ಅಲೆಸಾಂದ್ರೊ ಜಿಸೊತ್ತಿ ಇಬಿಯು ರೇಡಿಯೊ ನ್ಯೂಸ್ ಗುಂಪಿನ ಹೊಸ ಅಧ್ಯಕ್ಷರಾಗಿ ನೇಮಕ
ವ್ಯಾಟಿಕನ್ ಮೀಡಿಯಾದ ಉಪ ಸಂಪಾದಕೀಯ ನಿರ್ದೇಶಕರಾದ ಅಲೆಸಾಂದ್ರೊ ಜಿಸೊತ್ತಿ ಅವರನ್ನು, ವ್ಯಾಟಿಕನ್ ರೇಡಿಯೊವನ್ನು ಪ್ರತಿನಿಧಿಸಿ, ಯುರೋಪಿಯನ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್ ನ ರೇಡಿಯೊ ಮತ್ತು ಆಡಿಯೊ ನ್ಯೂಸ್ ಗುಂಪು ಆರ್ ಎ ಎನ್ ಜಿ ಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅವರು ಜರ್ಮನಿಯ ರುಂಡ್ಫುಂಕ್ ಬರ್ಲಿನ್–ಬ್ರಾಂಡೆನ್ಬರ್ಗ್‌ನ ಪತ್ರಕರ್ತೆ ಸ್ಟೆಫನಿ ಪೀಪರ್ ಅವರ ಸ್ಥಾನವನ್ನು ಭರ್ತಿ ಮಾಡುತ್ತಿದ್ದಾರೆ. ಜಿಸೊತ್ತಿ ಅವರು 2000ರಲ್ಲಿ ವ್ಯಾಟಿಕನ್ ರೇಡಿಯೊದಲ್ಲಿ ಕೆಲಸ ಆರಂಭಿಸಿದ್ದು, 2021ರಿಂದ ಆರ್ ಎ ಎನ್ ಜಿ ಯ ಸದಸ್ಯರಾಗಿದ್ದಾರೆ.
ರೇಡಿಯೊ ಮತ್ತು ಆಡಿಯೊ ನ್ಯೂಸ್ ಗುಂಪು ಯುರೋಪಿಯನ್ ಮಟ್ಟದಲ್ಲಿ ರೇಡಿಯೊ ಮತ್ತು ಆಡಿಯೊ ಕ್ಷೇತ್ರದ ಸಂಪಾದಕೀಯ ಹಾಗೂ ನೈತಿಕ ವಿಚಾರಗಳಿಗೆ ಸಂಬಂಧಿಸಿದ ಮೌಲ್ಯಗಳು ಮತ್ತು ಉತ್ತಮ ಆಚರಣೆಗಳನ್ನು ಒಗ್ಗೂಡಿಸುತ್ತದೆ. ಇದು ನಿರ್ದೇಶಕರು, ಪತ್ರಕರ್ತರು ಹಾಗೂ ನಿರ್ಮಾಪಕರ ಪರಿಣತಿಯನ್ನು ಒಟ್ಟುಗೂಡಿಸಿ, ಎಲ್ಲಾ ಇಬಿಯು ಸದಸ್ಯರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಆರ್ ಎ ಎನ್ ಜಿ ವರ್ಷಕ್ಕೆ ಹಲವು ಬಾರಿ ಸಭೆ ಸೇರಿ, ಪ್ರಚಲಿತ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತದೆ; ವಿಶೇಷವಾಗಿ ಯುರೋಪಿನಲ್ಲಿ ಮಾಹಿತಿ ಮತ್ತು ಮಾಧ್ಯಮಗಳ ಮೇಲೆ ಹೊಸ ತಂತ್ರಜ್ಞಾನಗಳ ಪರಿಣಾಮದತ್ತ ಗಮನ ಹರಿಸುತ್ತದೆ.
ವ್ಯಾಟಿಕನ್ ರೇಡಿಯೊ ಇಬಿಯುನ ಸ್ಥಾಪಕ ಸದಸ್ಯವಾಗಿದ್ದು, ಈ ವರ್ಷ ಇಬಿಯು ತನ್ನ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇಂದಿನ ದಿನಕ್ಕೆ ಇಬಿಯು 56 ದೇಶಗಳ 113 ಸಾರ್ವಜನಿಕ ಪ್ರಸಾರ ಸಂಸ್ಥೆಗಳನ್ನು ಒಗ್ಗೂಡಿಸಿರುವುದು ನನಗೆ ಅತ್ಯಂತ ಗೌರವವಾಗಿದೆ, ಎಂದು ಜಿಸೊತ್ತಿ ಹೇಳಿದರು. ಕಳೆದ ಕೆಲವು ವರ್ಷಗಳಿಂದ ಯುರೋಪಿನ ಪ್ರಮುಖ ಸಾರ್ವಜನಿಕ ರೇಡಿಯೊ ಪ್ರಸಾರಕರ ಸಹೋದ್ಯೋಗಿಗಳೊಂದಿಗೆ ಆಲೋಚನೆಗಳು ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ನನಗೆ ಲಭಿಸಿದೆ. ಇಂತಹ ವೇದಿಕೆಯಲ್ಲಿ ಇಬಿಯು ರೇಡಿಯೊ ಮತ್ತು ಆಡಿಯೊ ನ್ಯೂಸ್ ಗುಂಪಿನ ಹೊಸ ಅಧ್ಯಕ್ಷನಾಗಿರುವುದು ನನಗೆ ಮಹತ್ತರ ಗೌರವ.
ಕೃತಕ ಬುದ್ಧಿ ಯುಗದಲ್ಲಿಯೂ ರೇಡಿಯೊ ಅತ್ಯಾವಶ್ಯಕವಾಗಿಯೇ ಉಳಿದಿದೆ ಎಂದು ನಾನು ನಂಬುತ್ತೇನೆ, ಎಂದು ಅವರು ಮುಂದುವರಿಸಿದರು. ಯಾಕೆಂದರೆ ರೇಡಿಯೊ ವಿಶ್ವಾಸಾರ್ಹ ಮಾಹಿತಿಯನ್ನೂ ಸಮುದಾಯದೊಂದಿಗೆ ಗಾಢವಾದ ಸಂಪರ್ಕವನ್ನೂ ಒದಗಿಸುತ್ತದೆ ಅಲ್ಗೋರಿದಮ್‌ಗಳು ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ವಿಶೇಷವಾಗಿ ಆನ್‌ಲೈನ್ ವೇದಿಕೆಗಳಲ್ಲಿ ಸುಳ್ಳು ಸುದ್ದಿಗಳು ಮತ್ತು ತಪ್ಪುಮಾಹಿತಿ ವ್ಯಾಪಕವಾಗಿ ಹರಡುತ್ತಿರುವ ಇಂದಿನ ಸಂದರ್ಭದಲ್ಲಿ, ಈ ಮೌಲ್ಯ ಇನ್ನಷ್ಟು ಪ್ರಮುಖವಾಗಿದೆ.