೆ ಆತನನ್ನು ಗುರುತಿಸಲಿಲ್ಲ ಎಂದು ಅವರು ನೆನಪಿಸಿದರು.
ಯೇಸು ಸ್ವರ್ಗದಲ್ಲಿರುವ ತಂದೆಯ ಬಳಿಗೆ ಹಿಂತಿರುಗಿದರೂ, “ನಮ್ಮನ್ನು ಅನಾಥರಾಗಿ ಬಿಟ್ಟಿಲ್ಲ” ಎಂದು ಜಗದ್ಗುರುಗಳು ಹೇಳಿದರು. ಪವಿತ್ರಾತ್ಮನ ದಾನದ ಮೂಲಕ ಆತನು ಧರ್ಮ ಸಭೆಯಲ್ಲಿಯೇ ನಮ್ಮೊಂದಿಗಿದ್ದಾನೆ. “ಕ್ರಿಸ್ತನು ನಮಗೆಲ್ಲವೂ ಆಗಿದ್ದಾನೆ ಆತನಲ್ಲಿಯೇ ಜೀವನದ ಪೂರ್ಣತೆಯನ್ನೂ ಅದರ ಅರ್ಥವನ್ನೂ ನಾವು ಕಂಡುಕೊಳ್ಳುತ್ತೇವೆ” ಎಂದು ಅವರು ಹೇಳಿದರು.
ಈ ದಾನವನ್ನು ನಾವು ನಮ್ಮೊಳಗೆ ಮಾತ್ರ ಉಳಿಸಿಕೊಳ್ಳಬಾರದು. ಬದಲಾಗಿ ಧೈರ್ಯದಿಂದ ಘೋಷಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದರು. “ಥೈ ಕಿಂಗ್‌ಡಮ್ ಕಮ್ ನೊವೇನಾ” ಸುವಾರ್ತೆಯನ್ನು ಹಂಚಿಕೊಳ್ಳಲು ಮತ್ತು ಇನ್ನಷ್ಟು ಜನರು ಯೇಸುವಿನಲ್ಲಿ ಪ್ರಕಟವಾದ ದೇವರ ರಕ್ಷಕ ಮತ್ತು ವಿಮೋಚಕ ಪ್ರೀತಿಯನ್ನು ಅನುಭವಿಸಲಿ ಎಂದು ಪ್ರಾರ್ಥಿಸಲು ಅತ್ಯುತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದರು.
ಇಡೀ ಜಗತ್ತಿನತ್ತ ಹೊರಟು ಹೋಗೋಣ
ತಮ್ಮ ಈಸ್ಟರ್ ವಿಜಿಲ್ ಪ್ರವಚನವನ್ನು ನೆನಪಿಸಿಕೊಂಡ ಜಗದ್ಗುರುಗಳು, “ನಮ್ಮ ನಂಬಿಕೆಯ ಮಾತುಗಳ ಮೂಲಕವೂ ಪ್ರೀತಿಯ ಕಾರ್ಯಗಳ ಮೂಲಕವೂ ನಾವು ಸಾಕ್ಷಿಯಾಗಬೇಕಾದ ಈ ಭೇಟಿಯನ್ನು, ನಾವು ತುಟಿಗಳಿಂದ ಘೋಷಿಸುವ ‘ಅಲ್ಲೆಲೂಯ’ವನ್ನು ಜೀವನದ ಮೂಲಕ ಹಾಡುವುದರ ಮೂಲಕ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.
ಈಸ್ಟರ್ ಬೆಳಿಗ್ಗೆ ಸುವಾರ್ತೆಯಲ್ಲಿ ಕಾಣುವ ಮಹಿಳೆಯರಂತೆ, ನಾವೂ ಸಹ ಜಗತ್ತಿನ ಎಲ್ಲ ಜನರಿಗೆ ಸುವಾರ್ತೆಯನ್ನು ತಲುಪಿಸಲು ಹೊರಡಬೇಕೆಂಬ ಹಂಬಲ ಹೊಂದಿರಬೇಕು ಎಂದು ಜಗದ್ಗುರುಗಳು ಹೇಳಿದರು. “ಅನೇಕ ಕ್ರೈಸ್ತರು ಇದ್ದರೂ ಕ್ರಿಸ್ತನು ಒಬ್ಬನೇ” ಎಂಬ ಸಂತ ಆಗಸ್ಟಿನ್ ರವರ ಮಾತುಗಳನ್ನು ಉಲ್ಲೇಖಿಸಿ, “ನಾವೂ ಸಹ ಶಾಂತಿ ಮತ್ತು ಏಕತೆಯ ಹೊಸ ಜಗತ್ತಿಗೆ ಜೀವ ನೀಡಬಹುದು” ಎಂದು ಅವರು ಪ್ರೇರೇಪಿಸಿದರು.
ಕೊನೆಯಲ್ಲಿ, ಭಾಗವಹಿಸಿದ ಪ್ರತಿಯೊಬ್ಬರ ಮೇಲೂ ದೇವರ ಸಮೃದ್ಧ ಆಶೀರ್ವಾದ ಇರಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು.
