ಹುಡುಕಿ

ಆಫ್ರಿಕನ್ ಸಾಹೇಲ್‌ನ ನೈಜರ್‌ನ ಜಿಂದರ್ ಪ್ರದೇಶದಲ್ಲಿ ಮಹಿಳೆಯರು ಬೀಜಗಳನ್ನು ಬಿತ್ತುತ್ತಾರೆ.. ಆಫ್ರಿಕನ್ ಸಾಹೇಲ್‌ನ ನೈಜರ್‌ನ ಜಿಂದರ್ ಪ್ರದೇಶದಲ್ಲಿ ಮಹಿಳೆಯರು ಬೀಜಗಳನ್ನು ಬಿತ್ತುತ್ತಾರೆ..  (AFP)

ಸಹೇಲ್‌ಗಾಗಿ II ನೇ ಜಾನ್ ಪಾಲ್ ಪ್ರತಿಷ್ಠಾನ ಸ್ಥಳೀಯ ಸಮುದಾಯಗಳಿಗೆ ‘ಭರವಸೆಯ ಹರಿಕಾರ’

ಸಹೇಲ್‌ಗಾಗಿ II ನೇ ಜಾನ್ ಪಾಲ್ ಪ್ರತಿಷ್ಠಾನ ಸಂಸ್ಥೆಯು ತನ್ನ ಹೊಸ ನಿಯಮಾವಳಿಯನ್ನು ಜಗದ್ಗುರು XIVನೇ ಲಿಯೋರವರು ಅನುಮೋದಿಸಿದ ನಂತರ, ಸೆನೆಗಲ್‌ನಲ್ಲಿ ಪರಿಶೀಲನಾ ಸಭೆಯನ್ನು ನಡೆಸಿತು. ಈ ಸಂದರ್ಭದಲ್ಲಿ ಸಿಸ್ಟರ್ ಅಲೆಸ್ಸಾಂದ್ರಾ ಸ್ಮೆರಿಲ್ಲಿರವರು ಸಂಸ್ಥೆಯ ಯೋಜನೆಗಳನ್ನು ಸ್ಥಳೀಯ ಸಮುದಾಯಗಳಿಗೆ ಭರವಸೆಯನ್ನು ತರುವ ಹರಿಕಾರಗಳು ಎಂದು ಪ್ರಶಂಸಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಇತ್ತೀಚೆಗೆ ಸಹೇಲ್‌ಗಾಗಿ II ನೇ ಜಾನ್ ಪಾಲ್  ಪ್ರತಿಷ್ಠಾನ ಸಂಸ್ಥೆಯ ಹೊಸ ನಿಯಮಾವಳಿಗೆ ಅನುಮೋದನೆ ನೀಡಿದರು. 1984ರಲ್ಲಿ ಸ್ಥಾಪಿಸಲಾದ ಈ ಸಂಸ್ಥೆ, ಬರ, ಮರುಭೂಮೀಕರಣ ಮತ್ತು ದುರಂತಕರ ಬರಗಾಲದಿಂದ ಬಳಲುತ್ತಿರುವ ಸಾಹೆಲ್ ಪ್ರದೇಶದ ಜನರ ಸಂಕಷ್ಟ ನಿವಾರಣೆಗೆ ಕಾರ್ಯನಿರ್ವಹಿಸುತ್ತದೆ. ಜಗದ್ಗರುಗಳ ಅನುಮೋದನೆಯ ನಂತರ, ಸಂಸ್ಥೆಯ ನಿರ್ದೇಶಕ ಮಂಡಳಿ ಫೆಬ್ರವರಿ 11ರಿಂದ 16ರವರೆಗೆ ಸೆನೆಗಲ್‌ನ ಡಕಾರ್‌ನಲ್ಲಿ 44ನೇ ಅಧಿವೇಶನವನ್ನು ನಡೆಸಿ ಹೊಸ ನಿಯಮಾವಳಿಯನ್ನು ಪರಿಶೀಲಿಸಿತು.

ಈ ಸಭೆಯಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಪರವಾಗಿ ಸಮಗ್ರ ಮಾನವ ಅಭಿವೃದ್ಧಿಗಾಗಿ ಇರುವ ಡಿಕಾಸ್ಟರಿಯ ಕಾರ್ಯದರ್ಶಿ ಸಿಸ್ಟರ್ ಅಲೆಸ್ಸಾಂದ್ರಾ ಸ್ಮೆರಿಲ್ಲಿ ಭಾಗವಹಿಸಿದರು. ಆಫ್ರಿಕಾದ ನೆಲಮಟ್ಟದ ವಾಸ್ತವತೆಗಳತ್ತ ಗಮನ ಹಾಗೂ ಸದಸ್ಯರ ಏಕತೆ ಪ್ರೋತ್ಸಾಹಕರ ಸಂಕೇತ ಎಂದು ಅವರು ಹೇಳಿದರು. ಸಾಹೆಲ್ ಪ್ರದೇಶದ ಸವಾಲುಗಳು ಮತ್ತು ಜನರ ದುಃಖಗಳ ಬಗ್ಗೆ ಮಂಡಳಿಯು ಗಾಢವಾದ ಒಗ್ಗಟ್ಟು ಮತ್ತು ಸಹಕಾರದ ಮನೋಭಾವವನ್ನು ತೋರಿಸಿದೆ ಎಂದು ಅವರು ತಿಳಿಸಿದರು.

ಹೊಸ ನಿಯಮಾವಳಿಯ ಅಂಗೀಕಾರ ಮತ್ತು ಹೊಸ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಕುರಿತು ಸಂತೋಷ ವ್ಯಕ್ತಪಡಿಸಲಾಯಿತು. ಈ ಕ್ರಮಗಳು ಸಂಸ್ಥೆಯ ಕಾರ್ಯದಲ್ಲಿ ಹೊಸ ಹಂತವನ್ನು ಆರಂಭಿಸುವ ಮಹತ್ವದ ಹೆಜ್ಜೆಗಳಾಗಿದ್ದು, ಸೇವಾ ಮನೋಭಾವ, ಐಕ್ಯತೆ ಮತ್ತು ಭವಿಷ್ಯದ ಮೇಲಿನ ನಂಬಿಕೆಯಿಂದ ಡಿಕಾಸ್ಟರಿ ಮುಂದುವರಿದು ಸಹಕಾರ ನೀಡಲಿದೆ ಎಂದು ಸಿಸ್ಟರ್ ಸ್ಮೆರಿಲ್ಲಿ ಹೇಳಿದರು.

ಅಧಿವೇಶನದ ವೇಳೆ ಸಾಹೆಲ್ ಪ್ರದೇಶದ ವಿವಿಧ ದೇಶಗಳಾದ ಬರ್ಕಿನಾ ಫಾಸೋ, ಕೇಪ್ ವರ್ಡೆ, ಗ್ಯಾಂಬಿಯಾ, ಗಿನಿ-ಬಿಸ್ಸೌ, ಮಾಲಿ, ಮೌರಿಟಾನಿಯಾ, ನೈಜರ್, ಸೆನೆಗಲ್ ಮತ್ತು ಚಾಡ್ ದೇಶಗಳ ಸಾಮಾಜಿಕ, ರಾಜಕೀಯ ಹಾಗೂ ಭದ್ರತಾ ಪರಿಸ್ಥಿತಿಗಳ ಕುರಿತು ಚರ್ಚೆ ನಡೆಯಿತು. ಸ್ಥಳೀಯ ಧರ್ಮ ಸಭೆಗಳ ಜೀವನ, ಅವರ ಸೇವಾ ಕಾರ್ಯಗಳು ಮತ್ತು ಜನರು ಎದುರಿಸುತ್ತಿರುವ ಸಂಕಷ್ಟಗಳನ್ನೂ ಪರಿಶೀಲಿಸಲಾಯಿತು. ಹಲವು ಕ್ಷೇತ್ರಗಳಲ್ಲಿ ಕಂಡುಬಂದ ಪ್ರಗತಿಯನ್ನು ಸದಸ್ಯರು “ಭರವಸೆಯ ಸಂಕೇತ”ವೆಂದು ವಿವರಿಸಿದರು.

ಜಗದ್ಗುರು ಫ್ರಾನ್ಸಿಸ್ ನೇಮಿಸಿದ್ದ ಮತ್ತು ಜಗದ್ಗುರು XIVನೇ ಲಿಯೋರವರು ದೃಢೀಕರಿಸಿದ್ದ ಪಾಂಟಿಫಿಕಲ್ ಪ್ರತಿನಿಧಿ ಬಿಷಪ್ ಹಸ್ಸಾ ಫ್ಲೋರಂಟ್ ಕೋನೆರವರು ತಮ್ಮ ವರದಿಯನ್ನು ಮಂಡಿಸಿದರು. ಮತದಾನದ ಮೂಲಕ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ನೌಕ್ಚೊಟ್‌ನ ಬಿಷಪ್ ವಿಕ್ಟರ್ ಎಂಡಿಯೋನ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. 2026ರ ಬಜೆಟ್‌ನ್ನು ಅನುಮೋದಿಸಲಾಗಿದ್ದು, ಹೆಚ್ಚಿನ ಭಾಗವನ್ನು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿರಿಸಲಾಗಿದೆ. ಸಭೆಯ ಅಂತ್ಯದಲ್ಲಿ ಸೆನೆಗಲ್ ಗಣರಾಜ್ಯದ ಅಧ್ಯಕ್ಷರಿಗೆ ಮತ್ತು ಇಟಾಲಿಯನ್ ಬಿಷಪ್‌ಗಳ ಸಭೆಗೆ ಸಂದೇಶಗಳನ್ನು ಕಳುಹಿಸಲಾಯಿತು.

17 ಫೆಬ್ರವರಿ 2026, 16:49