ಹುಡುಕಿ

ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು   (ANSA)

ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ ಜಗದ್ಗುರುಗಳು: ಪ್ರೀತಿಯು ತ್ಯಾಗ, ನಷ್ಟವನ್ನು ಸ್ವೀಕರಿಸುವ ಮನೋಭಾವ ಮತ್ತು ಆತಿಥ್ಯವನ್ನು ಒಳಗೊಂಡಿರುತ್ತದೆ.

ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು, ನಿಜವಾದ ಪ್ರೀತಿಯು ತ್ಯಾಗದ ಮನೋಭಾವವನ್ನು ಹೊಂದಿರಬೇಕು, ನಷ್ಟವನ್ನು ಸ್ವೀಕರಿಸುವ ಸಿದ್ಧತೆಯನ್ನು ಒಳಗೊಂಡಿರಬೇಕು ಹಾಗೂ ಅಗತ್ಯದಲ್ಲಿರುವವರನ್ನು ಆತ್ಮೀಯವಾಗಿ ಸ್ವಾಗತಿಸಿ ಆತಿಥ್ಯ ನೀಡುವ ಮನಸ್ಸನ್ನು ಹೊಂದಿರಬೇಕು ಎಂದು ಹೇಳಿದರು.

ವ್ಯಾಟಿಕನ್ ವರದಿ

ಸಂತ ಪೇತ್ರರ ಚೌಕದಲ್ಲಿ ಭಕ್ತರೊಂದಿಗೆ ಜಗದ್ಗುರು XIVನೇ ಲಿಯೋರವರು ತ್ರಿಕಾಲ ಪ್ರಾರ್ಥನೆ ನೆರವೇರಿಸಿದರು

ಭಾನುವಾರ, ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಯಾತ್ರಿಕರೊಂದಿಗೆ ಮಧ್ಯಾಹ್ನದ ತ್ರಿಕಾಲ ಪ್ರಾರ್ಥನೆಯಲ್ಲಿ ಮರಿಯಮ್ಮನ ಪ್ರಾರ್ಥನೆಯನ್ನು ನೆರವೇರಿಸಿದರು.

ಆ ದಿನದ ಸುವಾರ್ತೆ (ಮತ್ತಾಯ 10:37–42) ಕುರಿತು ಧ್ಯಾನಿಸಿದ ಜಗದ್ಗುರುಗಳು, ಯೇಸುವಿನ ಶಿಷ್ಯರಾಗುವುದಕ್ಕೆ ಬೇಕಾದ ಅವಶ್ಯಕತೆಗಳು ಹಾಗೂ ಅವರೊಂದಿಗೆ ಸಂಪೂರ್ಣ ಪ್ರೀತಿಯ ಸಂಬಂಧಕ್ಕೆ ನಮ್ಮನ್ನು ನಾವು ಹೇಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದರು.

ಪ್ರೀತಿಯು ತ್ಯಾಗ, ನಷ್ಟವನ್ನು ಸ್ವೀಕರಿಸುವ ಮನೋಭಾವ ಮತ್ತು ಆತಿಥ್ಯವನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

ಯೇಸುವನ್ನು ಅನುಸರಿಸಲು ಒಬ್ಬ ಪ್ರಾಪ್ತವಯಸ್ಕ ಮಗ ಅಥವಾ ಮಗಳು ತನ್ನ ತಂದೆ-ತಾಯಿಯನ್ನು ಬಿಟ್ಟು ಹೊರಡಬೇಕಾಗುತ್ತದೆ ಎಂಬ ಉದಾಹರಣೆಯನ್ನು ಯೇಸು ನೀಡುತ್ತಾರೆ ಎಂದು ಜಗದ್ಗುರುಗಳು ಹೇಳಿದರು.

ಸಂಬಂಧಗಳಲ್ಲಿ ಕಂಡುಬರುವ ಈ ವೈರಾಗ್ಯ ಅಥವಾ ಬಿಡುವಿಕೆಯ ಮನೋಭಾವದ ಅರ್ಥವೇನೆಂದರೆ, ಕ್ರಿಸ್ತನು ನಮಗೆ ನೀಡುವ ಪ್ರೀತಿಯ ಮೂಲಕವೇ ನಮ್ಮ ಎಲ್ಲಾ ಸಂಬಂಧಗಳಲ್ಲಿ ನಿಜವಾದ ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ವೈವಾಹಿಕ ಜೀವನವನ್ನು ಪರಿಗಣಿಸಿ,ಎಂದು ಜಗದ್ಗುರುಗಳು ಹೇಳಿದರು. "ತಂದೆ-ತಾಯಿಯ ಮನೆಯನ್ನು ಬಿಟ್ಟು ವೈವಾಹಿಕ ಜೀವನಕ್ಕೆ ಸಂಪೂರ್ಣವಾಗಿ ಬದ್ಧರಾದಾಗ ಮಾತ್ರ ವಿವಾಹ ಜೀವನವು ತನ್ನ ಪೂರ್ಣತೆಯನ್ನು ಪಡೆಯುತ್ತದೆ."

