ಹುಡುಕಿ

ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು  

ಸಿನೋಡ್‌ನ ಖಂಡೀಯ ನಾಯಕರನ್ನು ಪ್ರೋತ್ಸಾಹಿಸಿದ ಜಗದ್ಗುರು ಲಿಯೋರವರು.

ಸಿನೋಡಾಲಿಟಿಯ ಕುರಿತ ಸಿನೋಡ್‌ನ ಅನುಷ್ಠಾನ ಹಾಗೂ 2028ರ ಧರ್ಮ ಸಭೆಯ ಸಿದ್ಧತೆಯ ಪಯಣದ ಕುರಿತು ಚಿಂತನೆ ನಡೆಸುತ್ತಿರುವ ಸಿನೋಡ್‌ನ ಖಂಡೀಯ ಸಂಸ್ಥೆಗಳ ನಾಯಕರನ್ನು ಜಗದ್ಗುರು XIVನೇ ಲಿಯೋರವರು ಭೇಟಿಯಾಗಿ, ಅವರಿಗೆ ಪ್ರೋತ್ಸಾಹ ನೀಡಿದರು.

ವ್ಯಾಟಿಕನ್ ವರದಿ

ಸಿನೋಡ್‌ನ ಅನುಷ್ಠಾನ ಹಂತಕ್ಕೆ ಮೀಸಲಾಗಿದ್ದ ಮೂರು ದಿನಗಳ ಸಭೆಯ ಸಮಾರೋಪದ ಸಂದರ್ಭದಲ್ಲಿ, ಗುರುವಾರ ಜಗದ್ಗುರು XIVನೇ ಲಿಯೋರವರು ಸಿನೋಡ್‌ನ ಖಂಡೀಯ ಸಂಸ್ಥೆಗಳ ಮುಖ್ಯಸ್ಥರನ್ನು ಖಾಸಗಿಯಾಗಿ ಭೇಟಿಯಾದರು.

ಜೂನ್ 23ರಿಂದ 25ರವರೆಗೆ ನಡೆದ ಈ ಸಭೆಯಲ್ಲಿ ಲ್ಯಾಟಿನ್ ಅಮೆರಿಕ, ಆಫ್ರಿಕಾ, ಏಷ್ಯಾ, ಯುರೋಪ್, ಓಷಿಯಾನಿಯಾ, ಮಧ್ಯಪ್ರಾಚ್ಯ ಹಾಗೂ ಉತ್ತರ ಅಮೆರಿಕದ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರೊಂದಿಗೆ ಖಂಡೀಯ ಸಿನೋಡಲ್ ತಂಡಗಳ ಸಂಯೋಜಕರೂ ಉಪಸ್ಥಿತರಿದ್ದರು.

ಸಿನೋಡ್‌ನ ಪ್ರಧಾನ ಕಾರ್ಯದರ್ಶಿ ಕಾರ್ಡಿನಲ್ ಮಾರಿಯೋ ಗ್ರೆಕ್, ಜಗದ್ಗುರುಗಳೊಂದಿಗಿನ ಈ ಭೇಟಿಯನ್ನು "ಧರ್ಮ ಸಭೆಯ ಸಿನೋಡಲ್ ಮನಪರಿವರ್ತನೆಗಾಗಿ" ಕಾರ್ಯನಿರ್ವಹಿಸುತ್ತಿರುವ ಎಲ್ಲ ಭಾಗವಹಿಸುವವರಿಗೆ "ಬಲವಾದ ಬೆಂಬಲ ಮತ್ತು ಪ್ರೋತ್ಸಾಹದ ಸಂಕೇತ" ಎಂದು ಬಣ್ಣಿಸಿದರು.

ಮಂಗಳವಾರ ಸಭೆಯನ್ನು ಉದ್ಘಾಟಿಸಿದ ಕಾರ್ಡಿನಲ್ ಗ್ರೆಕ್, 2028ರ ಚರ್ಚ್ ಸಭೆಯತ್ತ ಸಾಗುತ್ತಿರುವ ಪಯಣದ ಕುರಿತು ಸಂಕ್ಷಿಪ್ತ ಅವಲೋಕನ ನೀಡಿದರು ಹಾಗೂ ಪ್ರಸ್ತುತ ನಡೆಯುತ್ತಿರುವ ಈ ಪ್ರಕ್ರಿಯೆಯ ವಿಶಿಷ್ಟ ಸ್ವರೂಪವನ್ನು ನೆನಪಿಸಿದರು.

