“ಕೃಪೆಯ ಅಡಿಯಲ್ಲಿ ಸ್ವಾತಂತ್ರ್ಯ”: ಜಗದ್ಗುರು XIVನೇ ಲಿಯೋರವರು ಆರಂಭಿಕ ಬರಹಗಳು ಇಂಗ್ಲಿಷ್‌ನಲ್ಲಿ ಪ್ರಕಟವಾಗಲಿವೆ.
ವ್ಯಾಟಿಕನ್ ವರದಿ
ಈಗ ಜಗದ್ಗುರು XIVನೇ ಲಿಯೋರವರು ವಂ.ಸ್ವಾಮಿ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ರವರ ಆರಂಭಿಕ ಸಾರ್ವಜನಿಕ ಬರಹಗಳನ್ನು ಒಳಗೊಂಡಿರುವ ಒಂದು ಗ್ರಂಥವು ಮೊದಲ ಬಾರಿಗೆ ಇಂಗ್ಲಿಷ್ ಭಾಷೆಯಲ್ಲಿ ಸೆಪ್ಟೆಂಬರ್ 15ರಂದು ಪ್ರಕಟವಾಗಲಿದೆ.
ಕೃಪೆಯ ಅಡಿಯಲ್ಲಿ ಸ್ವಾತಂತ್ರ್ಯ: ನನ್ನನ್ನು ರೂಪಿಸಿದ ಆಧ್ಯಾತ್ಮಿಕ ಪರಂಪರೆಯ ಕುರಿತ ಚಿಂತನೆಗಳು ಎಂಬ ಶೀರ್ಷಿಕೆಯ ಈ ಕೃತಿಯನ್ನು ಪೆಂಗ್ವಿನ್ ರ್ಯಾಂಡಮ್ ಹೌಸ್ ಕ್ರಿಶ್ಚಿಯನ್ ಪಬ್ಲಿಷಿಂಗ್ ಗ್ರೂಪ್‌ನ ಅಂಗಸಂಸ್ಥೆಯಾದ ಇಮೇಜ್ ಬುಕ್ಸ್ ಪ್ರಕಟಿಸಲಿದೆ.
ಮೂಲತಃ ವ್ಯಾಟಿಕನ್ ಪ್ರಕಾಶನ ಸಂಸ್ಥೆ (ಎಲ್ಇವಿ) ಇಟಾಲಿಯನ್ ಭಾಷೆಯಲ್ಲಿ “ಲಿಬೆರಿ ಸೊಟ್ಟೊ ಲಾ ಗ್ರಾಜಿಯಾ” ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದ ಈ ಕೃತಿಯು, 2001ರಿಂದ 2013ರವರೆಗೆ ಸಂತ ಆಗಸ್ಟಿನ್ ಸಂಘದ ಪ್ರಧಾನ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ ವಂ.ಸ್ವಾಮಿ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ರವರ ಪ್ರಭೋಧನೆಗಳು, ಭಾಷಣಗಳು, ಸಂದೇಶಗಳು ಮತ್ತು ಪತ್ರಗಳನ್ನು ಒಟ್ಟುಗೂಡಿಸಿದೆ.
ಇಟಾಲಿಯನ್ ಆವೃತ್ತಿಯನ್ನು ರೋಮಿನ ಪ್ಯಾಟ್ರಿಸ್ಟಿಕ್ ಇನ್‌ಸ್ಟಿಟ್ಯೂಟ್ ಆಗಸ್ಟಿನಿಯಾನಮ್ನಲ್ಲಿ ಅಧಿಕೃತವಾಗಿ ಪರಿಚಯಿಸಲಾಯಿತು. ಅದರ ಪ್ರಕಟಣೆಯ ಮುನ್ನಾದಿನ ಈ ಕೃತಿಯನ್ನು ಜಗದ್ಗುರು XIVನೇ ಲಿಯೋರವರಿಗೆ ಉಡುಗೊರೆಯಾಗಿ ನೀಡಲಾಯಿತು. ಈ ಕೃತಿಯು ಈಗ ಹಲವಾರು ಭಾಷೆಗಳಿಗೆ ಅನುವಾದಗೊಳ್ಳುತ್ತಿದೆ.
