ಜಗದ್ಗುರುಗಳು: ನೋವು ಅನುಭವಿಸುವ ಜನರಿಗೆ ಆರೋಗ್ಯ ಸೇವೆಯ ಮೂಲಕ ದೇವರ ಕರುಣೆ ಗೋಚರಿಸಬೇಕು.
ವ್ಯಾಟಿಕನ್ ವರದಿ
ಜೂನ್ 23ರಿಂದ 25ರವರೆಗೆ ಕ್ಯಾಸ್ಟೆಲ್ ಗಾಂಡೋಲ್ಫೋದಲ್ಲಿ ನಡೆಯುತ್ತಿರುವ “ಕಾರಿತಾಸ್ ಒಕ್ಕೂಟದಲ್ಲಿ ಆರೋಗ್ಯದ ಸಮಗ್ರ ದೃಷ್ಟಿಕೋನ” ಎಂಬ ವಿಷಯದ ಆರೋಗ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಜಗದ್ಗುರು XIVನೇ ಲಿಯೋರವರು ಹೃತ್ಪೂರ್ವಕ ಶುಭಾಶಯಗಳು ಹಾಗೂ ತಮ್ಮ ಆತ್ಮೀಯ ಸಾನ್ನಿಧ್ಯದ ಭರವಸೆಯನ್ನು ಕಳುಹಿಸಿದ್ದಾರೆ.
ಬುಧವಾರ ಕಳುಹಿಸಲಾದ ಈ ಸಂದೇಶಕ್ಕೆ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾಡಿ೯ನಲ್ ಪಿಯತ್ರೋ ಪಾರೋಲಿನ್ ರವರು ಸಹಿ ಹಾಕಿದ್ದರು.
ಸಮ್ಮೇಳನದ ಕಾರ್ಯಗಳು “ಸಹಕಾರ ಮತ್ತು ಐಕ್ಯತೆಗೆ ಹೊಸ ಉತ್ತೇಜನವನ್ನು ನೀಡಲಿ” ಎಂದು ಜಗದ್ಗುರುಗಳು ಪ್ರಾರ್ಥಿಸಿದರು. ಜೊತೆಗೆ, “ಸುವಾರ್ತೆಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ” ಪ್ರಯತ್ನಗಳಲ್ಲಿ ಭಾಗವಹಿಸುವವರನ್ನು ಅವರು ಪ್ರೋತ್ಸಾಹಿಸಿದರು.
ಪವಿತ್ರ ಗ್ರಂಥದಲ್ಲಿ ಯೇಸು ಕ್ರಿಸ್ತರನ್ನು ಆಗಾಗ್ಗೆ ದೈವಿಕ ವೈದ್ಯರಾಗಿ ಚಿತ್ರಿಸಲಾಗಿದೆ ಎಂದು ನೆನಪಿಸಿದ ಜಗದ್ಗುರುಗಳು, ಮಾನಸಿಕ, ದೈಹಿಕ ಹಾಗೂ ಆತ್ಮೀಯ ನೋವುಗಳಿಂದ ಬಳಲುವವರನ್ನು ಗುಣಪಡಿಸುವ ಮೂಲಕ ಕ್ರಿಸ್ತನು ದುಃಖ, ಅವಮಾನ ಮತ್ತು ಏಕಾಂಗಿತನದಿಂದ ಮುಕ್ತಿಯನ್ನು ನೀಡುತ್ತಾನೆ ಎಂದು ಹೇಳಿದರು.
ಪೋಪ್ ತಮ್ಮ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಎಂಬ ಪರಿಪತ್ರಿಕೆಯನ್ನು ಉಲ್ಲೇಖಿಸಿ, “ಪ್ರತಿಯೊಬ್ಬ ಮಾನವನು ದೇವರ ಇಚ್ಛೆಯಿಂದ ಸೃಷ್ಟಿಸಲ್ಪಟ್ಟ, ಪ್ರೀತಿಸಲ್ಪಟ್ಟ ವ್ಯಕ್ತಿಯಾಗಿರುವುದರಿಂದಲೇ ಅವನಿಗೆ ಅಂತರ್ನಿಹಿತ ಘನತೆ ದೊರೆಯುತ್ತದೆ” ಎಂದು ತಾವು ಒತ್ತಿ ಹೇಳಿದ್ದನ್ನು ನೆನಪಿಸಿದರು.
ಈ ಘನತೆ ವ್ಯಕ್ತಿಯ ಜೀವನ ಪರಿಸ್ಥಿತಿಗಳನ್ನು ಮೀರಿದುದಾಗಿದೆ ಎಂದು ಅವರು ಹೇಳಿದರು. ಯೇಸು ಆರೋಗ್ಯವನ್ನು ಮರುಸ್ಥಾಪಿಸುವ ಮೂಲಕ ಪ್ರತಿಯೊಬ್ಬರ ಅಂತರ್ನಿಹಿತ ಮಾನವ ಘನತೆಯನ್ನು ಪ್ರಕಟಿಸುತ್ತಾನೆ ಮತ್ತು ಮಾನವಕುಲವನ್ನು ದೇವರಲ್ಲಿರುವ ನಿತ್ಯರಕ್ಷಣೆಯ ಕಡೆಗೆ ಕೊಂಡೊಯ್ಯುತ್ತಾನೆ ಎಂದು ಅವರು ವಿವರಿಸಿದರು.
ಅನಾರೋಗ್ಯದಿಂದ ಬಳಲುವವರ ನಡುವೆ ತನ್ನ ಸಾನ್ನಿಧ್ಯದ ಮೂಲಕ ದೇವರ ರಾಜ್ಯವನ್ನು ಘೋಷಿಸುತ್ತಿರುವ ಧರ್ಮ ಸಭೆಯ ಧ್ಯೇಯಕಾರ್ಯಕ್ಕೆ ತಮ್ಮ ಕೊಡುಗೆಯನ್ನು ಮುಂದುವರಿಸುವಂತೆ ಜಗದ್ಗುರುಗಳು ಭಾಗವಹಿಸುವವರನ್ನು ಉತ್ತೇಜಿಸಿದರು. “ರಕ್ಷಣೆಯು ಒಂದು ಅಮೂರ್ತ ಕಲ್ಪನೆಯಲ್ಲ, ಅದು ನೋವು ಅನುಭವಿಸುವವರ ಗಾಯಗಳನ್ನು ಗುಣಪಡಿಸುವ ಸ್ಪಷ್ಟ ಕಾರ್ಯದಿಂದ ಆರಂಭವಾಗುತ್ತದೆ” ಎಂದು ಅವರು ಹೇಳಿದರು.
ಕೊನೆಯಲ್ಲಿ, ದಾನ ಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳ ಎಲ್ಲಾ ಕಾರ್ಯಗಳು “ಅತ್ಯಂತ ಅಗತ್ಯದಲ್ಲಿರುವ ಜನರಿಗೆ ದೇವರ ಕರುಣೆ ಮತ್ತು ಮಮತೆಯನ್ನು ತಲುಪಿಸುವ” ಗುರಿಯತ್ತ ಕೇಂದ್ರೀಕೃತವಾಗಿರಲಿ ಎಂಬ ಆಶಯವನ್ನು ಜಗದ್ಗುರುಗಳು ವ್ಯಕ್ತಪಡಿಸಿದರು.
