ಹುಡುಕಿ

ಬುಧವಾರದ ಸಾಮಾನ್ಯ ಸಭೆಯಲ್ಲಿ ಜಗದ್ಗುರು XIVನೇ ಲಿಯೋರವರು. ಬುಧವಾರದ ಸಾಮಾನ್ಯ ಸಭೆಯಲ್ಲಿ ಜಗದ್ಗುರು XIVನೇ ಲಿಯೋರವರು.  (AFP or licensors)

ಜಗದ್ಗುರುಗಳು ಸಾರ್ವಜನಿಕ ಭೇಟಿಯಲ್ಲಿ: ಧಾರ್ಮಿಕ ಆರಾಧನಾ ಪರಂಪರೆ ಮತ್ತು ನವೀಕರಣವು ಸುವಾರ್ತಾ ಪ್ರಸಾರಕ್ಕೆ ಪ್ರೇರಕ ಶಕ್ತಿಯಾಗಿವೆ.

ತಮ್ಮ ವಾರಾಂತ್ಯದ ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ದ್ವಿತೀಯ ವ್ಯಾಟಿಕನ್ ಮಹಾಸಭೆಯ 1963ರ ಪವಿತ್ರ ಆರಾಧನೆ ಕುರಿತ ಸಂವಿಧಾನವಾದ ಸ್ಯಾಕ್ರೊಸ್ಯಾಂಕ್ಟಮ್ ಕಾನ್ಸಿಲಿಯಮ್ ಕುರಿತು ಚಿಂತನೆ ವ್ಯಕ್ತಪಡಿಸಿದರು. ಜೊತೆಗೆ, ಸಮೃದ್ಧ ಪರಂಪರೆಯನ್ನು ಕಾಪಾಡಿಕೊಂಡೇ ಆರಾಧನಾ ಜೀವನದಲ್ಲಿ ಪ್ರಗತಿ ಸಾಧಿಸುವ ಮಹತ್ವವನ್ನು ಅವರು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಮೇ 27ರಂದು ಸಂತ ಪೇತ್ರರ ಚೌಕದಲ್ಲಿ ನಡೆದ ಬುಧವಾರದ ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು, ಪರಂಪರೆಯನ್ನು ಕಾಪಾಡಿಕೊಂಡೇ ಆರಾಧನಾ ಕ್ರಮವನ್ನು ನವೀಕರಿಸಿ ಮುಂದುವರಿಸುವುದು ಧರ್ಮ ಸಭೆ ಬೆಳೆಯಲು, ಏಕತೆಯಲ್ಲಿ ಉಳಿಯಲು ಮತ್ತು ಎಲ್ಲರಿಗೂ ಸುವಾರ್ತೆಯನ್ನು ಸಾರುವ ತನ್ನ ಧ್ಯೇಯವನ್ನು ಮುಂದುವರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಜಗದ್ಗುರು XIVನೇ ಲಿಯೋರವರು ದ್ವಿತೀಯ ವ್ಯಾಟಿಕನ್ ಮಹಾಸಭೆಯ ದಾಖಲೆಗಳ ಕುರಿತು ತಮ್ಮ ಧರ್ಮೋಪದೇಶಗಳ ಸರಣಿಯನ್ನು ಮುಂದುವರಿಸಿ, 1963ರ ಪವಿತ್ರ ಆರಾಧನೆ ಕುರಿತ ಸಂವಿಧಾನವಾದ ಸ್ಯಾಕ್ರೊಸ್ಯಾಂಕ್ಟಮ್ ಕಾನ್ಸಿಲಿಯಮ್ ಕುರಿತು ಚಿಂತನೆ ನಡೆಸಿದರು. ವಿಶೇಷವಾಗಿ ಅವರು ಆರಾಧನೆಯನ್ನು ಪರಂಪರೆ ಮತ್ತು ಅಭಿವೃದ್ಧಿಯ ದೃಷ್ಟಿಕೋನದಿಂದ ವಿವರಿಸಿದರು.

