ಹುಡುಕಿ

Vatican's Archbishop Paul Gallagher visits Sri Lanka

ಮಹಾಧರ್ಮಾಧ್ಯಕ್ಷ ಗ್ಯಾಲಘರ್: ಯುದ್ಧಗಳು ಮತ್ತು ವಿಭಜನೆಗಳಿಂದ ಕತ್ತಲಾದ ಜಗತ್ತಿನಲ್ಲಿ ನಂಬಿಕೆಯನ್ನು ಮರುನಿರ್ಮಿಸಬೇಕು

ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಸ್ಲೋವಾಕಿಯಾ ನಡುವಿನ ಮೂಲಭೂತ ಒಪ್ಪಂದದ 25ನೇ ವಾರ್ಷಿಕೋತ್ಸವದ ಅಂಗವಾಗಿ ಬ್ರಾಟಿಸ್ಲಾವಾದಲ್ಲಿ ನಡೆದ ಪವಿತ್ರ ಬಲಿ ಪೂಜೆಯನ್ನು ಅಧ್ಯಕ್ಷತೆ ವಹಿಸಿ ಆಚರಿಸಿದ ಸಂದರ್ಭದಲ್ಲಿ, ರಾಷ್ಟ್ರಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾಗಿರುವ ಮಹಾಧರ್ಮಾಧ್ಯಕ್ಷ ಪಾಲ್ ರಿಚರ್ಡ್ ಗ್ಯಾಲಘರ್ ರವರು, ಶಾಂತಿಯತ್ತ ದಾರಿ ತೋರಿಸುವ ಮಾರ್ಗಗಳನ್ನು ಯಾವಾಗಲೂ ತೆರೆಯಾಗಿ ಕಾಯ್ದುಕೊಳ್ಳಬೇಕು ಎಂದು ದೃಢವಾಗಿ ಒತ್ತಿ ಹೇಳಿದರು.

ವ್ಯಾಟಿಕನ್ ವರದಿ

ಯುದ್ಧಗಳು, ಸಂಘರ್ಷಗಳು, ಧ್ರುವೀಕರಣ ಮತ್ತು ಆಳವಾದ ವಿಭಜನೆಗಳಿಂದ ನಮ್ಮ ಜಗತ್ತು ಕತ್ತಲಾಗಿ ಹೋಗಿದೆ ಇಂತಹ ಪರಿಸ್ಥಿತಿಯಲ್ಲಿ ನಿರೀಕ್ಷೆ ದೂರವಾಗಿರುವಂತೆ ಕಾಣಬಹುದು ಎಂದು ಮಹಾಧರ್ಮಾಧ್ಯಕ್ಷ ಪಾಲ್ ರಿಚರ್ಡ್ ಗ್ಯಾಲಘರ್ ರವರು ಹೇಳಿದರು. ಆದರೆ ಈ ನಿರೀಕ್ಷೆಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳುವ ಜವಾಬ್ದಾರಿಯ ಮೂಲಕವೇ ಪೋಷಿಸಬಹುದು ಗಾಯಗೊಂಡ ಸ್ಥಳಗಳಲ್ಲಿ ನಂಬಿಕೆಯನ್ನು ಮರುನಿರ್ಮಿಸುವುದು, ಕಠಿಣವಾಗಿದ್ದರೂ ಸಂವಾದವನ್ನು ಮುಂದುವರಿಸುವುದು, ಮತ್ತು ಶಾಂತಿಯತ್ತ ಕರೆದೊಯ್ಯುವ ಮಾರ್ಗಗಳನ್ನು ಸದಾ ತೆರೆಯಾಗಿ ಇಡುವುದು ಅಗತ್ಯವೆಂದು ಅವರು ಒತ್ತಿ ಹೇಳಿದರು.

