ಹುಡುಕಿ

ಮಾರ್ಚ್ 4, 2026 ರಂದು ಬುಧವಾರದ ಸಾಮಾನ್ಯ ಸಭೆಯಲ್ಲಿ ಜಗದ್ಗುರು XIVನೇ ಲಿಯೋರವರು ಅನಾರೋಗ್ಯ ಪೀಡಿತ ಮಗುವನ್ನು ಆಶೀರ್ವದಿಸುತ್ತಾರೆ. ಮಾರ್ಚ್ 4, 2026 ರಂದು ಬುಧವಾರದ ಸಾಮಾನ್ಯ ಸಭೆಯಲ್ಲಿ ಜಗದ್ಗುರು XIVನೇ ಲಿಯೋರವರು ಅನಾರೋಗ್ಯ ಪೀಡಿತ ಮಗುವನ್ನು ಆಶೀರ್ವದಿಸುತ್ತಾರೆ.  (ANSA)

ಸಾರ್ವಜನಿಕ ಭೇಟಿಯಲ್ಲಿ ಜಗದ್ಗುರುಗಳು: ಪವಿತ್ರ ಯೂಕರಿಸ್ಟಿನ ರಹಸ್ಯದಿಂದ ನಾವು ರೂಪಾಂತರಗೊಳ್ಳೋಣ.

ದ್ವಿತೀಯ ವ್ಯಾಟಿಕನ್ ಮಹಾಸಭೆಯ ಪವಿತ್ರ ಆರಾಧನೆಯ ಕುರಿತ ಧರ್ಮಸಿದ್ಧಾಂತಾತ್ಮಕ ಸಂವಿಧಾನವಾದ ಸ್ಯಾಕ್ರೋಸಾಂಕ್ಟಮ್ ಕಾನ್ಸಿಲಿಯಮ್ ಕುರಿತು ತಮ್ಮ ಚಿಂತನೆಗಳನ್ನು ಮುಂದುವರಿಸಿದ ಜಗದ್ಗುರು XIVನೇ ಲಿಯೋರವರು ಬುಧವಾರದ ಸಾಮಾನ್ಯ ಸಾರ್ವಜನಿಕ ಭೇಟಿಯಲ್ಲಿ ಪವಿತ್ರ ಯೂಕರಿಸ್ಟಿನ ಮಹತ್ವದ ಮೇಲೆ ಗಮನಹರಿಸಿ, ಈ ಪವಿತ್ರ ರಹಸ್ಯವು “ನಾವು ಸ್ವತಃ ಪ್ರಭುವಿನ ಜೀವನಶೈಲಿ ಮತ್ತು ಮನೋಭಾವವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವಂತೆ ಮಾಡುತ್ತದೆ” ಎಂದು ಒತ್ತಿ ಹೇಳಿದರು.

ವ್ಯಾಟಿಕನ್ ವರದಿ

“ದೈವಿಕ ಜೀವನದ ಈ ಮೂಲದಿಂದ ನಾವು ವಿಶ್ವಾಸದಿಂದ ಶಕ್ತಿಯನ್ನು ಪಡೆದುಕೊಳ್ಳೋಣ ಮತ್ತು ನಾವು ಆಚರಿಸುವ ಈ ಮಹಾರಹಸ್ಯವು ನಮ್ಮನ್ನು ಪರಿವರ್ತಿಸಲಿ.”

