ಹುಡುಕಿ

ಸಂತ ಪೇತ್ರರ ಬಸಿಲಿಕ ಗುಮ್ಮಟ ಸಂತ ಪೇತ್ರರ ಬಸಿಲಿಕ ಗುಮ್ಮಟ 

ವ್ಯಾಟಿಕನ್ ಕಾರ್ಮಿಕ ಕಚೇರಿ: ಉದ್ಯೋಗಿಗಳ ಹಕ್ಕುಗಳು ಎಂದಿಗೂ ಉಲ್ಲಂಘನೆಯಾಗದಂತೆ ನಾವು ಕಾರ್ಯನಿರ್ವಹಿಸುತ್ತೇವೆ

ಪ್ರೇಷಿತರ ಹುದ್ದೆ ಕಾರ್ಮಿಕ ಕಚೇರಿಯ ಅಧ್ಯಕ್ಷರಾದ ಮೊಂಡ್ಸಿಗ್ನರ್ ಮಾರ್ಕೊ ಸ್ಪ್ರಿಜ್ಜೀರವರು ಈ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸುತ್ತಾರೆ ಹಾಗೂ ವ್ಯಾಟಿಕನ್ ಶ್ರಿ ಸಾಮಾನ್ಯರ ಉದ್ಯೋಗಿಗಳ ಸಂಘ ನಡೆಸಿದ ಇತ್ತೀಚಿನ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ಆ ಸಮೀಕ್ಷೆಯಲ್ಲಿ ಕೆಲವು ಉದ್ಯೋಗಿಗಳಲ್ಲಿ ಅಸಮಾಧಾನವಿದೆ ಎಂಬುದು ವರದಿಯಾಗಿದೆ.

ವ್ಯಾಟಿಕನ್ ವರದಿ

ಪ್ರೇಷಿತರ ಹುದ್ದೆಯ ಕಾರ್ಮಿಕ ಕಚೇರಿ  ತನ್ನ ಕಾರ್ಯಗಳನ್ನು ನಡೆಸುವಾಗ ಅನುಸರಿಸುವ ಮಾರ್ಗದರ್ಶಕ ತತ್ವಗಳು — ವ್ಯಾಟಿಕನ್ ಉದ್ಯೋಗಿಗಳು ಹಾಗೂ ಜಗದ್ಗುರುಗಳ ಅಧಿಕಾರ ಹುದ್ದೆಯ ವಿವಿಧ ಸಂಸ್ಥೆಗಳು ಮತ್ತು ಡಿಕಾಸ್ಟರಿಗಳೊಂದಿಗೆ ಹೊಂದಿರುವ ಸಂಬಂಧಗಳಲ್ಲಿ — ಸಂಘರ್ಷ, ಸ್ಪರ್ಧೆ ಮತ್ತು ದೂರುಗಳಿಗಿಂತ ಸಂಭಾಷಣೆ, ಆಲಿಸುವಿಕೆ ಮತ್ತು ಸಹಕಾರವೇ ಆಗಿವೆ.

ಯು ಎಲ್ ಎಸ್ ಎ ಒಂದು ಯಾವಾಗಲೂ ತೆರೆದ ಬಾಗಿಲುಗಳಿರುವ ಕಚೇರಿಯಾಗಿದೆ ಎಂದು ಅದರ ಅಧ್ಯಕ್ಷರಾದ ಮೊಂಡ್ಸಿಗ್ನರ್ ಮಾರ್ಕೊ ಸ್ಪ್ರಿಜ್ಜೀ ರವರು ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸುತ್ತಾರೆ.ಅವರು ಇತ್ತೀಚೆಗೆ ವ್ಯಾಟಿಕನ್ ಶ್ರಿ ಸಾಮಾನ್ಯರ ಉದ್ಯೋಗಿಗಳ ಸಂಘ ನಡೆಸಿದ ಸಮೀಕ್ಷೆಯ ಕುರಿತಾಗಿಯೂ ಪ್ರತಿಕ್ರಿಯಿಸಿ ಸ್ಪಷ್ಟನೆಗಳನ್ನು ನೀಡುತ್ತಾರೆ. ಆ ಸಮೀಕ್ಷೆಯಲ್ಲಿ, ನಿವೃತ್ತರನ್ನು ಒಳಗೊಂಡಂತೆ 6,000ಕ್ಕಿಂತ ಹೆಚ್ಚು ಉದ್ಯೋಗಿಗಳಲ್ಲಿ ಸುಮಾರು 250 ಮಂದಿ ವ್ಯಾಟಿಕನ್ ಕೆಲಸದ ಸಮುದಾಯದಲ್ಲಿ ಅಸಮಾಧಾನ, ಅನ್ಯಾಯ ಮತ್ತು ನಂಬಿಕೆಯ ಕೊರತೆ ಇರುವ ಸ್ಥಿತಿಗಳನ್ನು ಉಲ್ಲೇಖಿಸಿದ್ದಾರೆ.

