ಹುಡುಕಿ

LEBANON-VATICAN-RELIGION-POPE

ರೋಮನ್ ಕ್ಯೂರಿಯಾದಲ್ಲಿ ಅಧಿಕಾರ ಸ್ಥಾನಗಳಲ್ಲಿರುವ ಸಾಮಾನ್ಯ ಜನರ ಕುರಿತು ಕಾರ್ಡಿನಲ್ ಓಯೆಲೆಟ್

ಮಾರ್ಕ್ ಔಲೆಟ್, ಬಿಷಪ್‌ಗಳ ಡಿಕಾಸ್ಟರಿಯ ನಿವೃತ್ತ ಪ್ರಿಫೆಕ್ಟ್ ಆಗಿರುವ ಅವರು, ರೋಮನ್ ಕ್ಯೂರಿಯಾದಲ್ಲಿ ಸಾಮಾನ್ಯ ವಿಶ್ವಾಸಿಗಳನ್ನು ಅಧಿಕಾರ ಸ್ಥಾನಗಳಿಗೆ ನೇಮಿಸುವ ವಿಷಯದ ಬಗ್ಗೆ ಚಿಂತನೆ ವ್ಯಕ್ತಪಡಿಸಿದ್ದಾರೆ. ಇದು ಮರುಪರಿಶೀಲನೆಗೆ ಒಳಪಡಬೇಕಾದ ಕೇವಲ ಒಂದು ರಿಯಾಯಿತಿ ಮಾತ್ರವೇ? ಅಥವಾ ಧರ್ಮ ಸಭೆಯ ತತ್ತ್ವಶಾಸ್ತ್ರೀಯ ಅರಿವಿನಲ್ಲಿ ಒಂದು ನಿಜವಾದ ಮುನ್ನಡೆಯೆ? ಎಂಬ ಪ್ರಶ್ನೆಯನ್ನು ಅವರು ಮುಂದಿರಿಸಿದ್ದಾರೆ

ವ್ಯಾಟಿಕನ್ ವರದಿ

ಜಗದ್ಗುರು ಫ್ರಾನ್ಸಿಸ್ ರವರು ಕೈಗೊಂಡ ಧೈರ್ಯಶಾಲಿ ನಿರ್ಧಾರಗಳಲ್ಲಿ ಒಂದು ಎಂದರೆ, ರೋಮನ್ ಕ್ಯೂರಿಯಾದ ಡಿಕಾಸ್ಟರಿಗಳಲ್ಲಿ ಸಾಮಾನ್ಯ ಜನರು ಮತ್ತು ಧಾರ್ಮಿಕ ಸಹೋದರಿಯರನ್ನು, ಸಾಮಾನ್ಯವಾಗಿ ಬಿಷಪ್‌ಗಳು ಅಥವಾ ಕಾರ್ಡಿನಲ್‌ಗಳಿಗೆ ಮೀಸಲಾಗಿದ್ದ ಅಧಿಕಾರ ಸ್ಥಾನಗಳಿಗೆ ನೇಮಿಸುವುದು. ಈ ನವೀನ ಕ್ರಮವನ್ನು ಅವರು “ಸಿನೋಡಲ್” ತತ್ವದ ಆಧಾರದಲ್ಲಿ ಸಮರ್ಥಿಸಿದರು, ಅಂದರೆ ಧರ್ಮ ಸಭೆಯ ಸಂಗಮ ಮತ್ತು ಮಿಷನ್‌ನಲ್ಲಿ ವಿಶ್ವಾಸಿಗಳ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ದೃಷ್ಟಿಕೋನ.

