ಹುಡುಕಿ

ವಾಷಿಂಗ್ಟನ್ ಡಿ.ಸಿ ಯಲ್ಲಿ ಶಾಂತಿಗಾಗಿ ಮೆರವಣಿಗೆ ವಾಷಿಂಗ್ಟನ್ ಡಿ.ಸಿ ಯಲ್ಲಿ ಶಾಂತಿಗಾಗಿ ಮೆರವಣಿಗೆ  (ANSA)

ಅಮೆರಿಕಾದಲ್ಲಿ ಬಹುಪಕ್ಷೀಯ ಸಂವಾದಕ್ಕೆ ಜಗದ್ಗುರುಗಳ ಅಧಿಕಾರ ಸ್ಥಳದ ಕರೆ

ಅಮೆರಿಕನ್ ರಾಜ್ಯಗಳ ಸಂಘಟನೆ (ಓಎಎಸ್) ನಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ಪರಿವೀಕ್ಷಕರು ಅದರ ಶಾಶ್ವತ ಪರಿಷತ್ತನ್ನುದ್ದೇಶಿಸಿ ಮಾತನಾಡಿ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಭದ್ರತೆ ಮತ್ತು ಅಭಿವೃದ್ಧಿ ಕುರಿತಂತೆ ಚಿಂತನೆಗಳನ್ನು ಹಂಚಿಕೊಂಡರು

ವ್ಯಾಟಿಕನ್ ವರದಿ

ಅಮೆರಿಕಾದ ರಾಜ್ಯಗಳ ಸಂಘಟನೆ (ಓಎಎಸ್)ನಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ಪರಿವೀಕ್ಷಕರಾದ ಮಹಾಧರ್ಮಾಧ್ಯಕ್ಷ ಜುವಾನ್ ಆಂಟೋನಿಯೋ ಕ್ರೂಸ್ ಸೆರ್ರಾನೋರವರು ಬುಧವಾರ ನಡೆದ ಸಂಘಟನೆಯ ಎಂಟನೇ ವಿಶೇಷ ಅಧಿವೇಶನದಲ್ಲಿ ಅದರ ಶಾಶ್ವತ ಪರಿಷತ್ತನ್ನುದ್ದೇಶಿಸಿ ಭಾಷಣ ಮಾಡಿದರು. ಈ ಅಧಿವೇಶನವು ಸಂಘಟನೆ ಮತ್ತು ಅದರ ಶಾಶ್ವತ ಪರಿವೀಕ್ಷಕರ ನಡುವಿನ ಸಂವಾದಕ್ಕೆ ಮೀಸಲಾಗಿತ್ತು. ವಾಷಿಂಗ್ಟನ್ ಡಿ.ಸಿ.ಯಲ್ಲಿ ಮಾತನಾಡಿದ ಮಹಾಧರ್ಮಾಧ್ಯಕ್ಷರಾದ ಕ್ರೂಸ್ ಸೆರ್ರಾನೋ, 1978ರಲ್ಲಿ ಶಾಶ್ವತ ಪರಿವೀಕ್ಷಕರಾಗಿ ಸೇರಿದಂದಿನಿಂದ ಜಗದ್ಗುರುಗಳ ಅಧಿಕಾರ ಸ್ಥಳದ ಓಎಎಸ್  ಅನ್ನು ಅಮೆರಿಕಾ ಖಂಡದ ರಾಷ್ಟ್ರಗಳ ನಡುವಿನ ಸಂವಾದ, ಸಹಕಾರ ಮತ್ತು ಒಮ್ಮತ ನಿರ್ಮಾಣಕ್ಕಾಗಿ ವಿಶಿಷ್ಟ ರಾಜಕೀಯ ವೇದಿಕೆ ಎಂದು ಮೌಲ್ಯೀಕರಿಸುತ್ತಿದೆ ಎಂದು ಸ್ಮರಿಸಿದರು.

ದುರ್ಬಲಗೊಳಿಸುವುದಲ್ಲ, ಬಲಪಡಿಸುವುದು

ತಮ್ಮ ಭಾಷಣದಲ್ಲಿ ಮಹಾ ಧರ್ಮಾಧ್ಯಕ್ಷರುಗಳು ಇತ್ತೀಚಿನ ವಿಶ್ವ ಶಾಂತಿ ದಿನದ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು ನೀಡಿದ ಸಂದೇಶವನ್ನು ಉಲ್ಲೇಖಿಸಿದರು. ಹೆಚ್ಚುತ್ತಿರುವ ಒಪ್ಪಂದ ಉಲ್ಲಂಘನೆಗಳು ದುಃಖಕರವಾಗಿ ಕಂಡುಬರುತ್ತಿರುವ ಈ ಸಂದರ್ಭದಲ್ಲಿಯೂ, ರಾಜತಾಂತ್ರಿಕತೆ, ಮಧ್ಯಸ್ಥಿಕೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಮಾರ್ಗವನ್ನು ತಿರಸ್ಕರಿಸುವುದಲ್ಲ ಬದಲಾಗಿ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಜಗದ್ಗುರುಗಳು ಒತ್ತಿ ಹೇಳಿದ್ದಾರೆ ಎಂದು ಅವರು ವಿವರಿಸಿದರು.