ಸ್ಯಾಕ್ರೊಸ್ಯಾಂಕ್ಟಮ್ ಕಾನ್ಸಿಲಿಯಮ್ ದ್ವಿತೀಯ ವ್ಯಾಟಿಕನ್ ಮಹಾಸಭೆಯಲ್ಲಿ ಪ್ರಕಟಗೊಂಡ ಮೊದಲ ದಾಖಲೆ ಆಗಿದ್ದು, ಸ್ಥಳೀಯ ಭಾಷೆಗಳಲ್ಲಿ ಆರಾಧನೆ ಆಚರಿಸಲು ಅವಕಾಶ ನೀಡುವುದು ಮತ್ತು ವಿಶ್ವಾಸಿಗಳ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಸೇರಿದಂತೆ ಪ್ರಮುಖ ಬದಲಾವಣೆಗಳಿಗೆ ಕಾರಣವಾಯಿತು.

ತಮ್ಮ ಭಾಷಣದಲ್ಲಿ, ಜಗದ್ಗುರುಗಳು ಆರಾಧನೆಯು “ಶತಮಾನಗಳ ಕಾಲ ಸುವಾರ್ತಾ ಪ್ರಸಾರದ ಪ್ರೇರಕ ಶಕ್ತಿಯಾಗಿತ್ತು” ಎಂದು ಹೇಳಿದರು.

“ಇಂದು, ಈ ಶಕ್ತಿಯನ್ನು ನಿಜವಾದ ಮತ್ತು ಜೀವಂತ ಕಥೋಲಿಕ ಪರಂಪರೆಯ ನಿರಂತರತೆಯಲ್ಲಿ ನವೀಕರಿಸಬೇಕು, ಅಂದರೆ, ವಿಶ್ವಾಸಿಗಳನ್ನು ಸತ್ಯದ ಸಂಪೂರ್ಣತೆಗೆ ಪರಿಚಯಿಸುವ ಚೇತನಾತ್ಮಕ ದೃಷ್ಟಿಕೋನದೊಂದಿಗೆ,” ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ, ವಿಶೇಷವಾಗಿ ಆರಾಧನಾ ಅಧ್ಯಕ್ಷತೆಯ ಸೇವೆ ನಿರ್ವಹಿಸುವ ಯಾಜಕರಿಗೆ ಅವರು ಮನವಿ ಮಾಡಿದರು: “ದೇವರ ಮಹಿಮೆಯ ಮುಂದೆ ವಿನಯ ಮತ್ತು ಧರ್ಮ ಸಭೆಯ ಏಕತೆಗೆ ನಿಷ್ಠೆಯನ್ನು ವ್ಯಕ್ತಪಡಿಸುವ ಹೃದಯದ ಮನೋಭಾವದಿಂದ, ಆರಾಧನೆಯ ಪಠ್ಯಗಳು ಮತ್ತು ನಿಯಮಗಳು ಸದಾ ಗೌರವವನ್ನು ಉಳಿಸಿಕೊಳ್ಳಬೇಕು” ಎಂದು ಹೇಳಿದರು.

ಆರಾಧನಾ ನವೀಕರಣ ಮತ್ತು ಧರ್ಮ ಸಭೆಯ ನವೀಕರಣದ ಆಪ್ತ ಸಂಬಂಧ

ತಮ್ಮ ಧರ್ಮೋಪದೇಶದ ಆರಂಭದಲ್ಲಿ, ಜಗದ್ಗುರುಗಳು ತಮ್ಮ ಪೂರ್ವಾಧಿಕಾರಿಯಾದ ವಂದನೀಯ XIIನೇ ಪಿಯಸ್ ಅವರನ್ನು ಉಲ್ಲೇಖಿಸಿದರು. ಅವರು ಧರ್ಮ ಸಭೆಯನ್ನು “ಜೀವಂತ ಅಂಗಸಂಸ್ಥೆ” ಎಂದು ವಿವರಿಸಿದ್ದು, ಅದು  ಆರಾಧನೆ ವಿಷಯದಲ್ಲಿಯೂ  “ಬೆಳೆಯುತ್ತದೆ, ಪರಿಪಕ್ವವಾಗುತ್ತದೆ, ಅಭಿವೃದ್ಧಿ ಹೊಂದುತ್ತದೆ ಮತ್ತು ಕಾಲದ ಅಗತ್ಯಗಳಿಗೆ ಹೊಂದಿಕೊಳ್ಳುತ್ತದೆ” ಎಂದು ಹೇಳಿದ್ದಾರೆ.

