ಜಗದ್ಗುರು ಲಿಯೋರವರು: ಕ್ರೀಡೆಯು ದೇಹ ಮತ್ತು ಆತ್ಮಕ್ಕೆ ಔಷಧಿಯಾಗಿದೆ.
ವ್ಯಾಟಿಕನ್ ವರದಿ
ಗುರುವಾರ ಜಗದ್ಗುರು XIVನೇ ಲಿಯೋರವರು ಇಟಾಲಿಯನ್ ಈಜು ಒಕ್ಕೂಟದ ಸದಸ್ಯರು ಹಾಗೂ ಅಂತರರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳನ್ನು ಭೇಟಿಯಾದರು.
62ನೇ ಸೆಟ್ಟೆ ಕೊಲ್ಲಿ ಟ್ರೋಫಿ ಸ್ಪರ್ಧೆಯು ಜೂನ್ 26ರಿಂದ 28ರವರೆಗೆ ರೋಮಿನ ಐತಿಹಾಸಿಕ ಫೋರೋ ಇಟಾಲಿಕೊ ಈಜು ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಮುಂಬರುವ ಯುರೋಪಿಯನ್ ಚಾಂಪಿಯನ್‌ಶಿಪ್ ಮತ್ತು ಮೆಡಿಟರೇನಿಯನ್ ಕ್ರೀಡಾಕೂಟಗಳ ಅರ್ಹತಾ ಸ್ಪರ್ಧೆಯಾಗಿ ಕಾರ್ಯನಿರ್ವಹಿಸುತ್ತದೆ.
ತಮ್ಮ ಭಾಷಣದಲ್ಲಿ ಜಗದ್ಗುರುಗಳು, ಕ್ರೀಡೆಯನ್ನು ಸರಿಯಾದ ಮನೋಭಾವದಿಂದ ಅಳವಡಿಸಿಕೊಂಡರೆ ಅದು ದೇಹಕ್ಕೂ ಆತ್ಮಕ್ಕೂ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
“ಕ್ರೀಡೆಯು ವ್ಯಕ್ತಿಯ ವಿವಿಧ ಆಯಾಮಗಳನ್ನು ಸಮನ್ವಯಗೊಳಿಸಿ, ಬದ್ಧತೆ, ಐಕ್ಯತೆ ಮತ್ತು ಪ್ರಾಮಾಣಿಕತೆಗಳಂತಹ ಅತ್ಯಂತ ಮಹತ್ವದ ಮೌಲ್ಯಗಳತ್ತ ಅವನನ್ನು ಮುನ್ನಡೆಸುತ್ತದೆ,” ಎಂದು ಅವರು ಹೇಳಿದರು.
ಸ್ಪರ್ಧಾತ್ಮಕ ಕ್ರೀಡೆಯಲ್ಲಿ ಕ್ರೀಡಾಪಟು ತನ್ನ ಇಚ್ಛಾಶಕ್ತಿ, ಪರಿಶ್ರಮ ಮತ್ತು ಸಾಧನೆಯ ಉತ್ಸಾಹವನ್ನು ಪ್ರದರ್ಶಿಸುವಾಗ, ಅವನ ಪ್ರೇರಣೆಗಳ ಗುಣಮಟ್ಟವೂ ಹೊರಹೊಮ್ಮುತ್ತದೆ ಎಂದು ಜಗದ್ಗುರುಗಳು ತಿಳಿಸಿದರು.
ದೈಹಿಕ ಆರೋಗ್ಯದ ಜೊತೆಗೆ, ಕ್ರೀಡೆಯು ಆತ್ಮೀಯ ಪೋಷಣೆಯ ಅವಕಾಶವನ್ನೂ ಒದಗಿಸುತ್ತದೆ. ವಿಶೇಷವಾಗಿ ಈಜು ಈ ಅಂಶವನ್ನು ಹೆಚ್ಚು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಜಗದ್ಗುರು ಲಿಯೋರವರು ಹೇಳಿದರು.
