ಜುಲೈ ತಿಂಗಳಿಗಾಗಿ ಜಗದ್ಗುರುಗಳ ಪ್ರಾರ್ಥನಾ ಉದ್ದೇಶ: ‘ಮಾನವ ಜೀವಕ್ಕೆ ಗೌರವ ದೊರೆಯಲೆಂದು’.
ವ್ಯಾಟಿಕನ್ ವರದಿ
ಜಗದ್ಗುರು ಲಿಯೋರವರು ಜುಲೈ ತಿಂಗಳಿನಲ್ಲಿ ಮಾನವ ಜೀವಕ್ಕೆ ಗೌರವ ದೊರೆಯಲೆಂದು ತಮ್ಮೊಂದಿಗೆ ಪ್ರಾರ್ಥನೆಯಲ್ಲಿ ಒಂದಾಗುವಂತೆ ವಿಶ್ವದಾದ್ಯಂತದ ಕಥೋಲಿಕರನ್ನು ಆಹ್ವಾನಿಸಿದ್ದಾರೆ.
ಗುರುವಾರ, ಅವರು "ಜಗದ್ಗುರುಗಳೊಂದಿಗೆ ಪ್ರಾರ್ಥಿಸೋಣ" ಎಂಬ ಮಾಸಿಕ ವೀಡಿಯೊವನ್ನು ಬಿಡುಗಡೆ ಮಾಡಿದರು. ಈ ವೀಡಿಯೊವನ್ನು ಜಗದ್ಗುರುಗಳ ಅವರ ವಿಶ್ವವ್ಯಾಪಿ ಪ್ರಾರ್ಥನಾ ಜಾಲತಾಣ ಸಿದ್ಧಪಡಿಸುತ್ತದೆ.
ತಮ್ಮ ಪ್ರಾರ್ಥನೆಯಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರನ್ನೂ ದೇವರು ಪ್ರೀತಿಯಿಂದ ಸೃಷ್ಟಿಸಿ, ಪರಿಪೂರ್ಣ ಜೀವನವನ್ನು ನಡೆಸುವಂತೆ ಕರೆದಿದ್ದಾನೆ ಎಂದು ಜಗದ್ಗುರುಗಳು ಸ್ಮರಿಸಿದರು.
"ಅಸ್ತಿತ್ವದ ಮೊದಲ ಕ್ಷಣದಿಂದ ಹಿಡಿದು ಭೂಮಿಯ ಮೇಲಿನ ಜೀವನಯಾತ್ರೆಯ ಕೊನೆಯ ಉಸಿರಿನವರೆಗೆ ಪ್ರತಿಯೊಬ್ಬ ವ್ಯಕ್ತಿಯೂ ನಿಮ್ಮ ಮುಖವನ್ನು ಪ್ರತಿಬಿಂಬಿಸುವ ಪವಿತ್ರ ವರವಾಗಿದ್ದಾನೆ" ಎಂದು ಅವರು ಹೇಳಿದರು.
"ಇಂದು," ಎಂದು ಅವರು ಮುಂದುವರಿಸಿದರು, "ಪ್ರತಿಯೊಬ್ಬ ಮಾನವನ ಅನನ್ಯ ಹಾಗೂ ಪುನರಾವರ್ತಿಸಲಾಗದ ಮೌಲ್ಯವನ್ನು ಗುರುತಿಸಿ ಅದನ್ನು ಸಂರಕ್ಷಿಸುವ ಕೃಪೆಯನ್ನು ನಾವು ಬೇಡಿಕೊಳ್ಳುತ್ತೇವೆ."
ಬೇಷರತ್ತಾಗಿ ಜೀವವನ್ನು ಸ್ವೀಕರಿಸೋಣ
ಜೀವನವನ್ನು ಯಾವುದೇ ಷರತ್ತಿಲ್ಲದೆ ಸ್ವಾಗತಿಸಲು, ದುರ್ಬಲರನ್ನು ಮಮತೆಯಿಂದ ಆರೈಕೆ ಮಾಡಲು, ಜೀವನದ ಪ್ರತಿಯೊಂದು ಹಂತದಲ್ಲೂ ಗೌರವದಿಂದ ಜೊತೆಯಾಗಿರಲು ಹಾಗೂ ಧ್ವನಿಯಿಲ್ಲದವರ ಪರವಾಗಿ ಧೈರ್ಯದಿಂದ ನಿಲ್ಲಲು ನಾವು ಕಲಿಯಬೇಕೆಂಬ ತಮ್ಮ ಆಶಯವನ್ನು ಜಗದ್ಗುರುಗಳು ವ್ಯಕ್ತಪಡಿಸಿದರು.
ನಿರಾಸಕ್ತಿ ಅಥವಾ 'ತ್ಯಾಜ್ಯ ಸಂಸ್ಕೃತಿ' ಯಲ್ಲಿ ನಾವು ಸಿಲುಕಿದಾಗ, ಹಾಗೂ ಇತರರಲ್ಲಿ ಪ್ರೀತಿಗೆ ಅರ್ಹರಾದ ವ್ಯಕ್ತಿಯನ್ನು ಕಾಣಲು ವಿಫಲವಾದಾಗ ನಮ್ಮನ್ನು ಕ್ಷಮಿಸುವಂತೆ ಅವರು ಭಗವಂತನಲ್ಲಿ ಪ್ರಾರ್ಥಿಸಿದರು.