ಆದರೆ ಈ ಕ್ರಮವು ಪರಂಪರೆಯ  ಪದ್ಧತಿಗೆ ವಿರುದ್ಧವಾಗಿದೆ. ಇತಿಹಾಸದಲ್ಲಿ ಧರ್ಮ ಸಭೆಯ ಆಡಳಿತಾಧಿಕಾರವನ್ನು ಅಭಿಷೇಕಿತ ಯಾಜಕರಿಗೆ ಮಾತ್ರ ವಹಿಸಲಾಗುತ್ತಿತ್ತು. ಎರಡನೇ ವ್ಯಾಟಿಕನ್ ಕೌನ್ಸಿಲ್ ಕೂಡ ಬಿಷಪ್‌ಗಳು ದೀಕ್ಷೆಯ ಸಕ್ರಾಮೆಂಟಲ್ ಸ್ವಭಾವವನ್ನು ದೃಢಪಡಿಸಿತ್ತು. ಆದ್ದರಿಂದ, ಕೆಲವರು  ಜಗದ್ಗುರುಗಳ ನಿರ್ಧಾರವನ್ನು ತಾತ್ಕಾಲಿಕ ರಿಯಾಯಿತಿ ಎಂದು ಪರಿಗಣಿಸುತ್ತಾರೆ ಮತ್ತು ಯಾಜಕದೀಕ್ಷೆಯ ಸೇವೆ ಹಾಗೂ ಆಡಳಿತಾಧಿಕಾರದ ನಡುವಿನ ಸಾಂಪ್ರದಾಯಿಕ ಸಂಬಂಧವನ್ನು ಪುನಃ ದೃಢಪಡಿಸಬೇಕೆಂದು ಅಭಿಪ್ರಾಯಪಡುತ್ತಾರೆ.

ಕಾರ್ಡಿನಲ್ ಮಾರ್ಕ್ ಔಲೆಟ್ ರವರು ಈ ವಿಷಯದ ಮೇಲೆ ಆಳವಾದ ಧಾರ್ಮಿಕ ಚಿಂತನೆ ನಡೆಸಿ, ಈ ನಿರ್ಧಾರವನ್ನು ಕೇವಲ ಕಾನೂನುಪರ ಪ್ರಶ್ನೆಯಾಗಿ ನೋಡುವುದಕ್ಕಿಂತಲೂ ಧರ್ಮ ಸಭೆಯ ತತ್ತ್ವಶಾಸ್ತ್ರೀಯ ಬೆಳವಣಿಗೆಯ ಬೆಳಕಿನಲ್ಲಿ ಅರ್ಥಮಾಡಿಕೊಳ್ಳಬೇಕು ಎಂದು ಸೂಚಿಸುತ್ತಾರೆ. ಅವರ ಪ್ರಕಾರ, ಪವಿತ್ರ ಆದೇಶ  ಧರ್ಮ ಸಭೆಯ ಆಡಳಿತದ ಏಕೈಕ ಮೂಲವಲ್ಲ ಪವಿತ್ರಾತ್ಮನ ಕಾರ್ಯವೂ ಧರ್ಮ ಸಭೆಯ ಜೀವನ ಮತ್ತು ರಚನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಅವರು ವಿಶೇಷವಾಗಿ “ಪವಿತ್ರ ಆತ್ಮನ ಅಧ್ಯಯನದ ಕೊರತೆಯನ್ನು ಉಲ್ಲೇಖಿಸುತ್ತಾರೆ. ಸಂಸ್ಕಾರಗಳು ಕ್ರಿಸ್ತನ ಕ್ರಿಯೆಗಳಾದರೂ, ಅವು ಪವಿತ್ರಾತ್ಮನ ಕಾರ್ಯದಿಂದ ಧರ್ಮ ಸಭೆಯ ಮೂಲಕ ನೆರವೇರುತ್ತವೆ. ಧರ್ಮ ಸಭೆ ಸ್ವತಃ ಒಂದು ಸಂಸ್ಕಾರವಾಗಿದ್ದು, ಪವಿತ್ರಾತ್ಮನಿಂದ ನಿರ್ಮಿಸಲ್ಪಡುವ ಸಮಾಗಮವಾಗಿದೆ. ಆತ್ಮನ ವರಗಳಾದ ವರದಾನಗಳು ಧರ್ಮ ಸಭೆಯ ಸೇವೆ ಮತ್ತು ಮಿಷನ್‌ನಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆ.

