"ಜಗದ್ಗುರು XIVನೇ ಲಿಯೋರವರು: ದೇವರು ನಮ್ಮ ಮೇಲೆ ನಂಬಿಕೆಯಿಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ."
ವ್ಯಾಟಿಕನ್ ವರದಿ
ಸಾಮಾನ್ಯ ಕಾಲದ ಹದಿನೈದನೇ ಭಾನುವಾರದಂದು ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ನಡೆದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ, ಸುವಾರ್ತೆಯ ಬೀಜ ಬಿತ್ತುವವನ ದೃಷ್ಟಾಂತ ಕುರಿತು ಚಿಂತನೆ ಹಂಚಿಕೊಂಡ ಜಗದ್ಗುರು XIVನೇ ಲಿಯೋರವರು, ದೇವರು ತನ್ನ ವಾಕ್ಯದ ಬೀಜವನ್ನು ಮಾನವನ ಹೃದಯದಲ್ಲಿ ಬಿತ್ತುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಏಕೆಂದರೆ "ಅವರ ಪ್ರೀತಿಯ ಶಕ್ತಿಯು ನಮ್ಮ ದೌರ್ಬಲ್ಯಕ್ಕಿಂತಲೂ ಪ್ರಬಲವಾಗಿದೆ" ಎಂಬುದು ಅವರಿಗೆ ತಿಳಿದಿದೆ ಎಂದು ಹೇಳಿದರು.
ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ನೆರೆದಿದ್ದ ಯಾತ್ರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಸಂತ ಮತ್ತಾಯನ ಸುವಾರ್ತೆಯಲ್ಲಿರುವ ಬೀಜ ಬಿತ್ತುವವನ ದೃಷ್ಟಾಂತವು, "ದೇವರು ತನ್ನ ವಾಕ್ಯವನ್ನು ನಮ್ಮ ಹೃದಯಗಳಲ್ಲಿ ಬಿತ್ತುವಾಗ ತೋರುವ ಉದಾರತೆ, ವಿಶ್ವಾಸ ಮತ್ತು ನಮ್ಮೊಳಗೆ ಕಾರ್ಯನಿರ್ವಹಿಸುವ ಅವರ ಶಕ್ತಿಯನ್ನು ಅನಾವರಣಗೊಳಿಸುತ್ತದೆ" ಎಂದು ವಿವರಿಸಿದರು.
ಈ ರಹಸ್ಯದ ಕೇಂದ್ರಬಿಂದುವಿನಲ್ಲಿ ಕ್ರಿಸ್ತನೇ
"ಮಾಂಸಧಾರಿಯಾದ ವಾಕ್ಯವಾದ ಯೇಸುಕ್ರಿಸ್ತನೇ ನಮ್ಮ ರಕ್ಷಣೆಗೆ ತನ್ನ ಪ್ರಾಣವನ್ನು ಅರ್ಪಿಸಿದ ಬೀಜವಾಗಿದ್ದಾನೆ. ತಂದೆಯು ಲೋಕದಾದ್ಯಂತ ನಿರಂತರವಾಗಿ ಬಿತ್ತುತ್ತಿರುವ ಆ ಬೀಜವು, ತನ್ನ ಮರಣದ ಮೂಲಕ ಅಪಾರ ಫಲವನ್ನು ನೀಡುತ್ತದೆ," ಎಂದು ಅವರು ವಿವರಿಸಿದರು.
ಆದಾಗ್ಯೂ, ದೇವರ ವಾಕ್ಯಕ್ಕೆ ಯಾವಾಗಲೂ ಸ್ವಾಗತ ದೊರೆಯುವುದಿಲ್ಲ ಎಂಬುದನ್ನು ಜಗದ್ಗುರುಗಳು ಒಪ್ಪಿಕೊಂಡರು. ಕೆಲವೊಮ್ಮೆ ಅದು "ಕಠಿಣ ಮತ್ತು ಸ್ಪಂದಿಸದ ನೆಲ", ಅಥವಾ "ತುಳಿದ ದಾರಿ, ಕಲ್ಲಿನ ನೆಲ ಅಥವಾ ಮುಳ್ಳಿನ ಪೊದೆಗಳಂತಿರುವ ಗಮನಚಲಿತ ಹೃದಯಗಳನ್ನು" ಎದುರಿಸುತ್ತದೆ ಎಂದು ಹೇಳಿದರು. ಆದರೆ ಕೆಲವು ಸಂದರ್ಭಗಳಲ್ಲಿ ಅದು "ಸ್ವೀಕಾರಾರ್ಹ ಮತ್ತು ಫಲವತ್ತಾದ ನೆಲದ ಮೇಲೆ ಬೀಳುತ್ತದೆ. ಅಲ್ಲಿ ಪ್ರೀತಿಯ ಅದ್ಭುತಗಳು ಆರಂಭವಾಗಿ ಎಲ್ಲವನ್ನೂ ರೂಪಾಂತರಿಸುವ ಶಕ್ತಿಯನ್ನು ಹೊಂದುತ್ತವೆ" ಎಂದು ಅವರು ತಿಳಿಸಿದರು.