ಪ್ರಶ್ನೆ:

ಕಳೆದ ಡಿಸೆಂಬರ್‌ನಲ್ಲಿ ಜಗದ್ಗುರುಗಳು ಯು ಎಲ್ ಎಸ್ ಎ  ಹೊಸ ಸಂವಿಧಾನವನ್ನು  ಅನುಮೋದಿಸಿದರು. ಇದು ಕೆಲಸದ ಲೋಕದ ಬಗ್ಗೆ ಅವರ ಗಮನವನ್ನು ತೋರಿಸುತ್ತದೆ. ಇಂದಿನ ವ್ಯಾಟಿಕನ್ ಉದ್ಯೋಗಿಗಳಿಗೆ ಈ ಹೊಸ ಸಂವಿಧಾನವು ಏನನ್ನು ಅರ್ಥಮಾಡಿಕೊಡುತ್ತದೆ? ಇದುವರೆಗೆ ಯಾವ ಬದಲಾವಣೆಗಳನ್ನು ತಂದಿದೆ?

ಇದು ಜಗದ್ಗುರುಗಳ ಅಧಿಕಾರ ಹುದ್ದೆಯೊಳಗೆ ಹಾಗೂ ರೋಮನ್ ಕುರಿಯಾದೊಂದಿಗೆ ಸಂಪರ್ಕ ಹೊಂದಿರುವ ಸಂಸ್ಥೆಗಳು, ವ್ಯಾಟಿಕನ್ ರಾಜ್ಯದ ಆಡಳಿತ ವಿಭಾಗ ಮತ್ತು ರೋಮಿನ ಪ್ರಾಂತ್ಯದ ಎಲ್ಲಾ ಉದ್ಯೋಗಿಗಳ ಕುರಿತು ಧರ್ಮ ಸಭೆಯ ಸಾಮಾಜಿಕ ಉಪದೇಶವನ್ನು ಅನ್ವಯಿಸುವ ವಿಷಯದಲ್ಲಿ ಜಗದ್ಗುರುಗಳು ಆಳವಾದ ಗಮನವನ್ನು ಸ್ಪಷ್ಟವಾಗಿ ಸೂಚಿಸುವ ಸಂಕೇತವಾಗಿದೆ.ತರುವಾಯ ಪರಿಚಯಿಸಲಾದ ಬದಲಾವಣೆಗಳು ಮಹತ್ವದ್ದಾಗಿವೆ. ಅವೆಲ್ಲವನ್ನೂ ಇಲ್ಲಿ ವಿವರಿಸುವುದಿಲ್ಲ. ಆದರೆ ನಾನು ವಿಶೇಷವಾಗಿ ಒತ್ತಿ ಹೇಳಬೇಕೆಂದಿರುವುದು, ಕಾರ್ಮಿಕ ಕಚೇರಿಯ ಪ್ರತಿನಿಧಿತ್ವ ಮತ್ತು ಅದರ ಧ್ಯೇಯವನ್ನು ಇನ್ನಷ್ಟು ಬಲಪಡಿಸಲಾಗಿದೆ  ಏಕತೆಯ ಹಾಗೂ ಪ್ರೋತ್ಸಾಹದ ಧ್ಯೇಯವಾಗಿ, ಸಂತ ದ್ವಿತೀಯ ಜಾನ್ ಪೌಲರ ದೃಷ್ಟಿಕೋನ ಮತ್ತು ನಂತರದ ಜಗದ್ಗುರುಗಳ ದೃಷ್ಟಿಯೊಂದಿಗೆ ಹೊಂದಿಕೆಯಲ್ಲಿ.ಏಕತೆ ಎಂದರೆ ಒಂದೇ ದಿಕ್ಕಿನಲ್ಲಿ ನಾವು ಭಾಗವಹಿಸುವುದು, ಸಹ-ಜವಾಬ್ದಾರಿಯನ್ನು ಅನುಭವಿಸುವುದು ಮತ್ತು ಜಗದ್ಗುರುಗಳ ಅಧಿಕಾರ ಹುದ್ದೆಯ ಧ್ಯೇಯದಲ್ಲಿ ಪಾಲ್ಗೊಳ್ಳುವುದು. ಇದರಿಂದ ಕಾರ್ಮಿಕರ ರಕ್ಷಣೆಯನ್ನು ಕಡಿಮೆ ಮಾಡುವುದಿಲ್ಲ ಬದಲಾಗಿ ಸಂಭಾಷಣೆ ಮತ್ತು ಪರಸ್ಪರ ನಂಬಿಕೆಯ ಮನೋಭಾವದಲ್ಲಿ ಅವುಗಳನ್ನು ಉತ್ತೇಜಿಸಿ ಅನುಷ್ಠಾನಗೊಳಿಸುವುದಾಗಿದೆ.

ಪ್ರಶ್ನೆ:

ಎ ಡಿ ಎಲ್ ವಿ ನಡೆಸಿದ ಇತ್ತೀಚಿನ ಸಮೀಕ್ಷೆ ವ್ಯಾಟಿಕನ್ ಕೆಲಸದ ಸ್ಥಳಗಳಲ್ಲಿ ಅಸಮಾಧಾನದ ವಾತಾವರಣ ಮತ್ತು ಅನುಚಿತ ವರ್ತನೆಯ ಬಗ್ಗೆ ವರದಿ ಮಾಡುತ್ತದೆ. ಇದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?

