ಹುಡುಕಿ

ಜಗದ್ಗುರು XIVನೇ ಲಿಯೋರವರು ಪ್ರಪಂಚದಾದ್ಯಂತದ ಬರಹಗಾರರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಜಗದ್ಗುರು XIVನೇ ಲಿಯೋರವರು ಪ್ರಪಂಚದಾದ್ಯಂತದ ಬರಹಗಾರರನ್ನು ಉದ್ದೇಶಿಸಿ ಮಾತನಾಡುತ್ತಾರೆ.  (ANSA)

ಜಗದ್ಗುರುಗಳು: ಬರವಣಿಗೆ ದೇವರನ್ನು ಕುರಿತು ಮಾತನಾಡುತ್ತದೆ ಮತ್ತು ಸತ್ಯದ ರೂಪರೇಖೆಯನ್ನು ಗುರುತಿಸಲು ಸಹಾಯ ಮಾಡುತ್ತದೆ.

ವ್ಯಾಟಿಕನ್ ಪ್ರಕಾಶನ ಸಂಸ್ಥೆ (ಎಲ್ಇವಿ)ಯ 100ನೇ ವಾರ್ಷಿಕೋತ್ಸವದ ಅಂಗವಾಗಿ, ಜಗದ್ಗುರು XIVನೇ ಲಿಯೋರವರು ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ ಲೇಖಕರನ್ನು ಭೇಟಿಯಾಗಿ, ಬರವಣಿಗೆ ಎಂಬುದು ಮಾನವೀಯತೆ, ಸತ್ಯ ಮತ್ತು ದೇವರ ಅನ್ವೇಷಣೆಯ ಅಭಿವ್ಯಕ್ತಿಯಾಗಿದೆ ಎಂದು ನೆನಪಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ಪ್ರಕಾಶನ ಸಂಸ್ಥೆ (ಎಲ್ಇವಿ) ಸ್ಥಾಪನೆಯ ಶತಮಾನೋತ್ಸವದ ಅಂಗವಾಗಿ ರೋಮಿನಲ್ಲಿ ಸಮಾವೇಶಗೊಂಡಿದ್ದ ವಿಶ್ವದ ವಿವಿಧ ಭಾಗಗಳ ಲೇಖಕರನ್ನು ಉದ್ದೇಶಿಸಿ ಮಾತನಾಡುತ್ತಾ, “ನಮಗೆ ನಿಮ್ಮ ಅಗತ್ಯವಿದೆ” ಎಂದು ಕರೆ ನೀಡಿದರು. ಲೇಖಕರ ಕಲ್ಪನಾಶಕ್ತಿ, ಸೃಜನಶೀಲತೆ ಮತ್ತು ಜೀವಂತ ಚಿಂತನೆಗಳು ಮಾನವರಿಗೆ ಸ್ವಾತಂತ್ರ್ಯ, ಸತ್ಯತೆ, ಸಾಂತ್ವನ ಮತ್ತು ಶಾಂತಿಯ ಅನುಭವವನ್ನು ನೀಡುವ ವಾತಾವರಣವನ್ನು ನಿರ್ಮಿಸುತ್ತವೆ ಎಂದು ಅವರು ಹೇಳಿದರು.

ಬರವಣಿಗೆ ಎಂಬುದು ಸತ್ಯವನ್ನು ಅನ್ವೇಷಿಸುವ ಮತ್ತು ಪ್ರಕಟಿಸುವ ಕ್ರಿಯೆಯಾಗಿದೆ ಎಂದು ಜಗದ್ಗುರುಗಳು ವಿವರಿಸಿದರು. ಅದು ನಾವು ಯಾರು, ನಾವು ಏನನ್ನು ನಂಬುತ್ತೇವೆ, ಯಾವ ಭವಿಷ್ಯವನ್ನು ಕನಸು ಕಾಣುತ್ತೇವೆ ಎಂಬುದನ್ನು ಬಹಿರಂಗಪಡಿಸುತ್ತದೆ. ಸತ್ಯವು ನಮ್ಮ ಸ್ವಂತ ಆಸ್ತಿಯಲ್ಲ, ಬದಲಾಗಿ ಸತ್ಯವೇ ನಮ್ಮನ್ನು ತನ್ನ ಕಡೆಗೆ ಸೆಳೆಯುತ್ತದೆ. ಆದ್ದರಿಂದ ಲೇಖಕರು ಸತ್ಯದ ಅನ್ವೇಷಣೆಯಲ್ಲಿ ತೊಡಗಿರುವವರಾಗಿ ಇತರರನ್ನೂ ಸತ್ಯದತ್ತ ಆಕರ್ಷಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು.

