ತಾಯಂದಿರ ದಿನದಂದು ಪ್ರತಿಯೊಬ್ಬ ತಾಯಿಗಾಗಿ ಜಗದ್ಗುರು ಲಿಯೋರವರು ಪ್ರಾರ್ಥಿಸಿದರು.
ವ್ಯಾಟಿಕನ್ ವರದಿ
ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವದ 40ಕ್ಕೂ ಹೆಚ್ಚು ದೇಶಗಳಲ್ಲಿ ತಾಯಂದಿರ ದಿನವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಎಲ್ಲ ತಾಯಂದಿರಿಗಾಗಿ ವಿಶೇಷವಾಗಿ ತಮ್ಮ ಮನದಾಳದ ಚಿಂತನೆ ಮತ್ತು ಪ್ರಾರ್ಥನೆಯನ್ನು ಅರ್ಪಿಸಿದರು.
ಸಂತ ಪೇತ್ರರ ಚೌಕದಲ್ಲಿ ರೆಜಿನಾ ಚೇಲಿ ಪ್ರಾರ್ಥನೆಯ ನಂತರ ಮಾತನಾಡಿದ ಜಗದ್ಗುರುಗಳು, ಯೇಸುವಿನ ತಾಯಿ ಮತ್ತು ನಮ್ಮ ತಾಯಿಯಾದ ಮರಿಯಮ್ಮನವರ ಮಧ್ಯಸ್ಥಿಕೆಯ ಮೂಲಕ, ಪ್ರತಿಯೊಬ್ಬ ತಾಯಿಗಾಗಿ ವಿಶೇಷವಾಗಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿರುವ ತಾಯಂದಿರಿಗಾಗಿ ಪ್ರೀತಿ ಮತ್ತು ಕೃತಜ್ಞತೆಯಿಂದ ಪ್ರಾರ್ಥಿಸೋಣ,ಎಂದು ಹೇಳಿದರು.
ಪ್ರತಿಯೊಬ್ಬ ತಾಯಿಗಾಗಿ ವಿಶೇಷವಾಗಿ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಬದುಕುತ್ತಿರುವ ತಾಯಂದಿರಿಗಾಗಿ ಪ್ರೀತಿ ಮತ್ತು ಕೃತಜ್ಞತೆಯಿಂದ ಪ್ರಾರ್ಥಿಸೋಣ.
ಕಾಪ್ಟಿಕ್-ಕಥೋಲಿಕ ಸ್ನೇಹ ದಿನ
ಕಾಪ್ಟಿಕ್ ಆರ್ಥಡಾಕ್ಸ್ ಧರ್ಮ ಸಭೆಯ ಮುಖ್ಯಸ್ಥರಿಗೂ ಜಗದ್ಗುರುಗಳು ಸಹೋದರಭಾವದ ಶುಭಾಶಯಗಳನ್ನು ಸಲ್ಲಿಸಿದರು. “ಪ್ರತಿ ವರ್ಷ ಮೇ 10ರಂದು ‘ಕಾಪ್ಟಿಕ್-ಕಥೋಲಿಕ ಸ್ನೇಹ ದಿನ’ವನ್ನು ಆಚರಿಸಲಾಗುತ್ತದೆ” ಎಂದು ಅವರು ಸ್ಮರಿಸಿದರು.
“ಪರಮಪೂಜ್ಯ ಜಗದ್ಗುರು ದ್ವಿತೀಯ ತವಾಡ್ರೋಸ್ ರವರಿಗೆ ನಾನು ಸಹೋದರಭಾವದ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಮ್ಮ ಸ್ನೇಹದ ಪಯಣವು, ನಮ್ಮನ್ನು ‘ಸ್ನೇಹಿತರು’ ಎಂದು ಕರೆಯುವ ಕ್ರಿಸ್ತನಲ್ಲಿ ಪರಿಪೂರ್ಣ ಏಕತೆಯತ್ತ ನಮ್ಮನ್ನು ಕೊಂಡೊಯ್ಯಲಿ ಎಂಬ ಆಶಯದೊಂದಿಗೆ, ಪ್ರೀತಿಪಾತ್ರ ಕಾಪ್ಟಿಕ್ ಧರ್ಮ ಸಭೆಯ ಸಮಸ್ತ ಸದಸ್ಯರಿಗಾಗಿ ನನ್ನ ಪ್ರಾರ್ಥನೆಗಳನ್ನು ಭರವಸೆ ನೀಡುತ್ತೇನೆ,” ಎಂದು ಅವರು ಹೇಳಿದರು.
ಕ್ಯಾನರಿ ದ್ವೀಪಗಳ ಜನರಿಗೆ ಕೃತಜ್ಞತೆ
ಕ್ಯಾನರಿ ದ್ವೀಪಗಳ ಜನರನ್ನು ವಿಶಿಷ್ಟಗೊಳಿಸುವ ಆತಿಥ್ಯ ಮನೋಭಾವಕ್ಕಾಗಿ ಜಗದ್ಗುರು ಲಿಯೋರವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
“ಹಾಂಟಾ ವೈರಸ್ ಸೋಂಕಿತ ರೋಗಿಗಳನ್ನು ಹೊಂದಿದ್ದ ‘ಹೋಂಡಿಯಸ್ ಕ್ರೂಸ್ ಹಡಗು’ ಪ್ರಯಾಣಿಕರಿಗೆ ಕ್ಯಾನರಿ ದ್ವೀಪಗಳು ಆಶ್ರಯ ನೀಡಿರುವುದನ್ನು ಉಲ್ಲೇಖಿಸಿದ ಅವರು, “ಮುಂದಿನ ತಿಂಗಳು ನಾನು ದ್ವೀಪಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ,” ಎಂದು ಹೇಳಿದರು.
ವಾಸ್ತವವಾಗಿ, ಜಗದ್ಗುರುಗಳು ಜೂನ್ 6ರಿಂದ 12ರವರೆಗೆ ಸ್ಪೇನ್‌ಗೆ ಪ್ರೇಷಿತರ ಪ್ರವಾಸ ಕೈಗೊಳ್ಳಲಿದ್ದಾರೆ. ಆ ಪ್ರವಾಸದ ಕೊನೆಯ ಎರಡು ದಿನಗಳನ್ನು ಅವರು ಟೆನೆರಿಫೆ ಮತ್ತು ಗ್ರಾನ್ ಕ್ಯಾನರಿಯಾ ದ್ವೀಪಗಳಲ್ಲಿ ಕಳೆಯಲಿದ್ದು, ಅಲ್ಲಿ ವಲಸಿಗರು ಮತ್ತು ಅವರಿಗೆ ಸಹಾಯ ಮಾಡುವ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿಯಾಗಲಿದ್ದಾರೆ.
