ಹುಡುಕಿ

ಕ್ಯಾಸ್ಟೆಲ್ ಗ್ಯಾಂಡೊಲ್ಫೋದಲ್ಲಿ ಜಗದ್ಗುರು XIVನೇ ಲಿಯೋರವರು. ಕ್ಯಾಸ್ಟೆಲ್ ಗ್ಯಾಂಡೊಲ್ಫೋದಲ್ಲಿ ಜಗದ್ಗುರು XIVನೇ ಲಿಯೋರವರು.  (©Buesi - stock.adobe.com)

ಕಾಸ್ಟೆಲ್ ಗಾಂಡೋಲ್ಫೊಗೆ ಆಗಮಿಸಿದ ಜಗದ್ಗುರು XIVನೇ ಲಿಯೋರವರು ಜನಸ್ತೋಮವನ್ನು ಆತ್ಮೀಯವಾಗಿ ಅಭಿನಂದಿಸಿದರು.

ರೋಮಿನ ಆಗ್ನೇಯ ದಿಕ್ಕಿನಲ್ಲಿರುವ ಕಾಸ್ಟೆಲ್ ಗಾಂಡೋಲ್ಫೊಗೆ ಆಗಮಿಸಿದ ಜಗದ್ಗುರು XIVನೇ ಲಿಯೋರವರು ಪ್ರೇಷಿತರ ಅರಮನೆಯ ಬಾಲ್ಕನಿಯಲ್ಲಿ ಕ್ಷಣಕಾಲ ಕಾಣಿಸಿಕೊಂಡು, ಪಿಯಾಜಾ ದೆಲ್ಲಾ ಲಿಬೆರ್ತಾದಲ್ಲಿ ನೆರೆದಿದ್ದ ಭಕ್ತರನ್ನು ಆತ್ಮೀಯವಾಗಿ ಅಭಿನಂದಿಸಿದರು. ಆತ್ಮೀಯ ಸ್ವಾಗತ ನೀಡಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದ ಜೊತೆಗೆ, ಸಹೋದರ–ಸಹೋದರಿಯರಾಗಿ ಒಂದಾಗಿ ಸೇರುವ ಮಹತ್ವವನ್ನು ಪುನರುಚ್ಚರಿಸಿದರು.

ವ್ಯಾಟಿಕನ್ ವರದಿ

ಕಾಸ್ಟೆಲ್ ಗಾಂಡೋಲ್ಫೊದಲ್ಲಿ ವಿಶ್ರಾಂತಿಗಾಗಿ ಜಗದ್ಗುರು XIVನೇ ಲಿಯೋರವರು ಭಕ್ತರನ್ನು ಆತ್ಮೀಯವಾಗಿ ಭೇಟಿಯಾದರು.

ಪ್ರೇಷಿತರ ಅರಮನೆಯ ಬಾಲ್ಕನಿಯಲ್ಲಿ ಹಾಕಲಾಗಿದ್ದ ಧ್ವಜವು ಕಾಸ್ಟೆಲ್ ಗಾಂಡೋಲ್ಫೊದ ಚೌಕದಲ್ಲಿ ನೆರೆದಿದ್ದ ಭಕ್ತರಿಗೆ ಜಗದ್ಗುರು XIVನೇ ಲಿಯೋರವರ ಆಗಮನವನ್ನು ಸೂಚಿಸಿತು. ನಿನ್ನೆ ಲಾಂಪೆದುಸಾಗೆ ಪ್ರೇಷಿತರ ಭೇಟಿ ನೀಡಿದ್ದ ಹಾಗೂ ಜುಲೈ 5ರಂದು ಸಂತ ಪೇತ್ರರ ಚೌಕದಲ್ಲಿ ತ್ರಿಕಾಲ ಪ್ರಾರ್ಥನೆಯನ್ನು ನೆರವೇರಿಸಿದ್ದ ಜಗದ್ಗುರುಗಳು, ಅದೇ ದಿನ ಮಧ್ಯಾಹ್ನ ಇಟಲಿಯ ಲಾತ್ಸಿಯೊ ಪ್ರದೇಶದಲ್ಲಿರುವ ಕಾಸ್ಟೆಲ್ ಗಾಂಡೋಲ್ಫೊಗೆ ಆಗಮಿಸಿದರು. ಜಗದ್ಗುರುಗಳ ನಿವಾಸದ ಆಡಳಿತ ಕಚೇರಿ ಪ್ರಕಟಿಸಿದ ಮಾಹಿತಿಯಂತೆ, ಅವರು ಜುಲೈ 27, ಸೋಮವಾರದವರೆಗೆ ಅಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

ಭೇಟಿಯ ಅಮೂಲ್ಯ ಕ್ಷಣ

ತಮ್ಮ ನಿವಾಸದ ಬಾಲ್ಕನಿಯಿಂದ ಮಾತನಾಡಿದ ಜಗದ್ಗುರುಗಳು, ಹಲವು ದಿನಗಳಿಂದ ತಮ್ಮ ಸಾಂಪ್ರದಾಯಿಕ ಜುಲೈ ತಿಂಗಳ ವಾಸ್ತವ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದ ಸ್ಥಳೀಯ ಸಮುದಾಯದ ಆತ್ಮೀಯ ಸ್ವಾಗತಕ್ಕೆ ಪ್ರತಿಕ್ರಿಯೆಯಾಗಿ ಕೆಲವು ಮಾತುಗಳನ್ನಾಡಿದರು. ಸಾಮಾನ್ಯವಾಗಿ ಜುಲೈ ತಿಂಗಳು ಜಗದ್ಗುರುಗಳು ತಮ್ಮ ನಿತ್ಯದ ಕರ್ತವ್ಯಗಳಿಂದ ವಿರಾಮ ಪಡೆಯುವ ಅವಧಿಯಾಗಿದೆ.

"ಶುಭ ಸಂಜೆ, ಶುಭ ಸಂಜೆ, ಕಾಸ್ಟೆಲ್ ಗಾಂಡೋಲ್ಫೊ!" ಎಂದು ಮಾತು ಆರಂಭಿಸಿದ ಜಗದ್ಗುರುಗಳು, "ಧನ್ಯವಾದಗಳು. ನಿಮ್ಮ ಮಧ್ಯೆ ಇರಲು ನನಗೆ ತುಂಬಾ ಸಂತೋಷವಾಗಿದೆ. ಮುಂದಿನ ಕೆಲವು ವಾರಗಳನ್ನು ಸ್ವಲ್ಪ ವಿಶ್ರಾಂತಿ, ಸ್ವಲ್ಪ ಪ್ರಾರ್ಥನೆ, ಸ್ವಲ್ಪ ಓದು ಹಾಗೂ ಸಾಧ್ಯವಾದರೆ ಇಲ್ಲಿ ಕಾಸ್ಟೆಲ್ ಗಾಂಡೋಲ್ಫೊದಲ್ಲಿ ಸ್ವಲ್ಪ ಕ್ರೀಡೆಯೊಂದಿಗೆ ಕಳೆಯಲು ಬಯಸುತ್ತೇನೆ. ಹೀಗೆ ಒಟ್ಟಾಗಿ ಸೇರುವುದು ಯಾವಾಗಲೂ ಮಹತ್ವದ ಕ್ಷಣವಾಗಿದೆ. ನಿಮ್ಮೆಲ್ಲರನ್ನು ಇಲ್ಲಿ ನೋಡುವುದು ನನಗೆ ಸಂತೋಷ ತಂದಿದೆ. ನಿಮ್ಮ ಆತ್ಮೀಯ ಸ್ವಾಗತಕ್ಕೂ ಹಾಗೂ ಸಹೋದರ-ಸಹೋದರಿಯರಾಗಿ ಇರುವುದಕ್ಕೂ ನಿಮಗೆ ಧನ್ಯವಾದಗಳು" ಎಂದು ಹೇಳಿದರು.

