‘ಬಹಿಷ್ಕಾರದ ತೆರವು’: ಅರವತ್ತು ವರ್ಷಗಳ ನಂತರ
ವ್ಯಾಟಿಕನ್ ವರದಿ
ಜನಸಾಮಾನ್ಯರ ಕಲ್ಪನೆಯಲ್ಲಿ ಕ್ರಿ.ಶ. 1054ನೇ ವರ್ಷವನ್ನು ಕಥೊಲಿಕ ಮತ್ತು ಸಾಂಪ್ರದಾಯಿಕ ಧರ್ಮ ಸಭೆಗಳ ನಡುವೆ ಅಂತಿಮ ವಿಭಜನೆ ಸಂಭವಿಸಿದ ಕ್ಷಣವೆಂದು ಪರಿಗಣಿಸಲಾಗುತ್ತದೆ. ಶತಮಾನಗಳ ಕಾಲ ನಿಧಾನವಾಗಿ ದೂರವಾಗುತ್ತಿದ್ದ ಪೂರ್ವ ಮತ್ತು ಪಶ್ಚಿಮ ಧರ್ಮ ಸಭೆಗಳು ಪರಸ್ಪರ “ಬಹಿಷ್ಕಾರ” ಘೋಷಿಸಿಕೊಂಡವು ಎಂಬ ವಾದ ವ್ಯಾಪಕವಾಗಿದೆ. ಆದರೆ ಸುಮಾರು ಸಾವಿರ ವರ್ಷಗಳ ನಂತರ, 1965ರಲ್ಲಿ ಜಗದ್ಗುರು VIನೇ ಪೌಲ್ ಮತ್ತು ಕಾಂಸ್ಟಾಂಟಿನೋಪಲ್‌ನ ಪ್ಯಾಟ್ರಿಯಾರ್ಕ್ ಅಥೆನಾಗೋರಾಸ್ I ರವರು ಆ ಘಟನೆಗಳ ಬಗ್ಗೆ ತಮ್ಮ ವಿಷಾದವನ್ನು ವ್ಯಕ್ತಪಡಿಸಿ, ‘ಬಹಿಷ್ಕಾರಗಳ ತೆರವು’ ಎಂದು ಕರೆಯಲ್ಪಡುವ ಸಂಯುಕ್ತ ಘೋಷಣೆಯನ್ನು ಹೊರಡಿಸಿದರು.
ರೋಮಿನ ಪಾಂಟಿಫಿಕಲ್ ವಿಶ್ವವಿದ್ಯಾಲಯದಲ್ಲಿ ನಡೆದ ಈ ಸಮ್ಮೇಳನದಲ್ಲಿ, ಕಾರ್ಡಿನಲ್ ಕುರ್ಟ್ ಕೋಚ್ ಮತ್ತು ಪಿಸಿಡಿಯಾದ ಮೆಟ್ರೋಪೊಲಿಟನ್ ಜಾಬ್ ರವರು 1054ರಲ್ಲಿ ನಿಜವಾಗಿ ‘ವಿಭಜನೆ’ ನಡೆದಿತ್ತೇ ಎಂಬ ಪ್ರಶ್ನೆಯನ್ನು ಎತ್ತಿದರು. ಮೆಟ್ರೋಪೊಲಿಟನ್ ಜಾಬ್ ರವರ ಪ್ರಕಾರ, ಆ ಸಮಯದಲ್ಲಿ ಎರಡು ಧರ್ಮ ಸಭೆಗಳ ನಡುವೆ ಸಂಪೂರ್ಣ ವಿಭಜನೆ ನಡೆದಿಲ್ಲ ಅದು ಕೇವಲ ಸಹಭಾಗಿತ್ವದ ಒಂದು ಭಂಗವಾಗಿತ್ತು. ಸಮ್ಮೇಳನದ ನಿರೂಪಕರು ಕೂಡ ಬಹಿಷ್ಕಾರಗಳೇ ಇರಲಿಲ್ಲ, ಅವುಗಳನ್ನು ತೆರವುಗೊಳಿಸುವುದೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಡಿನಲ್ ಕೋಚ್ ವಿವರಿಸಿದಂತೆ, 1054ರಲ್ಲಿ ಕಾಂಸ್ಟಾಂಟಿನೋಪಲ್‌ನಲ್ಲಿ ಘೋಷಿಸಲಾದ ಬಹಿಷ್ಕಾರವು ಗ್ರೀಕ್ ಧರ್ಮ ಸಭೆಯ ವಿರುದ್ಧವಲ್ಲ, ಬದಲಾಗಿ ಪ್ಯಾಟ್ರಿಯಾರ್ಕ್ ಮೈಕೆಲ್ ಸೆರೂಲಾರಿಯಸ್ ಸೇರಿದಂತೆ ಕೆಲವೇ ವ್ಯಕ್ತಿಗಳ ವಿರುದ್ಧವಾಗಿತ್ತು. ಅದಕ್ಕೆ ಪ್ರತಿಯಾಗಿ ಸಾಂಪ್ರದಾಯಿಕ ಪಾಳಯದಿಂದಲೂ ಕೆಲ ನಿರ್ದಿಷ್ಟ ವ್ಯಕ್ತಿಗಳ ಮೇಲಷ್ಟೇ ಬಹಿಷ್ಕಾರ ವಿಧಿಸಲಾಯಿತು. ಜೊತೆಗೆ, ಆ ಬಹಿಷ್ಕಾರ ಹೊರಡಿಸಿದ ಸಮಯದಲ್ಲಿ ಜಗದ್ಗುರು IX ನೇ ಲಿಯೋರವರು ಈಗಾಗಲೇ ನಿಧನರಾಗಿದ್ದ ಕಾರಣ, ಆ ಕ್ರಮಕ್ಕೆ ಧಾರ್ಮಿಕ ಕಾನೂನು ಮಾನ್ಯತೆ ಇರಲಿಲ್ಲ ಎಂದು ಅವರು ತಿಳಿಸಿದರು.
