ಹುಡುಕಿ

ಕಾರ್ಡಿನಲ್ ಮೈಕೆಲ್ ಚೆರ್ನಿ ರವರು ಪೆರು ದೇಶದ ಚಿಕ್ಲಾಯೋದಲ್ಲಿ ನಡೆದ ಪರಿಶುದ್ಧ ಬಲಿಪೂಜೆಯ ವೇಳೆ ರೋಗಿಗಳ ಅಭಿಷೇಕದ ಸಕ್ರಾಮೆಂಟ್ ಅನ್ನು ನೀಡಿದರು. ಕಾರ್ಡಿನಲ್ ಮೈಕೆಲ್ ಚೆರ್ನಿ ರವರು ಪೆರು ದೇಶದ ಚಿಕ್ಲಾಯೋದಲ್ಲಿ ನಡೆದ ಪರಿಶುದ್ಧ ಬಲಿಪೂಜೆಯ ವೇಳೆ ರೋಗಿಗಳ ಅಭಿಷೇಕದ ಸಕ್ರಾಮೆಂಟ್ ಅನ್ನು ನೀಡಿದರು.   (Tomáš Hýsek (Člověk a Víra))

ಕಾರ್ಡಿನಲ್ ಚೆರ್ನಿ ಪೆರುದ ಚಿಕ್ಲಾಯೋದಲ್ಲಿ ವಿಶ್ವ ರೋಗಿಗಳ ದಿನದಂದು ಪರಿಶುದ್ಧ ಬಲಿಪೂಜೆಯನ್ನು ಅರ್ಪಿಸಿದರು

ಧರ್ಮ ಸಭೆ 34ನೇ ವಿಶ್ವ ರೋಗಿಗಳ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಕಾರ್ಡಿನಲ್ ಮೈಕೆಲ್ ಚೆರ್ನಿ ರವರು ಪೆರುದ ಚಿಕ್ಲಾಯೋ ನಗರದಲ್ಲಿ ಪರಿಶುದ್ಧ ಬಲಿಪೂಜೆಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಅವರು ಕ್ರೈಸ್ತರಿಗೆ, ವಿಶೇಷವಾಗಿ ಅನಾರೋಗ್ಯ ಅಥವಾ ನೋವಿನ ಕ್ಷಣಗಳಲ್ಲಿ, ಪರಸ್ಪರ ಕಾಳಜಿ ವಹಿಸಿ ಸೇವೆ ಸಲ್ಲಿಸುವಂತೆ ಆಹ್ವಾನಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು 34ನೇ ವಿಶ್ವ ರೋಗಿಗಳ ದಿನಾಚರಣೆಯ ನಿಮಿತ್ತ ತಮ್ಮ ವಿಶೇಷ ಪ್ರತಿನಿಧಿಯಾಗಿ ಕಾರ್ಡಿನಲ್ ಮೈಕೆಲ್ ಚೆರ್ನಿಯನ್ನು ಪೆರು ದೇಶದ ಚಿಕ್ಲಾಯೋ ಧರ್ಮಕ್ಷೇತ್ರಕ್ಕೆ ಕಳುಹಿಸಿದರು. ಚಿಕ್ಲಾಯೋವು ಜಗದ್ಗುರು ಲಿಯೋರವರು 2015ರಿಂದ 2023ರವರೆಗೆ ಬಿಷಪ್ ಆಗಿ ಸೇವೆ ಸಲ್ಲಿಸಿದ್ದ ಹಳೆಯ ಧರ್ಮಕ್ಷೇತ್ರವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಕಾರ್ಡಿನಲ್ ಚೆರ್ನಿರವರು “ನಮ್ಮ ಶಾಂತಿಯ ತಾಯಿ” ದೇವಾಲಯದಲ್ಲಿ ಪರಿಶುದ್ಧ ಬಲಿಪೂಜೆಯನ್ನು ಅರ್ಪಿಸಿದರು.

ತಮ್ಮ ಉಪದೇಶದಲ್ಲಿ ಕಾರ್ಡಿನಲ್ ಚೆರ್ನಿ, ಜಗದ್ಗುರು ಲಿಯೋರವರ ಚಿಕ್ಲಾಯೋ ಧರ್ಮಕ್ಷೇತ್ರದೊಂದಿಗೆ ಇರುವ ಆತ್ಮೀಯ ಬಾಂಧವ್ಯವನ್ನು ಸ್ಮರಿಸಿದರು. ವಿಶ್ವ ರೋಗಿಗಳ ದಿನದ ಸಂದೇಶದಲ್ಲಿ ಜಗದ್ಗುರುಗಳು ಎಲ್ಲರನ್ನು ಇತರರ ನೋವನ್ನು ಹಂಚಿಕೊಳ್ಳಲು ಮತ್ತು ಹೊರುವಂತೆ ಆಹ್ವಾನಿಸಿದ್ದಾರೆ ಎಂದು ಅವರು ಹೇಳಿದರು. ಇದಕ್ಕಾಗಿ ಯೇಸು ಕ್ರಿಸ್ತನು ಹೇಳಿದ “ಉತ್ತಮ ಸಮಾರ್ಯನ” ಉಪಮೆಯವನ್ನು ಉದಾಹರಣೆಯಾಗಿ ನೀಡಿದರು.

