“ಜಗದ್ಗುರು ಲಿಯೋರವರು ಸ್ವಿಸ್ ಒಕ್ಕೂಟದ ರಾಷ್ಟ್ರಪತಿಯನ್ನು ಸ್ವೀಕರಿಸಿದರು.”
ವ್ಯಾಟಿಕನ್ ವರದಿ
ಬುಧವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ, ಮಧ್ಯಾಹ್ನ ನಡೆಯಲಿರುವ ಸ್ವಿಸ್ ಗಾರ್ಡ್‌ಗಳ ವಾರ್ಷಿಕ ಪ್ರಮಾಣವಚನ ಸಮಾರಂಭಕ್ಕೂ ಮುನ್ನ, ಜಗದ್ಗುರು XIVನೇ ಲಿಯೋರವರು ಸ್ವಿಸ್ ಒಕ್ಕೂಟದ ರಾಷ್ಟ್ರಪತಿ ಗೈ ಪಾರ್ಮೆಲಿನ್ ರವರನ್ನು ಭೇಟಿಯಾದರು.
ಜಗದ್ಗುರುಗಳೊಂದಿಗೆ ನಡೆದ ಈ ಭೇಟಿಯ ನಂತರ, ಸ್ವಿಸ್ ರಾಷ್ಟ್ರಪತಿ ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪಾರೋಲಿನ್ ಹಾಗೂ ರಾಷ್ಟ್ರಗಳ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಂಬಂಧಗಳ ಕಾರ್ಯದರ್ಶಿ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಾಗರ್ ರವರನ್ನು ಭೇಟಿ ಮಾಡಿದರು.
ನಂತರ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಹೊರಡಿಸಿದ ಪ್ರಕಟಣೆಯಲ್ಲಿ, ಈ ಚರ್ಚೆಗಳು ಸ್ನೇಹಪೂರ್ಣ ವಾತಾವರಣದಲ್ಲಿ ನಡೆದವು ಎಂದು ತಿಳಿಸಲಾಯಿತು. ಉತ್ತಮ ಮತ್ತು ಫಲಪ್ರದ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಲಾಯಿತು ಹಾಗೂ ಪಾಂಟಿಫಿಕಲ್ ಸ್ವಿಸ್ ಗಾರ್ಡ್‌ನ ನಿಷ್ಠಾವಂತ ಮತ್ತು ವೃತ್ತಿಪರ ಸೇವೆಯನ್ನು ಮೆಚ್ಚುಗೆಯಿಂದ ಉಲ್ಲೇಖಿಸಲಾಯಿತು.
ಮುಂದುವರಿದ ಚರ್ಚೆಗಳಲ್ಲಿ, ಅಂತರರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದ ಸಾಮಾನ್ಯ ಆಸಕ್ತಿಯ ವಿಷಯಗಳ ಮೇಲೆ ಗಮನ ಹರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ವಿಶೇಷವಾಗಿ ಉಕ್ರೇನ್ ಮತ್ತು ಮಧ್ಯಪ್ರಾಚ್ಯದಲ್ಲಿನ ಮುಂದುವರಿಯುತ್ತಿರುವ ಸಂಘರ್ಷಗಳ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಶಾಂತಿಯ ಉತ್ತೇಜನಕ್ಕಾಗಿ ಬಹುಪಕ್ಷೀಯ ಮಟ್ಟದಲ್ಲಿ ಸಹಕರಿಸಲು ಸಿದ್ಧತೆ ಮರುದೃಢಪಡಿಸಲಾಯಿತು.