ನಾನೂ ಸಹ ಆ ಸಮೀಕ್ಷೆಯನ್ನು ಗಮನಿಸಿದ್ದೇನೆ. ತಾಂತ್ರಿಕವಾಗಿ ಹೇಳುವುದಾದರೆ, ಇದು ಅತ್ಯಂತ ಸಣ್ಣ ಮಾದರಿಯ ಮೇಲೆ ನಡೆದ ಸಮೀಕ್ಷೆ, ಏಕೆಂದರೆ ಇದು ಉದ್ಯೋಗಿಗಳಲ್ಲಿ 5% ಕ್ಕಿಂತಲೂ ಕಡಿಮೆ ಸಂಖ್ಯೆಯನ್ನು ಒಳಗೊಂಡಿದೆ. ಆದರೂ, ಕೇವಲ ಒಬ್ಬ ಉದ್ಯೋಗಿಯೇ ಗಮನ, ಸಂಭಾಷಣೆ ಅಥವಾ ನಿಯಮಗಳ ಗೌರವದ ಕೊರತೆಯನ್ನು ದೂರುವಂತಾದರೂ, ನಾವು ಪ್ರತಿಯೊಂದು ಧ್ವನಿಯನ್ನೂ ಗಂಭೀರವಾಗಿ ಪರಿಗಣಿಸುತ್ತೇವೆ.ಕಾರ್ಮಿಕ ಕಚೇರಿಯ ಬಾಗಿಲುಗಳು ಯಾವಾಗಲೂ ತೆರೆದಿವೆ, ಏಕೆಂದರೆ ಸಂತ ದ್ವಿತೀಯ ಜಾನ್ ಪೌಲರು ಹೇಳಿದಂತೆ, ನಾವು ಸಂಭಾಷಣೆಯ ರಚನೆ ಆಗಿದ್ದು, ಎಲ್ಲರ ಮಾತುಗಳನ್ನು ಆಲಿಸಲು ಸಿದ್ಧರಾಗಿದ್ದೇವೆ.ಉದ್ಯೋಗಿಗಳ ಹಕ್ಕುಗಳನ್ನು ಯಾವ ರೀತಿಯಲ್ಲೂ ನಿರ್ಲಕ್ಷ್ಯ ಮಾಡಲಾಗದಂತೆ ಅಥವಾ ಉಲ್ಲಂಘಿಸಲಾಗದಂತೆ ನಾವು ಕಾರ್ಯನಿರ್ವಹಿಸುತ್ತೇವೆ. ಅದೇ ಸಮಯದಲ್ಲಿ, ಒಂದೇ ಧ್ಯೇಯದಲ್ಲಿ ಪಾಲ್ಗೊಳ್ಳುವ ಅರಿವು ಹೆಚ್ಚಿಸಲು ಮತ್ತು ಕೌಶಲ್ಯಗಳನ್ನು ಸುಧಾರಿಸಲು ತರಬೇತಿಗೆ ನಾವು ಗಟ್ಟಿಯಾಗಿ ಬದ್ಧರಾಗಿದ್ದೇವೆ.ಆದ್ದರಿಂದ, ಈ ಸಮೀಕ್ಷೆಯನ್ನು ನಾವು ಗಂಭೀರತೆ ಮತ್ತು ಗೌರವದೊಂದಿಗೆ ನೋಡುತ್ತೇವೆ. ಎ ಡಿ ಎಲ್ ವಿ ಜೊತೆಗೆ  ಅವರೇ ಹೇಳುವಂತೆ ನಮ್ಮಲ್ಲಿ ನಿರಂತರ ಮತ್ತು ರಚನಾತ್ಮಕ ಸಂಭಾಷಣೆ ಇದೆ, ಮತ್ತು ಎಲ್ಲಾ ವರದಿಗಳನ್ನು ನಾವು ಗಮನದಿಂದ ಪರಿಗಣಿಸುತ್ತೇವೆ.ನಮ್ಮ ಕರ್ತವ್ಯವೆಂದರೆ ಅವುಗಳನ್ನು ಪರಿಶೀಲಿಸಿ, ಕಾನೂನು ಹಾಗೂ ಧರ್ಮ ಸಭೆಯ ಸಾಮಾಜಿಕ ಉಪದೇಶದ ಬೆಳಕಿನಲ್ಲಿ ಮೌಲ್ಯಮಾಪನ ಮಾಡಿ, ಸಂಬಂಧಿಸಿದ ಆಡಳಿತಗಳೊಂದಿಗೆ ಸಂಭಾಷಣೆಗೆ ಒಳಪಡಿಸುವುದು. ಇದಕ್ಕಾಗಿ ತಾಂತ್ರಿಕ ಕಾರ್ಯಗುಂಪುಗಳು ಮತ್ತು ವಿಶೇಷ ಆಯೋಗಗಳನ್ನು ರಚಿಸುವುದೂ ಸೇರಿದೆ, ಎಲ್ಲರ ಹಿತದೃಷ್ಟಿಯಿಂದ  ಉದ್ಯೋಗಿಗಳಷ್ಟೇ ಅಲ್ಲ, ಜಗದ್ಗುರುಗಳ ಅಧಿಕಾರ ಹುದ್ದೆಯ ಹಿತದೃಷ್ಟಿಯಿಂದಲೂ  ಸಾಧ್ಯವಾದ ಪರಿಹಾರಗಳನ್ನು ಹುಡುಕಲು.ಜಗದ್ಗುರುಗಳ ಅಧಿಕಾರ ಹುದ್ದೆಯೊಳಗೆ ಅಸಮಾನತೆ ಅಥವಾ ಅನ್ಯಾಯದ ಸ್ಥಿತಿಗಳನ್ನು ಅದು ಸ್ವೀಕರಿಸಲು ಸಾಧ್ಯವಿಲ್ಲ.ಆದ್ದರಿಂದ, ಈ ಫಲಿತಾಂಶಗಳನ್ನು ನಾವು ಸ್ವಾಗತಿಸುತ್ತೇವೆ ಮತ್ತು ವೈಯಕ್ತಿಕ ಹಾಗೂ ನಿರ್ದಿಷ್ಟ ಪ್ರಕರಣಗಳ ಮಟ್ಟದಲ್ಲಿ, ಹಾಗೆಯೇ ನಿಯಮಾವಳಿಗಳ ಸುಧಾರಣೆಯ ಮೂಲಕ ಅವುಗಳನ್ನು ಪರಿಶೀಲಿಸಲು ಬಯಸುತ್ತೇವೆ. ಇದು ಕ್ರೈಸ್ತರಾಗಿ ಮತ್ತು ಯಾಜಕರಾಗಿ ನಮ್ಮ ಅಂತಃಕರಣವನ್ನು ಪ್ರಶ್ನಿಸುವ ಧ್ಯೇಯವಾಗಿದೆ. ಎ ಡಿ ಎಲ್ ವಿ  ಇದನ್ನು ಚೆನ್ನಾಗಿ ಅರಿತಿದೆ.

