ಪಿಯೇತ್ರೋ ಪಾರೋಲಿನ್: ಜಗದ್ಗುರುಗಳ ಅಧಿಕಾರ ಸ್ಥಳದ ಶಾಂತಿ ಮಂಡಳಿಯಲ್ಲಿ ಭಾಗವಹಿಸುವುದಿಲ್ಲ
ವ್ಯಾಟಿಕನ್ ವರದಿ
ಜಗದ್ಗರುಗಳ ಅಧಿಕಾರ ಸ್ಥಳವು ತನ್ನ ವಿಶೇಷ ಸ್ವಭಾವದ ಕಾರಣದಿಂದ ಶಾಂತಿ ಮಂಡಳಿಯಲ್ಲಿ ಭಾಗವಹಿಸುವುದಿಲ್ಲ ಎಂಬ ನಿಲುವನ್ನು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಪಿಯೇತ್ರೋ ಪಾರೋಲಿನ್ ರವರು ಸ್ಪಷ್ಟಪಡಿಸಿದರು. ರೋಮ್‌ನಲ್ಲಿ ಇಟಾಲಿಯನ್ ಸರ್ಕಾರದೊಂದಿಗೆ ಪಲಾಝೊ ಬೊರೊಮಿಯೊನಲ್ಲಿ ನಡೆದ ದ್ವಿಪಕ್ಷೀಯ ಸಭೆಯ ವೇಳೆ, ಲ್ಯಾಟರನ್ ಒಪ್ಪಂದಗಳ ಸಹಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಇಟಾಲಿಯನ್ ಗಣರಾಜ್ಯದ ಅಧ್ಯಕ್ಷ ಸೆರ್ಗಿಯೋ ಮ್ಯಾಟರೆಲ್ಲಾರವರು ಕೂಡ ಉಪಸ್ಥಿತರಿದ್ದರು.
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಕಾರ್ಡಿನಲ್ ಪಾರೋಲಿನ್, ಇಟಲಿಯು ಶಾಂತಿ ಮಂಡಳಿಯಲ್ಲಿ ವೀಕ್ಷಕರಾಗಿ ಪಾಲ್ಗೊಳ್ಳುವ ವಿಚಾರದಲ್ಲಿ ನಮಗೆ ಕೆಲವು ಸಂಶಯಗಳನ್ನು ಉಂಟುಮಾಡುವ ಅಂಶಗಳಿವೆ ಎಂದು ಹೇಳಿದರು. ಕೆಲವು ಗಂಭೀರ ಪ್ರಶ್ನೆಗಳು ಸ್ಪಷ್ಟೀಕರಣ ಅಗತ್ಯವಿದೆ ಎಂದು ಅವರು ಸೂಚಿಸಿದರು. ಮುಖ್ಯವಾಗಿ, ಈ ಪ್ರಯತ್ನದ ಉದ್ದೇಶ ಶಾಂತಿಗೆ ಪರಿಹಾರ ಕಂಡುಹಿಡಿಯುವುದಾಗಿರಬೇಕು ಎಂದು ಅವರು ಒತ್ತಿಹೇಳಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಕಷ್ಟಗಳನ್ನು ನಿರ್ವಹಿಸುವ ಜವಾಬ್ದಾರಿ ಮುಖ್ಯವಾಗಿ ಯುಎನ್‌ನದ್ದಾಗಿರಬೇಕು ಎಂಬುದು ವ್ಯಾಟಿಕನ್‌ನ ಅಭಿಪ್ರಾಯ ಎಂದು ಕಾರ್ಡಿನಲ್ ವಿವರಿಸಿದರು. ಈ ವಿಷಯದಲ್ಲಿ ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಉಕ್ರೇನ್ ಯುದ್ಧದ ಕುರಿತು ಮಾತನಾಡಿದ ಕಾರ್ಡಿನಲ್ ಪಾರೋಲಿನ್, ಸಂಘರ್ಷ ಪ್ರಾರಂಭಗೊಂಡು ನಾಲ್ಕು ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲೂ ಶಾಂತಿಯತ್ತ ಸ್ಪಷ್ಟ ಪ್ರಗತಿ ಕಾಣದಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಕೀವ್ ಸೇರಿದಂತೆ ಹಲವು ನಗರಗಳ ಮೇಲಿನ ದಾಳಿ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಅವರು ಹೇಳಿದರು. ಸಂಭಾಷಣೆಗಳು ಮುಂದುವರಿದರೂ, ಶಾಂತಿಯ ಬಗ್ಗೆ ಹೆಚ್ಚಿನ ನಿರೀಕ್ಷೆ ಕಾಣುವುದಿಲ್ಲ ಎಂಬ ನಿಸ್ಸಹಾಯಕತೆಯ ಭಾವನೆ ವ್ಯಕ್ತವಾಯಿತು.
ಇಟಾಲಿಯನ್ ಸರ್ಕಾರದೊಂದಿಗೆ ಉತ್ತಮ ಸಂಬಂಧಗಳ ಬಗ್ಗೆ ಕಾರ್ಡಿನಲ್ ಸಂತೋಷ ವ್ಯಕ್ತಪಡಿಸಿದರು. ಕುಟುಂಬ ನೀತಿಗಳು, ಶಿಕ್ಷಣ, ಅಂಗವೈಕಲ್ಯ, ಕಾರಾಗೃಹ ವ್ಯವಸ್ಥೆ ಮುಂತಾದ ಧರ್ಮ ಸಭೆಗೆ ಹತ್ತಿರವಾದ ಸಾಮಾಜಿಕ ವಿಷಯಗಳಲ್ಲಿ ಸರ್ಕಾರ ನೀಡಿದ ಗಮನಕ್ಕೆ ಜಗದ್ಗುರುಗಳ ಅಧಿಕಾರ ಸ್ಥಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ. ಈ ವಿಷಯಗಳಲ್ಲಿ ಇಟಾಲಿಯನ್ ಬಿಷಪ್‌ಗಳ ಸಮ್ಮೇಳನಕ್ಕೆ ಸಂಬಂಧಿಸಿದ ಕಾರ್ಯಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಗತಿಯೂ ಕಂಡುಬಂದಿದೆ ಎಂದು ಅವರು ತಿಳಿಸಿದರು.