"ಜಗದ್ಗುರುಗಳು: ಏಷ್ಯಾದ ಧರ್ಮ ಸಭೆಗಳೇ, ಐಕ್ಯತೆಯ ನಿರ್ಮಾತೃಗಳಾಗಿರಿ."
ವ್ಯಾಟಿಕನ್ ವರದಿ
"ಐಕ್ಯತೆಯ ನಿರ್ಮಾತೃಗಳಾಗಿರಿ ಬಾಬೇಲ್‌ನ ಗೋಪುರಗಳ ವಾಸ್ತುಶಿಲ್ಪಿಗಳಾಗಬೇಡಿ. ಬರಲಿರುವ ದೇವರ ರಾಜ್ಯದ ಸೇವಕರಾಗಿರಿ ಕುಸಿದು ಬೀಳಲು ವಿಧಿಸಲ್ಪಟ್ಟಿರುವ ಗೋಪುರಗಳ ಒಡೆಯರಾಗಬೇಡಿ." ಈ ಮಾತುಗಳ ಮೂಲಕ ಜಗದ್ಗುರು XIVನೇ ಲಿಯೋರವರು ತಮ್ಮ "ಭವ್ಯ ಮಾನವೀಯತೆ" (ಸಂಖ್ಯೆ 16) ಎಂಬ ವಿಶ್ವಪತ್ರಿಕೆಯಲ್ಲಿ ನೀಡಿದ್ದ ಕರೆಯನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಾರೆ. ಅಲ್ಲಿ ಅವರು, "ನಮ್ಮ ಎಲ್ಲ ಕಾರ್ಯಗಳ ದಿಗಂತದಲ್ಲಿ ದೇವರನ್ನು ಇರಿಸಿ ಮತ್ತು ನಮ್ಮ ಪ್ರತಿಯೊಂದು ನಿರ್ಧಾರದ ಕೇಂದ್ರದಲ್ಲಿ ಮಾನವ ವ್ಯಕ್ತಿಯನ್ನು ಇರಿಸಬೇಕು" ಎಂದು ಒತ್ತಿಹೇಳಿದ್ದರು.
ಈ ಪ್ರೋತ್ಸಾಹದ ಸಂದೇಶವು, ಮುಂಬೈನ ನಿವೃತ್ತ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಓಸ್ವಾಲ್ಡ್ ಗ್ರಾಸಿಯಾಸ್ ರವರಿಗೆ ಜಗದ್ಗುರುಗಳು ಬರೆದ ಪತ್ರದಲ್ಲಿ ವ್ಯಕ್ತವಾಗಿದೆ. ಇಂಡೋನೇಷ್ಯಾದ ಜಕಾರ್ತಾದಲ್ಲಿ 2026ರ ಜುಲೈ 20ರಿಂದ 26ರವರೆಗೆ ನಡೆಯಲಿರುವ ಏಷ್ಯಾದ ಬಿಷಪ್‌ಗಳ ಸಮ್ಮೇಳನಗಳ ಒಕ್ಕೂಟದ (ಎಫ್ಎಬಿಸಿ) 12ನೇ ಮಹಾಧಿವೇಶನಕ್ಕೆ ತಮ್ಮ ವಿಶೇಷ ಪ್ರತಿನಿಧಿಯಾಗಿ ಅವರನ್ನು ಜಗದ್ಗುರುಗಳು ನೇಮಿಸಿದ್ದಾರೆ. ಈ ನೇಮಕಾತಿಯನ್ನು ಮೇ 23ರಂದು ಲೋಸ್ಸರ್ವಟೋರ್ ರೊಮಾನೋ ಪತ್ರಿಕೆ ಪ್ರಕಟಿಸಿತ್ತು.
ಲ್ಯಾಟಿನ್ ಭಾಷೆಯಲ್ಲಿ ಬರೆದಿರುವ ಈ ಪತ್ರದಲ್ಲಿ, ಜಗದ್ಗುರುಗಳು ವಿಶ್ವಾಸಿಗಳಿಗೂ ತಮ್ಮ ಸಹೋದರ ಬಿಷಪ್‌ಗಳಿಗೂ, "ನಮ್ಮ ಕಾಲದ ನಿರ್ಮಾಣ ಕಾರ್ಯಕ್ಷೇತ್ರದಲ್ಲಿ ಕೈಗಳನ್ನು ಕೊಳಕಾಗಿಸಿಕೊಳ್ಳಲು ಎಂದಿಗೂ ಹಿಂಜರಿಯಬೇಡಿ" ಎಂದು ಉತ್ತೇಜನ ನೀಡುತ್ತಾರೆ. ಏಕೆಂದರೆ, ಏಷ್ಯಾದ ಪ್ರಿಯ ಧರ್ಮ ಸಭೆಯ ನಂಬಿಕೆ ಮತ್ತು ಮಾನವೀಯತೆಯಲ್ಲಿ ನಿರಂತರವಾಗಿ ಅರಳಿ ಬೆಳೆಯಲಿ ಎಂಬ ಆಶಾಭರವೆಯೇ ಅವರಿಗೆ ಬಲ ನೀಡುತ್ತದೆ ಎಂದು ಅವರು ಹೇಳುತ್ತಾರೆ.