“ಈಜು ಎನ್ನುವುದು ವ್ಯಕ್ತಿಯನ್ನು ಸುತ್ತುವರಿದಿರುವ ನೀರಿನೊಳಗೆ ನಡೆಸುವ ಕ್ರೀಡೆಯಾಗಿದೆ,” ಎಂದು ಅವರು ಹೇಳಿದರು. “ಇದು ಸಂಕೇತಾತ್ಮಕವಾಗಿ ತಾಯಿಯ ಗರ್ಭದಿಂದಲೇ ನಮ್ಮನ್ನು ರೂಪಿಸಿರುವ ಒಂದು ಸತ್ಯವನ್ನು ನೆನಪಿಸುತ್ತದೆ ಬದುಕುವುದು ಎಂದರೆ ಇತರರೊಂದಿಗೆ ಹಾಗೂ ನಮ್ಮ ಸುತ್ತಲಿನ ಪರಿಸರದೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ಕಲಿಯುವುದು.”
ಕ್ರೈಸ್ತರಿಗೆ ನೀರು ಎಂಬುದು ದೀಕ್ಷಾಸ್ನಾನ (ಬಾಪ್ಟಿಸಮ್) ಮತ್ತು ಕ್ರಿಸ್ತನಲ್ಲಿ ದೊರೆಯುವ ಹೊಸ ಜೀವನದ ಸಂಕೇತವಾಗಿದೆ ಎಂದು ಜಗದ್ಗುರುಗಳು ನೆನಪಿಸಿದರು.
ಸೆಟ್ಟೆ ಕೊಲ್ಲಿ ಟ್ರೋಫಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳು ವಿಶ್ವದ ವಿವಿಧ ದೇಶಗಳಿಂದ ಬಂದವರಾಗಿದ್ದು, ಭಾಷೆ ಮತ್ತು ಸಂಸ್ಕೃತಿಯ ಮಿತಿಗಳನ್ನು ಮೀರಿ ಒಂದೇ ಉತ್ಸಾಹ ಮತ್ತು ಮೌಲ್ಯಗಳಿಂದ ಪ್ರೇರಿತರಾಗಿದ್ದಾರೆ ಎಂದು ಅವರು ಹೇಳಿದರು.
“ಅಂತರರಾಷ್ಟ್ರೀಯ ಕ್ರೀಡಾಕೂಟಗಳ ಈ ವಿಶಿಷ್ಟ ಲಕ್ಷಣವು ಭರವಸೆಯ ಸಂಕೇತವಾಗಿದೆ,ನಾವು ಬಯಸುವ ಜಗತ್ತಿನ ಒಂದು ಚಿತ್ರಣವಾಗಿದೆ,” ಎಂದು ಜಗದ್ಗುರುಗಳು ಹೇಳಿದರು. “ಇದು ಜನಾಂಗಗಳ ನಡುವೆ ಶಾಂತಿಯುತ ಭೇಟಿಗಳನ್ನು ಹಾಗೂ ಭ್ರಾತೃತ್ವವನ್ನು ಉತ್ತೇಜಿಸುತ್ತದೆ.”
ಅಂತಿಮವಾಗಿ, ವೃತ್ತಿಪರ ಈಜುಗಾರರು ಕ್ರೀಡೆಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಇತರರಿಗೂ ಹರಡುತ್ತಿರಲಿ ಎಂದು ಜಗದ್ಗುರು XIVನೇ ಲಿಯೋರವರು ಪ್ರೋತ್ಸಾಹಿಸಿದರು. ಅವರನ್ನು ಸಂತ ಪಿಯರ್ ಜಿಯಾರ್ಜಿಯೋ ಫ್ರಾಸ್ಸಾತಿ ಅವರ ಮಧ್ಯಸ್ಥಿಕೆಗೆ ಒಪ್ಪಿಸುತ್ತಾ, “ಸ್ಪರ್ಧೆಯ ಕಾಲ ಕಳೆಯಬಹುದು, ಆದರೆ ಕ್ರೀಡೆಯಿಂದ ಬೆಳೆಸಿಕೊಳ್ಳುವ ಮೌಲ್ಯಗಳು ಶಾಶ್ವತವಾಗಿ ಉಳಿಯುತ್ತವೆ!” ಎಂದು ಹೇಳಿದರು.
