ಹುಡುಕಿ

 ಅರೇಬಿಯಾದ ಮಾತೆ ಮರಿಯಮ್ಮನವರ ದೇವಾಲಯದ ಸಣ್ಣ ಬಸಿಲಿಕಾದ ಮುಖಭಾಗ ಅರೇಬಿಯಾದ ಮಾತೆ ಮರಿಯಮ್ಮನವರ ದೇವಾಲಯದ ಸಣ್ಣ ಬಸಿಲಿಕಾದ ಮುಖಭಾಗ  (Copyright (c) 2024 demesafrankc/Shutterstock. No use without permission.)

ಕುವೈತ್: ಅರೇಬಿಯಾದ ಮಾತೆ ಮರಿಯಮ್ಮನವರ ದೇವಾಲಯಕ್ಕೆ ಸಣ್ಣ ಬಸಿಲಿಕಾ ಸ್ಥಾನಮಾನ ನೀಡಲಿರುವ ಕಾರ್ಡಿನಲ್ ಪ್ಯಾರೊಲಿನ್

ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆಟ್ರೊ ಪ್ಯಾರೊಲಿನ್ ರವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಕುವೈತ್‌ಗೆ ತೆರಳಲಿದ್ದು, ಈ ಸಂದರ್ಭದಲ್ಲಿ ಅವರು ಅಲ್ಲಿನ ನಾಗರಿಕ ಆಡಳಿತಾಧಿಕಾರಿಗಳನ್ನು ಭೇಟಿ ಮಾಡುವುದರ ಜೊತೆಗೆ, ಅರೇಬಿಯಾದ ಮಾತೆ ಮರಿಯಮ್ಮನವರ ದೇವಾಲಯಕ್ಕೆ ‘ಸಣ್ಣ ಬಸಿಲಿಕಾ’ (ಮೈನರ್ ಬಸಿಲಿಕಾ) ಎಂಬ ಗೌರವಪೂರ್ಣ ಸ್ಥಾನಮಾನವನ್ನು ಅಧಿಕೃತವಾಗಿ ಪ್ರದಾನಿಸಲಿದ್ದಾರೆ.

ವ್ಯಾಟಿಕನ್ ವರದಿ

2025ರ ಜೂನ್ 28ರಂದು ವ್ಯಾಟಿಕನ್ ಪ್ರಕಟಿಸಿದಂತೆ, ಜಗದ್ಗುರು XIVನೇ ಲಿಯೋ ರವರು ಉತ್ತರ ಅರೇಬಿಯಾ ಪ್ರೇಷಿತರ ಪ್ರಾಂತ್ಯದ ಅತ್ಯಂತ ಹಳೆಯ ದೇವಾಲಯವಾಗಿರುವ ಅರೇಬಿಯಾದ ಮಾತೆ ಮರಿಯಮ್ಮನವರ ದೇವಾಲಯವನ್ನು ‘ಸಣ್ಣ ಬಸಿಲಿಕಾ’ (ಮೈನರ್ ಬಸಿಲಿಕಾ) ಸ್ಥಾನಮಾನಕ್ಕೆ ಏರಿಸಲು ನಿರ್ಧರಿಸಿದ್ದಾರೆ. ಈ ಘೋಷಣೆಯ ಅನ್ವಯ, ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪ್ಯಾರೊಲಿನ್ ರವರು ಕುವೈತ್‌ಗೆ ತೆರಳಿ ಪವಿತ್ರ ಬಲಿಪೂಜೆಯನ್ನು ಆಚರಿಸಿ, ಈ ಗೌರವಪೂರ್ಣ ಶೀರ್ಷಿಕೆಯನ್ನು ಅಧಿಕೃತವಾಗಿ ಪ್ರದಾನಿಸಲಿದ್ದಾರೆ. ಇದರಿಂದ ಗಲ್ಫ್ ಪ್ರದೇಶದಲ್ಲಿನ ಮೊದಲ ಕಥೋಲಿಕ ಧರ್ಮ ಸಭೆಗೆ ಈ ಮಾನ್ಯತೆ ದೊರಕಲಿದೆ.

ಕಾರ್ಡಿನಲ್ ಪ್ಯಾರೊಲಿನ್ ರವರು ತಮ್ಮ ಭೇಟಿಯ ವೇಳೆ ಕುವೈತ್‌ನ ನಾಗರಿಕ ಆಡಳಿತಾಧಿಕಾರಿಗಳನ್ನು ಭೇಟಿಯಾಗುವುದರ ಜೊತೆಗೆ, ಕುವೈತ್ ನಗರದಲ್ಲಿರುವ ಪವಿತ್ರ ಕುಟುಂಬ ಸಹ-ಕ್ಯಾಥೆಡ್ರಲ್‌ನಲ್ಲಿ ಸ್ಥಳೀಯ ಕಥೋಲಿಕ ಸಮುದಾಯದೊಂದಿಗೆ ಸಭೆಯನ್ನು ನಡೆಸಲಿದ್ದಾರೆ. ಉತ್ತರ ಅರೇಬಿಯಾ ಪ್ರೇಷಿತರ ಪ್ರಾಂತ್ಯದಲ್ಲಿ ಬಹ್ರೇನ್, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾ ಸೇರಿದ್ದು, ಇದನ್ನು ಬಿಷಪ್ ಅಲ್ಡೋ ಬರಾರ್ಡಿ ರವರು ಮುನ್ನಡೆಸುತ್ತಿದ್ದಾರೆ.