ಈ ತತ್ವದ ಪ್ರಕಾರವೇ ಸ್ಯಾಕ್ರೊಸ್ಯಾಂಕ್ಟಮ್ ಕಾನ್ಸಿಲಿಯಮ್ ತನ್ನ ಪರಿಚಯ ಭಾಗದಲ್ಲಿ ಆರಾಧನೆಯನ್ನು ಕಾಲದ ಅಗತ್ಯಗಳಿಗೆ ಹೊಂದಿಸುವ ಅಗತ್ಯವನ್ನು ಗುರುತಿಸಿತು ಮತ್ತು “ವಿಶ್ವಾಸಿಗಳ ಕ್ರೈಸ್ತ ಜೀವನಕ್ಕೆ ಇನ್ನಷ್ಟು ಚೈತನ್ಯ ನೀಡುವ” ಉದ್ದೇಶ ಹೊಂದಿತ್ತು ಎಂದು ಜಗದ್ಗುರುಗಳು ವಿವರಿಸಿದರು.

“ಆ ಇತಿಹಾಸದ ಸಮಯದಲ್ಲಿ, ಶತಮಾನಗಳ ಕಾಲ ದೇವರನ್ನು ಮಹಿಮೆಪಡಿಸಿ ಕ್ರೈಸ್ತ ಜನರನ್ನು ಪರಿಶುದ್ಧಗೊಳಿಸಿದ್ದ ಆಚರಣೆಗಳ ರೂಪಗಳನ್ನು ನವೀಕರಿಸುವ ಅಗತ್ಯದ ಬಲವಾದ ಅರಿವು ಇತ್ತು,” ಎಂದು ಜಗದ್ಗುರುಗಳು ಹೇಳಿದರು.

ಈ ನವೀಕರಣದ ಚಳುವಳಿಗೆ ನೇತೃತ್ವ ನೀಡಿದ ಲಿಟರ್ಜಿಕಲ್ ಮೂವ್ಮೆಂಟ್‌ನಿಂದಾಗಿ, “ಆರಾಧನೆಯ ನವೀಕರಣ ಮತ್ತು ಧರ್ಮ ಸಭೆಯ ಸಮಗ್ರ ಜೀವನದ ನವೀಕರಣದ ನಡುವೆ ಅತ್ಯಂತ ಆಪ್ತ ಮತ್ತು ಸಂಘಟಿತ ಸಂಬಂಧವಿದೆ” ಎಂಬ ನಂಬಿಕೆ ಬಲವತ್ತಾಯಿತು ಎಂದು ಅವರು ಹೇಳಿದರು.

ತಮ್ಮ ಪೂರ್ವಾಧಿಕಾರಿಯಾದ ಜಗದ್ಗುರು ಸಂತ ದ್ವಿತೀಯ ಜಾನ್ ಪಾಲ್ ರವರನ್ನು ಉಲ್ಲೇಖಿಸಿದ ಜಗದ್ಗುರುಗಳು, “ಧಮ೯ಸಭೆಯ ಆರಾಧನೆಯಲ್ಲಿ ಕೇವಲ ಕಾರ್ಯನಿರ್ವಹಿಸುವುದಲ್ಲ, ಅದರಲ್ಲಿ ತನ್ನನ್ನು ತಾನೇ ವ್ಯಕ್ತಪಡಿಸುತ್ತದೆ, ಅದರಿಂದಲೇ ಜೀವಿಸುತ್ತದೆ ಮತ್ತು ತನ್ನ ಜೀವನದ ಶಕ್ತಿಯನ್ನು ಅದರಿಂದಲೇ ಪಡೆದುಕೊಳ್ಳುತ್ತದೆ” ಎಂದು ಹೇಳಿದರು.

