ಹುಡುಕಿ

ಜಗದ್ಗುರು XIVನೇ ಲಿಯೋರವರು ನಾರ್ವೆಯ ಲುಥೆರನ್ ಬಿಷಪ್‌ಗಳೊಂದಿಗೆ ಪ್ರಾರ್ಥಿಸುತ್ತಾರೆ. ಜಗದ್ಗುರು XIVನೇ ಲಿಯೋರವರು ನಾರ್ವೆಯ ಲುಥೆರನ್ ಬಿಷಪ್‌ಗಳೊಂದಿಗೆ ಪ್ರಾರ್ಥಿಸುತ್ತಾರೆ.  (ANSA)

ಜಗದ್ಗುರುಗಳು: ಕ್ರೈಸ್ತರು ಪರಸ್ಪರ ಐಕ್ಯತೆಯನ್ನು ಅರಸಿ, ಒಟ್ಟಾಗಿ ಶಾಂತಿಯನ್ನು ಬೆಳೆಸಬೇಕು.

ನಾರ್ವೆಯ ಲೂಥರನ್ ಬಿಷಪ್‌ಗಳೊಂದಿಗೆ ನಡೆದ ಭೇಟಿಯಲ್ಲಿ, ಜಗದ್ಗುರು XIVನೇ ಲಿಯೋರವರು, ಇಂದಿನ ಅಶಾಂತ ಹಾಗೂ ಪ್ರಕ್ಷುಬ್ಧ ಕಾಲಘಟ್ಟದಲ್ಲಿ ಶಾಂತಿ ಮತ್ತು ನ್ಯಾಯವನ್ನು ಉತ್ತೇಜಿಸಲು ಎಲ್ಲಾ ಕ್ರೈಸ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಬುಧವಾರ ರೋಮಿಗೆ ತೀರ್ಥಯಾತ್ರೆ ಕೈಗೊಂಡಿರುವ ನಾರ್ವೆಯ ಲೂಥರನ್ ಬಿಷಪ್‌ಗಳೊಂದಿಗೆ ಭೇಟಿಯಾದರು.

ತಮ್ಮ ಭಾಷಣದಲ್ಲಿ, ಆರಂಭಿಕ ಕ್ರೈಸ್ತರು ಮತ್ತು ಹುತಾತ್ಮರಿಗೆ ಸಂಬಂಧಿಸಿದ ವಿವಿಧ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವಂತೆ ಜಗದ್ಗುರುಗಳು ಬಿಷಪ್‌ಗಳನ್ನು ಆಹ್ವಾನಿಸಿದರು. ಅವರ ಜೀವನವು ಇಂದಿನ ಕ್ರೈಸ್ತರಿಗೂ ನಿರಂತರವಾಗಿ ಸ್ಫೂರ್ತಿಯ ಮೂಲವಾಗಿದೆ ಎಂದು ಅವರು ಹೇಳಿದರು.

ಅವರ ಮಾದರಿಯು, “ದೇವರ ಮಹಿಮೆಗಾಗಿ ಮತ್ತು ನಮ್ಮ ಸಹೋದರ ಸಹೋದರಿಯರ ಒಳಿತಿಗಾಗಿ ನಮ್ಮ ಜೀವನವನ್ನೇ ಸಮರ್ಪಿಸಲು” ನಮಗೂ ಪ್ರೇರಣೆ ನೀಡುತ್ತದೆ ಎಂದು ಅವರು ಹೇಳಿದರು.

ನಮ್ಮ ಜಗತ್ತು ಎದುರಿಸುತ್ತಿರುವ “ವಿಶೇಷವಾಗಿ ಪ್ರಕ್ಷುಬ್ಧ ಕಾಲಘಟ್ಟ”ದಿಂದ ಉಂಟಾಗುತ್ತಿರುವ ಕಠಿಣ ಸವಾಲುಗಳತ್ತ ಜಗದ್ಗುರು ಲಿಯೋರವರ ಗಮನ ಸೆಳೆದರು.

“ಜನರ ನಡುವೆ ಹೆಚ್ಚುತ್ತಿರುವ ವೈರತ್ವವು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದು ಅಂತರರಾಷ್ಟ್ರೀಯ ಸಂಘರ್ಷಗಳು ಮತ್ತು ವಿವಾದಗಳಲ್ಲಿ ಮಾತ್ರವಲ್ಲ,” ಎಂದು ಅವರು ಹೇಳಿದರು. “ವೈಯಕ್ತಿಕ ದೇಶಗಳೊಳಗೂ ಇದು ಕಂಡುಬರುತ್ತದೆ. ರಾಜಕೀಯ ಮತ್ತು ಸಾಮಾಜಿಕ ಚರ್ಚೆಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಕಹಿತನವೇ ಇದಕ್ಕೆ ಸಾಕ್ಷಿಯಾಗಿದೆ.”

ನಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವವರ ವಿರುದ್ಧವೂ ವೈರತ್ವದ ಮನೋಭಾವಕ್ಕೆ ಜಾರುವ ಪ್ರಲೋಭನೆಯನ್ನು ಕ್ರೈಸ್ತರೂ ಎದುರಿಸುತ್ತಿದ್ದಾರೆ ಎಂದು ಅವರು ಗಮನಿಸಿದರು.