ಜಗದ್ಗುರು XIVನೇ ಲಿಯೋರವರು ಬುಧವಾರ ಸಂತ ಪೇತ್ರರ ಚೌಕದಲ್ಲಿ ನಡೆದ ತಮ್ಮ ಸಾಪ್ತಾಹಿಕ ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದರು. ದ್ವಿತೀಯ ವ್ಯಾಟಿಕನ್  ಮಹಾಸಭೆ ಮತ್ತು ಅದರ 1963ರ ಪವಿತ್ರ ಆರಾಧನೆಯ ಕುರಿತ ಧರ್ಮಸಿದ್ಧಾಂತಾತ್ಮಕ ಸಂವಿಧಾನವಾದ ಸ್ಯಾಕ್ರೋಸಾಂಕ್ಟಮ್ ಕಾನ್ಸಿಲಿಯಮ್ ಕುರಿತು ನಡೆಯುತ್ತಿರುವ ತಮ್ಮ ಧರ್ಮೋಪದೇಶ ಸರಣಿಯನ್ನು ಮುಂದುವರಿಸುತ್ತಾ, ಅವರು ಈ ಬಾರಿ ಪವಿತ್ರ ಯೂಕರಿಸ್ಟಿನ ಆಚರಣೆಯ ಕುರಿತು ಚಿಂತನೆ ಹಂಚಿಕೊಂಡರು.

ಜಗದ್ಗುರುಗಳು ಈ ಸಂವಿಧಾನದ ಎರಡನೇ ಅಧ್ಯಾಯದಲ್ಲಿ ಯೂಕರಿಸ್ಟನ್ನು “ಪ್ರೀತಿಯ ಸಂಸ್ಕಾರ, ಏಕತೆಯ ಚಿಹ್ನೆ, ದಾನಧರ್ಮದ ಬಂಧ, ಕ್ರಿಸ್ತನನ್ನು ಸ್ವೀಕರಿಸುವ ಪಾಸ್ಕಾ ಭೋಜನ, ಅದರಲ್ಲಿ ಆತ್ಮವು ಕೃಪೆಯಿಂದ ತುಂಬಲ್ಪಡುತ್ತದೆ ಮತ್ತು ಭವಿಷ್ಯದ ಮಹಿಮೆಯ ಭರವಸೆ ನಮಗೆ ನೀಡಲ್ಪಡುತ್ತದೆ” ಎಂದು ವರ್ಣಿಸಲಾಗಿದೆ ಎಂದು ನೆನಪಿಸಿದರು.

ಅಲ್ಲದೆ, ಪವಿತ್ರ ಬಲಿಪೂಜೆಯಲ್ಲಿ ವಿಶ್ವಾಸಿಗಳು ಕೇವಲ ನಿಷ್ಕ್ರಿಯ ಪ್ರೇಕ್ಷಕರಾಗಿರದೆ, ಯೇಸು ಕ್ರಿಸ್ತನೊಂದಿಗೆ ತಮ್ಮನ್ನೇ ಅರ್ಪಿಸಿಕೊಳ್ಳಲು ಪ್ರೋತ್ಸಾಹಿಸಲ್ಪಟ್ಟಿದ್ದಾರೆ ಎಂಬುದನ್ನು ಅವರು ಉಲ್ಲೇಖಿಸಿದರು. ಯೂಕರಿಸ್ಟಿನಲ್ಲಿ ಭಾಗವಹಿಸುವಾಗ ನಾವು ದೇವರ ವಾಕ್ಯವನ್ನು ಆಲಿಸಲು ಮತ್ತು ಪ್ರಭುವಿನ ಭೋಜನದ ಮೇಜಿನಿಂದ ಪೋಷಿಸಲ್ಪಡಲು ಆಹ್ವಾನಿತರಾಗುತ್ತೇವೆ, ಅಲ್ಲಿ ಪ್ರಭುವೇ ತನ್ನನ್ನು ತಂದೆಗೆ ಅರ್ಪಿಸಿಕೊಳ್ಳುತ್ತಾನೆ ಎಂದು ಅವರು ಹೇಳಿದರು.

