ಯುರೋಪಿನ ಗಡಿಯಲ್ಲಿ ಐಕ್ಯತೆಯ ಸಾಕ್ಷಿಯಾದ ಜಗದ್ಗುರು XIVನೇ ಲಿಯೋರವರನ್ನು ಲಾಂಪೆಡುಸಾ ಸ್ವಾಗತಿಸಿತು.
ವ್ಯಾಟಿಕನ್ ವರದಿ
ಸುಮಾರು 6,000 ಜನಸಂಖ್ಯೆ ಹೊಂದಿರುವ ಲಾಂಪೆಡುಸಾ ದ್ವೀಪವು ಶನಿವಾರ ಬೆಳಿಗ್ಗೆ ಜಗದ್ಗುರು XIVನೇ ಲಿಯೋರವರನ್ನು ಆತ್ಮೀಯವಾಗಿ ಸ್ವಾಗತಿಸಿತು. ಸ್ಥಳೀಯ ನಿವಾಸಿಗಳು ರಸ್ತೆಗಳ ಬದಿಯಲ್ಲಿ ಸಾಲುಗಟ್ಟಿ ನಿಂತು, ಸ್ಮಶಾನ, “ಗೇಟ್‌ವೇ ಟು ಯುರೋಪ್” ಸ್ಮಾರಕ ಮತ್ತು ವಲಸಿಗರ ದೋಣಿಗಳು ತಲುಪುವ ಫವಾರೋಲೊ ಬಂದರಿನವರೆಗೆ ಜಗದ್ಗುರುಗಳನ್ನು ಬರಮಾಡಿಕೊಂಡರು. ಬಳಿಕ ಕ್ರೀಡಾಂಗಣದಲ್ಲಿ ನಡೆದ ಪವಿತ್ರ ಬಲಿಪೂಜೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.
ತಮ್ಮ ಪ್ರಭೊದನೆಯಲ್ಲಿ ಜಗದ್ಗುರುಗಳು, ಸಮುದ್ರ ಮಾರ್ಗವಾಗಿ ಆಗಮಿಸಿದ ಸಾವಿರಾರು ವಲಸಿಗರು ಮತ್ತು ನಿರಾಶ್ರಿತರಿಗೆ ಕರುಣೆ, ಆತಿಥ್ಯ ಮತ್ತು ಸಹೋದರತ್ವದ ಮನೋಭಾವದಿಂದ ಕೈಚಾಚಿದ ಲಾಂಪೆಡುಸಾ ನಿವಾಸಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಅಪಾಯದಲ್ಲಿದ್ದ ವಲಸಿಗರನ್ನು ಸಹೋದರರು ಮತ್ತು ಸಹೋದರಿಯರಾಗಿ ಸ್ವೀಕರಿಸಿದ ಅವರ ಮಾನವೀಯ ಸೇವೆಯನ್ನು ಅವರು ಶ್ಲಾಘಿಸಿದರು. ಜೊತೆಗೆ, ತಮ್ಮ ಸಂಕಷ್ಟದ ನಡುವೆಯೂ ಇತರ ಅಗತ್ಯವಂತರಿಗೆ ನೆರವಾದ ವಲಸಿಗರ ಐಕ್ಯತೆಯ ಮನೋಭಾವವನ್ನೂ ಅವರು ಮೆಚ್ಚಿದರು.
ಉತ್ತರ ಆಫ್ರಿಕಾಕ್ಕೆ ಸಮೀಪದಲ್ಲಿರುವ ಲಾಂಪೆಡುಸಾ, ಕಳೆದ ಹಲವು ದಶಕಗಳಿಂದ ಯುದ್ಧ, ಹಿಂಸೆ ಮತ್ತು ಬಡತನದಿಂದ ಪಲಾಯನಗೈದ ಸಾವಿರಾರು ಜನರ ಮೊದಲ ಆಶ್ರಯ ತಾಣವಾಗಿದೆ. ವಿಶೇಷವಾಗಿ 2011ರ ಅರಬ್ ಸ್ಪ್ರಿಂಗ್ ಮತ್ತು 2015ರ ಸಿರಿಯಾದ ಸಂಘರ್ಷದ ವೇಳೆ ಅನೇಕ ವಲಸಿಗರು ಈ ದ್ವೀಪವನ್ನು ತಲುಪಿದರು. 2023ರಲ್ಲಿ ಕೇವಲ ಒಂದು ವಾರದಲ್ಲೇ ಸುಮಾರು 10,000 ವಲಸಿಗರು ಇಲ್ಲಿ ಆಗಮಿಸಿದ್ದು, ಅದು ದ್ವೀಪದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿತ್ತು.
ಇಂದು ಲಾಂಪೆಡುಸಾದಲ್ಲಿ ಹೆಚ್ಚಿನ ವಲಸಿಗರು ಕಾಣಿಸದಿದ್ದರೂ, ಅದಕ್ಕೆ ಕಾರಣ ಅವರು ಸಾಮಾನ್ಯವಾಗಿ 24 ರಿಂದ 48 ಗಂಟೆಗಳೊಳಗೆ ಇತರ ಸ್ವಾಗತ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುವುದಾಗಿದೆ. ದ್ವೀಪದಲ್ಲೇ ಉಳಿದಿರುವ ಕೆಲವರು ಮಾತ್ರ ರಕ್ಷಣಾ ಕಾರ್ಯಗಳು ಮತ್ತು ವಲಸಿಗರ ಸ್ವಾಗತ ಸೇವೆಗಳಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ.
ಯುರೋಪಿನಲ್ಲಿ ವಲಸೆ ನೀತಿಗಳು ಹೆಚ್ಚು ಕಠಿಣವಾಗುತ್ತಿರುವ ಈ ಸಂದರ್ಭದಲ್ಲಿ, ಲಾಂಪೆಡುಸಾ ಜನರು ಭಿನ್ನಾಭಿಪ್ರಾಯಗಳನ್ನು ಮೀರಿ ಐಕ್ಯತೆ ಮತ್ತು ಮಾನವೀಯತೆಯ ಬದುಕಿನ ಸಾಕ್ಷಿಗಳಾಗಿಯೇ ಮುಂದುವರಿಯಬೇಕು ಎಂದು ಜಗದ್ಗುರು ಲಿಯೋರವರು ಕರೆ ನೀಡಿದರು. ಆರ್ಥಿಕ ಅಭಿವೃದ್ಧಿ, ಸೃಷ್ಟಿಯ ಸಂರಕ್ಷಣೆ ಮತ್ತು ಸಾಮಾಜಿಕ ಸಹೋದರತ್ವವು ಪರಸ್ಪರ ಹೊಂದಾಣಿಕೆಯಲ್ಲಿ ಬೆಳೆಯುವ, ಎಲ್ಲರಿಗೂ ಗೌರವ ಮತ್ತು ಆಶೆಯನ್ನು ನೀಡುವ ಜಗತ್ತಿನ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸೋಣ ಎಂದು ಅವರು ಪ್ರೋತ್ಸಾಹಿಸಿದರು.