ಪ್ರಶ್ನೆ:

ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ 71% ಮಂದಿ ಕೆಲಸ ಸಂಬಂಧಿತ ಸಮಸ್ಯೆಗಳ ಸಂದರ್ಭದಲ್ಲಿ ಎ ಡಿ ಎಲ್ ವಿ ಯನ್ನು ತಮ್ಮ ಉಲ್ಲೇಖದ ಕೇಂದ್ರವಾಗಿ ಸೂಚಿಸಿದ್ದಾರೆ, ಯು ಎಲ್ ಎಸ್ ಎಗೆ ಮೊರೆ ಹೋಗುವುದಾಗಿ ಹೇಳಿರುವವರು ಕೇವಲ 10% ಮಾತ್ರ. ಇದು ನಿಜವಾದ ಅಂಕಿಅಂಶವೇ?

ನಾವು ಪ್ರತಿದಿನವೂ ಡಜನ್‌ಗಳಷ್ಟು ಪ್ರಕರಣಗಳನ್ನು ಸ್ವೀಕರಿಸುತ್ತೇವೆ ಉದ್ಯೋಗಿಗಳೂ ಹಾಗೆಯೇ ಆಡಳಿತಗಳೂ ನಿರಂತರವಾಗಿ ನಮ್ಮನ್ನು ಸಂಪರ್ಕಿಸುತ್ತಾರೆ. ದೇವರ ಕೃಪೆಯಿಂದ, ನಮಗೆ ಕೆಲಸದ ಕೊರತೆ ಇಲ್ಲ.ಸಂಘಟನೆಯ ಪ್ರಕಟಣೆಯಲ್ಲಿ, ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು 80% ಮಂದಿ ಎ ಡಿ ಎಲ್ ವಿ ಸದಸ್ಯರು ಎಂದು ಓದಿದೆ. ಆದರೆ ಅವರಲ್ಲಿ ಕೇವಲ 71% ಮಾತ್ರ ಎ ಡಿ ಎಲ್ ವಿ ಗೆ ಮೊದಲು ಮೊರೆ ಹೋಗುವುದಾಗಿ ಹೇಳಿದ್ದಾರೆ. ಅಂದರೆ, ವಾಸ್ತವವಾಗಿ, ಎಲ್ಲ ಸದಸ್ಯರೂ ಸಹ ಮೊದಲು ತಮ್ಮ ಸಂಘಟನೆಯನ್ನೇ ಸಂಪರ್ಕಿಸುವುದಿಲ್ಲ.ಆದರೂ, ನಾವು ಇದನ್ನು ಸ್ಪರ್ಧೆಯ ದೃಷ್ಟಿಯಿಂದ ನೋಡುವುದಿಲ್ಲ. ಎ ಡಿ ಎಲ್ ವಿ ಮಹತ್ವದ ಮತ್ತು ರಚನಾತ್ಮಕ ಪಾತ್ರ ವಹಿಸುತ್ತದೆ ನಾವು ಅದನ್ನು ಉತ್ತೇಜಿಸುತ್ತೇವೆ ಮತ್ತು ಅದರ ಸೇವೆಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.ನ್ಯಾಯದ ಅವಶ್ಯಕತೆಗಳಿಗೆ ತಕ್ಕಂತೆ ಹಾಗೂ ಸಾಮಾಜಿಕ ಉಪದೇಶದ ಬೆಳಕಿನಲ್ಲಿ ಯೋಗ್ಯವೆಂದು ಕಂಡರೆ, ಎಲ್ಲ ಅಗತ್ಯಗಳು, ವಿನಂತಿಗಳು ಮತ್ತು ಬೇಡಿಕೆಗಳನ್ನು ನಾವು ಮುಂದುವರಿದು ಸ್ವೀಕರಿಸಿ ಬೆಂಬಲಿಸುತ್ತೇವೆ.ಇದಲ್ಲದೆ, ಡಿಕಾಸ್ಟರಿಗಳ ಮುಖ್ಯಸ್ಥರು, ಆಡಳಿತ ವಿಭಾಗದ ಜವಾಬ್ದಾರರು ಮತ್ತು ನಾವು ಈ ವಿನಂತಿಗಳನ್ನು ಸಲ್ಲಿಸುವ ಎಲ್ಲರೂ ಸಂವೇದನಾಶೀಲರು ಮತ್ತು ಸಂಭಾಷಣೆಗೆ ತೆರೆದವರಾಗಿದ್ದಾರೆ. ನಮ್ಮ ಮಧ್ಯಸ್ಥಿಕೆಯಲ್ಲಿ, ಸಂಬಂಧಿಸಿದ ಡಿಕಾಸ್ಟರಿಗಳ ನೇತೃತ್ವ ಮತ್ತು ಎ ಡಿ ಎಲ್ ವಿ  ಪ್ರತಿನಿಧಿಗಳನ್ನು ಒಳಗೊಂಡ ತಾಂತ್ರಿಕ ಕಾರ್ಯಗುಂಪುಗಳನ್ನು ನಮ್ಮ ಕಚೇರಿಗಳಲ್ಲಿಯೇ ರಚಿಸಲಾಗಿದೆ.