ಇದರಿಂದ 1054ರ ಘಟನೆಗಳು ಮತ್ತು 1965ರ ಸಂಯುಕ್ತ ಘೋಷಣೆಗಳ ನಡುವೆ ಮೂಲಭೂತ ವ್ಯತ್ಯಾಸವಿದೆ ಎಂದು ಕಾರ್ಡಿನಲ್ ಕೋಚ್ ಹೇಳಿದರು. 1054ರ ಕ್ರಮಗಳು ಕೆಲ ವ್ಯಕ್ತಿಗಳ ಮಟ್ಟಕ್ಕೆ ಸೀಮಿತವಾಗಿದ್ದರೆ, 1965ರ ಘೋಷಣೆ ಎರಡು ಧರ್ಮ ಸಭೆಗಳ ನಡುವಿನ ಬಂಧಗಳನ್ನು ಪುನರುಜ್ಜೀವನಗೊಳಿಸುವತ್ತ ಗಮನಹರಿಸಿತು. ಈ ಘೋಷಣೆಯು ತಕ್ಷಣ ಏಕತೆಯನ್ನು ಸಾಧಿಸದಿದ್ದರೂ, ‘ಸಹೋದರಿ ಚರ್ಚುಗಳು’ ಎಂಬ ತತ್ತ್ವವನ್ನು ಬಲಪಡಿಸಿ, ಪರಸ್ಪರ ಗೌರವ ಮತ್ತು ಕಲಿಕೆಗೆ ದಾರಿ ತೆರೆದಿತು.
ಮೆಟ್ರೋಪೊಲಿಟನ್ ಜಾಬ್ ರವರು ಇತಿಹಾಸಕಾರ ಅಧ್ಯಯನಗಳನ್ನು ಉಲ್ಲೇಖಿಸಿ, 1054ರ ಪರಸ್ಪರ ಬಹಿಷ್ಕಾರಗಳು ವಿಭಜನೆಯ ಆರಂಭವಲ್ಲ, ಬದಲಾಗಿ ಅದನ್ನು ಕೊನೆಗಾಣಿಸಲು ನಡೆದ ವಿಫಲ ಪ್ರಯತ್ನವಾಗಿತ್ತು ಎಂದು ಹೇಳಿದರು. 1965ರ ಘೋಷಣೆಯಲ್ಲಿ ಆ ಬಹಿಷ್ಕಾರಗಳನ್ನು ಮರೆತುಬಿಡುವಂತೆ ಒಪ್ಪಿಗೆಯಾದ ಪದಗಳು ಬಹಳ ಮಹತ್ವದ್ದೆಂದು ಅವರು ಒತ್ತಿ ಹೇಳಿದರು. ಸಿನೋಡಾಲಿಟಿ, ಪ್ರಾಥಮ್ಯ ಮತ್ತು ಫಿಲಿಯೋಕ್ವೆ ವಿಷಯಗಳಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದ್ದು, ಇತ್ತೀಚಿನ ಜಗದ್ಗುರುಗಳು ಐಕ್ಯತೆಯ ಸಂದರ್ಭಗಳಲ್ಲಿ ಫಿಲಿಯೋಕ್ವೆ ವಾಕ್ಯವನ್ನು ಬಳಸದೇ ಇರುವುದನ್ನು ಅವರು ಆಶಾದಾಯಕ ಸಂಕೇತವೆಂದು ವಿವರಿಸಿದರು.
ಕೊನೆಯದಾಗಿ, ಸಂಸ್ಥಾತ್ಮಕ ಮಟ್ಟದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಲಾದರೂ, ಆ ಏಕತೆಯ ಮನೋಭಾವವು ಧಾರ್ಮಿಕ ನಾಯಕತ್ವಕ್ಕೆ ಮಾತ್ರ ಸೀಮಿತವಾಗದೇ, ಯಾಜಕರು ಮತ್ತು ಸಾಮಾನ್ಯ ವಿಶ್ವಾಸಿಗಳಲ್ಲಿಯೂ ಬೆಳೆಬೇಕೆಂದು ಮೆಟ್ರೋಪೊಲಿಟನ್ ಜಾಬ್ ಹೇಳಿದರು. ಕಥೊಲಿಕ ಮತ್ತು ಸಾಂಪ್ರದಾಯಿಕ ಧರ್ಮ ಸಭೆಗಳ ನಡುವೆ ನಿಜವಾದ ಏಕತೆ ಸಾಧಿಸಲು, ಎಲ್ಲ ಮಟ್ಟಗಳಲ್ಲಿಯೂ ಇಚ್ಛೆ ಮತ್ತು ಪ್ರಯತ್ನ ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.