ಅಹ್ಮದಿಯಲ್ಲಿ ಸ್ಥಿತವಾಗಿರುವ ಈ ದೇವಾಲಯವನ್ನು ಉತ್ತರ ಪ್ರಾಂತ್ಯದ ‘ತಾಯಿ ದೇವಾಲಯ’ವೆಂದು ಪರಿಗಣಿಸಲಾಗುತ್ತದೆ. ಇದು ಹಿಂದೆ ವಿದ್ಯುತ್ ಉತ್ಪಾದನಾ ಕೇಂದ್ರವಿದ್ದ ಸ್ಥಳದಲ್ಲಿ ನಿರ್ಮಾಣವಾಗಿದ್ದು, 1948ರ ಡಿಸೆಂಬರ್‌ನಲ್ಲಿ ಕಾರ್ಮೆಲೈಟ್ ಪಿತೃಗಳು ಮತ್ತು ಬಿಷಪ್ ಉಬಾಲ್ಡೋ ತಿಯೋಫಾನೋ ಸ್ಟೆಲ್ಲಾ ರವರ ಪ್ರಯತ್ನದಿಂದ ತಾತ್ಕಾಲಿಕ ಚಾಪೆಲ್ ಆಗಿ ರೂಪಾಂತರಗೊಂಡಿತು. ಕುವೈತ್ ತೈಲ ಕಂಪನಿ, ತೈಲ ಉದ್ಯಮದಲ್ಲಿ ಕೆಲಸ ಮಾಡಲು ಬಂದ ವಲಸೆ ಕಾರ್ಮಿಕರ ಆತ್ಮಿಕ ಸೇವೆಗಾಗಿ ಶಾಶ್ವತ ದೇವಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿತು.

ಈ ಸಣ್ಣ ಬಸಿಲಿದಲ್ಲಿ ಅರೇಬಿಯಾದ ಮಾತೆ ಮರಿಯಮ್ಮನವರ ಪವಿತ್ರ ಚಿತ್ರ ನೆಲಸಿದ್ದು, ಅದು ಮೂಲತಃ ಕಾರ್ಮೆಲ್ ಪರ್ವತದ ಮಾತೆ ಮರಿಯಮ್ಮನಿಗೆ ಸಮರ್ಪಿತವಾಗಿತ್ತು. ಈ ಚಿತ್ರವನ್ನು ಜಗದ್ಗುರು XII ನೇ ಪಿಯಸ್ ರವರು 1949ರಲ್ಲಿ ಆಶೀರ್ವದಿಸಿದರು ಮತ್ತು ಜಗದ್ಗುರು XVI ನೇ ಬೆನೆಡಿಕ್ಟ್ ರವರು 2011ರಲ್ಲಿ ಕಿರೀಟಧಾರಣೆ ಮಾಡಿದರು. ಇಂದಿಗೂ ಈ ಬಸಿಲಿಕಾ ವಲಸೆ ಕಾರ್ಮಿಕರಿಗೆ ಮಾತೆ ಮರಿಯಮ್ಮನವರ ರಕ್ಷಣೆಯಡಿಯಲ್ಲಿ ತಮ್ಮ ಕಥೋಲಿಕ ನಂಬಿಕೆಯನ್ನು ಆಚರಿಸಲು ಆಶ್ರಯವಾಗಿಯೇ ಉಳಿದಿದೆ.

ಮಾತೆ ಮರಿಯಮ್ಮನವರು ಉತ್ತರ ಮತ್ತು ದಕ್ಷಿಣ ಅರೇಬಿಯಾ ಪ್ರಾಂತ್ಯಗಳ  ಪೋಷಕಿಯಾಗಿದ್ದು, ಅವರ ಹಬ್ಬವನ್ನು ಸಾಮಾನ್ಯ ಕಾಲದ ಎರಡನೇ ಭಾನುವಾರ ಆಚರಿಸಲಾಗುತ್ತದೆ. ಇರಾಕ್–ಕುವೈತ್ ಯುದ್ಧದ ಸಮಯದಲ್ಲೂ ಈ ಪವಿತ್ರ ಚಿತ್ರ ದೇವಾಲಯದ ರಕ್ಷಕಿಯಾಗಿ ಉಳಿದಿತು ಎಂದು ಬಿಷಪ್ ಬರಾರ್ಡಿ ಸ್ಮರಿಸಿದರು. ಮೈನರ್ ಬಸಿಲಿಕಾ ಸ್ಥಾನಮಾನವು ಜಗದ್ಗುರುಗಳು ಮತ್ತು ರೋಮ್ ನ ಧಾರ್ಮಿಕ ಪೀಠದೊಂದಿಗೆ ವಿಶೇಷ ಸಂಬಂಧವನ್ನು ಸೂಚಿಸುವುದಾಗಿದ್ದು, ಇತಿಹಾಸ, ಆತ್ಮಿಕತೆ ಮತ್ತು ಧಾರ್ಮಿಕ ಸೇವೆಯಲ್ಲಿ ವಿಶಿಷ್ಟ ಮಹತ್ವ ಹೊಂದಿರುವ ದೇವಾಲಯಗಳಿಗೆ ಈ ಗೌರವವನ್ನು ನೀಡಲಾಗುತ್ತದೆ.

14 ಜನವರಿ 2026, 20:54