ಸಂಭಾಷಣೆಯ ಈ ಮಾರ್ಗದಲ್ಲಿ ಮತ್ತು ನ್ಯಾಯಸಮ್ಮತ ಹಾಗೂ ಸಾಧ್ಯವಾದ ಪರಿಹಾರಗಳ ಸಂಯುಕ್ತ ಹುಡುಕಾಟದಲ್ಲಿ ನಾವು ಮುಂದುವರಿಯುತ್ತೇವೆ. ಈ ಮಾರ್ಗದಲ್ಲೇ ನಾವು ಸಾಗಬೇಕು.ಸಂಘರ್ಷ ಮತ್ತು ಮುಖಾಮುಖಿಯ ದಾರಿ ಜಗದ್ಗುರುಗಳ ದೃಷ್ಟಿಕೋನಕ್ಕೂ, ಜಗದ್ಗುರುಗಳ ಅಧಿಕಾರ ಹುದ್ದೆಯ ಧರ್ಮಪ್ರಚಾರಾತ್ಮಕ ದೃಷ್ಟಿಗೂ ಹೊಂದಿಕೆಯಾಗುವುದಿಲ್ಲ. ಜಗದ್ಗರುಗಳ ಅಧಿಕಾರ ಹುದ್ದೆಗೆ ಸೇವೆ ಸಲ್ಲಿಸುವವರು ಒಂದು ಧ್ಯೇಯವನ್ನು ಸ್ವೀಕರಿಸುತ್ತಾರೆ. ಇಲ್ಲಿ ಸಂಘರ್ಷಕ್ಕೆ ಸ್ಥಳವಿಲ್ಲ ನಾವು ಒಂದು ವಾದ್ಯವೃಂದದಂತೆ, ಪ್ರತಿಯೊಂದು ವಾದ್ಯವೂ ತನ್ನ ಸ್ವಭಾವಕ್ಕೆ ತಕ್ಕಂತೆ ನಾದಿಸಬೇಕು.ಉದ್ಯೋಗಿಗಳ ಧ್ವನಿಯು ಒಂದು ಸಂಗೀತ ರಚನೆಗೆ, ಒಂದು ಸಮ್ಮಿಲನಕ್ಕೆ ಸಹಕಾರ ನೀಡಬೇಕು  ಅಲ್ಲಿ ಅವರ ಚಿಂತೆಗಳು ಗೌರವಪೂರ್ವಕವಾಗಿ ಆಲಿಸಲ್ಪಟ್ಟು ಪ್ರತಿಕ್ರಿಯೆ ಪಡೆಯುತ್ತವೆ. ಇದೇ ನಮ್ಮ ದೈನಂದಿನ ಧ್ಯೇಯ. ಕೆಲವೊಮ್ಮೆ ವಿಧಾನಗಳು ಭಿನ್ನವಾಗಿದ್ದರೂ, ಎಲ್ಲರೂ ಉತ್ತರ ನೀಡಲು ಪ್ರಯತ್ನಿಸುತ್ತಿರುವುದನ್ನು ನಾನು ನೋಡುತ್ತೇನೆ.ಹಣಕಾಸು ಲೆಕ್ಕಪತ್ರಗಳನ್ನು ಪರಿಶೀಲಿಸುವವರು ಮತ್ತು ಆರ್ಥಿಕ ಸ್ಥಿರತೆಯನ್ನು ಮೌಲ್ಯಮಾಪನ ಮಾಡುವವರು ಕೆಲವೊಮ್ಮೆ ಪರಿಹಾರಗಳತ್ತ ಸಾಗುವ ದಾರಿಯನ್ನು ನಿಧಾನಗೊಳಿಸುವ ಉತ್ತರಗಳನ್ನು ನೀಡಬಹುದು. ಇದು ನಿಯಮಗಳ ಭಾಗವೇ. ಹಣಕಾಸಿನ ಮೇಲ್ವಿಚಾರಕರು ಕೆಲವೊಮ್ಮೆ ಮಿತಿಗಳನ್ನು ವಿಧಿಸುತ್ತಾರೆ. ಆದರೆ ಇದರಿಂದ ನಾವು ನಿಲ್ಲಬಾರದು ಬದಲಾಗಿ, ನಿಧಿಗಳ ಸಂಗ್ರಹ ಸೇರಿದಂತೆ ಸೃಜನಾತ್ಮಕ ಪರಿಹಾರಗಳನ್ನು ಹುಡುಕಲು ಇದು ನಮ್ಮನ್ನು ಉತ್ತೇಜಿಸಬೇಕು.

