ಹುಡುಕಿ

Papa Leone tra vigne e cavalli, inaugura il Borgo Laudato si'

ಸೃಷ್ಟಿಯ ಸಂರಕ್ಷಣೆಗಾಗಿ ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಜಗದ್ಗುರುಗಳು ಪವಿತ್ರ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ.

ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿರುವ ಜಗದ್ಗುರುಗಳ ಉದ್ಯಾನವನದಲ್ಲಿ, ಸೃಷ್ಟಿಯ ಸಂರಕ್ಷಣೆಗಾಗಿ ವಿಶ್ವ ಪ್ರಾರ್ಥನಾ ದಿನದ ಅಂಗವಾಗಿ ಜಗದ್ಗುರು ಲಿಯೋರವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಸೆಪ್ಟೆಂಬರ್ 1ರಂದು ಲೌದಾತೊ ಸಿ’ ಗ್ರಾಮದಲ್ಲಿ  ಸೃಷ್ಟಿಯ ಸಂರಕ್ಷಣೆಗಾಗಿ ಪವಿತ್ರ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ ಎಂದು ಪ್ರಕಟಿಸಲಾಗಿದೆ.

ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿರುವ ಜಗದ್ಗುರುಗಳ ಉದ್ಯಾನವನದ ಲೌದಾತೊ ಸಿ’ ಉದ್ಯಾನದಲ್ಲಿ ಈ ಪವಿತ್ರ ಬಲಿಪೂಜೆ ನಡೆಯಲಿದೆ. ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿ ಮತ್ತು ಲೌದಾತೊ ಸಿ’ ಉನ್ನತ ಶಿಕ್ಷಣ ಕೇಂದ್ರವು ಇಂದು ಜಂಟಿಯಾಗಿ ಹೊರಡಿಸಿದ ಹೇಳಿಕೆಯಲ್ಲಿ ಈ ವಿಷಯವನ್ನು ಪ್ರಕಟಿಸಿವೆ.

ಈ ಬಲಿಪೂಜೆಯು ಸೃಷ್ಟಿಯ ಸಂರಕ್ಷಣೆಗಾಗಿ ವಿಶ್ವ ಪ್ರಾರ್ಥನಾ ದಿನವನ್ನು ಆಚರಿಸುವುದರ ಜೊತೆಗೆ, ನಮ್ಮ ಸಾಮಾನ್ಯ ನೆಲೆಯಾದ ಸೃಷ್ಟಿಯನ್ನು ಸಂರಕ್ಷಿಸಲು ಪ್ರಾರ್ಥನೆ ಮತ್ತು ಬದ್ಧತೆಯೊಂದಿಗೆ ಸಾಗುವ ‘ಸೃಷ್ಟಿಯ ಕಾಲ’  ಎಂಬ ಸರ್ವಕ್ರೈಸ್ತ ಪರಂಪರೆಯ ಅವಧಿಯ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯು ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರ ಹಬ್ಬದ ದಿನವಾದ ಅಕ್ಟೋಬರ್ 4ರಂದು, ಅವರ ನಿಧನದ 800ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮುಕ್ತಾಯಗೊಳ್ಳಲಿದೆ.

ಈ ಅವಧಿಯಲ್ಲಿ, ಪ್ರಾರ್ಥನೆ, ಮನಪರಿವರ್ತನೆ ಮತ್ತು ಸೃಷ್ಟಿಯ ಜವಾಬ್ದಾರಿಯುತ ಸಂರಕ್ಷಣೆಗೆ ಸಂಬಂಧಿಸಿದ ಪ್ರಾಯೋಗಿಕ ಕಾರ್ಯಗಳ ಮೂಲಕ ಸೃಷ್ಟಿಯ ಮೇಲಿನ ತಮ್ಮ ಬದ್ಧತೆಯನ್ನು ನವೀಕರಿಸಲು ಧರ್ಮ ಸಭೆ ಮತ್ತು ಇತರ ಕ್ರೈಸ್ತ ಸಮುದಾಯಗಳನ್ನು ಆಹ್ವಾನಿಸಲಾಗುತ್ತದೆ.

