ಹುಡುಕಿ

ಮೈಕೆಲ್ಯಾಂಜೆಲೋರವರ ‘ಲಾಸ್ಟ್ ಜಡ್ಜ್‌ಮೆಂಟ್’ ಕೃತಿಯ ಪುನರುಜ್ಜೀವನ ಕಾರ್ಯ ಆರಂಭವಾಗಿದೆ ಮೈಕೆಲ್ಯಾಂಜೆಲೋರವರ ‘ಲಾಸ್ಟ್ ಜಡ್ಜ್‌ಮೆಂಟ್’ ಕೃತಿಯ ಪುನರುಜ್ಜೀವನ ಕಾರ್ಯ ಆರಂಭವಾಗಿದೆ 

ಮೈಕೆಲಾಂಜೆಲೋರವರ ‘ಅಂತಿಮ ನ್ಯಾಯ’ ಚಿತ್ರಕೃತಿಯ ಪುನರ್‌ಸ್ಥಾಪನಾ ಕಾರ್ಯ ಆರಂಭ

ಮೈಕೆಲಾಂಜೆಲೋರವರ ಪ್ರಸಿದ್ಧ ‘ಅಂತಿಮ ನ್ಯಾಯ’ ಚಿತ್ರಕೃತಿ ಸುಮಾರು ಮೂರು ತಿಂಗಳ ಕಾಲ ನಡೆಯುವ ಪುನರ್‌ಸ್ಥಾಪನಾ ಕಾರ್ಯಕ್ಕೆ ಒಳಗಾಗಲಿದೆ. ಈ ಕಾರ್ಯ ನಡೆಯುತ್ತಿರುವ ಅವಧಿಯಲ್ಲೂ ಸಿಸ್ಟಿನ್ ಚಾಪೆಲ್‌ ಅನ್ನು ಸಾರ್ವಜನಿಕರಿಗೆ ತೆರೆದು ಇಡಲಾಗುತ್ತದೆ.

ವ್ಯಾಟಿಕನ್ ವರದಿ

ವ್ಯಾಟಿಕನ್ ಮ್ಯೂಸಿಯಂಗಳ ಪ್ರಕಟಣೆಯ ಪ್ರಕಾರ, ಸಿಸ್ಟಿನ್ ಚಾಪೆಲ್‌ನಲ್ಲಿ ಮೈಕೆಲಾಂಜೆಲೋರವರ ಪ್ರಸಿದ್ಧ ಅಂತಿಮ ನ್ಯಾಯ  ಹಸಿ ಚಿತ್ರಗಳ ವಿಶೇಷ ನಿರ್ವಹಣಾ ಕಾರ್ಯಕ್ಕಾಗಿ ಸ್ಕಾಫೋಲ್ಡಿಂಗ್ ಅಳವಡಿಸುವ ಕೆಲಸ ಆರಂಭವಾಗಿದೆ. ಈ ಪುನರ್‌ಸ್ಥಾಪನಾ ಕಾರ್ಯವು ಸುಮಾರು ಮೂರು ತಿಂಗಳು ನಡೆಯಲಿದ್ದು, ಈ ಅವಧಿಯಲ್ಲೂ ಸಿಸ್ಟಿನ್ ಚಾಪೆಲ್ ಸಾರ್ವಜನಿಕರಿಗೆ ತೆರೆದೆ ಇರುತ್ತದೆ.

ವ್ಯಾಟಿಕನ್ ಮ್ಯೂಸಿಯಂಗಳ ಚಿತ್ರಕಲೆ ಮತ್ತು ಮರದ ವಸ್ತುಗಳ ಪುನರ್‌ಸ್ಥಾಪನಾ ಪ್ರಯೋಗಾಲಯದ ಮುಖ್ಯ ಪುನರ್‌ಸ್ಥಾಪಕರಾದ ಪೌಲೊ ವಿಯೋಲಿನಿ ರವರು, ಕಳೆದ ಬೇಸಿಗೆಯಲ್ಲಿ ಈ ಸ್ವಚ್ಛತಾ ಕಾರ್ಯ ಅಗತ್ಯವಾಯಿತು ಎಂದು ತಿಳಿಸಿದ್ದರು. ಹಸಿ ಚಿತ್ರಗಳ ಮೇಲ್ಮೈಯಲ್ಲಿ ವ್ಯಾಪಕವಾಗಿ ಹರಡಿರುವ ಬಿಳಿಬಣ್ಣದ ಪದರ ಕಂಡುಬಂದಿದ್ದು, ಇದು ಮೈಕೆಲಾಂಜೆಲೋರವರ ಕೃತಿಯ ಮೂಲ ಬಣ್ಣಗಳ ತೇಜಸ್ಸು ಮತ್ತು ಬೆಳಕು–ನೆರಳು ವೈವಿಧ್ಯವನ್ನು ಮಸುಕುಗೊಳಿಸುತ್ತಿತ್ತು.

ಈ ಪರಿಸ್ಥಿತಿ, ಮೈಕೆಲಾಂಜೆಲೋರವರ ಮಹಾಕೃತಿಯ ಅದ್ಭುತ ಬಣ್ಣಗಳನ್ನು ಹೊರತಂದುಕೊಟ್ಟ “ಶತಮಾನದ ಪುನರ್‌ಸ್ಥಾಪನೆ” ಎಂದು ಕರೆಯಲ್ಪಟ್ಟ 30 ವರ್ಷಗಳ ಹಿಂದಿನ ಮಹತ್ವದ ಸಂರಕ್ಷಣಾ ಕಾರ್ಯದ ನಂತರ ಉಂಟಾಗಿದೆ. ಗಾಳಿಯ ಚಲನೆಯ ಮೂಲಕ ಬರುವ ಅತಿಸೂಕ್ಷ್ಮ ಕಣಗಳು ಕಾಲಕ್ರಮೇಣ ಹಸಿ ಚಿತ್ರಗಳ  ಮೇಲೆ ಜಮೆಯಾಗುವುದರಿಂದ ಈ ಪದರ ನಿರ್ಮಾಣವಾಗಿದ್ದು, ಮೂಲ ಬಣ್ಣಗಳ ಸಮತೋಲನವನ್ನು ಹಾಳುಮಾಡಿದೆ ಎಂದು ವಿಯೋಲಿನಿ ವಿವರಿಸಿದರು.