ಮುಂದೆ ಅವರು ಬರವಣಿಗೆಯನ್ನು ಮಾನವೀಯತೆಯ ಕಾರ್ಯವೆಂದು ಬಣ್ಣಿಸಿದರು. ಸಾಹಿತ್ಯವು ಮಾನವ ಜೀವನದ ಸಂಪೂರ್ಣ ಅನುಭವವನ್ನು ಒಳಗೊಂಡಿದ್ದು, ಇತರರ ಭಾವನೆಗಳು, ಅನುಭವಗಳು ಮತ್ತು ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ. ಈ ರೀತಿಯ ಸಹಾನುಭೂತಿ ಇಲ್ಲದೆ ಐಕ್ಯತೆ, ಹಂಚಿಕೆ, ಕರುಣೆ ಮತ್ತು ದಯೆ ಬೆಳೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಓದು ಮತ್ತು ಬರವಣಿಗೆ ಮಾನವನನ್ನು ವಿಶಾಲ ಮನಸ್ಸಿನವನನ್ನಾಗಿ ಮಾಡುತ್ತವೆ ಎಂದು ಜಗದ್ಗುರುಗಳು ತಿಳಿಸಿದರು. ಕಥೆಗಳ ಪಾತ್ರಗಳೊಂದಿಗೆ ಓದುಗರು ತಮ್ಮನ್ನು ಗುರುತಿಸಿಕೊಂಡಾಗ, ಅವರು ಅನೇಕ ಜೀವನಾನುಭವಗಳನ್ನು ಪಡೆದುಕೊಳ್ಳುತ್ತಾರೆ. ಇದರಿಂದ ವಿಭಿನ್ನ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಸತ್ಯದ ವಿಶಾಲ ಚಿತ್ರಣವನ್ನು ಕಾಣಲು ಸಹಾಯವಾಗುತ್ತದೆ.

ಜಗದ್ಗುರು ಲಿಯೋರವರು ಬರವಣಿಗೆ ದೇವರೊಂದಿಗೂ ಆಳವಾದ ಸಂಬಂಧ ಹೊಂದಿದೆ ಎಂದು ಒತ್ತಿ ಹೇಳಿದರು. ಬೈಬಲ್‌ನಲ್ಲಿ ದೇವರು ಮಾನವರ ಕಥೆಗಳು, ಘಟನೆಗಳು, ಮುಖಗಳು ಮತ್ತು ಭೇಟಿಗಳ ಮೂಲಕ ತನ್ನನ್ನು ಪ್ರಕಟಿಸಿಕೊಳ್ಳುತ್ತಾನೆ. ಮಾನವ ಜೀವನದ ಆಳವನ್ನು ನಾವು ಅನ್ವೇಷಿಸಿದಾಗ, ದೇವರಿಂದ ದೂರವಾಗುವುದಿಲ್ಲ,ಬದಲಾಗಿ ದೇವರ ಸನ್ನಿಧಿಯನ್ನು ಇನ್ನಷ್ಟು ಸ್ಪಷ್ಟವಾಗಿ ಕಂಡುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಕೊನೆಯಲ್ಲಿ, ಲೇಖಕರು ಸಮನ್ವಯ, ಭೇಟಿಯ ಸಂಸ್ಕೃತಿ ಮತ್ತು ಸ್ನೇಹದ ಬೀಜಗಳನ್ನು ಬಿತ್ತುವ ಮಹತ್ವದ ಸೇವೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಜಗದ್ಗುರುಗಳು ಕೃತಜ್ಞತೆ ಸಲ್ಲಿಸಿದರು. ಪವಿತ್ರ ಜಗದ್ಗುರು VIನೇ ಪೌಲರ ಮಾತುಗಳನ್ನು ಪುನರುಚ್ಚರಿಸಿ, “ನಮಗೆ ನಿಮ್ಮ ಅಗತ್ಯವಿದೆ” ಎಂದು ಹೇಳಿದ ಅವರು, ಸಮಾಜದಲ್ಲಿ ಭರವಸೆ, ಸತ್ಯ ಮತ್ತು ಸಹೋದರತ್ವವನ್ನು ಬೆಳೆಸುವ ತಮ್ಮ ಕಾರ್ಯವನ್ನು ಮುಂದುವರಿಸಲು ಲೇಖಕರನ್ನು ಉತ್ತೇಜಿಸಿದರು.

24 ಜೂನ್ 2026, 17:49