ಹುಡುಕಿ

Papa Leone preside una veglia di preghiera per la pace

ನಿಜವಾದ ಐಕಮತ್ಯದಿಂದ ಹೃದಯಗಳನ್ನು ತುಂಬಬಲ್ಲುದು ದೇವರ ಕರುಣೆಯೊಂದೇ ಎಂದು ಜಗದ್ಗುರುಗಳು ಹೇಳಿದ್ದಾರೆ.

ಇಟಲಿಯ ಲೋಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಗೆ, 27ನೇ ಕೊಲುಂಬಾನುಸ್ ದಿನದ ಅಂಗವಾಗಿ ಕಳುಹಿಸಿದ ಪತ್ರದಲ್ಲಿ, ಜಗದ್ಗುರು XIVನೇ ಲಿಯೋರವರು ಹೃದಯಗಳನ್ನು ನಿಜವಾದ ಐಕಮತ್ಯದಿಂದ ತುಂಬಬಲ್ಲುದು ದೇವರ ಕರುಣೆಯೊಂದೇ ಆಗಿದ್ದು, ಅದುವೇ "ಶತ್ರುಗಳೂ ಪರಸ್ಪರ ಕೈಚಾಚುವಂತೆ ಮಾಡಬಲ್ಲದು" ಎಂದು ಒತ್ತಿ ಹೇಳಿದ್ದಾರೆ. ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರ ಸಹಿಯಿರುವ ಈ ಪತ್ರದಲ್ಲಿ, ಜಗದ್ಗುರುಗಳು ಲೋಡಿ ಪ್ರದೇಶಕ್ಕೆ ಇತ್ತೀಚೆಗೆ ನಡೆಸಿದ ತಮ್ಮ ಧರ್ಮಾಧ್ಯಕ್ಷೀಯ ಭೇಟಿಯನ್ನು ಹಾಗೂ ಸಂತ ಫ್ರಾನ್ಸಿಸ್ ಜೇವಿಯರ್ ಕಾಬ್ರಿನಿರವರಿಗೆ ಸಲ್ಲಿಸಿದ ಗೌರವವನ್ನೂ ಸ್ಮರಿಸಿದ್ದಾರೆ.

ವ್ಯಾಟಿಕನ್ ವರದಿ

ಯುದ್ಧದ ಸಂದರ್ಭದಲ್ಲಿ ಅಗತ್ಯವಿರುವುದು ಕರುಣೆಗಾಗಿ ಸಲ್ಲಿಸುವ ವಿನಮ್ರ ಪ್ರಾರ್ಥನೆ

ಸಂಘರ್ಷಗಳಿಂದ ಉಂಟಾಗುತ್ತಿರುವ ವಿನಾಶ ಮತ್ತು ಸಾವನ್ನು ಇನ್ನಷ್ಟು ತೀವ್ರಗೊಳಿಸುವ ಪರಸ್ಪರ ಆರೋಪ-ಪ್ರತ್ಯಾರೋಪಗಳ ಗದ್ದಲದ ನಡುವೆ, ಅಗತ್ಯವಿರುವುದು ಪರಸ್ಪರರನ್ನು ದೂಷಿಸುವುದಲ್ಲ ಬದಲಾಗಿ ಕರುಣೆಗಾಗಿ ವಿನಮ್ರವಾಗಿ ಮತ್ತು ಮೌನವಾಗಿ ದೇವರಲ್ಲಿ ಮೊರೆಯಿಡುವುದಾಗಿದೆ. ಶತ್ರುವಿನ ಕಡೆಗೂ ಕೈ ಚಾಚಬಲ್ಲ ಹೊಸ ಹೃದಯವನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುವ ಮನೋಭಾವವೇ ಇಂದು ಅಗತ್ಯವಾಗಿದೆ ಎಂದು ಜಗದ್ಗುರು XIVನೇ ಲಿಯೋರವರು ಕರೆ ನೀಡಿದ್ದಾರೆ.

ಇಟಲಿಯ ಲೋಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಮೌರಿಜಿಯೋ ಮಾಲ್ವೆಸ್ತಿತಿ ಅವರಿಗೆ, 27ನೇ ಕೊಲುಂಬಾನುಸ್ ದಿನದ ಅಂಗವಾಗಿ ಬರೆದ ಪತ್ರದಲ್ಲಿ ಜಗದ್ಗುರುಗಳ ಈ ಸಂದೇಶವನ್ನು ನೀಡಿದ್ದಾರೆ. ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರ ಸಹಿಯಿರುವ ಈ ಪತ್ರವು, ಜುಲೈ 5ರಂದು ಲೊಂಬಾರ್ಡಿಯ ಲೋಡಿ ನಗರದಲ್ಲಿ ನಡೆದ ಆಚರಣೆಯ ಸಂದರ್ಭದಲ್ಲಿ ಪ್ರಕಟಗೊಂಡಿದೆ.