ಅದೇ ರೀತಿಯಲ್ಲಿ, ತಂದೆ-ತಾಯಿಯರು ತಮ್ಮ ಮಕ್ಕಳನ್ನು ಸ್ವತಂತ್ರವಾಗಿ ಜೀವನ ನಡೆಸುವಂತೆ, ತಮ್ಮ ಕಾಲಿನ ಮೇಲೆ ತಾವೇ ನಿಲ್ಲುವಂತೆ ಹಾಗೂ ಜೀವನದಲ್ಲಿ ಸಂತೋಷ ಮತ್ತು ಪರಿಪೂರ್ಣತೆಯನ್ನು ಕಂಡುಕೊಳ್ಳುವಂತೆ ಬೆಳೆಸಬೇಕು ಎಂದು ಅವರು ಹೇಳಿದರು.

ಮುಂದುವರಿದು ಮಾತನಾಡಿದ ಜಗದ್ಗುರುಗಳು, ನಷ್ಟವನ್ನು ಒಪ್ಪಿಕೊಳ್ಳುವುದು ಕೂಡ ಪ್ರೀತಿಯ ಅವಿಭಾಜ್ಯ ಅಂಶವಾಗಿದೆ ಎಂದು ಹೇಳಿದರು. ಸ್ವಂತಕ್ಕಾಗಿ ಎಲ್ಲವನ್ನೂ ಹೊಂದಿರಬೇಕೆಂಬ ಮನೋಭಾವದಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು ಎಂದರು.

"ಪ್ರೀತಿಯು ಫಲ ನೀಡುವುದು ಆತ್ಮದಾನದ ಮೂಲಕವೇ," ಎಂದು ಅವರು ಹೇಳಿದರು. "ಇನ್ನೊಬ್ಬರಿಗೆ ಸ್ಥಳ ಕಲ್ಪಿಸಲು ನಮ್ಮಲ್ಲಿ ಸ್ವಲ್ಪವನ್ನು ಕಳೆದುಕೊಳ್ಳಲು, ಸ್ನೇಹಿತನ ಮಾತು ಕೇಳಲು ನಮ್ಮ ಸಮಯದ ಒಂದು ಭಾಗವನ್ನು ತ್ಯಜಿಸಲು, ಸಂಕಷ್ಟದಲ್ಲಿರುವವರೊಂದಿಗೆ ಪಾಲುಗೊಳ್ಳಲು ನಮ್ಮ ಸೌಕರ್ಯದ ಒಂದು ಭಾಗವನ್ನು ಬಿಟ್ಟುಕೊಡಲು ನಾವು ಸಿದ್ಧರಾಗಿದ್ದಾಗ ಮಾತ್ರ ಪ್ರೀತಿಯು ಫಲಿಸುತ್ತದೆ."

ಯೇಸು, ನಿಜವಾದ ಜೀವನವನ್ನು ಕಂಡುಕೊಳ್ಳಲು ನಾವು ನಮ್ಮ ಸ್ವಂತ ಜೀವವನ್ನೇ ಕಳೆದುಕೊಳ್ಳಲು ಸಿದ್ಧರಾಗಿರಬೇಕು ಎಂದು ಹೇಳುತ್ತಾರೆ. ಆಗ ಮಾತ್ರ ನಾವು ಪ್ರೀತಿಯಿಂದ ದೊರೆಯುವ ನಿಜವಾದ ಸಂತೋಷಕ್ಕೆ ನಮ್ಮನ್ನು ತೆರೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಗದ್ಗುರುಗಳು ವಿವರಿಸಿದರು.