"ಆದ್ದರಿಂದಲೇ ತಂದೆಯು ಬೀಜ ಬಿತ್ತುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಏಕೆಂದರೆ ಅವರ ಪ್ರೀತಿಯ ಶಕ್ತಿಯು ನಮ್ಮ ದೌರ್ಬಲ್ಯಕ್ಕಿಂತಲೂ ಬಲವಾಗಿದೆ ಎಂಬುದು ಅವರಿಗೆ ತಿಳಿದಿದೆ," ಎಂದು ಜಗದ್ಗುರುಗಳು ಹೇಳಿದರು.
ದೇವರು ನಮ್ಮೊಳಗಿನ ಒಳಿತನ್ನು ಕಾಣುತ್ತಾನೆ
ಸಂತ ಜಾನ್ ಕ್ರಿಸೊಸ್ಟಮ್ ರವರ ಮಾತುಗಳನ್ನು ಉಲ್ಲೇಖಿಸಿದ ಜಗದ್ಗುರುಗಳು, ಬೆಳೆಯುವ ಸಾಧ್ಯತೆಯೇ ಇಲ್ಲವೆಂದು ತೋರುವ ನೆಲದಲ್ಲಿ ಬೀಜ ಬಿತ್ತುವ ವಿರೋಧಾಭಾಸದ ಕುರಿತು ಚಿಂತಿಸಿದರು. ಕೃಷಿಯಲ್ಲಿ ಇದು ಅರ್ಥವಿಲ್ಲದ ಕೆಲಸವೆಂದು ತೋರಿದರೂ, ದೇವರು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಾನೆ. ಏಕೆಂದರೆ ಕಲ್ಲಿನ ನೆಲವೂ ಫಲವತ್ತಾದ ಭೂಮಿಯಾಗಿ ರೂಪಾಂತರಗೊಳ್ಳಬಹುದು ಎಂದು ಅವರು ಹೇಳಿದರು.
"ಮಾನವನ ಮೇಲಿನ ದೇವರ ವಿಶ್ವಾಸವು, ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಅವರಿಗೆ ಇರುವ ಆಳವಾದ ಪರಿಚಯದಿಂದ ಹುಟ್ಟಿಕೊಂಡಿದೆ. ದೇವರ ಉದಾರತೆ ಅಜ್ಞಾನದಿಂದ ಕೂಡಿದ್ದಲ್ಲ ಅದು ಜ್ಞಾನಪೂರ್ಣವಾಗಿದೆ. ನಮ್ಮೊಳಗೆ ಅಡಗಿರುವ ಒಳಿತಿನ ಸಾಮರ್ಥ್ಯವನ್ನು ದೇವರು ಕಾಣುತ್ತಾನೆ. ಕೆಲವೊಮ್ಮೆ ನಾವು ಅದನ್ನು ಗುರುತಿಸಲು ವಿಫಲರಾಗಬಹುದು," ಎಂದು ಜಗದ್ಗುರುಗಳು ಹೇಳಿದರು.
ಆದ್ದರಿಂದಲೇ, "ನಮ್ಮ ಹೃದಯದ ನೆಲವನ್ನು ನಮಗಿಂತ ಚೆನ್ನಾಗಿ ಅರಿತಿರುವ ಪ್ರಭು, ನಾವು ಯಾರು ಎಂಬುದರ ಮೇಲೂ, ನಂಬಿಕೆಯಿಂದ ಆತನಿಗೆ ನಮ್ಮನ್ನು ಒಪ್ಪಿಸಿದರೆ ಪ್ರತಿದಿನ ನಾವು ಏನಾಗಬಹುದು ಎಂಬುದರ ಮೇಲೂ ತನ್ನ ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ," ಎಂದು ಅವರು ಹೇಳಿದರು.