 ಫೆಬ್ರವರಿ 1ರಂದು ಬ್ರಾಟಿಸ್ಲಾವಾದ ಸಂತ ಮಾರ್ಟಿನ್ ಕ್ಯಾಥೆಡ್ರಲ್‌ನಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಸ್ಲೋವಾಕ್ ಗಣರಾಜ್ಯ ನಡುವಿನ ಮೂಲ ಒಪ್ಪಂದದ 25ನೇ ವಾರ್ಷಿಕೋತ್ಸವದ ಅಂಗವಾಗಿ ನೀಡಿದ ತಮ್ಮ ಪ್ರಭೋಧನೆಯಲ್ಲಿ, ಯೇಸು ಪರ್ವತೋಪದೇಶದ ಮೂಲಕ ಮಾನವ ಇತಿಹಾಸಕ್ಕೆ ಸಂಪೂರ್ಣ ಹೊಸ ತರ್ಕವನ್ನು ಪರಿಚಯಿಸುತ್ತಾನೆ ಎಂದು ಮಹಾಧರ್ಮಾಧ್ಯಕ್ಷರು ವಿವರಿಸಿದರು. ಯೇಸು ಆದೇಶಗಳನ್ನು ನೀಡುವ ಮೊದಲು ಆಶೀರ್ವಾದವನ್ನು ಘೋಷಿಸುತ್ತಾರೆ ಆತ್ಮದಲ್ಲಿ ದರಿದ್ರರಾದವರು, ಸೌಮ್ಯರು, ಕರುಣಾಳುಗಳು, ಶಾಂತಿದೂತರು ಮತ್ತು ನ್ಯಾಯಕ್ಕಾಗಿ ಹಸಿದಿರುವವರನ್ನೇ “ಧನ್ಯರು” ಎಂದು ಕರೆಯುತ್ತಾರೆ ಎಂದು ಅವರು ಹೇಳಿದರು.

 ಈ ದೃಷ್ಟಿಕೋನ ಬದಲಾವಣೆ ಇತಿಹಾಸದ ಮೌಲ್ಯಗಳು ಮತ್ತು ಆದ್ಯತೆಗಳನ್ನು ಕ್ರಾಂತಿಕಾರಿಯಾಗಿ ಪರಿವರ್ತಿಸುತ್ತದೆ ಎಂದು ಅವರು ಹೇಳಿದರು. ಯಶಸ್ಸು, ಭದ್ರತೆ ಮತ್ತು ಮಾನ್ಯತೆಯನ್ನು ಅಳೆಯುವ ಜಗತ್ತಿಗೆ ವಿರುದ್ಧವಾಗಿ, ಕ್ರಿಸ್ತನು ಅಧಿಪತ್ಯದ ಮೇಲೆ ಅಲ್ಲ, ನಂಬಿಕೆಯ ಮೇಲೆ, ಸ್ವಯಂಪ್ರತಿಷ್ಠೆಯ ಮೇಲೆ ಅಲ್ಲ, ಸಹಭಾಗಿತ್ವದ ಮೇಲೆ,ಭಯದ ಮೇಲೆ ಅಲ್ಲ, ದೇವರಲ್ಲಿ ಬೇರುಬಿಟ್ಟ ನಿರೀಕ್ಷೆಯ ಮೇಲೆ ಆಧಾರಿತ ಜೀವನ ಮಾರ್ಗವನ್ನು ತೆರೆದಿಡುತ್ತಾನೆ ಎಂದು ಅವರು ವಿವರಿಸಿದರು.