ಜಗದ್ಗುರುಗಳ ಪ್ರಾರ್ಥನೆ

"ಸ್ವಾಗತ! ಸ್ವಾಗತ!" ಎಂಬ ಘೋಷಣೆಗಳು ಮತ್ತು ಕರತಾಡನಗಳ ನಡುವೆ ಜಗದ್ಗುರು ಲಿಯೋರವರು ಆಶೀರ್ವಾದ ನೀಡಿದರು. "ಮುಂದಿನ ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ ಮತ್ತೆ ಭೇಟಿಯಾಗೋಣ. ಬಹುಶಃ ಇನ್ನೂ ಕೆಲವು ಸಂದರ್ಭಗಳಲ್ಲಿಯೂ ಭೇಟಿಯಾಗಬಹುದು" ಎಂದು ಅವರು ಹೇಳಿದರು.

"ನಾನು ಯಾವಾಗಲೂ ನಿಮ್ಮೆಲ್ಲರಿಗಾಗಿ ಪ್ರಾರ್ಥಿಸುತ್ತೇನೆ. ವಿಶೇಷವಾಗಿ ಈ ಮುಂದಿನ ವಾರಗಳಲ್ಲಿ ನಿಮ್ಮನ್ನು ನನ್ನ ಪ್ರಾರ್ಥನೆಯಲ್ಲಿ ಸ್ಮರಿಸುತ್ತೇನೆ. ದೇವರು ಸದಾ ನಿಮ್ಮೊಂದಿಗಿರಲಿ" ಎಂದು ಜಗದ್ಗುರುಗಳು ಹಾರೈಸಿದರು.

ಕಾಸ್ಟೆಲ್ ಗಾಂಡೋಲ್ಫೊದಲ್ಲಿ ವಿಶ್ರಾಂತಿಯ ಅವಧಿ

2025ರ ಜುಲೈ 13ರಂದು ತಾವು ಪವಿತ್ರ ಬಲಿಪೂಜೆ ಅರ್ಪಿಸಿದ್ದ ಸಂತ ಥೋಮಸ್ ಆಫ್ ವಿಲ್ಲನೋವಾ ದೇವಾಲಯದ ಧರ್ಮಗುರು ಹಾಗೂ ಆ ಧರ್ಮಸಮುದಾಯಕ್ಕೂ ಜಗದ್ಗುರುಗಳು ತಮ್ಮ ಶುಭಾಶಯಗಳನ್ನು ತಿಳಿಸಿದರು.

ಈ ವಿಶ್ರಾಂತಿಯ ಅವಧಿಯಲ್ಲಿ ಎಲ್ಲಾ ಸಾಮಾನ್ಯ ಸಾರ್ವಜನಿಕ ಭೇಟಿಗಳು, ಖಾಸಗಿ ಭೇಟಿಗಳು ಹಾಗೂ ವಿಶೇಷ ಭೇಟಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಾಮಾನ್ಯ ಸಾರ್ವಜನಿಕ ಭೇಟಿಗಳು ಆಗಸ್ಟ್ 5ರ ಬುಧವಾರದಿಂದ ಪುನರಾರಂಭವಾಗಲಿವೆ. ಜುಲೈ ತಿಂಗಳ ಎಲ್ಲ ಭಾನುವಾರಗಳಲ್ಲೂ ತ್ರಿಕಾಲ ಪ್ರಾರ್ಥನೆಯು ಕಾಸ್ಟೆಲ್ ಗಾಂಡೋಲ್ಫೊದ ಪಿಯಾಜಾ ದೆಲ್ಲಾ ಲಿಬೆರ್ತಾದಲ್ಲಿ ನಡೆಯಲಿದೆ.

05 ಜುಲೈ 2026, 21:11