ಸ್ನೇಹ ಮತ್ತು ಆರೈಕೆ ಕೇವಲ ಮಾತಿನಲ್ಲಿ ಮಾತ್ರವಲ್ಲ, ಅದು ಹೃದಯಾಂತರಂಗದ ಪರಿವರ್ತನೆಯ ಫಲವಾಗಿರಬೇಕು ಎಂದು ಕಾರ್ಡಿನಲ್ ಒತ್ತಿ ಹೇಳಿದರು. ಪ್ರೇಮವೆಂದರೆ ನಿಜವಾದ ಪರಿವರ್ತನೆಯ ಪ್ರಕ್ರಿಯೆ ಎಂದು ಅವರು ವಿವರಿಸಿದರು. ದೇವರ ಕಣ್ಣುಗಳಿಂದ ನೋಡುವುದು, ಕೇವಲ ದುಃಖದ ಸುದ್ದಿಗಳನ್ನು ಹೇಳುವುದಲ್ಲ ಬದಲಾಗಿ ಭರವಸೆಯೊಂದಿಗೆ ಮತ್ತೊಬ್ಬರ ಕಡೆ ತಲೆಬಾಗುವುದು ಕ್ರೈಸ್ತ ಪ್ರೀತಿಯ ನಿಜಸ್ವರೂಪ ಎಂದು ಹೇಳಿದರು.

ಇತರರ ನೋವು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುವಂತೆ ದೇವರ ಕೃಪೆಗಾಗಿ ಪ್ರಾರ್ಥಿಸಬೇಕು ಎಂದು ಅವರು ಪ್ರೇರೇಪಿಸಿದರು. ಕರುಣೆ ವೈಯಕ್ತಿಕ ಮಟ್ಟದಲ್ಲಷ್ಟೇ ಅಲ್ಲ, ಅದು ಸಮಾಜದಲ್ಲಿ ಸಂಬಂಧಗಳ ಜಾಲವನ್ನು ಹೆಣೆದು ಸಮೂಹ ಬದ್ಧತೆಯನ್ನು ರೂಪಿಸುತ್ತದೆ ಎಂದು ಹೇಳಿದರು. ಸಹೋದರ-ಸಹೋದರಿಯರ ಸೇವೆಗೆ ಒಗ್ಗೂಡುವವರ ಮೂಲಕ ದೇವರು ತನ್ನ ರಕ್ಷಕ ಕಾರ್ಯವನ್ನು ಮುಂದುವರಿಸುತ್ತಾರೆ ಎಂದು ಕಾರ್ಡಿನಲ್ ಅಭಿಪ್ರಾಯಪಟ್ಟರು.

ಕೊನೆಯಲ್ಲಿ, ದೇವರನ್ನು ಪ್ರೀತಿಸುವುದು ಮತ್ತು ನೆರೆಯವರನ್ನು ಪ್ರೀತಿಸುವುದು ಪರಸ್ಪರ ಅವಿಭಾಜ್ಯವೆಂದು ಅವರು ನೆನಪಿಸಿದರು. ನಾವು ದೇವರನ್ನು ಪ್ರೀತಿಸುತ್ತೇವೆ ಎಂದರೆ ಅದು ಇತರರ ಮೇಲಿನ ಸ್ಪಷ್ಟವಾದ ಪ್ರೀತಿಯಲ್ಲಿಯೇ ವ್ಯಕ್ತವಾಗಬೇಕು ಎಂದು ಹೇಳಿದರು. ಅನಾರೋಗ್ಯದಿಂದ ದೇಹದಲ್ಲಿ ನೋವು ಅನುಭವಿಸುವವರಲ್ಲಿ ದೇವರನ್ನು ಕಂಡು, ಅವರೊಂದಿಗೆ ಏಕತೆಯಿಂದ ನಡೆದುಕೊಳ್ಳುವಂತೆ ಎಲ್ಲರನ್ನು ಅವರು ಆಹ್ವಾನಿಸಿದರು.

11 ಫೆಬ್ರವರಿ 2026, 00:00