ಸೆಪ್ಟೆಂಬರ್ 1ರಂದು ಜಗದ್ಗುರುಗಳು ವಿಶೇಷವಾದ “ಸೃಷ್ಟಿಯ ಸಂರಕ್ಷಣೆಗಾಗಿ ಪವಿತ್ರ ಬಲಿಪೂಜೆ”ಯನ್ನು ನೆರವೇರಿಸಲಿದ್ದಾರೆ. ಈ ವಿಶೇಷ ಬಲಿಪೂಜೆಯನ್ನು ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿ, ದೈವಿಕ ಆರಾಧನೆ ಮತ್ತು ಸಂಸ್ಕಾರಗಳ ಶಿಸ್ತಿನ ಡಿಕಾಸ್ಟರಿ, ನಂಬಿಕೆಯ ಸಿದ್ಧಾಂತದ ಡಿಕಾಸ್ಟರಿ ಹಾಗೂ ಕ್ರೈಸ್ತ ಐಕ್ಯತೆಯನ್ನು ಉತ್ತೇಜಿಸುವ ಡಿಕಾಸ್ಟರಿ — ಈ ನಾಲ್ಕು ಡಿಕಾಸ್ಟರಿಗಳು ಸೇರಿ ರೂಪಿಸಿವೆ.

ಕಾರ್ಡಿನಲ್ ಚೆರ್ಣಿ: “ಪ್ರತಿಯೊಂದು ಕೊಡುಗೆಯೂ ಜವಾಬ್ದಾರಿಯನ್ನು ಉಂಟುಮಾಡುತ್ತದೆ”

“ಉದ್ಯಾನದ ಮಧ್ಯದಲ್ಲಿ ಸ್ಥಾಪಿಸಲಾದ ಬಲಿಪೀಠದ ಸುತ್ತಲೂ ಯೂಕರಿಸ್ಟ್ ಆಚರಿಸುವುದು, ಇಡೀ ಸೃಷ್ಟಿಯು ದೇವರ ಕೊಡುಗೆಯಾಗಿದೆ ಮತ್ತು ಪ್ರತಿಯೊಂದು ಕೊಡುಗೆಯೂ ಜವಾಬ್ದಾರಿಯನ್ನು ಉಂಟುಮಾಡುತ್ತದೆ ಎಂಬುದನ್ನು ನಮಗೆ ನೆನಪಿಸುತ್ತದೆ,” ಎಂದು ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿಯ ಪ್ರೀಫೆಕ್ಟ್ ಕಾರ್ಡಿನಲ್ ಮೈಕೆಲ್ ಚೆರ್ಣಿ ಹೇಳಿದರು.

“ನಮ್ಮ ಸಾಮಾನ್ಯ ನೆಲೆಯನ್ನು ಬಳಸಿಕೊಳ್ಳಬೇಕಾದ ಸಂಪನ್ಮೂಲವೆಂದು ನೋಡುವುದಕ್ಕಿಂತ, ಕೃತಜ್ಞತೆಯಿಂದ ಸ್ವೀಕರಿಸಬೇಕಾದ ಮತ್ತು ಪ್ರೀತಿಯಿಂದ ಕಾಳಜಿ ವಹಿಸಬೇಕಾದ ಕೊಡುಗೆಯೆಂದು ಗುರುತಿಸಲು ನಂಬಿಕೆ ನಮಗೆ ಕಲಿಸುತ್ತದೆ,” ಎಂದು ಕಾರ್ಡಿನಲ್ ಮುಂದುವರಿಸಿದರು. “ಪವಿತ್ರ ಬಲಿಪೂಜೆಯಲ್ಲಿ ದೇವರಿಗೆ ಸಲ್ಲಿಸುವ ನಮ್ಮ ಕೃತಜ್ಞತೆಯು ಒಂದು ಬದ್ಧತೆಯಾಗಿಯೂ ಪರಿವರ್ತಿತವಾಗುತ್ತದೆ. ಸೃಷ್ಟಿಯ ಕಾಳಜಿ ವಹಿಸುವುದು ಎಂದರೆ ಜೀವದ, ಜನರ—ವಿಶೇಷವಾಗಿ ಅತ್ಯಂತ ದುರ್ಬಲರ—ಮತ್ತು ಭವಿಷ್ಯದ ಪೀಳಿಗೆಗಳ ಕಾಳಜಿ ವಹಿಸುವುದಾಗಿದೆ.”