ಕ್ರೈಸ್ತರು ಶಿಲುಬೆಯನ್ನು ಸ್ವೀಕರಿಸಿ, ಯೇಸು ತಮ್ಮನ್ನು ತಾವು ಅರ್ಪಿಸಿಕೊಂಡಂತೆಯೇ ತಮ್ಮನ್ನೂ ಅರ್ಪಿಸಿಕೊಳ್ಳಲು ಕರೆಯಲ್ಪಟ್ಟಿದ್ದಾರೆ. ಹೀಗೆ ಮಾಡಿದಾಗ ಮಾತ್ರ ಸಮೃದ್ಧ ಜೀವನವನ್ನು ಪಡೆಯಬಹುದು ಎಂದು ಅವರು ಹೇಳಿದರು.

"ನಾವು ಆತ್ಮದಾನದ ಮನೋಭಾವದ ಪ್ರಕಾರ ಬದುಕಿದರೆ, ನಮ್ಮ ಸಂಬಂಧಗಳಲ್ಲಿಯೂ ಹೊಸ ಜೀವವನ್ನು ಅರಳಿಸುವ ಸಾಮರ್ಥ್ಯವನ್ನು ಹೊಂದುವೆವು," ಎಂದು ಜಗದ್ಗುರುಗಳು ಹೇಳಿದರು.

ನಂತರ ಜಗದ್ಗುರು XIVನೇ ಲಿಯೋರವರು ಆತಿಥ್ಯದ ವರದ ಕುರಿತು ಗಮನ ಸೆಳೆದರು. ಆತಿಥ್ಯವು ಪ್ರೀತಿಯ ಅಭಿವ್ಯಕ್ತಿಗೆ ಅತ್ಯಗತ್ಯವಾದ ಅಂಶವಾಗಿದೆ ಎಂದು ಅವರು ಹೇಳಿದರು.

"ಪ್ರೀತಿಯು ಕೇವಲ ಭಾವನೆಯಲ್ಲ; ಅದು ಸ್ಪಷ್ಟವಾದ ಆಯ್ಕೆಗಳು ಮತ್ತು ಕಾರ್ಯಗಳ ಮೂಲಕ ವ್ಯಕ್ತವಾಗುತ್ತದೆ. ಬಾಯಾರಿದವನಿಗೆ ಒಂದು ಲೋಟ ನೀರು ಕೊಡುವಂತಹ ಸಣ್ಣ ದೈನಂದಿನ ಕಾರ್ಯಗಳಲ್ಲಿಯೇ ಅದು ವ್ಯಕ್ತವಾಗುತ್ತದೆ," ಎಂದು ಅವರು ಹೇಳಿದರು.

ಯೇಸು ತಮ್ಮ ಶಿಷ್ಯರನ್ನು ಯಾವುದೇ ಸಿದ್ಧತೆಗಳಿಲ್ಲದೆ ಸುವಾರ್ತೆಯನ್ನು ಸಾರಲು ಕಳುಹಿಸಿದಂತೆ, ನಾವೂ ಸಹ ಇತರರಿಂದ ಆತಿಥ್ಯವನ್ನು ಸ್ವೀಕರಿಸುವುದನ್ನೂ ಹಾಗೂ ಇತರರಿಗೆ ಆತಿಥ್ಯವನ್ನು ನೀಡುವುದನ್ನೂ ಕಲಿಯಬೇಕು ಎಂದು ಅವರು ಹೇಳಿದರು.

ಕೊನೆಯಲ್ಲಿ ಅವರು, "ಯೇಸುವಿನ ಹೆಸರಿನಲ್ಲಿ ಬರುವವರನ್ನು ನಾವು ಸ್ವಾಗತಿಸಿದಾಗ, ನಾವು ಯೇಸುವನ್ನೇ ಹಾಗೂ ಅವರನ್ನು ಕಳುಹಿಸಿದ ಪರಲೋಕದ ತಂದೆಯನ್ನೇ ಸ್ವಾಗತಿಸುತ್ತೇವೆ. ನಿಜವಾಗಿ, ಪ್ರಭುವಿನ ಮೇಲಿನ ಪ್ರೀತಿಯು ಯಾವಾಗಲೂ ನಮ್ಮ ಸಹೋದರ-ಸಹೋದರಿಯರನ್ನು ಆತ್ಮೀಯವಾಗಿ ಸ್ವಾಗತಿಸುವುದನ್ನು ಒಳಗೊಂಡಿರುತ್ತದೆ" ಎಂದು ಹೇಳಿದರು.

 

 

28 ಜೂನ್ 2026, 15:27