"ಜೀವನವನ್ನು ಯಾವಾಗಲೂ ಆಯ್ಕೆಮಾಡಲು ಸಿದ್ಧವಾಗಿರುವ ಹೊಸ ಹೃದಯವನ್ನೂ, ಅದನ್ನು ಸ್ಪಷ್ಟ ಕಾರ್ಯಗಳ ಮೂಲಕ ರಕ್ಷಿಸುವ ಉದಾರ ಕೈಗಳನ್ನೂ ನಮಗೆ ಅನುಗ್ರಹಿಸು" ಎಂದು ಅವರು ಬೇಡಿಕೊಂಡರು.
ಸುವಾರ್ತೆಯ ಜೀವಸಂದೇಶಕ್ಕೆ ಜೀವಂತ ಸಾಕ್ಷಿಯಾಗುವಂತೆ, ಪ್ರತಿಯೊಂದು ಜೀವವನ್ನು ಸಂಭ್ರಮಿಸುವ, ಯಾರೂ ಅನಗತ್ಯರೆಂದು ಭಾವಿಸದ ಹಾಗೂ ಪ್ರತಿಯೊಬ್ಬರ ಘನತೆಯನ್ನು ಯಾವಾಗಲೂ ಗೌರವಿಸಿ ಕಾಪಾಡುವ ತೆರೆದ ಮನೆಯಾಗಿ ತನ್ನ ಧರ್ಮ ಸಭೆಯನ್ನು ರೂಪಿಸಲು ಭಗವಂತನು ಸಹಾಯ ಮಾಡಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು.
ಕೊನೆಯಲ್ಲಿ, "ನೀವು ಪ್ರೀತಿಸುವಂತೆ, ಮೃದುತೆ, ನಿಷ್ಠೆ ಮತ್ತು ಆತ್ಮಾರ್ಪಣೆಯ ಮನೋಭಾವದಿಂದ ಜೀವನವನ್ನು ಪ್ರೀತಿಸಲು ನಮಗೆ ಸಹಾಯ ಮಾಡು" ಎಂದು ಪ್ರಭುವಾದ ಯೇಸು ಕ್ರಿಸ್ತರನ್ನು ಅವರು ಬೇಡಿಕೊಂಡರು.
"ಪ್ರತಿಯೊಂದು ಮಾನವ ಜೀವವೂ ನಮ್ಮ ಸಂಪೂರ್ಣ ಸಮರ್ಪಣೆಗೆ ಯೋಗ್ಯವಾದ ಅಮೂಲ್ಯ ವರವಾಗಿದೆ ಎಂಬುದನ್ನು ನಾವು ಮಾತುಗಳಲ್ಲಿಯೂ ಕಾರ್ಯಗಳಲ್ಲಿಯೂ ಘೋಷಿಸೋಣ" ಎಂದು ಜಗದ್ಗುರುಗಳು ತಮ್ಮ ಪ್ರಾರ್ಥನೆಯನ್ನು ಮುಕ್ತಾಯಗೊಳಿಸಿದರು.
ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲತಾಣ
1844ರಲ್ಲಿ 'ಪ್ರೇಷಿತರ ಪ್ರಾರ್ಥನಾ ಸಂಘ' ಎಂಬ ಹೆಸರಿನಲ್ಲಿ ಸ್ಥಾಪನೆಯಾದ ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲತಾಣವು, ಯೇಸು ಸಭೆಗೆ ಒಪ್ಪಿಸಲಾದ ಒಂದು ಪಾಂಟಿಫಿಕಲ್ ಕೃತಿಯಾಗಿದೆ.
2020ರ ಡಿಸೆಂಬರ್‌ನಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಈ ಪಾಂಟಿಫಿಕಲ್ ಕೃತಿಯನ್ನು ವ್ಯಾಟಿಕನ್ ಪ್ರತಿಷ್ಠಾನವಾಗಿ ಸ್ಥಾಪಿಸಿದರು. ಬಳಿಕ 2024ರ ಜುಲೈನಲ್ಲಿ ಅದರ ಅಂತಿಮ ನಿಯಮಾವಳಿಗಳಿಗೆ ಅನುಮೋದನೆ ನೀಡಿದರು.
ಈ ಜಾಲತಾಣವು ಪ್ರಸ್ತುತ 92ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇವರ ಧ್ಯೇಯಕ್ಕೆ ಪ್ರತಿದಿನ ತಮ್ಮನ್ನು ಸಮರ್ಪಿಸಿಕೊಳ್ಳಲು ಪ್ರಯತ್ನಿಸುವ 2.2 ಕೋಟಿಗೂ ಅಧಿಕ ಜನರನ್ನು ಒಳಗೊಂಡ ಆಧ್ಯಾತ್ಮಿಕ ಸಮುದಾಯವಾಗಿ ಬೆಳೆದಿದೆ.
ಈ ಜಾಲತಾಣದ ಧ್ಯೇಯದ ಕೇಂದ್ರಬಿಂದುವಿನಲ್ಲಿ ಜಗದ್ಗುರುಗಳ ಮಾಸಿಕ ಪ್ರಾರ್ಥನಾ ಉದ್ದೇಶಗಳಿವೆ. ಅವುಗಳ ಮೂಲಕ ಮಾನವಕುಲವು ಎದುರಿಸುತ್ತಿರುವ ತುರ್ತು ಸವಾಲುಗಳು ಮತ್ತು ಧರ್ಮ ಸಭೆಯ ಧ್ಯೇಯದ ಕಡೆಗೆ ತನ್ನ ಸದಸ್ಯರು ವಿಶೇಷ ಗಮನ ಹರಿಸಿ ಪ್ರಾರ್ಥಿಸಲು ಆಹ್ವಾನಿಸಲಾಗುತ್ತದೆ.