ಕಾರ್ಡಿನಲ್ ಬಾಜ್ಜೊ: “ನೆರೆಯವರನ್ನು ಪ್ರೀತಿಸುವುದು ಎಂದರೆ ಸೃಷ್ಟಿಯನ್ನು ಸಂರಕ್ಷಿಸುವುದು”

“ಧಮ೯ಸಭೆಗೆ, ಸೃಷ್ಟಿಯ ಸಂರಕ್ಷಣೆ ಮತ್ತು ಮಾನವ ಘನತೆಯ ಉತ್ತೇಜನವು ಒಂದೇ ಧ್ಯೇಯದ ಎರಡು ಮುಖಗಳಾಗಿವೆ. ಇವೆರಡೂ ಕ್ರೈಸ್ತ ನಂಬಿಕೆಯಲ್ಲಿ ಆಳವಾಗಿ ಬೇರೂರಿವೆ,” ಎಂದು ಲೌದಾತೊ ಸಿ’ ಉನ್ನತ ಶಿಕ್ಷಣ ಕೇಂದ್ರದ ಮಹಾನಿರ್ದೇಶಕ ಕಾರ್ಡಿನಲ್ ಫಾಬಿಯೊ ಬಾಜ್ಜೊ ಒತ್ತಿಹೇಳಿದರು.

“ದೇವರು ಪ್ರೀತಿಯಿಂದ ಲೋಕವನ್ನೂ ಮಾನವ ಕುಟುಂಬವನ್ನೂ ಸೃಷ್ಟಿಸಿದ್ದಾರೆ ಎಂದು ನಾವು ನಂಬುತ್ತೇವೆ. ಅದೇ ಪ್ರೀತಿಯಿಂದ ನಮ್ಮ ಸಹೋದರ-ಸಹೋದರಿಯರ ಕಾಳಜಿ ವಹಿಸುವ ಮತ್ತು ಸೃಷ್ಟಿಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ನಮಗೆ ವಹಿಸಿದ್ದಾರೆ,” ಎಂದು ಅವರು ಹೇಳಿದರು.

“ನಮ್ಮ ಸಾಮಾನ್ಯ ನೆಲೆಯನ್ನು ಸಂರಕ್ಷಿಸುವುದು ಎಂದರೆ ನಮ್ಮ ನೆರೆಯವರನ್ನು ಪ್ರೀತಿಸುವುದಾಗಿದೆ—ವಿಶೇಷವಾಗಿ ಪರಿಸರ ಹಾನಿ, ಬಡತನ, ಹವಾಮಾನ ಬಿಕ್ಕಟ್ಟು ಮತ್ತು ಸಂಘರ್ಷಗಳ ಪರಿಣಾಮಗಳಿಂದ ಅತ್ಯಂತ ಹೆಚ್ಚು ಸಂಕಷ್ಟ ಅನುಭವಿಸುವವರನ್ನು,” ಎಂದು ಕಾರ್ಡಿನಲ್ ಮುಂದುವರಿಸಿದರು. “ದೇವರು ಸೃಷ್ಟಿಸಿರುವುದರ ಮತ್ತು ಆತನು ನಮ್ಮ ಜವಾಬ್ದಾರಿಗೆ ಒಪ್ಪಿಸಿರುವವರ ಕಾಳಜಿ ವಹಿಸದೆ ನಾವು ದೇವರನ್ನು ಪ್ರೀತಿಸಲು ಸಾಧ್ಯವಿಲ್ಲ ಎಂಬುದನ್ನು ನಂಬಿಕೆ ನಮಗೆ ನೆನಪಿಸುತ್ತದೆ.”

25 ಆಗಸ್ಟ್ 2026, 17:53