ಪರಂಪರೆಯಲ್ಲಿ ಬೇರುಬಿಟ್ಟ ಪ್ರಗತಿ

ಜಗದ್ಗುರು XIVನೇ ಲಿಯೋರವರು ಸ್ಯಾಕ್ರೊಸ್ಯಾಂಕ್ಟಮ್ ಕಾನ್ಸಿಲಿಯಮ್ ಆರಾಧನಾ ನವೀಕರಣಕ್ಕೆ ಮಾರ್ಗಸೂಚಿಯನ್ನೂ ನೀಡಿದೆ ಎಂದು ಹೇಳಿದರು. ವಿಶ್ವಾಸಿಗಳು ಆರಾಧನೆಯ ಸಮೃದ್ಧಿಯನ್ನು ಸುಲಭವಾಗಿ ಅನುಭವಿಸಬಹುದಾದಂತೆ ಮಾಡಲು, “ಉತ್ತಮ ಪರಂಪರೆಯನ್ನು ಉಳಿಸಿಕೊಳ್ಳಬೇಕು ಮತ್ತು ನ್ಯಾಯಸಮ್ಮತವಾದ ಪ್ರಗತಿಗೆ ಅವಕಾಶ ನೀಡಬೇಕು” ಎಂದು ಅದು ಸೂಚಿಸಿದೆ ಎಂದರು.

ಇದನ್ನು ವಿವರಿಸಲು ಅವರು ತಮ್ಮ ಪೂರ್ವಾಧಿಕಾರಿಯಾದ ಜಗದ್ಗುರು XVIನೇ ಬೆನೆಡಿಕ್ಟ್  ರವರನ್ನು ಉಲ್ಲೇಖಿಸಿದರು. “ಪರಂಪರೆ ಮತ್ತು ಪ್ರಗತಿಯನ್ನು ಅನೇಕ ಬಾರಿ ತಪ್ಪಾಗಿ ಪರಸ್ಪರ ವಿರುದ್ಧವಾದವುಗಳೆಂದು ಪರಿಗಣಿಸಲಾಗುತ್ತದೆ, ಆದರೆ ವಾಸ್ತವದಲ್ಲಿ, ಈ ಎರಡೂ ಪರಿಕಲ್ಪನೆಗಳು ಒಂದಾಗಿವೆ. ಪರಂಪರೆ ಜೀವಂತ ವಾಸ್ತವಿಕತೆ ಆಗಿದ್ದು, ಅದರಲ್ಲಿ ಅಭಿವೃದ್ಧಿ ಮತ್ತು ಪ್ರಗತಿಯ ತತ್ವವೂ ಅಡಗಿದೆ” ಎಂದು ಅವರು ಹೇಳಿದ್ದಾರೆ.

ಮಹಾಸಭೆ ನಿಜವಾದ ಪರಂಪರೆಯಲ್ಲಿ ಬೇರುಬಿಟ್ಟಿರುವ ಈ ಪ್ರಗತಿಯ ನ್ಯಾಯಸಮ್ಮತತೆಯನ್ನು ದೃಢಪಡಿಸುತ್ತದೆ. ಆರಾಧನೆಯಲ್ಲಿ ‘ದೈವಿಕವಾಗಿ ಸ್ಥಾಪಿತವಾದ ಬದಲಿಸಲಾಗದ ಅಂಶಗಳು’ ಮತ್ತು ಬದಲಾವಣೆಗೆ ಒಳಪಡಬಹುದಾದ ಇತರ ಅಂಶಗಳ ನಡುವೆ ಅದು ವ್ಯತ್ಯಾಸ ಮಾಡುತ್ತದೆ, ಎಂದು ಜಗದ್ಗುರುಗಳು ಒತ್ತಿಹೇಳಿದರು.