ಈ ದೃಷ್ಟಿಕೋನದಲ್ಲಿ ಯೂಕರಿಸ್ಟು ಕ್ರೈಸ್ತರ ಆತ್ಮೀಯ ಬಲಿಯ ರೂಪವಾಗಿದೆ ಎಂದು ಜಗದ್ಗುರುಗಳು ವಿವರಿಸಿದರು. ಏಕೆಂದರೆ ಅದು ದೇವರೊಂದಿಗಿನ ಹಾಗೂ ಪರಸ್ಪರರೊಂದಿಗಿನ ಐಕ್ಯದ ಮಾರ್ಗವಾಗಿದೆ. “ಯೂಕರಿಸ್ಟಿನಲ್ಲಿ ಭಾಗವಹಿಸುವ ಮೂಲಕ ವಿಶ್ವಾಸಿಗಳು ತಮ್ಮನ್ನೇ ಅರ್ಪಿಸಿಕೊಳ್ಳುವುದನ್ನು ಕಲಿಯುತ್ತಾರೆ ಮತ್ತು ದಿನದಿಂದ ದಿನಕ್ಕೆ ಕ್ರಿಸ್ತನ ಮೂಲಕ ದೇವರೊಂದಿಗೂ ಪರಸ್ಪರರೊಂದಿಗೂ ಏಕತೆಯಲ್ಲಿ ತಮ್ಮ ಜೀವನವನ್ನು ಸಮರ್ಪಿಸಿಕೊಳ್ಳುತ್ತಾರೆ” ಎಂದು ಅವರು ಹೇಳಿದರು.

ಸಂವಿಧಾನವನ್ನು ಉಲ್ಲೇಖಿಸಿದ ಜಗದ್ಗುರುಗಳು, ಬಲಿಪೂಜೆಯಲ್ಲಿ ವಾಕ್ಯದ ಆರಾಧನೆ ಮತ್ತು ಯೂಕರಿಸ್ಟಿನ ಆರಾಧನೆ ಪರಸ್ಪರ ಅತೀ ನಿಕಟವಾಗಿ ಸಂಬಂಧ ಹೊಂದಿದ್ದು, ಅವು ಒಂದೇ ಆರಾಧನಾ ಕ್ರಿಯೆಯನ್ನು ರೂಪಿಸುತ್ತವೆ ಎಂದು ನೆನಪಿಸಿದರು. “ಯೂಕರಿಸ್ಟು ನಮ್ಮನ್ನು ಕ್ರಿಸ್ತನಲ್ಲಿ ಸೇರಿಸಿಕೊಳ್ಳುವ ಮೂಲಕ, ಸಂಪೂರ್ಣ ಆತ್ಮದಾನದ ಮೂಲಕ ಗುರುತಿಸಲ್ಪಟ್ಟ ಕರ್ತ ಯೇಸುವಿನ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ನಮಗೆ ಕಲಿಸುತ್ತದೆ” ಎಂದು ಅವರು ಹೇಳಿದರು.

ಅಂತಿಮವಾಗಿ, ಈ ಆತ್ಮದಾನವು ನಮ್ಮನ್ನು ಐಕ್ಯದ ಚಲನಶೀಲತೆಯೊಳಗೆ ಕರೆದುಕೊಂಡು ಹೋಗುತ್ತದೆ ಎಂದು ಜಗದ್ಗುರುಗಳು ಹೇಳಿದರು. ಈ ಐಕ್ಯತೆಯು ನಮ್ಮ ಜಗತ್ತು, ನಮ್ಮ ಸಮುದಾಯಗಳು, ನಮ್ಮ ಕುಟುಂಬಗಳು ಮತ್ತು ನಮ್ಮ ಹೃದಯಗಳನ್ನು ದುರ್ಬಲಗೊಳಿಸುವ ವಿಭಜನೆಯ ಶಕ್ತಿಗಳಿಗೆ ಪರಿಣಾಮಕಾರಿ ಔಷಧವಾಗಿದೆ ಎಂದು ಅವರು ವಿವರಿಸಿದರು. ದೈವಿಕ ಜೀವನದ ಈ ಸಮೃದ್ಧ ಮೂಲದಿಂದ ಎಲ್ಲ ವಿಶ್ವಾಸಿಗಳೂ ಪೋಷಣೆ ಪಡೆದು, ನಾವು ಆಚರಿಸುವ ಈ ಪವಿತ್ರ ಮಹಾರಹಸ್ಯದಿಂದ ಪರಿವರ್ತಿತರಾಗಲಿ ಎಂದು ಅವರು ಪ್ರಾರ್ಥಿಸಿದರು.

24 ಜೂನ್ 2026, 17:54