ಪವಿತ್ರಾತ್ಮನ ಫಲಗಳನ್ನು ನೀಡುವ ದೇವರ ವಾಕ್ಯ
ದೇವರ ವಾಕ್ಯವನ್ನು ವಿನಯ ಮತ್ತು ಮುಕ್ತ ಹೃದಯದಿಂದ ಸ್ವೀಕರಿಸಿದಾಗ ಅದು ಪವಿತ್ರಾತ್ಮನ ಫಲಗಳನ್ನು ಉಂಟುಮಾಡುತ್ತದೆ ಎಂದು ಜಗದ್ಗುರುಗಳು ಹೇಳಿದರು. ಸಂತ ಪೌಲನು ಗಲಾತ್ಯದವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ ಅವರು, ಆ ಫಲಗಳನ್ನು "ಪ್ರೀತಿ, ಸಂತೋಷ, ಶಾಂತಿ, ಸಹನೆ, ದಯೆ, ಒಳ್ಳೆಯತನ, ನಂಬಿಗಸ್ತಿಕೆ, ಸೌಮ್ಯತೆ ಮತ್ತು ಆತ್ಮಸಂಯಮ" ಎಂದು ವಿವರಿಸಿದರು.
"ನಮ್ಮ ಜಗತ್ತಿಗೆ ಈ ಫಲಗಳ ಅಗತ್ಯ ಎಷ್ಟೊಂದು ಇದೆ! ಇವುಗಳಿಂದಲೇ ಜಗತ್ತು ತುಂಬಿ, ಇವುಗಳ ಮೂಲಕವೇ ರೂಪಾಂತರಗೊಳ್ಳಬೇಕಾಗಿದೆ," ಎಂದು ಅವರು ಹೇಳಿದರು.
ಬೇಸಿಗೆಯ ಒಂದು ಆಹ್ವಾನ
ಪ್ರಸ್ತುತ ಬೇಸಿಗೆಯ ಕಾಲವನ್ನು ಉಲ್ಲೇಖಿಸಿದ ಜಗದ್ಗುರು ಲಿಯೋರವರು, ವಿಶ್ರಾಂತಿಯ ಸಮಯವನ್ನು ಆತ್ಮಿಕ ಬೆಳವಣಿಗೆಗೆ ಬಳಸಿಕೊಳ್ಳುವಂತೆ ಕ್ರೈಸ್ತರನ್ನು ಪ್ರೋತ್ಸಾಹಿಸಿದರು.
"ವಿಶೇಷವಾಗಿ ಈ ಬೇಸಿಗೆಯ ರಜಾದಿನಗಳಲ್ಲಿ ದೇವರ ವಾಕ್ಯವನ್ನು ಆಲಿಸಲು, ಓದಲು ಮತ್ತು ಧ್ಯಾನಿಸಲು ಸಮಯ ಮೀಸಲಿಡುವ ಸಂಕಲ್ಪ ಮಾಡೋಣ. ಜೊತೆಗೆ ಅರ್ಥಪೂರ್ಣ ಮೌನ ಮತ್ತು ಪ್ರಾರ್ಥನೆಗಾಗಿ ಸಹ ಸಮಯವನ್ನು ಮೀಸಲಿಡೋಣ," ಎಂದು ಅವರು ಹೇಳಿದರು.
ಇಂತಹ ಕ್ಷಣಗಳು ದೇಹ ಮತ್ತು ಆತ್ಮ ಎರಡನ್ನೂ ನವೀಕರಿಸುತ್ತವೆ. ಇದರಿಂದ ಕ್ರೈಸ್ತರು ತಮ್ಮ ದೈನಂದಿನ ಜೀವನಕ್ಕೆ ಮರಳಿದಾಗ, ಸುವಾರ್ತೆಯ ಶುಭಸಂದೇಶವನ್ನು ಸಾರಲು ಸನ್ನದ್ಧರಾಗುವುದರ ಜೊತೆಗೆ ದೇವರ ರಾಜ್ಯದ ಬೆಳವಣಿಗೆಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಸಮರ್ಥರಾಗುತ್ತಾರೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು.
