ಹುಡುಕಿ

ಲಂಪೆಡುಸಾದಲ್ಲಿ ಯುರೋಪ್‌ಗೆ ಹೆಬ್ಬಾಗಿಲು. ಲಂಪೆಡುಸಾದಲ್ಲಿ ಯುರೋಪ್‌ಗೆ ಹೆಬ್ಬಾಗಿಲು. 

ಲಾಂಪೆಡುಸಾ: ಜಗದ್ಗುರು XIVನೇ ಲಿಯೋರವರ ಭೇಟಿ ಭರವಸೆಯ ಸಂಕೇತಗಳನ್ನು ಮೂಡಿಸಿದೆ.

ಜಗದ್ಗುರು ಲಿಯೋರವರು ದಕ್ಷಿಣ ಇಟಲಿಯ ಲಾಂಪೆಡುಸಾ ದ್ವೀಪಕ್ಕೆ ಭೇಟಿ ನೀಡಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ, ಜಗದ್ಗುರು ಫ್ರಾನ್ಸಿಸ್ ರವರ ಐತಿಹಾಸಿಕ ಭೇಟಿಯ ಶಾಶ್ವತ ಪರಂಪರೆಯನ್ನು ಮತ್ತು ನಿರ್ಲಕ್ಷ್ಯದ ಮನೋಭಾವವನ್ನು ತಿರಸ್ಕರಿಸಿ, ವಲಸಿಗರು ಹಾಗೂ ನಿರಾಶ್ರಿತರನ್ನು ನಮ್ಮ ಸಹೋದರರು ಮತ್ತು ಸಹೋದರಿಯರಾಗಿ ಗುರುತಿಸಬೇಕೆಂಬ ಅವರ ತುರ್ತು ಕರೆಯನ್ನು ಪ್ರತಿಬಿಂಬಿಸುವ ಹೃದಯಸ್ಪರ್ಶಿ ಹಾಗೂ ಆಳವಾದ ಸಾಂಕೇತಿಕ ಕಾರ್ಯಕ್ರಮಗಳು ಮತ್ತು ಸಂಕೇತಗಳು ನಡೆಯಲಿವೆ.

ವ್ಯಾಟಿಕನ್ ವರದಿ

ಲಾಂಪೆಡುಸಾ ವಿಮಾನ ನಿಲ್ದಾಣದಿಂದ ನಮ್ಮನ್ನು ಪತ್ರಿಕಾ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದ ಟ್ಯಾಕ್ಸಿ ಚಾಲಕನಿಗೆ ನಾನು, “ಹೌದು, ಸಮುದ್ರವು ತುಂಬಾ ಸುಂದರವಾಗಿದೆ, ದ್ವೀಪವೂ ಮನಮೋಹಕವಾಗಿದೆ. ಆದರೆ ಇದು ನೋವಿನ ನೆಲವಾಗಿರುವುದರಿಂದ ನಾನು ಇಲ್ಲಿ ರಜೆಯನ್ನು ಕಳೆಯಲು ಬರುವುದಿಲ್ಲ,” ಎಂದು ಹೇಳಿದಾಗ, ಆತ ಕೂಡಲೇ ಉತ್ತರಿಸಿದನು: “ಇಲ್ಲ! ಇದು ನೋವಿನ ಸ್ಥಳವಲ್ಲ, ಇದು ಭರವಸೆಯ ನೆಲ. ಸಮುದ್ರಯಾನದಲ್ಲಿ ಬದುಕುಳಿದವರಿಗೆ ಇದು ಹೊಸ ಜೀವನದ ಪಯಣದ ಆರಂಭವಾಗಿದೆ”ಎಂದನು.

2014ರಲ್ಲಿ, ಸಾವಿರಾರು ವಲಸಿಗರು ಮತ್ತು ನಿರಾಶ್ರಿತರಿಗೆ ಜೀವ ರಕ್ಷಣೆ ನೀಡಿ, ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಅಪೂರ್ವ ಮಾನವೀಯ ಸೇವೆಗಾಗಿ ಲಾಂಪೆಡುಸಾ ದ್ವೀಪದ ಸಮುದಾಯವನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು ಎಂಬುದನ್ನೂ ಆತ ನನಗೆ ನೆನಪಿಸಿದನು.

ಅದೇ ಕಾರಣಕ್ಕಾಗಿ ಜಗದ್ಗುರು XIVನೇ ಲಿಯೋರವರು ಇಲ್ಲಿ ಆಗಮಿಸಲು ನಿರ್ಧರಿಸಿದ್ದಾರೆ. 2013ರ ಜುಲೈ 8ರಂದು ಜಗದ್ಗುರು ಫ್ರಾನ್ಸಿಸ್ ರವರು ರೋಮಿನ ಹೊರಗೆ ತಮ್ಮ ಮೊದಲ ಅಧಿಕೃತ ಜಗದ್ಗುರುಗಳ ಭೇಟಿಗಾಗಿ ಇದೇ ದ್ವೀಪವನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಐತಿಹಾಸಿಕ ಭೇಟಿ ಲಾಂಪೆಡುಸಾವನ್ನು ಸಣ್ಣ ಮೆಡಿಟರೇನಿಯನ್ ದ್ವೀಪದಿಂದ ಜಾಗತಿಕ ವಲಸೆ ಬಿಕ್ಕಟ್ಟಿನ ಸಂಕೇತವನ್ನಾಗಿ ರೂಪಿಸಿತು. ಅಲ್ಲದೆ, “ಸ್ವಾಗತಿಸಿ, ರಕ್ಷಿಸಿ, ಉತ್ತೇಜಿಸಿ ಮತ್ತು ಸಮಾಜದಲ್ಲಿ ಒಳಗೊಳ್ಳಿಸಿ” ಎಂಬ ಸಂದೇಶದ ಮೂಲಕ ವಲಸಿಗರು ಮತ್ತು ನಿರಾಶ್ರಿತರನ್ನು ನಮ್ಮ ಅತ್ಯಂತ ದುರ್ಬಲ ಸಹೋದರ-ಸಹೋದರಿಯರಾಗಿ ಕಾಣುವಂತೆ ವಿಶ್ವಕ್ಕೆ ಮನವಿ ಮಾಡಿತು.

