ಅಜೆರ್ಬೈಜಾನ್‌ನಲ್ಲಿರುವ ಕಥೋಲಿಕ ಸಮುದಾಯಕ್ಕೆ ಕಾರ್ಡಿನಲ್ ಟ್ಯಾಗಲೆರವರ ಭೇಟಿ
ವ್ಯಾಟಿಕನ್ ಸುದ್ದಿ
ಅಕ್ಟೋಬರ್ 18 ರಂದು, ಧರ್ಮಾಧ್ಯಕ್ಷರಾದ ವ್ಲಾಡಿಮಿರ್ ಫೆಕೆಟೆರವರ ಆಹ್ವಾನದ ಮೇರೆಗೆ ಪವಿತ್ರ ಪೀಠಾಧಿಕಾರಿಯ ಸುವಾರ್ತಾಬೋಧನಾ ವಿಭಾಗದ ಪ್ರೊ-ಪ್ರಿಫೆಕ್ಟ್ ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಟ್ಯಾಗ್ಲೆರವರು ಅಜೆರ್ಬೈಜಾನ್‌ಗೆ ಭೇಟಿ ನೀಡಿದರು ಮತ್ತು ಬಾಕುದಲ್ಲಿನ ದ್ವಿತೀಯ ಸಂತ ಜಾನ್ ಪೌಲ್ ರವರ ದೇವಾಲಯದ ನಿರ್ಮಾಣ ಸ್ಥಳದಲ್ಲಿ ತಂಗಿದರು.
ಬಾಕುವಿನ ಎರಡನೇ ಕಥೋಲಿಕ ದೇವಾಲಯವಾಗಲಿರುವ ಸ್ಥಳಕ್ಕೆ ಭೂಮಿಯನ್ನು ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ರವರ ವಿಶೇಷ ತೀರ್ಪಿನ ಮೂಲಕ ನೀಡಲಾಯಿತು.
ಡಿಸೆಂಬರ್ 2024 ರಲ್ಲಿ, ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷರಾದ ರಿಚರ್ಡ್ ಗಲ್ಲಾಘರ್ ರವರು ದೇವಾಲಯವಾಗಲಿರುವ ಸ್ಥಳ ಮತ್ತು ಅದರ ಅಡಿಪಾಯದ ಕಲ್ಲು ಎರಡನ್ನೂ ಆಶೀರ್ವದಿಸಿದರು.
ಬಾಕುದಲ್ಲಿದ್ದಾಗ, ಕಾರ್ಡಿನಲ್ ಟ್ಯಾಗಲ್ ರವರು ಅಜೆರ್ಬೈಜಾನ್ ಗಣರಾಜ್ಯದ ಧಾರ್ಮಿಕ ಸಂಘಗಳೊಂದಿಗೆ ಕೆಲಸ ಮಾಡುವ ರಾಜ್ಯ ಸಮಿತಿಯ ಅಧ್ಯಕ್ಷ ರಾಮಿನ್ ಮಮ್ಮಡೋವ್ ರವರನ್ನು ಭೇಟಿಯಾದರು.
ಅವರು ದೇಶದ ಅಂತರ್-ಧರ್ಮೀಯ ಸಂಬಂಧಗಳ ವಾತಾವರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಕಥೋಲಿಕ ಸಮುದಾಯವು ತನ್ನ ಧ್ಯೇಯವನ್ನು ನಿರ್ವಹಿಸಲು ಅನುವು ಮಾಡಿಕೊಡುವ ಪರಿಸ್ಥಿತಿಗಳಿಗಾಗಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಅಜೆರ್ಬೈಜಾನ್‌ನ ಪ್ರೇಷಿತ ಪ್ರಾಂತ್ಯದಲ್ಲಿ ತಮ್ಮ ವಾಸ್ತವ್ಯದ ಸಮಯದಲ್ಲಿ, ಕಾರ್ಡಿನಲ್ ರವರು ಕಲ್ಕತ್ತಾದ ತಾಯಿ ಸಂತ ತೆರೇಸಾರವರ ನಿರಾಶ್ರಿತರ ಆಶ್ರಯಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಮಿಷನರೀಸ್ ಆಫ್ ಚಾರಿಟಿಗಾಗಿ ಪವಿತ್ರ ದಿವ್ಯಬಲಿಪೂಜೆಯನ್ನು ಆಚರಿಸಿದರು.
ಅದೇ ದಿನ, ಧರ್ಮಾಧ್ಯಕ್ಷರಾದ ಫೆಕೆಟೆರವರೊಂದಿಗೆ, ಅವರು ಅಜೆರ್ಬೈಜಾನ್‌ನಲ್ಲಿರುವ ಕಥೋಲಿಕ ಧರ್ಮಸಭೆಯ ಪ್ರೇಷಿತ ಪ್ರಿಫೆಕ್ಚರ್ ಕಾರ್ಯಾಲಯಕ್ಕೆ ಹೋದರು.
ಅಜೆರ್ಬೈಜಾನ್‌ನಲ್ಲಿನ ಧ್ಯೇಯದ 25ನೇ ವಾರ್ಷಿಕೋತ್ಸವದ ಆಚರಣೆಗಾಗಿ ಬಾಕುಗೆ ಬಂದಿದ್ದ ಸ್ಥಳೀಯ ಯಾಜಕರುಗಳು ಮತ್ತು ಸಲೇಸಿಯನ್ ಧಾರ್ಮಿಕ ಸಭೆಯ ಯಾಜಕರು ಮತ್ತು ಧಾರ್ಮಿಕರಿಂದ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು.
ಕಾರ್ಯಾಲಯದ ರೆಫೆಕ್ಟರಿಯಲ್ಲಿ ಚಹಾ ಸೇವಿಸುತ್ತಿದ್ದಾಗ, ಹಾಜರಿದ್ದವರು ವಿಶ್ವದಾದ್ಯಂತ ಧರ್ಮಸಭೆಯು ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗಳ ಕುರಿತು ಕಾರ್ಡಿನಲ್ ಟ್ಯಾಗಲೆರವರಿಗೆ ಪ್ರಶ್ನೆಗಳನ್ನು ಕೇಳುವ ಅವಕಾಶವನ್ನು ಪಡೆದರು.