ಪತ್ರಿಕಾ ಪ್ರಕಟಣೆಯ ಪ್ರಕಾರ, ವಿಶ್ವಾಸಿಗಳನ್ನು ಸಕ್ರಿಯವಾಗಿ ಒಳಗೊಳ್ಳುವ ಉದ್ದೇಶದಿಂದ ಸ್ಥಳೀಯ ಧರ್ಮ ಸಭೆಗಳು ಈಗಾಗಲೇ ಕೈಗೊಂಡಿರುವ ಅನೇಕ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು. ಅವುಗಳಲ್ಲಿ ಸಿನೋಡಾಲಿಟಿ ಶಾಲೆಗಳು, ತರಬೇತಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಸಮ್ಮೇಳನಗಳು ಹಾಗೂ ಆಲಿಸುವಿಕೆ ಮತ್ತು ವಿವೇಚನೆಯ ವಿವಿಧ ಪ್ರಕ್ರಿಯೆಗಳು ಸೇರಿವೆ.

ಕಾರ್ಡಿನಲ್ ಅವರ ಸ್ವಾಗತ ಭಾಷಣಕ್ಕೂ ಮುನ್ನ, ಸಿನೋಡ್‌ನ ಉಪಪ್ರಧಾನ ಕಾರ್ಯದರ್ಶಿ ಸಿಸ್ಟರ್ ನತಾಲಿ ಬೆಕ್ಕಾರ್ಟ್, ಎಕ್ಸ್ಎಂಸಿಜೆ ರವರ ನೇತೃತ್ವದಲ್ಲಿ ಸುದೀರ್ಘ ಪ್ರಾರ್ಥನಾ ಸಮಯ ನಡೆಯಿತು.

ಆಲಿಸುವಿಕೆ ಮತ್ತು ವಿವೇಚನೆ

ಮುಂದಿನ ದಿನಗಳನ್ನು ಈ ಹೊಸ ಸಿನೋಡಲ್ ಅವಧಿಯಲ್ಲಿ ಆಲಿಸುವಿಕೆ ಮತ್ತು ವಿವೇಚನೆಗೆ ಮೀಸಲಿಡಲಾಯಿತು.

ಪತ್ರಿಕಾ ಪ್ರಕಟಣೆಯ ಪ್ರಕಾರ, ಬಿಷಪ್‌ಗಳ ಸಿನೋಡ್‌ನ XVIನೇ ಸಾಮಾನ್ಯ ಮಹಾಸಭೆಯ ಅಂತಿಮ ದಸ್ತಾವೇಜನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಅನುಷ್ಠಾನ ಹಂತವು, ಮಹಾಸಭೆಗೆ ಪೂರ್ವಭಾವಿಯಾಗಿ ನಡೆದ ಪ್ರಕ್ರಿಯೆಯ ಸರಳ ಪುನರಾವರ್ತನೆಯಲ್ಲ.

ಬದಲಾಗಿ, ಸ್ಥಳೀಯ ಸಮುದಾಯಗಳು ಸಿನೋಡಲ್ ಅಂತಿಮ ದಸ್ತಾವೇಜಿನ ಶಿಫಾರಸುಗಳನ್ನು ತಮ್ಮ ತಮ್ಮ ಸಂದರ್ಭಗಳಿಗೆ ಹೊಂದುವಂತೆ ಕಾರ್ಯರೂಪಕ್ಕೆ ತರುವ ಹೊಸ ಪ್ರಕ್ರಿಯೆಯಾಗಿದೆ.

ಭಾಗವಹಿಸಿದವರು ವಿವಿಧ ಖಂಡಗಳಲ್ಲಿ ಅಂತಿಮ ದಸ್ತಾವೇಜಿನ ಅನುಷ್ಠಾನದಲ್ಲಿ ಕಂಡುಬಂದ ಪ್ರಮುಖ ಬೆಳವಣಿಗೆಗಳು, ಮಹತ್ವದ ಅನುಭವಗಳು, ಎದುರಾದ ಸವಾಲುಗಳು, ಇನ್ನೂ ಉತ್ತರಿಸಬೇಕಿರುವ ಪ್ರಶ್ನೆಗಳು ಹಾಗೂ ಧರ್ಮಾಧ್ಯಕ್ಷೀಯ ಆದ್ಯತೆಗಳನ್ನು ಪರಸ್ಪರ ಹಂಚಿಕೊಂಡರು.

2028ರ ಧರ್ಮ ಸಭೆಯತ್ತ

ಸಭೆಯ ಪ್ರಮುಖ ಭಾಗವು, ಸಿನೋಡ್ ಪ್ರಧಾನ ಕಾರ್ಯದರ್ಶಿಯ ಸಲಹೆಗಾರರಾದ ಜೆಸುಯಿಟ್ ಧರ್ಮಗುರು ವಂ.ಸ್ವಾಮಿ ಜಿಯಾಕೊಮೊ ಕೋಸ್ಟಾ ಮಂಡಿಸಿದ ದಸ್ತಾವೇಜಿನ ಕುರಿತ ಚಿಂತನೆಗೆ ಮೀಸಲಾಗಿತ್ತು.