ಈ ಹಿನ್ನೆಲೆಯಲ್ಲಿ, “ಅಮೆರಿಕಾಸ್‌ನ ಮನೆ” ಎಂದು ಕರೆಯಲ್ಪಡುವ OAS ತನ್ನ ನಾಲ್ಕು ಸ್ತಂಭಗಳಾದ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಬಹುಆಯಾಮಿಕ ಭದ್ರತೆ ಮತ್ತು ಸಮಗ್ರ ಅಭಿವೃದ್ಧಿ ಇವುಗಳ ಆಧಾರದ ಮೇಲೆ ಮಾನವ ವ್ಯಕ್ತಿ ಮತ್ತು ಸಮಾಜಗಳ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸಬೇಕೆಂದು ಅವರು ಹೇಳಿದರು.

ಮಾನವ ಗೌರವದಲ್ಲಿ ನೆಲೆಯೂರಿದ ದೃಷ್ಟಿ

ಪ್ರತಿ ಸ್ತಂಭವನ್ನು ವಿವರಿಸುತ್ತಾ, ಬಲವಾದ ಸಂಸ್ಥೆಗಳು ಮತ್ತು ಸಂವಾದದಿಂದ ಪೋಷಿಸಲ್ಪಡುವ ಪ್ರಜಾಪ್ರಭುತ್ವ ಸಂಸ್ಕೃತಿ ಅಗತ್ಯವೆಂದು ಅವರು ಒತ್ತಿ ಹೇಳಿದರು. ಮಾನವ ಹಕ್ಕುಗಳ ವಿಷಯದಲ್ಲಿ, “ಗರ್ಭಧಾರಣೆಯ ಮೊದಲ ಕ್ಷಣದಿಂದ ಸ್ವಾಭಾವಿಕ ಮರಣದವರೆಗೆ” ಜೀವದ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಬದ್ಧತೆಯನ್ನು ಪುನರುಚ್ಚರಿಸಿದರು. ಧಾರ್ಮಿಕ ಸ್ವಾತಂತ್ರ್ಯವು ಕೇವಲ ವೈಯಕ್ತಿಕ ಹಕ್ಕು ಮಾತ್ರವಲ್ಲ, ಶಾಂತಿಯುತ ಸಹಬಾಳ್ವೆಯ ಮೂಲಾಧಾರವೂ ಆಗಿದೆ ಎಂದು ಅವರು ತಿಳಿಸಿದರು.

ಬಡತನ, ಹಿಂಸಾಚಾರ ಮತ್ತು ಪರಿಸರ ಹಾನಿ ಮುಂತಾದ ಸವಾಲುಗಳಿಗೆ ಸಂಯೋಜಿತ ಪ್ರತಿಕ್ರಿಯೆಗಳ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಈ ಕ್ಷೇತ್ರಗಳಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ದೃಷ್ಟಿಕೋನಗಳು, ಅನುಭವಗಳು ಮತ್ತು ಸಹಕಾರವನ್ನು ನೀಡಲು ಸಿದ್ಧವಾಗಿದೆ ಎಂದು ತಿಳಿಸಿದರು. ಅಮೆರಿಕಾ ಪ್ರದೇಶವು ಇನ್ನಷ್ಟು ಶಾಂತಿಯುತ, ಸ್ಥಿರ ಹಾಗೂ ವಲಸಿಗರು ಮತ್ತು ಅಂಚಿನಲ್ಲಿರುವವರನ್ನು ಆತ್ಮೀಯವಾಗಿ ಸ್ವಾಗತಿಸುವ ಪ್ರದೇಶವಾಗಲೆಂದು ಅವರು ಆಶಿಸಿದರು.

ಕೊನೆಯಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳದ ಓಎಎಸ್  ಜೊತೆಗೆ ತನ್ನ ಸಕ್ರಿಯ ಸಹಕಾರವನ್ನು ಮುಂದುವರಿಸಲು ಸಿದ್ಧವಿದೆ ಎಂದು ಅವರು ಪುನರುಚ್ಚರಿಸಿದರು. ಸಾಮಾನ್ಯ ಹಿತಾಸಕ್ತಿಯನ್ನು ಗುರಿಯಾಗಿಟ್ಟುಕೊಂಡ ಬಹುಪಕ್ಷೀಯ ಸಂವಾದವು ಅಮೆರಿಕಾ ಖಂಡದ ಜನರ ಆಶೆ-ಆಕಾಂಕ್ಷೆಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಬಲ್ಲದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

12 ಫೆಬ್ರವರಿ 2026, 16:47