28 ಹೊಸ ನೇಮಕಾತಿಗಳ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ, ಅವರ ಸೇವೆಗೆ ಜಗದ್ಗುರುಗಳು ಸ್ವಿಸ್ ಗಾರ್ಡ್‌ಗೆ ಕೃತಜ್ಞತೆ ಸಲ್ಲಿಸಿದರು.
ವ್ಯಾಟಿಕನ್ ವರದಿ
ಬುಧವಾರ ಮಧ್ಯಾಹ್ನ, ಸ್ವಿಸ್ ಗಾರ್ಡ್‌ನ 28 ಹೊಸ ನೇಮಕಾತಿಗರು ನಿಷ್ಠೆಯ ಪ್ರಮಾಣವಚನ ಸ್ವೀಕರಿಸಿದರು. ಈ ಸಮಾರಂಭದಲ್ಲಿ ಸ್ವಿಸ್ ಗಾರ್ಡ್‌ನ ಕಮಾಂಡರ್ ಕ್ರಿಸ್ಟೋಫ್ ಗ್ರಾಫ್ ರವರು ಜಗದ್ಗುರು XIVನೇ ಲಿಯೋರವರ ಸಾನ್ನಿಧ್ಯವನ್ನು ಶ್ಲಾಘಿಸಿ, ಅದು ಗಾರ್ಡ್ ಸದಸ್ಯರ ಮೇಲಿನ ಅವರ ಆತ್ಮೀಯತೆ ಮತ್ತು ಬೆಂಬಲದ ಅಮೂಲ್ಯ ಚಿಹ್ನೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಧರ್ಮ ಸಭೆಯ ಮತ್ತು ರಾಜಕೀಯ ಗಣ್ಯರೊಂದಿಗೆ, ಈ ವರ್ಷದ ಅತಿಥಿ ಕ್ಯಾಂಟನ್ ಥುರ್ಗೌ ಪ್ರತಿನಿಧಿಗಳು ಹಾಗೂ ನೇಮಕಾತಿಗರ ಕುಟುಂಬಸ್ಥರನ್ನೂ ಆತ್ಮೀಯವಾಗಿ ಸ್ವಾಗತಿಸಲಾಯಿತು.
ವ್ಯಾಟಿಕನ್‌ನ ಸಭಾಂಗಣದಲ್ಲಿ ನಡೆದ ಸಮಾರಂಭದ ಅಂತ್ಯದಲ್ಲಿ ಜಗದ್ಗುರು ಲಿಯೋರವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಅವರು ಮೊದಲು ಸ್ವಿಸ್ ಒಕ್ಕೂಟದ ಅಧ್ಯಕ್ಷರು, ರಾಜಕೀಯ ಹಾಗೂ ಸೈನಿಕ ಪ್ರತಿನಿಧಿಗಳನ್ನು ಆತ್ಮೀಯವಾಗಿ ಅಭಿನಂದಿಸಿದರು. ನಂತರ ಗಾರ್ಡ್ ಸದಸ್ಯರ ಕುಟುಂಬಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ನೇಮಕಾತಿಗಳ ಮೇಲಿನ ತಮ್ಮ “ಗೌರವ ಮತ್ತು ಕೃತಜ್ಞತೆ”ಯನ್ನು ವ್ಯಕ್ತಪಡಿಸಿದರು.
ಜಗದ್ಗುರುಗಳು, ಈ ಯುವಕರು ತೆಗೆದುಕೊಂಡ ಪ್ರಮಾಣವಚನವು ಕೇವಲ ಕರ್ತವ್ಯವಲ್ಲ, ಅದು ದೇವರ ಮೇಲಿನ ನಂಬಿಕೆ, ಧರ್ಮ ಸಭೆಯ ಮೇಲಿನ ಪ್ರೀತಿ ಮತ್ತು ಯುವಜನರ ಉತ್ಸಾಹದಿಂದ ಹುಟ್ಟಿದ ನಿಷ್ಠೆಯ ಸಾಕ್ಷಿಯಾಗಿದೆ ಎಂದು ಹೇಳಿದರು. ಅವರ ಸೇವೆ ಕ್ರೈಸ್ತ ಮೌಲ್ಯಗಳ ಜೀವಂತ ಉದಾಹರಣೆಯಾಗಿದ್ದು, ಪವಿತ್ರ ಪೀಠದ ಸೇವೆಗೆ ಸಮರ್ಪಿತ ಜೀವನದ ಸಂಕೇತವಾಗಿದೆ ಎಂದು ವಿವರಿಸಿದರು.