ಬಡವರು, ವಲಸಿಗರು ಮತ್ತು ರೋಗಿಗಳು – "ಮೂಲೆಗಲ್ಲು"
ಇಡೀ ಧರ್ಮ ಸಭೆಯ ಸಮುದಾಯದ ಈ ಸಾಮೂಹಿಕ ಬದ್ಧತೆಯ ಮೂಲಕ, ತಮ್ಮ ಬೋಧನಾತ್ಮಕ ಪತ್ರಿಕೆಯಲ್ಲಿ ಜಗದ್ಗುರು XIVನೇ ಲಿಯೋರವರು ಕೀರ್ತನೆ 85 ಅನ್ನು ಉಲ್ಲೇಖಿಸಿ ಹೀಗೆ ಬರೆಯುತ್ತಾರೆ: "ತಿರಸ್ಕರಿಸಲ್ಪಟ್ಟ ಕಲ್ಲುಗಳಾದ ಬಡವರು, ರೋಗಿಗಳು, ವಲಸಿಗರು ಮತ್ತು ಪುಟ್ಟವರು ಮೂಲೆಗಲ್ಲಾಗುವರು. ಆಗ ಈ ಭೂಮಿಯ ಮೇಲೆ ದೃಢವೂ ಆತಿಥ್ಯಪರವಾಗಿರುವ ಒಂದು ಸಾಮಾನ್ಯ ಮನೆ ನಿರ್ಮಾಣವಾಗುವುದು. ಅಲ್ಲಿ ಪ್ರೀತಿ ಮತ್ತು ಸತ್ಯ ಪರಸ್ಪರ ಸಂಧಿಸುವವು, ನ್ಯಾಯ ಮತ್ತು ಶಾಂತಿ ಒಂದನ್ನೊಂದು ಅಪ್ಪಿಕೊಳ್ಳುವವು."
ಕುರುಬನ ಮತ್ತು ತಂದೆಯ ಹೃದಯದಿಂದ ಮಾತನಾಡುವ ಜಗದ್ಗುರುಗಳು, "ಮತ್ತೊಂದು ಬಾಬೇಲ್ ನಿರ್ಮಾಣವನ್ನು ನಿಲ್ಲಿಸಿ, ಒಳ್ಳೆಯದನ್ನು ಕಟ್ಟಲು ಎಲ್ಲರೂ ಕೈಜೋಡಿಸೋಣ. ಆಗ ಮಾನವಕುಲವು ತನ್ನ ಸೌಂದರ್ಯವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಮತ್ತು ಪ್ರತಿಯೊಬ್ಬ ಮಾನವನ ಹೃದಯವೇ ದೇವರು ವಾಸಿಸಲು ಬಯಸುವ ಸ್ಥಳವೆಂದು ಜಗತ್ತು ಮತ್ತೊಮ್ಮೆ ಅರಿತುಕೊಳ್ಳಲಿದೆ" ಎಂದು ಎಲ್ಲರಿಗೂ ಕರೆ ನೀಡುತ್ತಾರೆ.
ಕಾರ್ಡಿನಲ್ ಡೊ ರೊಸಾರಿಯೊ ಫೆರ್ರಾಂರವರ ಮನವಿ
ಜೂನ್ 24ರಂದು ಸಹಿ ಮಾಡಲಾದ ಈ ಪತ್ರದಲ್ಲಿ, ಗೋವಾ ಮತ್ತು ದಮಣದ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಫಿಲಿಪೆ ನೆರಿ ಆಂಟೋನಿಯೊ ಸೆಬಾಸ್ತಿಯೊ ಡೊ ರೊಸಾರಿಯೊ ಫೆರ್ರಾಂ ರವರ ಮನವಿಯ ಮೇರೆಗೆ ಪಾಪಲ್ ವಿಶೇಷ ಪ್ರತಿನಿಧಿಯನ್ನು ನೇಮಿಸಲಾಗಿದೆ ಎಂಬುದನ್ನು ಜಗದ್ಗುರು XIVನೇ ಲಿಯೋರವರು ನೆನಪಿಸುತ್ತಾರೆ.
ಕೊನೆಯಲ್ಲಿ, ತಮ್ಮ ವಿಶೇಷ ಪ್ರತಿನಿಧಿಯನ್ನು ಪರಮಪವಿತ್ರ ಕನ್ಯಾ ಮರಿಯಮ್ಮನವರ ಹಾಗೂ ಅವರ ಪತಿ ಪವಿತ್ರ ಜೋಸೇಫರ ಪ್ರೀತಿಪೂರ್ವಕ ರಕ್ಷಣೆಗೆ ಸಮರ್ಪಿಸುತ್ತಾರೆ.