ಪ್ರಶ್ನೆ:

ಆದರೆ ಸಮೀಕ್ಷೆಯಲ್ಲಿ ಉಲ್ಲೇಖಿಸಿದ ಅಸಮಾಧಾನವು ಎಲ್ಲಿಂದ ಉಂಟಾಗುತ್ತದೆ?

ಉದ್ಯೋಗಿಗಳೊಂದಿಗೆ ನಡೆದ ಅನೇಕ ಸಭೆಗಳ ಅನುಭವದ ಆಧಾರದ ಮೇಲೆ ಹೇಳುವುದಾದರೆ, ಇದು ಸಾಮಾನ್ಯವಾದ ಅಥವಾ ವ್ಯಾಪಕವಾದ ಅಸಮಾಧಾನವೆಂದು ನಾನು ನಂಬುವುದಿಲ್ಲ. ಒಟ್ಟಾರೆ ಭಾವನೆ ಹೆಚ್ಚು ಧನಾತ್ಮಕವಾಗಿದೆ ಎಂದು ನಾನು ಭಾವಿಸುತ್ತೇನೆ.ಕೋವಿಡ್-19 ಮಹಾಮಾರಿ ಆರಂಭವಾದಾಗ, ಜಗತ್ತಿನಾದ್ಯಂತ ಹಾಗೂ ಇಟಲಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಅನೇಕರು ಉದ್ಯೋಗ ಕಳೆದುಕೊಂಡರು ಎಂಬುದನ್ನು ನಾವು ಮರೆಯಬಾರದು. ಆದರೆ ಜಗದ್ಗುರುಗಳ ಅಧಿಕಾರ ಹುದ್ದೆ, ಅತ್ಯಂತ ಕಷ್ಟಕರ ಪರಿಸ್ಥಿತಿಗಳಲ್ಲಿಯೂ, ಯಾರನ್ನೂ ಕೆಲಸದಿಂದ ತೆಗೆದುಹಾಕಲಾಗಲಿಲ್ಲ ಮತ್ತು ಯಾರ ವೇತನವೂ ಕಡಿತಗೊಳಿಸಲ್ಪಟ್ಟಿಲ್ಲ.ಉದ್ಯೋಗಿಗಳು ಇದನ್ನು ಅರಿತಿದ್ದಾರೆ ಮತ್ತು ವಿಶೇಷವಾಗಿ ಜಗದ್ಗುರು ಫ್ರಾನ್ಸಿಸ್ ರವರಿಗೆ ಕೃತಜ್ಞರಾಗಿದ್ದಾರೆ ಏಕೆಂದರೆ ಅವರು, ಜಗದ್ಗುರುಗಳ ಅಧಿಕಾರ ಹುದ್ದೆಯ ಆರ್ಥಿಕ ಸಂಪನ್ಮೂಲಗಳನ್ನು ಗಂಭೀರವಾಗಿ ಕಡಿತಗೊಳಿಸಿದ ಮಹಾಮಾರಿಯ ಪರಿಣಾಮ ಉದ್ಯೋಗಿಗಳ ಮೇಲೆ ಬೀಳದಂತೆ ನೋಡಿಕೊಂಡರು.ಇದಲ್ಲದೆ, ಅನೇಕ ಸಣ್ಣ ಆದರೆ ದಿನನಿತ್ಯದ ಸೌಲಭ್ಯಗಳಿವೆ ಮಕ್ಕಳ ನರ್ಸರಿ, ಬೇಸಿಗೆ ಶಿಬಿರ,  ಸೂಪರ್‌ಮಾರ್ಕೆಟ್‌ನ ಪುನರಾರಂಭ, ಕೆಲಸದ ಸಮುದಾಯದಲ್ಲಿ ಅಂಗವಿಕಲರಿಗೆ ನಿಜವಾದ ಪ್ರವೇಶಾರ್ಹತೆಯನ್ನು ಖಚಿತಪಡಿಸುವ ಕುರಿತು ಜಗದ್ಗುರು XIVನೇ ಲಿಯೋರವರ ಇತ್ತೀಚಿನ ಅಧಿಕೃತ ಆದೇಶ , ನಿವೃತ್ತಿಯ ಮೇಲಿನ ಗಮನ  ಮತ್ತು ಬಹುತೇಕ ಉಚಿತ ಆರೋಗ್ಯ ಸೇವಾ ವ್ಯವಸ್ಥೆಯ ಬಲಪಡಿಸುವಿಕೆ.ಸಂಕ್ಷಿಪ್ತವಾಗಿ ಹೇಳುವುದಾದರೆ, ಅನೇಕ ಕಾರಣಗಳಿಂದ ಅನೇಕರು ವ್ಯಾಟಿಕನ್‌ನಲ್ಲಿ ಕೆಲಸ ಮಾಡಲು ಬಯಸುತ್ತಾರೆ, ಏಕೆಂದರೆ ಇಲ್ಲಿ ನೀಡುವ ವಹಿವಾಟು ಉತ್ತಮವಾಗಿದೆ ಎಂಬುದು ಗೋಚರಿಸುತ್ತದೆ. ಆದ್ದರಿಂದ, ಸಾಮಾನ್ಯವಾಗಿ ಅಸಮಾಧಾನವಿದೆ ಎಂದು ನಾನು ನಂಬುವುದಿಲ್ಲ. ಆದರೆ ಗಮನ ಮತ್ತು ಸುಧಾರಣೆ ಅಗತ್ಯವಿರುವ ಕೆಲವು ಸಮಸ್ಯೆಗಳಿವೆ ಎಂಬುದನ್ನು ನಾವು ಒಪ್ಪುತ್ತೇವೆ.