ಧರ್ಮ ಸಭೆಯ ಆಡಳಿತದಲ್ಲಿ ಪವಿತ್ರಾತ್ಮನ ವರದಾನಗಳ ಪಾತ್ರವನ್ನು ಗುರುತಿಸುವುದು ಅವಶ್ಯಕವೆಂದು ಅವರು ವಾದಿಸುತ್ತಾರೆ. ಕಾನೋನ್ ಕಾನೂನಿನ ಪ್ರಕಾರವೂ ಅಭಿಷೇಕಿತ ಸೇವಕರು ಸಾಮಾನ್ಯ ಪ್ರಜೆಗಳು ಮತ್ತು ಧಾರ್ಮಿಕರ ಸಹಕಾರವನ್ನು ಹೊಂದಬಹುದು. ಆಡಳಿತ, ನ್ಯಾಯ, ಹಣಕಾಸು, ಸಾಂಸ್ಕೃತಿಕ ವಿಶ್ಲೇಷಣೆ ಅಥವಾ ಸಂವಹನ ಮುಂತಾದ ಕ್ಷೇತ್ರಗಳಲ್ಲಿ ಅಭಿಷೇಕ ಅವಶ್ಯಕವಲ್ಲ ಇಲ್ಲಿ ಆತ್ಮನಿಂದ ದೊರೆತಿರುವ ವರದಾನಗಳು ಪ್ರಾಮುಖ್ಯವಾಗುತ್ತವೆ.

ಜಗದ್ಗರುಗಳು ಒಬ್ಬ ಮಹಿಳೆಯನ್ನು ಅಥವಾ ಸಾಮಾನ್ಯ ಪ್ರಜೆಗಳು ಡಿಕಾಸ್ಟರಿಯ ಮುಖ್ಯಸ್ಥರಾಗಿ ನೇಮಿಸಿದಾಗ, ಅದು ಜಗದ್ಗುರುಗಳ ಅಧಿಕಾರವನ್ನು ಹಂಚಿಕೊಡುವುದಲ್ಲ ಬದಲಾಗಿ, ಅವರ ಸಾಮರ್ಥ್ಯ ಮತ್ತು ವರದಾನವನ್ನು ಗುರುತಿಸಿ ಹೆಚ್ಚಿನ ಹೊಣೆಗಾರಿಕೆಯನ್ನು ವಹಿಸುವುದಾಗಿದೆ. ಈ ಅಧಿಕಾರವು ಇನ್ನೂ ಜಗದ್ಗುರುಗಳ ಸರ್ವಾಧಿಕಾರದ ವ್ಯಾಪ್ತಿಯಲ್ಲಿಯೇ ಉಳಿಯುತ್ತದೆ.

ಅಂತಿಮವಾಗಿ, ಈ ಕ್ರಮವು ತಾತ್ಕಾಲಿಕ ರಿಯಾಯಿತಿ ಅಲ್ಲ ಬದಲಾಗಿ ಧರ್ಮ ಸಭೆಯ ತತ್ತ್ವಶಾಸ್ತ್ರೀಯ ಮುನ್ನಡೆ ಎಂದು ಕಾರ್ಡಿನಲ್ ಓಯೆಲೆಟ್ ಅಭಿಪ್ರಾಯಪಡುತ್ತಾರೆ. ಇದು ವರದಾನಗಳ ಪ್ರಾಮುಖ್ಯತೆಯನ್ನು ಮಾನ್ಯಗೊಳಿಸುವ ಹೆಜ್ಜೆಯಾಗಿದ್ದು, ಕ್ಲೆರಿಕಲಿಸಂ ಮತ್ತು ಅಧಿಕಾರಮೂಲಕ ಮನೋಭಾವವನ್ನು ತಿದ್ದಲು ಸಹಾಯಕವಾಗಬಹುದು. ಎಲ್ಲರೂ ಪ್ರೀತಿಯಲ್ಲಿ ಸತ್ಯವನ್ನು ಪಾಲಿಸಿಕೊಂಡು, ಕ್ರಿಸ್ತನಲ್ಲಿಯೇ ಏಕತೆಯಲ್ಲಿ ಬೆಳೆಯಬೇಕು ಎಂಬ ಕೌನ್ಸಿಲ್‌ನ ಕರೆಯನ್ನು ಇದು ಮತ್ತಷ್ಟು ಬಲಪಡಿಸುತ್ತದೆ.

16 ಫೆಬ್ರವರಿ 2026, 15:50