ಡಿಡಿಎಫ್‌ನ ಪ್ರಿಫೆಕ್ಟ್ ಮತ್ತು ಸಂತ Xನೇ ಪಿಯಸ್ ಸಂಘದ ನಡುವೆ ಸಭೆ ನಿಗದಿಯಾಗಿದೆ
ವ್ಯಾಟಿಕನ್ ವರದಿ
ಕಾರ್ಡಿನಲ್ ವಿಕ್ಟರ್ ಮಾನುವೆಲ್ ಫೆರ್ನಾಂಡಸ್ ಮತ್ತು ಸಂತ Xನೇ ಪಿಯಸ್ ಯಾಜಕರ ಸಂಘದ ಮಹಾ ಪ್ರಧಾನರಾದ ಫಾದರ್ ಡೇವಿಡ್ ಪಾಗ್ಲಿಯಾರಾನಿರವರ ನಡುವೆ ಮುಂದಿನ ವಾರ ಸಭೆ ನಿಗದಿಯಾಗಿದೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕ ಮ್ಯಾಟಿಯೋ ಬ್ರೂನಿ ತಿಳಿಸಿದ್ದಾರೆ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಸಭೆ ಅನೌಪಚಾರಿಕ ಮತ್ತು ವೈಯಕ್ತಿಕ ಸಂವಾದಕ್ಕೆ ಅವಕಾಶ ನೀಡಲಿದ್ದು, ರಚನಾತ್ಮಕ ಹಾಗೂ ಸಕಾರಾತ್ಮಕ ಫಲಿತಾಂಶಗಳಿಗೆ ದಾರಿ ಮಾಡಿಕೊಡುವ ಚರ್ಚಾ ಸಾಧನಗಳನ್ನು ಗುರುತಿಸಲು ಸಹಾಯಕವಾಗಲಿದೆ ಎಂದು ಹೇಳಿದರು.
ಈ ಹೇಳಿಕೆ, ಸಂತ Xನೇ ಪಿಯಸ್ ಸಂಘ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದ ನಡುವೆ ಸಂಪರ್ಕಗಳು ಮುಂದುವರಿಯುತ್ತಿವೆ ಹಾಗೂ ಉದ್ಭವಿಸಿರುವ ವಿಷಯಗಳಿಗೆ ಸಂಬಂಧಿಸಿದಂತೆ ಭಿನ್ನತೆಗಳು ಅಥವಾ ಏಕಪಕ್ಷೀಯ ಪರಿಹಾರಗಳನ್ನು ತಪ್ಪಿಸುವ ಆಶಯವಿದೆ ಎಂದು ಬ್ರೂನಿರವರು ಹೇಳಿದ ಒಂದು ದಿನದ ನಂತರ ಹೊರಬಂದಿದೆ. ಎರಡೂ ಪಕ್ಷಗಳ ನಡುವೆ ಸಂವಾದ ಮುಂದುವರಿಯಬೇಕೆಂಬ ಉದ್ದೇಶವನ್ನು ಇದು ಸ್ಪಷ್ಟಪಡಿಸುತ್ತದೆ.
ಫೆಬ್ರವರಿ 2ರಂದು ಸಂತ ಪಿಯಸ್ ರ ಸಂಘವು ಪ್ರಕಟಿಸಿದ ಘೋಷಣೆಯ ಹಿನ್ನೆಲೆಯಲ್ಲಿ ಬ್ರೂನಿರವರ ಪ್ರತಿಕ್ರಿಯೆ ಬಂದಿದೆ. ಆ ಘೋಷಣೆಯಲ್ಲಿ, ಜುಲೈ 1ರಂದು ಫ್ರಾನ್ಸ್‌ನ ಫ್ಲಾವಿನಿ-ಸೂರ್-ಓಜೆರೇನ್‌ನಲ್ಲಿರುವ ಸಾಂತ್ ಕುರೇ ದ’ಆರ್ಸ್ ಅಂತರರಾಷ್ಟ್ರೀಯ ಸೆಮಿನರಿಯಲ್ಲಿ ನಡೆಯಲಿರುವ ಬಿಷಪ್ ದೀಕ್ಷೆಗಳ ಕುರಿತು ತಿಳಿಸಲಾಗಿತ್ತು.
ಸಂಘವು ಹೊರಡಿಸಿದ ಪ್ರಕಟಣೆಯಲ್ಲಿ, ತಮ್ಮ ಬಿಷಪ್‌ಗಳ ಸೇವೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳುವುದು ಸಂಘದ ವಿಶೇಷ ಅಗತ್ಯವಾಗಿದೆ ಎಂದು ಹೇಳುವ ಮೂಲಕ, ಈ ವಿಷಯವಾಗಿ ಜಗದ್ಗುರುಗಳ ಅಧಿಕಾರ ಸ್ಥಳಕ್ಕೆ ಕಳುಹಿಸಿದ ಪತ್ರದ ಉಲ್ಲೇಖವನ್ನೂ ಮಾಡಲಾಗಿದೆ.
ಆದರೆ, ಜಗದ್ಗುರುಗಳ ಅಧಿಕಾರ ಸ್ಥಳಕ್ಕೆ ಕಳುಹಿಸಿದ ಉತ್ತರ ಪತ್ರವು ನಮ್ಮ ಮನವಿಗಳಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಂಘವು ಹೇಳಿಕೊಂಡಿದೆ. ಇದೇ ಕಾರಣದಿಂದ, ಸಂಘವು ತಾವು ಸೂಚಿಸಿದ ಮಾರ್ಗದಲ್ಲೇ ಮುಂದುವರಿಯುವ ನಿರ್ಧಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಒಟ್ಟಾರೆ, ಈ ಬೆಳವಣಿಗೆಗಳು ಸಂತ Xನೇ ಪಿಯಸ್ ರವರ ಸಂಘ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದ ನಡುವಿನ ಸಂಬಂಧಗಳಲ್ಲಿ ಸಂವಾದ ಮುಂದುವರಿದರೂ, ಕೆಲವು ಪ್ರಮುಖ ವಿಷಯಗಳಲ್ಲಿ ಇನ್ನೂ ಭಿನ್ನಾಭಿಪ್ರಾಯಗಳು ಉಳಿದಿವೆ ಎಂಬುದನ್ನು ತೋರಿಸುತ್ತವೆ. ಮುಂದಿನ ಸಭೆಯು ಈ ಸಂಬಂಧಗಳನ್ನು ಸುಧಾರಿಸಲು ಹಾಗೂ ಸಕಾರಾತ್ಮಕ ದಿಕ್ಕಿನಲ್ಲಿ ಸಾಗಲು ಒಂದು ಅವಕಾಶವಾಗಲಿದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದೆ.