ಹುಡುಕಿ

Holy Mass on the Solemnity of the Holy Apostles Peter and Paul

ಪವಿತ್ರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಹಬ್ಬದಂದು ಹೊಸ ಆರ್ಚ್‌ಬಿಷಪ್‌ಗಳಿಗೆ ‘ಒಳ್ಳೆಯ ಕುರುಬರಾಗಿರಿ’ ಎಂದು ಜಗದ್ಗುರುಗಳು ಆಹ್ವಾನಿಸಿದರು.

ಪವಿತ್ರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದ ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು, ತಮ್ಮ ಮಾನವೀಯ ದೌರ್ಬಲ್ಯಗಳಿದ್ದರೂ ಸುವಾರ್ತೆಗೆ ಅಸಾಮಾನ್ಯ ಸಾಕ್ಷಿಗಳಾದ ರೋಮ್ ನಗರದ ಇಬ್ಬರು ಪೋಷಕ ಸಂತರುಗಳಿಂದ ಸ್ಫೂರ್ತಿ ಪಡೆಯುವಂತೆ ವಿಶ್ವಾಸಿಗಳನ್ನು ಆಹ್ವಾನಿಸಿದರು. ಅದೇ ಸಂದರ್ಭದಲ್ಲಿ, ಪ್ಯಾಲಿಯಂ ಸ್ವೀಕರಿಸಿದ ನೂತನ ಮೆಟ್ರೋಪಾಲಿಟನ್ ಆರ್ಚ್‌ಬಿಷಪ್‌ಗಳು, ತಮ್ಮ ಪಾಲನೆಗೆ ಒಪ್ಪಿಸಲಾದ ವಿಶ್ವಾಸಿಗಳಿಗೆ ಪ್ರಭುವಿನ ಮಾದರಿಯನ್ನು ಅನುಸರಿಸಿ ಒಳ್ಳೆಯ ಕುರುಬರಾಗುವಂತೆ ಅವರು ಕರೆ ನೀಡಿದರು.

ವ್ಯಾಟಿಕನ್ ವರದಿ

ಪವಿತ್ರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದ ಅಂಗವಾಗಿ, ರೋಮಿನ ಸಂತ ಪೇತ್ರರ ಮಹಾದೇವಾಲಯದಲ್ಲಿ ಜಗದ್ಗುರು XIVನೇ ಲಿಯೋರವರು ಪವಿತ್ರ ಬಲಿಪೂಜೆಯನ್ನು ಅರ್ಪಿಸಿ, ವಿಶ್ವಾಸಿಗಳು ಈ ಇಬ್ಬರು ಮಹಾನ್ ಪ್ರೇಷಿತರ ಜೀವನದಿಂದ ಸ್ಫೂರ್ತಿ ಪಡೆಯುವಂತೆ ಕರೆ ನೀಡಿದರು. ತಮ್ಮ ದೌರ್ಬಲ್ಯಗಳಿದ್ದರೂ ದೇವರ ಕೃಪೆಯಿಂದ ಅವರು ಸುವಾರ್ತೆಯ ಧೈರ್ಯಶಾಲಿ ಸಾಕ್ಷಿಗಳಾಗಿ ಹಾಗೂ ಧರ್ಮ ಸಭೆಯ ಭದ್ರ ಸ್ತಂಭಗಳಾಗಿ ರೂಪುಗೊಂಡರು ಎಂದು ಜಗದ್ಗುರುಗಳು ನೆನಪಿಸಿದರು.

ತಮ್ಮ ಪ್ರಭೋಧನೆಯಲ್ಲಿ ಜಗದ್ಗುರುಗಳು, ಸಂತ ಪೇತ್ರರು ಪರಿಪೂರ್ಣ ವ್ಯಕ್ತಿಯಾಗಿರಲಿಲ್ಲ ಎಂಬುದನ್ನು ಸ್ಮರಿಸಿದರು. ಯೇಸುವನ್ನು ನಿರಾಕರಿಸಿದರೂ ಅವರು ತಮ್ಮ ತಪ್ಪನ್ನು ವಿನಯದಿಂದ ಒಪ್ಪಿಕೊಂಡು ಪಶ್ಚಾತ್ತಾಪಪಟ್ಟರು. ಬಳಿಕ ಕ್ರಿಸ್ತನ ಹಿಂಡಿನ ನಿಷ್ಠಾವಂತ ಕುರುಬರಾಗಿ ಸೇವೆ ಸಲ್ಲಿಸಿ, ಕೊನೆಗೆ ರೋಮಿನಲ್ಲಿಯೇ ಹುತಾತ್ಮರಾದರು. ಅವರ ಜೀವನವು ಪ್ರತಿಯೊಬ್ಬ ಕ್ರೈಸ್ತನೂ ದೇವರನ್ನು ಕೇಂದ್ರವಾಗಿರಿಸಿಕೊಂಡು ಸಹೋದರ-ಸಹೋದರಿಯರೊಂದಿಗೆ ಐಕ್ಯತೆ ಮತ್ತು ಪ್ರೀತಿಯನ್ನು ಬೆಳೆಸುವಂತೆ ಆಹ್ವಾನಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು.