ಉದಾಹರಣೆಗೆ, ನಿಜವಾಗಿ ನಿರ್ವಹಿಸುವ ಕರ್ತವ್ಯಗಳಿಗೆ ತಕ್ಕಂತೆ ವೇತನ ಮಟ್ಟಗಳನ್ನು ಹೊಂದಿಸುವುದು. ಹಿಂದಿನ ಕೆಲವು ಪರಿಸ್ಥಿತಿಗಳ ಕಾರಣದಿಂದಲೂ, ಸಂಪನ್ಮೂಲಗಳ ಸ್ಥಗಿತದಿಂದಲೂ, ಅಥವಾ ಯಾರೂ ಕೆಲಸ ಕಳೆದುಕೊಳ್ಳದಂತೆ ನೋಡಿಕೊಳ್ಳುವ ಉದ್ದೇಶದಿಂದಲೂ, ಅಗತ್ಯ ಹೊಂದಾಣಿಕೆಗಳನ್ನು ಕೆಲವು ಸಂದರ್ಭಗಳಲ್ಲಿ ಮಾಡಲಾಗಿಲ್ಲ. ಇದಕ್ಕೆ ಅರ್ಹರಾದವರಿಗೆ ನ್ಯಾಯ ಸಿಗುವಂತೆ ಕೆಲಸ ನಡೆಯುತ್ತಿದೆ.

ಪ್ರಶ್ನೆ:

ಮಾಬಿಂಗ್ (ಮಾನಸಿಕ ಕಿರುಕುಳ) ಕುರಿತು ಕೂಡ ಉಲ್ಲೇಖವಾಗಿದೆ…

ವೈಯಕ್ತಿಕವಾಗಿ, ಮಾಬಿಂಗ್‌ನ ಯಾವುದೇ ಪ್ರಕರಣಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಹಕ್ಕುಗಳಿಗೆ ಹಾನಿ ಮಾಡುವ ಕ್ರಮಗಳ ವಿರುದ್ಧ ದೂರು ಸಲ್ಲಿಸಲು ಮತ್ತು ಮೇಲ್ಮನವಿ ಮಾಡಲು ಕಾನೂನು ರಕ್ಷಣೆಗಳು ಖಂಡಿತವಾಗಿಯೂ ಅಸ್ತಿತ್ವದಲ್ಲಿವೆ.ಮಾಬಿಂಗ್ ಅಥವಾ ದೌರ್ಜನ್ಯದ ಪ್ರಕರಣಗಳಿದ್ದರೆ, ಅವುಗಳನ್ನು ಖಂಡಿತವಾಗಿ ವರದಿ ಮಾಡಬೇಕು, ಏಕೆಂದರೆ ಕೆಲಸದ ಲೋಕದಲ್ಲಿ ನೈತಿಕ ನ್ಯಾಯದ ಅವಶ್ಯಕತೆಗಳು ಲಿಯೋ XIIIರ ರೆರುಮ್ ನೊವಾರಮ್ ಕಾಲದಿಂದಲೇ ಆದ್ಯತೆಯ ವಿಷಯವಾಗಿವೆ.ಆದರೆ ವದಂತಿಗಳು ಒಂದು ವಿಷಯ, ಸತ್ಯವನ್ನು ಪರಿಶೀಲಿಸುವುದು ಇನ್ನೊಂದು ವಿಷಯ. ನಿಜವಾಗಿಯೂ ದೌರ್ಜನ್ಯದ ಪ್ರಕರಣಗಳಿದ್ದರೆ  ನಿಜವಾದ ಮಾಬಿಂಗ್‌ನ ಗಡಿಯೊಳಗೆ ಬಾರದಿದ್ದರೂ ಸಹ ಜಗದ್ಗುರುಗಳೇ ಮೊದಲಾಗಿ ಮಧ್ಯಪ್ರವೇಶಿಸುತ್ತಿದ್ದರು. ಇದು ಸಂಭವಿಸಬಾರದು ಸಂಭವಿಸಲು ಸಾಧ್ಯವೇ ಇಲ್ಲ.

ಪ್ರಶ್ನೆ:

ಆದರೂ, ಅದೇ ಸಮೀಕ್ಷೆ ಸಂಭಾಷಣೆಯೊಂದಿಗಿನ ಸಾಮಾನ್ಯ ದಾರಿಯ ಆರಂಭದಂತಹ ಕೆಲವು ಧನಾತ್ಮಕ ಸೂಚನೆಗಳನ್ನು ಎತ್ತಿಹಿಡಿಯುತ್ತದೆ…

ನಾನು ಮೊದಲು ಉಲ್ಲೇಖಿಸಿದ್ದೇ ಅದಾಗಿದೆ. ಜಗದ್ಗುರುಗಳು ನಮ್ಮನ್ನು ಸಂಪೂರ್ಣ ಧರ್ಮ ಸಭೆಯೊಳಗೆ ಮತ್ತು ವಿಶೇಷವಾಗಿ ಪ್ರೇಷಿತರ ಹುದ್ದೆಯೊಳಗೆ  ಸಮುದಾಯ ಮತ್ತು ಏಕತೆಯ ಮನೋಭಾವವನ್ನು  ಇಂದಿನ ಭಾಷೆಯಲ್ಲಿ ಹೇಳುವುದಾದರೆ “ಸಿನೋಡಾಲಿಟಿ” — ಉತ್ತೇಜಿಸಲು ಪ್ರೇರೇಪಿಸುತ್ತಾರೆ.ಸಾಧ್ಯವಾದ ಮಿತಿಗಳೊಳಗೆ, ಉದ್ಯೋಗಿಗಳೊಂದಿಗೆ ವೈಯಕ್ತಿಕವಾಗಿ ಮತ್ತು ಅವರ ಸಂಘಟನೆಗಳ ಮೂಲಕ, ಹಾಗೆಯೇ ಸಿಬ್ಬಂದಿಯನ್ನು ನೇಮಿಸುವ ಎಲ್ಲಾ ಸಂಸ್ಥೆಗಳೊಂದಿಗೆ, ಹೆಚ್ಚುತ್ತಿರುವ ಮಟ್ಟದಲ್ಲಿ ಸಂಭಾಷಣೆಯನ್ನು ಬೆಳೆಸಲು ನಾವು ಬದ್ಧರಾಗಿದ್ದೇವೆ. ಉದ್ಯೋಗಿಗಳು ಮತ್ತು ಆಡಳಿತಗಳ ನಡುವಿನ ಸಂಭಾಷಣೆಯನ್ನು ಇನ್ನಷ್ಟು ರಚನಾತ್ಮಕ ಮತ್ತು ಶಾಂತವಾಗಿಸಲು ಸೇತುವೆಯಾಗಿ ಕಾರ್ಯನಿರ್ವಹಿಸುವುದಕ್ಕೂ ನಾವು ಪ್ರಯತ್ನಿಸುತ್ತೇವೆ.ಈ ಸಂಭಾಷಣೆ ಸುವಾರ್ತೆಯ ಬೆಳಕಿನಲ್ಲಿ ಮತ್ತು ಧರ್ಮ ಸಭೆಯ ಸಾಮಾಜಿಕ ಅಧಿಕೃತ ಉಪದೇಶ ಆಧಾರದ ಮೇಲೆ, ಧಾರ್ಮಿಕ ಸಮಾಗಮದ ಮನೋಭಾವದಲ್ಲಿ ಮತ್ತು ಉದ್ಯೋಗಿಗಳ ಹಕ್ಕುಗಳಿಗೆ ಗೌರವ ನೀಡುತ್ತ ನಡೆಯಬೇಕು ಎಂಬುದೇ ನಮ್ಮ ಆಶಯವಾಗಿದೆ.

22 ಜನವರಿ 2026, 00:00