ಆದರೆ, ಅದಕ್ಕೆ ಬದಲಾಗಿ ನಾವು ಸಮನ್ವಯ ಮತ್ತು ಸಹೋದರತ್ವದ ಮಾರ್ಗಗಳನ್ನು ಹುಡುಕಬೇಕು ಎಂದು ಜಗದ್ಗುರುಗಳು ಹೇಳಿದರು.

“ಯೇಸು ನಮಗೆ ಮತ್ತೊಂದು ಮಾರ್ಗವನ್ನು ತೋರಿಸುತ್ತಾರೆ, ಒಳ್ಳೆಯತನ ಮತ್ತು ಪ್ರೀತಿಗೆ ನಿರಸ್ತ್ರೀಕರಿಸುವ ಶಕ್ತಿಯಿದೆ ಎಂಬುದನ್ನು ಅವರು ಪ್ರಕಟಿಸುತ್ತಾರೆ,” ಎಂದು ಅವರು ಹೇಳಿದರು.

ರೋಮಿಗೆ ಭೇಟಿ ನೀಡುವ ಮೂಲಕ ಲೂಥರನ್ ಬಿಷಪ್‌ಗಳು ಐಕ್ಯತೆಯನ್ನು ನಿರ್ಮಿಸುವ ತಮ್ಮ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಜಗದ್ಗುರುಗಳು ಹೇಳಿದರು. ಸಣ್ಣಪುಟ್ಟ ಕಾರ್ಯಗಳೂ ಸಹ “ಸಮನ್ವಯದ ಮಾರ್ಗದಲ್ಲಿ ನಮಗೆ ಸ್ಫೂರ್ತಿ ನೀಡುತ್ತಾ, ದಾರಿ ತೋರಿಸಬಲ್ಲವು” ಎಂದು ಅವರು ಗಮನಿಸಿದರು.

ನಂತರ ಜಗದ್ಗುರು XIVನೇ ಲಿಯೋರವರು, ಜಗತ್ತು ನಂಬುವಂತೆ ತನ್ನ ಶಿಷ್ಯರೆಲ್ಲರೂ ಒಂದಾಗಿರಬೇಕೆಂದು ಯೇಸು ಮಾಡಿದ ಪ್ರಾರ್ಥನೆಯನ್ನು ಸ್ಮರಿಸಿದರು.

“ನಮ್ಮ ಸಾಮಾನ್ಯ ದೀಕ್ಷಾಸ್ನಾನ ಮತ್ತು ಜಗತ್ತಿನಲ್ಲಿ ನಾವು ಹಂಚಿಕೊಂಡಿರುವ ಸಾಮಾನ್ಯ ಧ್ಯೇಯದಲ್ಲಿ ಬೇರೂರಿ,” ಎಂದು ಅವರು ಹೇಳಿದರು, “ಶಾಂತಿ ಮತ್ತು ನ್ಯಾಯವನ್ನು ಉತ್ತೇಜಿಸುವ ನಮ್ಮ ಸೇವೆಯಲ್ಲಿ ನಾವು ಸದಾ ಒಟ್ಟಾಗಿ ಬೆಳೆಯುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.”

ಕೊನೆಯಲ್ಲಿ, ನಾರ್ವೆಯ ಲೂಥರನ್ ಬಿಷಪ್‌ಗಳು ಆರಂಭಿಕ ಕ್ರೈಸ್ತ ಹುತಾತ್ಮರು ಮತ್ತು ಸಂತರ ಮಾದರಿಯನ್ನು ಅನುಸರಿಸುವಂತೆ ಜಗದ್ಗುರುಗಳು ಆಹ್ವಾನಿಸಿದರು. ಪ್ರೀತಿಯು ಪರಿವರ್ತನೆ ತರುವ ಶಕ್ತಿಯನ್ನು ಹೊಂದಿದೆ ಎಂಬುದಕ್ಕೆ ಅವರ ಜೀವನವು ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

“ದೇವರ ಆಶೀರ್ವಾದಕ್ಕಾಗಿ ನಾವು ಪ್ರಾರ್ಥಿಸೋಣ,” ಎಂದು ಅವರು ಹೇಳಿದರು. “ಆ ಮೂಲಕ ದೇವರು ತನ್ನ ಅಪಾರ ಒಳ್ಳೆಯತನ ಮತ್ತು ಜ್ಞಾನದಲ್ಲಿ, ನಾವು ಇನ್ನಷ್ಟು ನಿಜವಾದ ರೀತಿಯಲ್ಲಿ ಸಹೋದರ ಸಹೋದರಿಯರಾಗಿ ಬದುಕಲು ಸಹಾಯ ಮಾಡಲಿ; ಹೀಗೆ ನಮ್ಮ ರಕ್ಷಕರಾದ ಪ್ರಭು ಯೇಸು ಕ್ರಿಸ್ತರಿಗೆ ನಾವು ಒಟ್ಟಾಗಿ ಸಾಕ್ಷಿಯಾಗೋಣ.”

26 ಆಗಸ್ಟ್ 2026, 17:23