ಸಮಾರಂಭದ ಆರಂಭದಲ್ಲಿ ಕಮಾಂಡರ್ ಕ್ರಿಸ್ಟೋಫ್ ಗ್ರಾಫ್ ಸೇವೆ ಎಂಬ ಪದದ ನಿಜವಾದ ಅರ್ಥವನ್ನು ವಿವರಿಸಿದರು. ಇಂದಿನ ಸಮಾಜದಲ್ಲಿ ಕೆಲವರು ಸೇವೆಯನ್ನು ದುರ್ಬಲತೆ ಅಥವಾ ಹೀನ ಕಾರ್ಯವೆಂದು ಭಾವಿಸುತ್ತಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಆದರೆ ಇತರರಿಗಾಗಿ ಬದುಕುವುದು ಮತ್ತು ತಮ್ಮ ಪ್ರತಿಭೆಯನ್ನು ಸಮಾಜದ ಹಿತಕ್ಕಾಗಿ ಬಳಸುವುದು ಮಾನವ ಜೀವನದ ನಿಜವಾದ ಅರ್ಥವಾಗಿದೆ ಎಂದು ಅವರು ಒತ್ತಿಹೇಳಿದರು.
ಗ್ರಾಫ್ ರವರು ಯೇಸು ಕ್ರಿಸ್ತನನ್ನೇ ಸೇವೆಯ ಪರಿಪೂರ್ಣ ಮಾದರಿಯಾಗಿ ಉದಾಹರಿಸಿದರು. “ಸೇವಿಸಿಕೊಳ್ಳಲು ಅಲ್ಲ, ಸೇವೆ ಮಾಡಲು ಬಂದವರು ಯೇಸು” ಎಂಬ ಕ್ರೈಸ್ತ ಆದರ್ಶವು ಅಹಂಕಾರ ಮತ್ತು ಅಧಿಕಾರದ ದುರುಪಯೋಗದಿಂದ ದೂರ ಇಡುತ್ತದೆ ಎಂದರು. ಸೇವೆ ಮಾಡುವವರು ತಾವು ಇತರರಿಗಿಂತ ಮೇಲಲ್ಲ ಎಂಬ ಅರಿವಿನಲ್ಲೇ ಬದುಕುತ್ತಾರೆ ಎಂದು ಹೇಳಿದರು.
ಕೊನೆಯಲ್ಲಿ ಕಮಾಂಡರ್ ಯುವ ಗಾರ್ಡ್ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿ, ಅವರ ಸೇವೆಯ ಅವಧಿ ವೈಯಕ್ತಿಕ ಬೆಳವಣಿಗೆ ಮತ್ತು ದೇವರ ಕರೆಯ ಅರಿವನ್ನು ಗಾಢಗೊಳಿಸುವ ಅನುಭವವಾಗಲಿ ಎಂದು ಹಾರೈಸಿದರು. ಅವರು ತೆಗೆದುಕೊಂಡ ಪ್ರಮಾಣವಚನವು ಕೇವಲ ಒಂದು ವಿಧಿ ವಿಧಾನವಲ್ಲ, ಆದರೆ ಸಮುದಾಯದ ಹಿತಕ್ಕಾಗಿ ತಮ್ಮನ್ನು ಮಾತು ಮತ್ತು ಕೃತ್ಯಗಳಲ್ಲಿ ಸಂಪೂರ್ಣವಾಗಿ ಸಮರ್ಪಿಸುವ ಪ್ರತಿಜ್ಞೆಯಾಗಿದೆ ಎಂದು ಹೇಳಿದರು.