ಮೆಡಿಟರೇನಿಯನ್ ಸಮುದ್ರದಲ್ಲಿ ಹೂವಿನ ಹಾರವನ್ನು ಅರ್ಪಿಸಿ, “ಮಾನವಕುಲವನ್ನು ಆವರಿಸಿರುವ ನಿರ್ಲಕ್ಷ್ಯದ ಜಾಗತೀಕರಣ”ವನ್ನು ಖಂಡಿಸಿದ ಐತಿಹಾಸಿಕ ಬಲಿಪೂಜೆಯನ್ನು ಅರ್ಪಿಸಿದ ಬಳಿಕ, ಜಗದ್ಗುರು ಫ್ರಾನ್ಸಿಸ್ ರವರು ಮುಳುಗಿದ ವಲಸಿಗರ ದೋಣಿಯ ಮರದಿಂದ ತಯಾರಿಸಲಾದ ಶಿಲುಬೆಗೆ ಆಶೀರ್ವಾದ ನೀಡಿದರು. ಅಂದಿನಿಂದ ಆ ಶಿಲುಬೆ ನಿರಾಶ್ರಿತರ ದುಃಖಭರಿತ ಪಯಣದ ಸಂಕೇತವಾಗಿ ವಿಶ್ವದಾದ್ಯಂತ ಸಂಚರಿಸುತ್ತಿದೆ.

ಆ ಆಶಾಭರಿತ ಪರಂಪರೆಯನ್ನು ಮುಂದುವರಿಸುತ್ತಾ, ಈ ಶನಿವಾರ ಜಗದ್ಗುರು XIVನೇ ಲಿಯೋರವರು ಹಲವು ಅರ್ಥಪೂರ್ಣ ಮತ್ತು ಸಾಂಕೇತಿಕ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಲಿದ್ದಾರೆ. ಮೊದಲಿಗೆ, ಸ್ವಾತಂತ್ರ್ಯದ ಹುಡುಕಾಟದಲ್ಲಿ ಸಮುದ್ರದಲ್ಲಿ ಪ್ರಾಣ ಕಳೆದುಕೊಂಡ ಮುಸ್ಲಿಮರು ಮತ್ತು ಕಥೋಲಿಕರು, ಯುವಕರು ಮತ್ತು ವೃದ್ಧರು, ಕಪ್ಪು ಮತ್ತು ಬಿಳಿಯವರು ಸಮಾಧಿಯಾಗಿರುವ ಸ್ಥಳೀಯ ಸ್ಮಶಾನಕ್ಕೆ ಭೇಟಿ ನೀಡಲಿದ್ದಾರೆ.

ನಂತರ ಅವರು ಸಮುದ್ರ ಮಾರ್ಗವಾಗಿ ಬರುವವರಿಗೆ ಆಶಾಕಿರಣವಾಗಿರುವ “ಗೇಟ್‌ವೇ ಟು ಯುರೋಪ್” ಸ್ಮಾರಕಕ್ಕೆ ತೆರಳಲಿದ್ದಾರೆ. ಬಳಿಕ, ಈ ಸಂದರ್ಭಕ್ಕಾಗಿ ಜಗದ್ಗುರು ಫ್ರಾನ್ಸಿಸ್ ರವರ ಹೆಸರನ್ನು ಇಡಲಾಗಿರುವ ಫವಾರೋಲೊ ಬಂದರುದಲ್ಲಿ ಒಂದು ವಲಸಿಗ ಕುಟುಂಬವನ್ನು ಭೇಟಿ ಮಾಡಲಿದ್ದಾರೆ. ಅಂತಿಮವಾಗಿ, ಲಾಂಪೆಡುಸಾದ ಕ್ರೀಡಾಂಗಣದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಅಲ್ಲಿ, 2013ರಲ್ಲಿ ಪ್ರಸಿದ್ಧ ಲಾಂಪೆಡುಸಾ ಶಿಲುಬೆಯನ್ನು ನಿರ್ಮಿಸಿದ್ದ ಅದೇ ಸ್ಥಳೀಯ ಮರದ ಕುಶಲಕರ್ಮಿಯು ವಲಸಿಗರ ದೋಣಿಗಳ ಮರದಿಂದ ಕೆತ್ತಿದ 70 ಸೆಂಟಿಮೀಟರ್ ಎತ್ತರದ ದೀಪಸ್ತಂಭವನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ತಮ್ಮ ಭೇಟಿಯ ನಂತರ ಜಗದ್ಗುರುಗಳು ಆ ದೀಪಸ್ತಂಭವನ್ನು ವ್ಯಾಟಿಕನ್‌ಗೆ ಕೊಂಡೊಯ್ಯಲಿದ್ದು, ಅದು ಲಾಂಪೆಡುಸಾದಷ್ಟೇ ಅಲ್ಲ, ಭರವಸೆ, ಬೆಳಕು ಮತ್ತು ಹೊಸ ಜೀವನದ ಶಾಶ್ವತ ಸಂಕೇತವಾಗಿಯೂ ಉಳಿಯಲಿದೆ.

03 ಜುಲೈ 2026, 19:50