 ಧನ್ಯವಚನಗಳು ಯಥಾರ್ಥದಿಂದ ದೂರವಾದ ಕನಸಲ್ಲ ಅವು ಇತಿಹಾಸದಲ್ಲಿ ದೇವರ ಕೃಪೆಯ ಚಲನವಲನವನ್ನು ವಿವರಿಸುತ್ತವೆ ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ದೇವರು ಮಾನವ ಸ್ವಯಂಪೂರ್ಣತೆ ಮುಕ್ತಾಯವಾಗುವ ಸ್ಥಳದಲ್ಲೇ ಕಾರ್ಯನಿರ್ವಹಿಸುತ್ತಾರೆ ಕ್ರಿಸ್ತನಿಗೆ ಸೇರಿದವರಾಗಿ, ವಿನಯವನ್ನು ಸ್ವಾತಂತ್ರ್ಯದ ಸ್ಥಳವನ್ನಾಗಿ, ಕರುಣೆಯನ್ನು ಶಕ್ತಿಯ ರೂಪವನ್ನಾಗಿ, ಸ್ಥೈರ್ಯವನ್ನು ನಿರೀಕ್ಷೆಯ ಮೌನ ಸಾಕ್ಷಿಯನ್ನಾಗಿ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ನಿರೀಕ್ಷೆ ಒಂದು ಭಾವನೆ ಮಾತ್ರವಲ್ಲ, ಅದು ಪಾಲಿಸಬೇಕಾದ ಕರೆಯಾಗಿದೆ ಎಂದು ಜಗದ್ಗುರು XIVನೇ ಲಿಯೋರವರ ಮಾತುಗಳನ್ನು ಉಲ್ಲೇಖಿಸಿದ ಮಹಾಧರ್ಮಾಧ್ಯಕ್ಷರು ಸ್ಲೋವಾಕಿಯಾದ ಇತಿಹಾಸವೇ ಈ ಸ್ಥಿರ ನಿರೀಕ್ಷೆಯ ಸಾಕ್ಷಿಯಾಗಿದೆ ಎಂದು ಹೇಳಿದರು. ಸಂತ ಸಿರಿಲ್ ಮತ್ತು ಮೆಥೋಡಿಯಸ್ ಹಾಗೂ ಸಂತ ಗೋರಾಜ್ಡ್ ಮುಂತಾದವರು ಬಲ ಅಥವಾ ವಿಶೇಷಾಧಿಕಾರಗಳ ಮೇಲೆ ಅಲ್ಲ, ದೇವರ ವಾಕ್ಯದ ಸಹನಶೀಲ ಸೇವೆಯ ಮೂಲಕ ಸಂಸ್ಕೃತಿಯನ್ನು ರೂಪಿಸಿ, ಹೃದಯಗಳನ್ನು ಸುವಾರ್ತೆಗೆ ತೆರೆದ ಉದಾಹರಣೆಗಳಾಗಿದ್ದಾರೆ ಎಂದು ಅವರು ಸ್ಮರಿಸಿದರು.

ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಸ್ಲೋವಾಕಿಯಾ ನಡುವಿನ 25 ವರ್ಷಗಳ ಮೂಲ ಒಪ್ಪಂದವೂ ಧನ್ಯವಚನಗಳು ಬೋಧಿಸುವ ನಂಬಿಕೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಈ ಸಂಬಂಧಗಳು ಮಾನವ ಗೌರವವನ್ನು ಕಾಯ್ದುಕೊಳ್ಳಲು, ಸಂವಾದವನ್ನು ಬೆಳೆಸಲು ಮತ್ತು ನಂಬಿಕೆ, ಪ್ರೀತಿ ಹಾಗೂ ನ್ಯಾಯದ ಮೇಲೆ ಸ್ಥಾಪಿತವಾದ ನಿರೀಕ್ಷೆ ಶಾಂತವಾಗಿ ಬೇರುಬಿಟ್ಟು ಬೆಳೆಯಲು ಅವಕಾಶ ನೀಡುತ್ತವೆ. ಅಂತಿಮವಾಗಿ, ಯುಕ್ರೇನ್ ಸೇರಿದಂತೆ ಹಿಂಸೆಯಿಂದ ಕಂಗೆಟ್ಟ ಎಲ್ಲಾ ಜನರಿಗಾಗಿ ಪ್ರಾರ್ಥಿಸುತ್ತಾ, ನಾವು ಶಾಂತಿಯ ಕಾರ್ಮಿಕರಾಗಲು ಪವಿತ್ರಾತ್ಮರು ನಮ್ಮನ್ನು ರೂಪಿಸಲಿ ಎಂದು ಮಹಾಧರ್ಮಾಧ್ಯಕ್ಷ ಗ್ಯಾಲಘರ್ ರವರು ತಮ್ಮ ಪ್ರಭೋಧನೆಯನ್ನು ಮುಕ್ತಾಯಗೊಳಿಸಿದರು.

02 ಫೆಬ್ರವರಿ 2026, 00:00