ಶತಮಾನಗಳ ಕಾಲ ಇಂತಹ ಬದಲಾವಣೆಗಳು ನಿರಂತರವಾಗಿ ನಡೆಯುತ್ತ ಬಂದಿವೆ, ಇದರಿಂದ ವಿಶ್ವಾಸಿಗಳು ಆರಾಧನೆಯಲ್ಲಿ ಮತ್ತು ಕ್ರೈಸ್ತ ನಂಬಿಕೆಯ ಅಡಿಪಾಯವಾದ “ಕ್ರಿಸ್ತನ ಪಾಸ್ಕ ರಹಸ್ಯದಲ್ಲಿ” ಸಂಪೂರ್ಣವಾಗಿ ಪಾಲ್ಗೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

“ಧಮ೯ಸಭೆಯ ಆರಾಧನೆ ಪ್ರತಿಯೊಂದು ಯುಗದ ಸಾಂಸ್ಕೃತಿಕ ರೂಪಗಳಲ್ಲಿ ತನ್ನನ್ನು ವ್ಯಕ್ತಪಡಿಸಿಕೊಂಡಿದೆ,ಅವುಗಳನ್ನು ಪ್ರಭಾವಿಸಿ, ಪರಿವರ್ತಿಸುವ ಸಾಮರ್ಥ್ಯವನ್ನೂ ಹೊಂದಿದೆ,” ಎಂದು ಜಗದ್ಗುರುಗಳು ಹೇಳಿದರು. ಇದೇ ಕಾರಣದಿಂದ ಅದು ಸುವಾರ್ತಾ ಪ್ರಸಾರದ ಶಕ್ತಿಯಾಗಿದೆ ಎಂದರು.

ಏಕತೆಯನ್ನು ಬೆಳೆಸುವ ಪ್ರಗತಿ

ಮಹಾಸಭೆಯ ಪಿತೃಗಳು, ಆಚರಣೆಗಳ ಪರಿಷ್ಕರಣೆಯನ್ನು “ಹೊಸ ರೂಪಗಳು ಈಗಿರುವ ರೂಪಗಳಿಂದ ಸ್ವಾಭಾವಿಕವಾಗಿ ಬೆಳೆಯುವಂತೆ” ಜಾಗರೂಕತೆಯಿಂದ ಮಾಡಬೇಕು ಎಂದು ಒತ್ತಿಹೇಳಿದ್ದಾರೆ ಎಂದು ಜಗದ್ಗುರುಗಳು ವಿವರಿಸಿದರು. ಧರ್ಮ ಸಭೆಯ ಹಿತಕ್ಕಾಗಿ ಪ್ರತಿಯೊಂದು ಸುಧಾರಣೆಯೂ “ಸೂಕ್ಷ್ಮವಾದ ಧಾರ್ಮಿಕ, ಐತಿಹಾಸಿಕ ಮತ್ತು ಧರ್ಮಾಧ್ಯಕ್ಷೀಯ ಅಧ್ಯಯನ”ದ ನಂತರವೇ ನಡೆಯಬೇಕು ಎಂದರು.

ಆದ್ದರಿಂದ ಮಹಾಸಭೆಯ ಮ್ಯಾಜಿಸ್ಟೀರಿಯಂ ವಿಶ್ವಾಸಿಗಳಲ್ಲಿ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಕರೆ ನೀಡುತ್ತದೆ ಮತ್ತು “ಯಾರೂ ತಮ್ಮ ಸ್ವಂತ ಮುಂದಾಳತ್ವದಲ್ಲಿ ಆರಾಧನಾ ವಿಷಯಗಳಲ್ಲಿ ಏನನ್ನೂ ಸೇರಿಸಬಾರದು, ತೆಗೆದುಹಾಕಬಾರದು ಅಥವಾ ಬದಲಾಯಿಸಬಾರದು” ಎಂದು ಎಚ್ಚರಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು.

ಮಹಾಸಭೆಯ ಸಂವಿಧಾನದಲ್ಲಿ ಉಲ್ಲೇಖಿಸಲಾದ ಪ್ರಗತಿ ಯಾವ ರೀತಿಯಲ್ಲೂ ಧರ್ಮ ಸಭೆಯ ಏಕತೆಯನ್ನು ಹಾನಿಗೊಳಿಸುವುದಿಲ್ಲ,ಬದಲಾಗಿ ಅದನ್ನು ದೃಢಪಡಿಸಿ ಬೆಳೆಸುವ ಉದ್ದೇಶ ಹೊಂದಿದೆ ಎಂದು ಜಗದ್ಗುರುಗಳು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

27 ಮೇ 2026, 16:25