ಪುನರ್‌ಸ್ಥಾಪನಾ ಕಾರ್ಯದ ಅವಧಿಯಲ್ಲೂ ಭಕ್ತರು ಮತ್ತು ಪ್ರವಾಸಿಗರನ್ನು ಸ್ವಾಗತಿಸುವುದಕ್ಕಾಗಿ ಸಿಸ್ಟಿನ್ ಚಾಪೆಲ್ ತೆರೆದೆಯೇ ಇರುತ್ತದೆ. ಪುನರ್‌ಸ್ಥಾಪಕರು ಪ್ರಸಿದ್ಧ ಫ್ರೆಸ್ಕೊದ ಹೈ-ಡೆಫಿನಿಷನ್ ಪ್ರತಿರೂಪದ ಹಿಂದೆ ಕಾರ್ಯನಿರ್ವಹಿಸಲಿದ್ದು, ಸಂಪೂರ್ಣ ಮೇಲ್ಮೈಯನ್ನು ಆವರಿಸುವ ಸ್ಕಾಫೋಲ್ಡಿಂಗ್ ಮೂಲಕ ಕೃತಿಯ ಮೂಲ ಬಣ್ಣಾತ್ಮಕ ಮತ್ತು ಪ್ರಕಾಶಮಾನ ಗುಣಗಳನ್ನು ಮರುಪಡೆಯಲಾಗುತ್ತದೆ.

ಈ ಕಾರ್ಯಕ್ಕೆ ವ್ಯಾಟಿಕನ್ ಮ್ಯೂಸಿಯಂಗಳ ಕಲಾ ಪೋಷಕರ ಫ್ಲೋರಿಡಾ ಅಧ್ಯಾಯದ ಬೆಂಬಲ ದೊರೆತಿದ್ದು, ಪುನರ್‌ಸ್ಥಾಪನಾ ಪ್ರಯೋಗಾಲಯದ ಜೊತೆಗೆ ವೈಜ್ಞಾನಿಕ ಸಂಶೋಧನಾ ವಿಭಾಗ, ಕ್ಯೂರೇಟರ್ ಕಚೇರಿ ಮತ್ತು ಛಾಯಾಗ್ರಹಣ ಪ್ರಯೋಗಾಲಯವೂ ಭಾಗವಹಿಸುತ್ತಿವೆ. 1994ರಲ್ಲಿ ಪೂರ್ಣಗೊಂಡ ಮಹತ್ವದ ಸಂರಕ್ಷಣಾ ಕಾರ್ಯದ ಮುಂದುವರಿಕೆಯಾಗಿ, ಸಿಸ್ಟಿನ್ ಚಾಪೆಲ್‌ನ ಚಿತ್ರಕೃತಿಗಳು ನಿರಂತರ ಅಧ್ಯಯನ ಮತ್ತು ಮೇಲ್ವಿಚಾರಣೆಯಡಿಯಲ್ಲಿ ಇರಿಸಲಾಗುತ್ತಿವೆ.

ಈಗ ಗಮನವೇ ಯಾಜ್ಞವೇದಿಯ ಹಿಂದಿನ ಭವ್ಯ ಗೋಡೆಯತ್ತ ತಿರುಗಿದ್ದು, ಇದನ್ನು 1533ರಲ್ಲಿ ಜಗದ್ಗುರು VII ನೇ ಕ್ಲೆಮೆಂಟ್ ರವರು ಮೈಕೆಲಾಂಜೆಲೋರವರಿಗೆ ಆಜ್ಞಾಪಿಸಿ, ಜಗದ್ಗುರು III ನೇ ಪೌಲ್ ರವರ ಕಾಲದಲ್ಲಿ ಆರಂಭಿಸಲಾಯಿತು. 180 ಚದರ ಮೀಟರ್ ವ್ಯಾಪ್ತಿಯ ಚಿತ್ರಿತ ಮೇಲ್ಮೈ ಮತ್ತು 391 ಜೀವಂತ ರೂಪಗಳಿಂದ ಕೂಡಿದ ಈ ಕೃತಿ 1541ರ ಶರತ್ಕಾಲದಲ್ಲಿ ಪೂರ್ಣಗೊಂಡಿತು. ಆ ವರ್ಷ ಅಕ್ಟೋಬರ್ 31ರಂದು ಜಗದ್ಗುರುಗಳು ಗಂಭೀರ ಸಂಜೆ ಪ್ರಾರ್ಥನೆಯನ್ನು ಆಚರಿಸಿದಾಗ, ಈ ಮಹಾಕೃತಿಯನ್ನು ಕಂಡ ಎಲ್ಲರೂ ಭಯಭಕ್ತಿ ಮತ್ತು ಆಶ್ಚರ್ಯದಿಂದ ತುಂಬಿಹೋದರು ಎಂದು ಜಾರ್ಜಿಯೋ ವಾಸಾರಿ ಸ್ಮರಿಸಿದ್ದಾರೆ.

04 ಫೆಬ್ರವರಿ 2026, 00:00