ಸಂತ ಪೌಲರ ಕುರಿತು ಮಾತನಾಡಿದ ಜಗದ್ಗುರುಗಳು, ದೇವರು ಯುವ ಸೌಲನ ಹೃದಯವನ್ನು ಸಂಪೂರ್ಣವಾಗಿ ಪರಿವರ್ತಿಸಿ, ಕ್ರೈಸ್ತರ ಹಿಂಸಕನನ್ನು ಸುವಾರ್ತೆಯ ದಣಿವರಿಯದ ಪ್ರಚಾರಕನನ್ನಾಗಿ ರೂಪಿಸಿದನೆಂದು ಹೇಳಿದರು. ದೇವರ ವಾಕ್ಯದ ಶಕ್ತಿಯಿಂದ ಹಿಂಸೆಯ ಮಾರ್ಗವನ್ನು ತೊರೆದು ಪ್ರೀತಿಯ ಮಾರ್ಗದಲ್ಲಿ ನಡೆದ ಪೌಲರು ಅನ್ಯಜನಾಂಗಗಳ ಪ್ರೇಷಿತರಾಗಿ ವಿಶ್ವದಾದ್ಯಂತ ಸುವಾರ್ತೆಯನ್ನು ಸಾರಿದರು ಮತ್ತು ಅಂತಿಮವಾಗಿ ರೋಮಿನಲ್ಲಿಯೇ ತಮ್ಮ ಜೀವವನ್ನೂ ಅರ್ಪಿಸಿದರು.

ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ನೂತನ ಮೆಟ್ರೋಪಾಲಿಟನ್ ಆರ್ಚ್‌ಬಿಷಪ್‌ಗಳಿಗೆ ಪ್ಯಾಲಿಯಂ ಧರಿಸುವ ಸಂಪ್ರದಾಯವೂ ನೆರವೇರಿತು. ಬಿಳಿ ಉಣ್ಣೆಯಿಂದ ತಯಾರಿಸಲಾದ ಈ ಪ್ಯಾಲಿಯಂ, ಕುರುಬನು ತನ್ನ ಪಾಲನೆಗೆ ಒಪ್ಪಿಸಲಾದ ವಿಶ್ವಾಸಿಗಳನ್ನು ಪ್ರಭುವಿನ ಹಿಂಡಿನ ಕುರಿಮರಿಗಳಂತೆ ತನ್ನ ಹೆಗಲ ಮೇಲೆ ಹೊತ್ತು, ಅವರಿಗಾಗಿ ತನ್ನ ಸಮಯ, ಶ್ರಮ, ಶಕ್ತಿ ಹಾಗೂ ಅಗತ್ಯವಿದ್ದರೆ ತನ್ನ ಜೀವವನ್ನೂ ಅರ್ಪಿಸುವ ಕರ್ತವ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಜಗದ್ಗುರುಗಳು ವಿವರಿಸಿದರು.

ಕೊನೆಯಲ್ಲಿ, ಸಂತ ಪೇತ್ರ ಮತ್ತು ಸಂತ ಪೌಲರ ಮಾದರಿಯನ್ನು ಅನುಸರಿಸಿ ಸತ್ಯವನ್ನು ಪ್ರೀತಿಯಿಂದ ಸಾರುವವರಾಗಿಯೂ, ಧರ್ಮ ಸಭೆಯಲ್ಲಿ ಐಕ್ಯತೆ ಮತ್ತು ಸಹೋದರತ್ವವನ್ನು ಬೆಳೆಸುವವರಾಗಿಯೂ ಇರಲು ಜಗದ್ಗುರುಗಳು ಎಲ್ಲರನ್ನು ಆಹ್ವಾನಿಸಿದರು. ರಕ್ಷಕನ ಹೆಜ್ಜೆಗುರುತುಗಳಲ್ಲಿ ಸಾಗುವ ನಮ್ಮ ಪಯಣದಲ್ಲಿ ಈ ಇಬ್ಬರು ಮಹಾನ್ ಪ್ರೇಷಿತರು ನಮ್ಮನ್ನು ಬಲಪಡಿಸಲಿ ಹಾಗೂ ಕ್ರಿಸ್ತನು ಬಯಸಿದ ಐಕ್ಯತೆಯ ಗುರಿಯತ್ತ ನಮ್ಮನ್ನು ಮುನ್ನಡೆಸಲಿ ಎಂದು ಅವರು ಪ್ರಾರ್ಥಿಸಿದರು.

29 ಜೂನ್ 2026, 16:35