ಹುಡುಕಿ

2026.04.07 Papa Castel Gandolfo

ಜಗದ್ಗುರು ಲಿಯೋರವರು ಜುಲೈ ತಿಂಗಳ ಬೇಸಿಗೆ ರಜೆಯನ್ನು ಕ್ಯಾಸ್ಟೆಲ್ ಗಾಂಡೋಲ್ಫೋದಲ್ಲಿ ಕಳೆಯಲಿದ್ದಾರೆ.

ಪಾಪಲ್ ಹೌಸ್‌ಹೋಲ್ಡ್‌ನ ಪ್ರಿಫೆಕ್ಚರ್ ಪ್ರಕಟಿಸಿದ ಮಾಹಿತಿಯ ಪ್ರಕಾರ, ಜುಲೈ 5ರ ಭಾನುವಾರ ಮಧ್ಯಾಹ್ನದಿಂದ ಜಗದ್ಗುರು XIVನೇ ಲಿಯೋರವರು ಜುಲೈ 27ರವರೆಗೆ ಕ್ಯಾಸ್ಟೆಲ್ ಗಾಂಡೋಲ್ಫೋ ಪಟ್ಟಣದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಅವಧಿಯಲ್ಲಿ ಜಗದ್ಗುರುಗಳು ಎಲ್ಲಾ ಸಾರ್ವಜನಿಕ ಭೇಟಿಗಳು ಮತ್ತು ಅಧಿಕೃತ ಭೇಟಿಯ ಕಾರ್ಯಕ್ರಮಗಳನ್ನು (ಆಡಿಯನ್ಸ್‌ಗಳನ್ನು) ಸ್ಥಗಿತಗೊಳಿಸಲಾಗಿದೆ.

ವ್ಯಾಟಿಕನ್ ವರದಿ

ಕಳೆದ ವರ್ಷದಂತೆ, ಜಗದ್ಗುರು XIVನೇ ಲಿಯೋರವರು ಈ ವರ್ಷವೂ ಬೇಸಿಗೆ ರಜೆಯ ಸಮಯದಲ್ಲಿ ವ್ಯಾಟಿಕನ್‌ನಿಂದ ಸುಮಾರು ಒಂದು ಗಂಟೆಯ ಪ್ರಯಾಣದ ದೂರದಲ್ಲಿರುವ ಕ್ಯಾಸ್ಟೆಲ್ ಗಾಂಡೋಲ್ಫೋದಲ್ಲಿನ ಜಗದ್ಗುರುಗಳ ಬೇಸಿಗೆ ನಿವಾಸದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

"ಇಂದು, ಜುಲೈ 5ರ ಭಾನುವಾರ ಮಧ್ಯಾಹ್ನದಿಂದ, ಜಗದ್ಗುರುಗಳು ವಿಶ್ರಾಂತಿಗಾಗಿ ಕ್ಯಾಸ್ಟೆಲ್ ಗಾಂಡೋಲ್ಫೋದ ಪ್ರೇಷಿತರ ಅರಮನೆಗೆ ತೆರಳಲಿದ್ದು, ಜುಲೈ 27ರವರೆಗೆ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ," ಎಂದು ಭಾನುವಾರ ಪಾಪಲ್ ಹೌಸ್‌ಹೋಲ್ಡ್‌ನ ಪ್ರಿಫೆಕ್ಚರ್ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಅವಧಿಯಲ್ಲಿ ಬುಧವಾರದ ಸಾರ್ವಜನಿಕ ಸಾಮಾನ್ಯ ಭೇಟಿಗಳು (ಜನರಲ್ ಆಡಿಯನ್ಸ್) ನಡೆಯುವುದಿಲ್ಲ. ಅವು ಆಗಸ್ಟ್ 5ರಂದು ಪುನರಾರಂಭಗೊಳ್ಳಲಿವೆ. ಖಾಸಗಿ ಹಾಗೂ ವಿಶೇಷ ಭೇಟಿಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜುಲೈ ತಿಂಗಳ ಎಲ್ಲ ಭಾನುವಾರಗಳಲ್ಲಿ ತ್ರಿಕಾಲ ಪ್ರಾರ್ಥನೆಯನ್ನು ಸಂತ ಪೇತ್ರರ ಚೌಕದಿಂದ ಅಲ್ಲದೆ, ಕ್ಯಾಸ್ಟೆಲ್ ಗಾಂಡೋಲ್ಫೋದಿಂದ ಜಗದ್ಗುರುಗಳ ನೇತೃತ್ವದಲ್ಲಿ ನೆರವೇರಿಸಲಾಗುವುದು.

2025ರ ಬೇಸಿಗೆಯಲ್ಲಿ ಜಗದ್ಗುರು XIVನೇ ಲಿಯೋರವರು ಜುಲೈ 6ರಿಂದ 22ರವರೆಗೆ, ಒಟ್ಟು 16 ದಿನಗಳ ಕಾಲ ಕ್ಯಾಸ್ಟೆಲ್ ಗಾಂಡೋಲ್ಫೋದ ವಿಲ್ಲಾ ಬಾರ್ಬೆರಿನಿಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಅವಧಿಯಲ್ಲಿಯೂ ಅವರು ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಪರಿಸರ ಸಂರಕ್ಷಣೆಗೆ ಸಮರ್ಪಿತವಾದ 'ಬೊರ್ಗೋ ಲೌದಾತೋ ಸಿ' ಯಲ್ಲಿ ಅವರು ಪವಿತ್ರ ಬಲಿಪೂಜೆಯನ್ನು ಅರ್ಪಿಸಿದ್ದರು. ಅಲ್ಲದೆ, ಸಂತ ಥಾಮಸ್ ಆಫ್ ವಿಲ್ಲನೋವಾ ಪಾಂಟಿಫಿಕಲ್ ಧರ್ಮ ಕೇಂದ್ರ ಹಾಗೂ ಅಲ್ಬಾನೊ ಕ್ಯಾಥೆಡ್ರಲ್‌ಗೂ ಭೇಟಿ ನೀಡಿದ್ದರು.

ಆ ವಿಶ್ರಾಂತಿಯ ಅವಧಿಯಲ್ಲಿ ಹಲವು ಮಹತ್ವದ ಭೇಟಿಗಳೂ ನಡೆದಿದ್ದವು. ವಿಲ್ಲಾ ಬಾರ್ಬೆರಿನಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರನ್ನು ಜಗದ್ಗುರುಗಳು ಭೇಟಿಯಾಗಿದ್ದರು. ಗಾಜಾದ ಪವಿತ್ರ ಕುಟುಂಬ ಧರ್ಮ ಸಭೆಯ ಮೇಲಿನ ಇಸ್ರೇಲ್ ದಾಳಿಯ ಬಳಿಕ, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ರವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಬಳಿಕ ಪ್ಯಾಲೆಸ್ಟೈನ್ ರಾಷ್ಟ್ರದ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ರವರೊಂದಿಗೂ ದೂರವಾಣಿ ಸಂಭಾಷಣೆ ನಡೆಸಿದ್ದರು.

05 ಜುಲೈ 2026, 16:04