ಈ ದಸ್ತಾವೇಜು 2028ರ ಅಕ್ಟೋಬರ್‌ನಲ್ಲಿ ನಡೆಯಲಿರುವ ಧರ್ಮ ಸಭೆಯತ್ತ ಸಾಗುವ ಪಯಣವನ್ನು ನಾಲ್ಕು ಹಂತಗಳಲ್ಲಿ ವಿವರಿಸುತ್ತದೆ.

ಮೊದಲ ಹಂತವಾದ "ಸ್ಮರಣೆ" 2027ರ ಮೊದಲಾರ್ಧದಲ್ಲಿ ನಡೆಯಲಿದ್ದು, ಧರ್ಮಪ್ರಾಂತ್ಯಗಳು  ಹಾಗೂ ಎಪಾರ್ಕಿಗಳಲ್ಲಿ  ಮೌಲ್ಯಮಾಪನ ಸಭೆಗಳು ನಡೆಯಲಿವೆ.

ಎರಡನೇ ಹಂತವಾದ "ಅರ್ಥವಿವರಣೆ" 2027ರ ದ್ವಿತೀಯಾರ್ಧದಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಬಿಷಪ್‌ಗಳ ಸಮ್ಮೇಳನಗಳ ಮೂಲಕ ನಡೆಯಲಿದೆ.

ಮೂರನೇ ಹಂತವಾದ "ದಿಕ್ಕುನಿರ್ದೇಶನ" 2028ರ ಮೊದಲ ನಾಲ್ಕು ತಿಂಗಳಲ್ಲಿ ಖಂಡೀಯ ಸಭೆಗಳ ಮೂಲಕ ನಡೆಯಲಿದ್ದು, ಅವು ದೃಷ್ಟಿಕೋನ ವರದಿಯನ್ನು ಸಿದ್ಧಪಡಿಸಲಿವೆ.

ಕೊನೆಯ ಹಂತವಾದ "ಆಚರಣೆ"  2028ರ ಅಕ್ಟೋಬರ್‌ನಲ್ಲಿ ವ್ಯಾಟಿಕನ್‌ನಲ್ಲಿ ಜಗದ್ಗುರುಗಳ ಸಮ್ಮುಖದಲ್ಲಿ ಇಡೀ ಧರ್ಮ ಸಭೆಯೊಂದಿಗೆ ಪರಿಪೂರ್ಣಗೊಳ್ಳಲಿದೆ.

ಸಭೆಯಲ್ಲಿ ಭಾಗವಹಿಸಿದವರು, ಖಂಡೀಯ ಸಂಸ್ಥೆಗಳು ಮತ್ತು ಅವುಗಳ ತಂಡಗಳ ಪಾತ್ರವು ಮುಖ್ಯವಾಗಿ ಮೇಲ್ವಿಚಾರಣೆ ಮಾಡುವುದಲ್ಲ, ಬದಲಾಗಿ ಜೊತೆಗೂಡಿ ಮಾರ್ಗದರ್ಶನ ನೀಡುವುದಾಗಿದೆ ಎಂದು ಒತ್ತಿಹೇಳಿದರು. ನಿಜವಾದ ಸಹಭಾಗಿತ್ವ ಮತ್ತು ಪರಸ್ಪರ ಪೂರಕತೆಯ  ಮನೋಭಾವದಲ್ಲಿ ಸ್ಥಳೀಯ ಚರ್ಚುಗಳ ನಡುವೆ ವರದಾನಗಳ ವಿನಿಮಯವನ್ನು ಉತ್ತೇಜಿಸುವುದೇ ಅವರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಧರ್ಮ ಸಭೆಗಳ ಸಭೆಗಳಿಂದ ಆರಂಭಿಸಿ 2028ರ ಧರ್ಮ ಸಭೆಯವರೆಗೆ ನಡೆಯುವ ಎಲ್ಲ ಸಭೆಗಳು, ಧರ್ಮ ಸಭೆಯ ಸಿನೋಡಲ್ ಮನಪರಿವರ್ತನೆಯ ಪಯಣದ ಅಂತಿಮ ಗುರಿಯಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು. ಅವು ಈ ಪಯಣವನ್ನು ಹೇಗೆ ಮುಂದುವರಿಸಬೇಕು ಎಂಬುದನ್ನು ವಿವೇಚಿಸುವ ಹಾಗೂ ಆಚರಿಸುವ ವಿಶೇಷ ಸಂದರ್ಭಗಳಾಗಿವೆ ಎಂದು ಅವರು ಒತ್ತಿಹೇಳಿದರು.

26 ಜೂನ್ 2026, 16:40