ಆಗಸ್ಟಿನಿಯನ್ ಧರ್ಮಗುರುಗಳಾದ ವಂ. ಸ್ವಾಮಿ ರೊಕ್ಕೊ ರೊನ್ಜಾನಿ, ವಂ. ಸ್ವಾಮಿ ಮಿಗೇಲ್ ಆಂಜೆಲ್ ಮಾರ್ಟಿನ್ ಜುವಾರೆಸ್ ಮತ್ತು ವಂ.ಸ್ವಾಮಿ ಮೈಕೆಲ್ ಡಿ ಗ್ರೆಗೋರಿಯೊ ಅವರು ಸಂಪಾದಿಸಿರುವ ಈ ಪುಸ್ತಕವು, ಮುಂದೆ ಜಗದ್ಗುರು ಆಗಲಿದ್ದ ವ್ಯಕ್ತಿಯ ಚಿಂತನೆ ಮತ್ತು ಆಧ್ಯಾತ್ಮಿಕತೆಯ ಒಳನೋಟವನ್ನು ಓದುಗರಿಗೆ ನೀಡುತ್ತದೆ.
ಪೆಂಗ್ವಿನ್ ರ್ಯಾಂಡಮ್ ಹೌಸ್ ಕ್ರಿಶ್ಚಿಯನ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಹಾಗೂ ಪ್ರಕಾಶಕರಾದ ಕ್ಯಾಂಪ್ಬೆಲ್ ವಾರ್ಟನ್ ರವರ ಪ್ರಕಾರ, “ಈ ಕೃತಿಯ ಪ್ರತಿಯೊಂದು ಅಧ್ಯಾಯವೂ ಮುಂದೆ ಜಗದ್ಗುರು ಲಿಯೋರವರು ಆಗಲಿದ್ದ ವ್ಯಕ್ತಿಯ ಆಳವಾದ ಆಧ್ಯಾತ್ಮಿಕತೆ ಮತ್ತು ದೃಷ್ಟಿಕೋನವನ್ನು ಅನಾವರಣಗೊಳಿಸುವ ಒಂದು ಕಿಟಕಿಯಂತಿದೆ.”
ಅವರು ಈ ಕೃತಿಯನ್ನು, “ಇಂದಿನ ಜಗತ್ತಿನ ಸವಾಲುಗಳನ್ನು ಎದುರಿಸಲು ಪ್ರೀತಿ ಮತ್ತು ಸೇವೆಯ ತುರ್ತು ಸಂದೇಶವನ್ನು ಹೊತ್ತಿರುವ ಪುಸ್ತಕ” ಎಂದು ವರ್ಣಿಸಿದರು.
ವಾರ್ಟನ್ ರವರ ಪ್ರಕಾರ, ಗ್ರೇಸ್ ಅಡಿಯಲ್ಲಿ ಸ್ವಾತಂತ್ರ್ಯ ಕೇವಲ ಕಥೋಲಿಕರಿಗಾಗಿ ಮಾತ್ರವಲ್ಲ, “ಜಗತ್ತನ್ನು ಪರಿವರ್ತಿಸುವ ಜೀವನವನ್ನು ನಡೆಸಲು ಮಾರ್ಗದರ್ಶನ ಮತ್ತು ಭರವಸೆಯನ್ನು ಹುಡುಕುತ್ತಿರುವ ಯಾವುದೇ ಕ್ರೈಸ್ತ ಅಥವಾ ಆಧ್ಯಾತ್ಮಿಕ ಅನ್ವೇಷಕರಿಗೂ” ಇದು ಉದ್ದೇಶಿತವಾಗಿದೆ.
