ಜಗದ್ಗುರುಗಳು: ‘ಪವಿತ್ರಾತ್ಮನು ಅಡಗಿಸಿಡಬೇಕಾದ ನಿಧಿಯಲ್ಲ; ಪ್ರತಿದಿನವೂ ಪ್ರಕಾಶಿಸಲು ಬಿಡಬೇಕಾದ ಬೆಳಕು’.
ವ್ಯಾಟಿಕನ್ ವರದಿ
“ಪ್ರಿಯ ಯುವಜನರೇ, ದೃಢೀಕರಣ ಸಂಸ್ಕಾರದ ಮೂಲಕ ನೀವು ಅತ್ಯಂತ ಸುಂದರವಾದ ಉಡುಗೊರೆಯಾದ ಪವಿತ್ರಾತ್ಮನನ್ನು ಸ್ವೀಕರಿಸಿದ್ದೀರಿ. ಅದು ಅಡಗಿಸಿಡಬೇಕಾದ ನಿಧಿಯಲ್ಲ, ಬದಲಾಗಿ, ಪ್ರತಿದಿನವೂ ನೀವು ಪ್ರಕಾಶಿಸುವಂತೆ ಮಾಡಬೇಕಾದ ಬೆಳಕು.”
ಬುಧವಾರ ಸೇಂಟ್ ಪೀಟರ್ ಬಸಿಲಿಕಾದಲ್ಲಿ ನಡೆದ ಸಾಮಾನ್ಯ ದರ್ಶನದಲ್ಲಿ ಇಟಾಲಿಯನ್ ತೀರ್ಥಯಾತ್ರಿಕರನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ, ತಮ್ಮ ಬಿಷಪ್‌ರೊಂದಿಗೆ ಆಗಮಿಸಿದ್ದ ಕಿಯಾವಾರಿ ಧರ್ಮಪ್ರಾಂತ್ಯದ ದೃಢೀಕರಣ ಸಂಸ್ಕಾರ ಸ್ವೀಕರಿಸಿದ ಯುವಜನರಿಗೆ ಜಗದ್ಗುರು XIVನೇ ಲಿಯೋರವರು ಈ ಮಾತುಗಳನ್ನು ನೆನಪಿಸಿದರು.
ಜಗದ್ಗುರುಗಳು ಯುವಜನರು, ರೋಗಿಗಳು ಮತ್ತು ಇತ್ತೀಚೆಗೆ ವಿವಾಹವಾದ ದಂಪತಿಗಳಿಗೂ ಶುಭಾಶಯಗಳನ್ನು ಕೋರಿದರು.
ಗುರುವಾರ ಮತ್ತು ಶುಕ್ರವಾರದಂದು ಧಾರ್ಮಿಕ ಪಂಚಾಂಗವು ಇಬ್ಬರು ಮಹಾನ್ ಸಂತರಾದ ಸಂತ ಮೋನಿಕಾ ಮತ್ತು ಸಂತ ಆಗಸ್ಟಿನ್ ರವರ ಸ್ಮರಣೆಯನ್ನು ಆಚರಿಸುತ್ತದೆ ಎಂದು ಅವರು ನೆನಪಿಸಿದರು. ಅವರು ಭೂಲೋಕದಲ್ಲಿ “ಕುಟುಂಬ ಸಂಬಂಧಗಳಿಂದ ಒಂದಾಗಿದ್ದರು” ಮತ್ತು ಈಗ “ಸ್ವರ್ಗದಲ್ಲಿ ಒಂದೇ ಮಹಿಮೆಯ ಗಮ್ಯದಿಂದ ಒಂದಾಗಿದ್ದಾರೆ” ಎಂದು ಜಗದ್ಗುರುಗಳು ಗಮನಿಸಿದರು.
“ಅವರ ಮಾದರಿಯು ನಿಮ್ಮ ಪ್ರತಿಯೊಬ್ಬರಲ್ಲೂ ಸುವಾರ್ತೆಯ ಸತ್ಯವನ್ನು ಪ್ರಾಮಾಣಿಕವಾಗಿ ಮತ್ತು ಉತ್ಸಾಹಭರಿತವಾಗಿ ಹುಡುಕುವ ಮನೋಭಾವವನ್ನು ಪ್ರೇರೇಪಿಸಲಿ. ಹೀಗೆ ನೀವು ನಿಮ್ಮ ದೈನಂದಿನ ಜೀವನದಲ್ಲಿ ಆ ಸತ್ಯಕ್ಕೆ ಸಂತೋಷದಿಂದ ಸಾಕ್ಷಿಗಳಾಗುವಂತಾಗಲಿ” ಎಂದು ಜಗದ್ಗುರು ಲಿಯೋರವರು ಹೇಳಿದರು.