ಕ್ರೈಸ್ತ ಸಂಪ್ರದಾಯದ ಮೌಲ್ಯಗಳನ್ನು ಮರುಶೋಧಿಸಲು ಆಹ್ವಾನ

ಅನೇಕ ವರ್ಷಗಳಿಂದ ಸಂತ ಕೊಲುಂಬಾನುಸ್‌ಗೆ ಸಮರ್ಪಿತವಾಗಿರುವ ಯುರೋಪಿನ ವಿವಿಧ ಧರ್ಮ ಸಭೆಯ ಹಾಗೂ ನಾಗರಿಕ ಸಮುದಾಯಗಳನ್ನು ಒಗ್ಗೂಡಿಸುತ್ತಾ, ಆ ಮಹಾತ್ಮರ ಜೀವನ, ಅವರ ಆಧ್ಯಾತ್ಮಿಕ ಪರಂಪರೆ ಮತ್ತು ಯುರೋಪಿನ ಸಂಸ್ಕೃತಿಗೆ ಅವರು ನೀಡಿದ ಶಾಶ್ವತ ಕೊಡುಗೆಯನ್ನು ಪರಿಚಯಿಸುವ ಈ ಉಪಕ್ರಮವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುವ ಎಲ್ಲರಿಗೂ ಜಗದ್ಗುರುಗಳು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲಿ, "ದೇವರಿಂದ ಪಡೆದ ವರಗಳನ್ನು ಸ್ವಂತದಲ್ಲೇ ಉಳಿಸಿಕೊಳ್ಳದೆ ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂಬ ಪಾಠವನ್ನು ಸಂತ ಕೊಲುಂಬಾನುಸ್‌ನಿಂದ ಕಲಿಯುವಂತೆ," ಈ ಆಚರಣೆಗಳು ವಿಭಿನ್ನ ಭಾಷೆ ಮತ್ತು ರಾಷ್ಟ್ರಗಳಿಗೆ ಸೇರಿದ ಜನರನ್ನು ಒಂದೆಡೆ ಸೇರಿಸುತ್ತವೆ ಎಂದು ತಿಳಿಸಲಾಗಿದೆ. ಜೊತೆಗೆ, "ಇಂದಿನ ಕಾಲದ ಸವಾಲುಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಕ್ರೈಸ್ತ ಸಂಪ್ರದಾಯದ ಮೌಲ್ಯಗಳನ್ನು ಒಟ್ಟಾಗಿ ಮರುಶೋಧಿಸುವಂತೆ" ಅವು ಎಲ್ಲರನ್ನೂ ಆಹ್ವಾನಿಸುತ್ತವೆ ಎಂದು ಜಗದ್ಗುರುಗಳು ಹೇಳಿದ್ದಾರೆ.

ಯುದ್ಧದ ಎದುರು ಪಶ್ಚಾತ್ತಾಪದ ಮನೋಭಾವ

ನಿಜವಾದ ಸಮಾಧಾನ ಮತ್ತು ಸೌಹಾರ್ದದ ಪಯಣಕ್ಕೆ ಅನಿವಾರ್ಯವಾದ ಮನೋಭಾವವೆಂದರೆ ಪಶ್ಚಾತ್ತಾಪದ ಮನೋಭಾವ ಎಂದು ಜಗದ್ಗುರು XIVನೇ ಲಿಯೋರವರು ತಿಳಿಸಿದ್ದಾರೆ. ಈ ಮನೋಭಾವದ ಶ್ರೇಷ್ಠ ಗುರು ಸಂತ ಕೊಲುಂಬಾನುಸ್ ಎಂದು ಅವರು ವಿವರಿಸಿದ್ದಾರೆ.

"ಸಂಘರ್ಷವು ಯುದ್ಧವಾಗಿ ಉಲ್ಬಣಗೊಂಡು, ಸಾವು ಮತ್ತು ವಿನಾಶದ ದುರಂತವನ್ನು ಉಂಟುಮಾಡಿದಾಗ, ಪರಸ್ಪರರನ್ನು ದೂಷಿಸುವ ಬದಲು ಕರುಣಾಮಯ ನ್ಯಾಯಾಧೀಶನಾದ ದೇವರ ಕರುಣೆಯನ್ನು ಬೇಡಿಕೊಳ್ಳಬೇಕು. ದೇವರ ಕರುಣೆಯೊಂದೇ ನಮ್ಮ ಹೃದಯಗಳಲ್ಲಿ ಮಾನವೀಯ ಕರುಣೆಯನ್ನು ತುಂಬಬಲ್ಲದು ಮತ್ತು ಶತ್ರುಗಳೂ ಪರಸ್ಪರ ಕೈಚಾಚುವಂತೆ ಮಾಡಬಲ್ಲದು" ಎಂದು ಪತ್ರದಲ್ಲಿ ಜಗದ್ಗುರುಗಳು ಹೇಳಿದ್ದಾರೆ.

ಪತ್ರದ ಕೊನೆಯಲ್ಲಿ, ಸಂತ ಫ್ರಾನ್ಸಿಸ್ ಜೇವಿಯರ್ ಕಾಬ್ರಿನಿರವರಿಗೆ ಗೌರವ ಸಲ್ಲಿಸಲು ಜಗದ್ಗುರುಗಳು ಇತ್ತೀಚೆಗೆ ಲೋಡಿ ಪ್ರದೇಶಕ್ಕೆ ನಡೆಸಿದ ತಮ್ಮ ಧರ್ಮಾಧ್ಯಕ್ಷೀಯ ಭೇಟಿಯನ್ನು ಸ್ಮರಿಸಲಾಗಿದೆ.

 

 

05 ಜುಲೈ 2026, 21:06