2026ರ ಮೇ 6ರಂದು ರೋಮಿನಲ್ಲಿ ನಡೆದ ಇಟಾಲಿಯನ್ ಆವೃತ್ತಿಯ ಪರಿಚಯ ಕಾರ್ಯಕ್ರಮದಲ್ಲಿ, ಸಂತ ಆಗಸ್ಟಿನ್ ಸಂಘದ ಪ್ರಧಾನ ಮೇಲ್ವಿಚಾರಕರಾದ ವಂ.ಸ್ವಾಮಿ ಜೋಸೆಫ್ ಫಾರೆಲ್ ರವರು, ಈ ಕೃತಿಯ ಶೀರ್ಷಿಕೆಯು ಸಂತ ಆಗಸ್ಟಿನ್ ಅವರ ನಿಯಮಾವಳಿಯಿಂದ ಬಂದದ್ದೆಂದು ನೆನಪಿಸಿದರು. ಆ ನಿಯಮಾವಳಿಯು ಸನ್ಯಾಸಿಗಳನ್ನು “ಕಾನೂನಿನ ಅಧೀನದಲ್ಲಿರುವ ಸೇವಕರಂತೆ ಅಲ್ಲ, ಕೃಪೆಯ ಅಡಿಯಲ್ಲಿ ಸ್ವತಂತ್ರರಾಗಿರುವವರಂತೆ ಬದುಕಲು” ಪ್ರೇರೇಪಿಸುತ್ತದೆ.
ಅದೇ ಕಾರ್ಯಕ್ರಮದಲ್ಲಿ, ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರು, ಈ ಕೃತಿಯ ಪುಟಗಳು ವಂ. ಸ್ವಾಮಿ ಪ್ರೆವೋಸ್ಟ್ ರವರ ಚಿಂತನೆಗೆ ಕೇಂದ್ರವಾಗಿದ್ದ ಆಗಸ್ಟಿನಿಯನ್ ವಿಷಯಗಳನ್ನು ಅನಾವರಣಗೊಳಿಸುತ್ತವೆ ಎಂದು ಹೇಳಿದರು. ಅವುಗಳಲ್ಲಿ ದೇವರ ಅನ್ವೇಷಣೆ, ಕೃಪೆಯ ಪ್ರಾಧಾನ್ಯತೆ, ಧರ್ಮ ಸಭೆಯ ಧ್ಯೇಯ, ಬಡವರ ಕೂಗು ಹಾಗೂ ಆಧುನಿಕ ಜಗತ್ತಿಗೆ ಅರ್ಥವಾಗುವ ಭಾಷೆಯಲ್ಲಿ ಸುವಾರ್ತೆಯನ್ನು ಸಾರುವ ಅಗತ್ಯತೆ ಪ್ರಮುಖವಾಗಿವೆ.
ಈಗ ಇಂಗ್ಲಿಷ್ ಆವೃತ್ತಿಯ ಪ್ರಕಟಣೆಯೊಂದಿಗೆ, ಜಗದ್ಗುರು XIVನೇ ಲಿಯೋರವರಾಗಿ ಆಯ್ಕೆಯಾಗುವ ಮೊದಲು ವಂ.ಸ್ವಾಮಿ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ರವರ ಸೇವೆಯನ್ನು ರೂಪಿಸಿದ ಆಧ್ಯಾತ್ಮಿಕ ಬೇರುಗಳು, ಧರ್ಮಾಧ್ಯಕ್ಷೀಯ ದೃಷ್ಟಿಕೋನ ಮತ್ತು ಸುವಾರ್ತಾ ಪ್ರಸಾರದ ಕಾಳಜಿಯನ್ನು ವಿಶಾಲ ಓದುಗವರ್ಗವು ಅರಿತುಕೊಳ್ಳುವ ಅವಕಾಶ ದೊರೆತಿದೆ.
